Friday, October 3, 