ಜಗತ್ತಿನ ಅತ್ಯಂತ ಪುರಾತನ ನಾಗರಿಕ ನಗರ ವಾರಾಣಸಿ !
ಕಾಶಿಗೆ ಬಂದ ಯಾತ್ರಿಕರು ಮೊದಲಿಗೆ ಕಾಲಭೈರವ ದೇವಾಲಯಕ್ಕೆ ಭೇಟಿ ನೀಡುವುದು ಪರಂಪರೆಯಾಗಿದೆ. ಇದು ನಗರದ ಅತ್ಯಂತ ಪುರಾತನ ಹಾಗೂ ಪೂಜ್ಯ ದೇವಾಲಯವಾಗಿದ್ದು, ಮಹಾದೇವ ಶಿವನ ಉಗ್ರ ರೂಪವಾದ ಕಾಲಭೈರವನಿಗೆ ಅರ್ಪಿತವಾಗಿದೆ. ಕಾಲಭೈರವನು ಕಾಶಿಯ ಕೊತ್ವಾಲ್ (ರಕ್ಷಕ) ಎಂದು ಕರೆಯಲ್ಪಡುತ್ತಾನೆ. ಅವನ ಅನುಮತಿ ಇಲ್ಲದೆ ಯಾರೂ ವಾರಾಣಸಿಗೆ ಪ್ರವೇಶಿಸಲಾರರು ಅಥವಾ ಇಲ್ಲಿ ವಾಸಿಸಲಾರರು ಎಂಬ ನಂಬಿಕೆ ಇದೆ.
- ಅರುಣ ಷಡಕ್ಷರಿ
ಕಾಶಿಯನ್ನು ಪ್ರಪಂಚದಲ್ಲೇ ಅತ್ಯಂತ ಪುರಾತನವಾದ “ಜೀವಂತವಾಗಿರುವ” ನಗರ ಎಂದು ನಂಬಲಾಗುತ್ತದೆ. ಇಲ್ಲಿ ಇರುವ ಕಾಶಿ ವಿಶ್ವನಾಥ ದೇವಸ್ಥಾನವು ಜಗತ್ತಿನ ಅತ್ಯಂತ ಹೆಚ್ಚು ಜನರು ಭೇಟಿ ನೀಡುವ ದೇವಾಲಯಗಳಲ್ಲಿ ಒಂದಾಗಿದೆ. ಈ ಪವಿತ್ರ ನಗರಕ್ಕೆ ಭೇಟಿ ನೀಡಿ, ಗಂಗೆಯ ಪವಿತ್ರ ಜಲದಲ್ಲಿ ಸ್ನಾನ ಮಾಡುವುದರಿಂದ ಜೀವನ–ಮರಣದ ಚಕ್ರದಿಂದ ಮುಕ್ತಿ ದೊರಕುತ್ತದೆ ಎಂಬ ನಂಬಿಕೆ ಇದೆ.
ಕಾಶಿ, ವಾರಾಣಸಿ ಅಥವಾ ಬನಾರಸ್- ಈ ನಗರಕ್ಕೆ ಇರುವ ಅನೇಕ ಹೆಸರುಗಳು. ಮಹಾದೇವ ಶಿವನು ಈ ನಗರವನ್ನು ಸ್ಥಾಪಿಸಿದನು ಎಂದು ನಂಬಲಾಗುತ್ತದೆ. ಮಹಾದೇವ ಮತ್ತು ಪಾರ್ವತಿ ಒಂದೇ ರೂಪದಲ್ಲಿ, ಅರ್ಧನಾರೀಶ್ವರರಾಗಿ ನಿಂತ ಕ್ಷಣವೇ ಬ್ರಹ್ಮಾಂಡದ ಗಡಿಯಾರ ಆರಂಭ ಆಯಿತೆಂದೂ, ಕಾಲವೇ ತನ್ನ ಪ್ರಯಾಣವನ್ನು ಆರಂಭಿಸಿತೆಂದೂ ಹೇಳಲಾಗುತ್ತದೆ.
ಕಾಶಿಗೆ ಬಂದ ಯಾತ್ರಿಕರು ಮೊದಲಿಗೆ ಕಾಲಭೈರವ ದೇವಾಲಯಕ್ಕೆ ಭೇಟಿ ನೀಡುವುದು ಪರಂಪರೆಯಾಗಿದೆ. ಇದು ನಗರದ ಅತ್ಯಂತ ಪುರಾತನ ಹಾಗೂ ಪೂಜ್ಯ ದೇವಾಲಯವಾಗಿದ್ದು, ಮಹಾದೇವ ಶಿವನ ಉಗ್ರ ರೂಪವಾದ ಕಾಲಭೈರವನಿಗೆ ಅರ್ಪಿತವಾಗಿದೆ. ಕಾಲಭೈರವನು ಕಾಶಿಯ ಕೊತ್ವಾಲ್ (ರಕ್ಷಕ) ಎಂದು ಕರೆಯಲ್ಪಡುತ್ತಾನೆ. ಅವನ ಅನುಮತಿ ಇಲ್ಲದೆ ಯಾರೂ ವಾರಾಣಸಿಗೆ ಪ್ರವೇಶಿಸಲಾರರು ಅಥವಾ ಇಲ್ಲಿ ವಾಸಿಸಲಾರರು ಎಂಬ ನಂಬಿಕೆ ಇದೆ. ಆದ್ದರಿಂದ ಭಕ್ತರು ತಮ್ಮ ಆಧ್ಯಾತ್ಮಿಕ ಪ್ರಯಾಣವನ್ನು ಇಲ್ಲಿ ಆಶೀರ್ವಾದ ಪಡೆಯುವುದರಿಂದಲೇ ಆರಂಭಿಸುತ್ತಾರೆ.
ಇಲ್ಲಿ ಲಿಂಗ ರೂಪದ ಪೂರ್ಣ ಮೂರ್ತಿಯ ಬದಲು ಬೆಳ್ಳಿ ಮುಖವಾಡದ ರೂಪದಲ್ಲಿ ಕಾಲಭೈರವನನ್ನು ಪ್ರತಿಷ್ಠಾಪಿಸಲಾಗಿದೆ. ಕಪಾಲಗಳ ಹಾರದಿಂದ ಅಲಂಕರಿಸಲ್ಪಟ್ಟಿರುವ ದೇವರು ತ್ರಿಶೂಲವನ್ನು ಹಿಡಿದಿದ್ದು, ರಕ್ಷಕ ಮತ್ತು ಶಿಕ್ಷಕ ಎಂಬ ಅವನ ಪಾತ್ರವನ್ನು ಪ್ರತಿನಿಧಿಸುತ್ತದೆ. ದೇವಾಲಯದೊಳಗಿನ ವಾತಾವರಣ ಭಕ್ತಿ, ಮಂತ್ರೋಚ್ಛಾರಣೆ ಹಾಗೂ ಗಂಟೆಗಳ ನಾದದಿಂದ ತುಂಬಿರುತ್ತದೆ.

ಕಾಲಭೈರವನ ಆಶೀರ್ವಾದ ಪಡೆದು ನಾವು ಕಾಶಿ ವಿಶ್ವನಾಥ ದೇವಾಲಯಕ್ಕೆ ಮುಂದಾದೆವು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಇತ್ತೀಚಿನ ಪುನರ್‌ನಿರ್ಮಾಣದ ನಂತರ, ಈ ದೇವಾಲಯ ಸಂಕೀರ್ಣವು ಅದ್ಭುತವಾದ ಕಾಂತಿ ಮತ್ತು ವೈಭವದಿಂದ ಕಂಗೊಳಿಸುತ್ತಿದೆ. ದೇವಾಲಯದ ಸುತ್ತ ವಿಶಾಲವಾದ ಪ್ರಾಂಗಣವನ್ನು ನಿರ್ಮಿಸಲಾಗಿದ್ದು, ಚಿನ್ನ ಲೇಪಿತ ಗೋಪುರಗಳ ವೈಭವ ಮನಸ್ಸನ್ನು ಮಂತ್ರಮುಗ್ಧಗೊಳಿಸುತ್ತದೆ. ಇಲ್ಲಿರುವ ದೇವಾಲಯ ಅನೇಕ ಬಾರಿ ಆಕ್ರಮಣಕಾರರಿಂದ ಧ್ವಂಸಗೊಂಡಿತ್ತು. 18ನೇ ಶತಮಾನದಲ್ಲಿ ಇಂದೋರಿನ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಈಗಿರುವ ದೇವಾಲಯವನ್ನು ಪುನರ್‌ನಿರ್ಮಿಸಿದರು ಎಂಬ ನಂಬಿಕೆ ಇದೆ.
ದೇವಾಲಯದ ಸೌಂದರ್ಯ ಗೋಪುರದಲ್ಲೇ ನಿಲ್ಲುವುದಿಲ್ಲ. ಪ್ರಧಾನ ಗರ್ಭಗುಡಿಯೊಳಗೆ ಪ್ರವೇಶಿಸಿದಾಗ, ಸುಮಾರು 37 ಕೆಜಿ ಚಿನ್ನವನ್ನು ಒಳಾಂಗಣ ಹಾಗೂ ಪ್ರಧಾನ ಬಾಗಿಲಿಗೆ ಬಳಕೆ ಮಾಡಿರುವುದನ್ನು ಕಾಣಬಹುದು. ಇದನ್ನು ಒಬ್ಬ ಅನಾಮಧೇಯ ದಕ್ಷಿಣ ಭಾರತೀಯ ಭಕ್ತನು ದೇವಾಲಯಕ್ಕೆ ದಾನವಾಗಿ ನೀಡಿದ್ದಾರಂತೆ!
ದೇವಾಲಯದ ಪ್ರಾಂಗಣದಲ್ಲಿ ಅನೇಕ ಶಿವಲಿಂಗಗಳು ಇದ್ದು, ಭಕ್ತರು ಇಲ್ಲಿ ಪೂಜೆ ಸಲ್ಲಿಸಬಹುದು. ನಾವು ಕೂಡಾ ಒಂದರಲ್ಲಿ ಭಕ್ತಿಭಾವದಿಂದ ರುದ್ರಾಭಿಷೇಕ ನೆರವೇರಿಸಿದೆವು. ಗಂಗಾಜಲ, ಹಾಲು, ಮೊಸರು, ಜೇನುತುಪ್ಪ, ಒಣಹಣ್ಣುಗಳು ಹಾಗೂ ಇತರ ಪೂಜಾ ಸಾಮಗ್ರಿಗಳನ್ನು ಶಿವಲಿಂಗದ ಮೇಲೆ ಅರ್ಪಿಸಲಾಯಿತು. ಆನಂತರ ನಮಗೆ ಪ್ರಧಾನ ದೇವರಾದ ಕಾಶಿ ವಿಶ್ವನಾಥನ ದರ್ಶನ ಮತ್ತು ಹಾಲು ಅರ್ಪಿಸುವ ಅವಕಾಶ ದೊರಕಿತು. ಅಲ್ಲಿನ ಮೂರ್ತಿ ಚಿಕ್ಕದಾಗಿದ್ದರೂ, ಭಕ್ತಿ ಭಾವಗಳನ್ನು ಉಕ್ಕಿಸುವ ಹಾಗಿದೆ.
ದೇವಾಲಯದಿಂದ ಹೊರಬಂದಾಗ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ವೈಭವ ಸಂಪೂರ್ಣವಾಗಿ ಕಾಣಿಸಿತು. ಈ ಯೋಜನೆಯಡಿಯಲ್ಲಿ ಸುಮಾರು 300 ಕಟ್ಟಡಗಳನ್ನು ಖರೀದಿಸಿ, ದೇವಾಲಯ ಸಂಕೀರ್ಣವನ್ನು 2,700 ಚದರ ಅಡಿಯಿಂದ 5 ಲಕ್ಷ ಚದರ ಅಡಿವರೆಗೆ ವಿಸ್ತರಿಸಲಾಗಿದೆ. ಜೊತೆಗೆ ಗಂಗಾ ನದಿಗೆ ನೇರ ಸಂಪರ್ಕವೂ ಕಲ್ಪಿಸಲಾಗಿದೆ.
ಅದೇ ಸಂಜೆ ನಾವು ದಶಾಶ್ವಮೇಧ ಘಾಟ್‌ನಲ್ಲಿ ನಡೆಯುವ ಗಂಗಾ ಆರತಿಯನ್ನು ವೀಕ್ಷಿಸಿದೆವು. ಪ್ರತೀ ಸಂಜೆ ಸಾವಿರಾರು ಭಕ್ತರು ಇಲ್ಲಿ ಸೇರಿ ಈ ದಿವ್ಯ ಆರತಿಯಲ್ಲಿ ಪಾಲ್ಗೊಳ್ಳುತ್ತಾರೆ. ಬೆಳಕು, ಶಬ್ದ ಮತ್ತು ಭಕ್ತಿಯ ಅದ್ಭುತ ಸಂಯೋಜನೆ!

ನಾವು ಮರುದಿನ ಮುಂಜಾನೆ ಖಾಸಗಿ ದೋಣಿಯೊಂದನ್ನು ಬಾಡಿಗೆಗೆ ಪಡೆದು ಅದರಲ್ಲಿ ಸವಾರಿ ಕೈಗೊಂಡೆವು. ದೋಣಿಯಲ್ಲಿ ಕುಳಿತಿದ್ದ ಬಾನ್ಸುರಿ ಮತ್ತು ತಬಲಾ ಕಲಾವಿದರು ನಮಗಾಗಿಯೇ ವಾದ್ಯಗಳನ್ನು ನುಡಿಸಿ ವಾತಾವರಣವನ್ನು ಮತ್ತಷ್ಟು ದೈವಿಕಗೊಳಿಸಿದರು. ಘಾಟ್‌ಗಳ ಮೇಲೆ ಕವಿದಿದ್ದ ಮುಂಜಾನೆಯ ಮಂಜಿನ ಕಣ್ಸೆಳೆಯುವ ದೃಶ್ಯ ಮನಮೋಹಕವಾಗಿತ್ತು ಮತ್ತು ಸಂಗೀತ ವಿಶೇಷ ಅನುಭವವನ್ನು ನೀಡಿತು.
ಕಾಶಿಯು ನಮಗೆ ವಿನಮ್ರತೆ, ಶಾಂತಿ ಮತ್ತು ಆಂತರಿಕ ಸಮಾಧಾನಗಳನ್ನು ಒಮ್ಮೆಲೇ ನೀಡಿತು. ವಾರಾಣಸಿ ನಮ್ಮನ್ನು ಕೇವಲ ಸ್ವಾಗತಿಸುವುದಷ್ಟೇ ಅಲ್ಲ, ಮನಸ್ಸನ್ನು ಪರಿವರ್ತಿಸುವ ಸ್ಥಳವೂ ಹೌದು.
ಕಾಶಿ (ವಾರಾಣಸಿ)- ಪ್ರವಾಸ ಸಲಹೆಗಳು
ಅತ್ಯುತ್ತಮ ಸಮಯ:
ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಹವಾಮಾನ ಸುಖಕರವಾಗಿರುತ್ತದೆ. ಆನಂತರ ಸುಡುಬಿಸಿಲು ಮತ್ತು ವಿಪರೀತ ಸೆಕೆ ಇರುತ್ತದೆ.
ಹೇಗೆ ತಲುಪುವುದು?
ವಾರಾಣಸಿಗೆ ನೇರ ವಿಮಾನ ಹಾಗೂ ರೈಲು ಸಂಪರ್ಕಗಳು ಲಭ್ಯವಿದೆ.
ವಸತಿ:
ಸಾಧ್ಯವಾದರೆ ಘಾಟ್‌ಗಳ ಸಮೀಪದ ಹೊಟೇಲ್‌ಗಳು. ವಿಶಿಷ್ಟ ಅನುಭವಕ್ಕಾಗಿ ಪಾರಂಪರಿಕ (ಹೆರಿಟೇಜ್)ಹವೇಲಿಗಳಲ್ಲಿ ಉಳಿದುಕೊಳ್ಳಬಹುದು. ನಮ್ಮ ಜೇಬಿಗೆ ಹೊಂದುವಂತಹ ನೂರಾರು ಹೊಟೇಲುಗಳು ಅಲ್ಲಿವೆ.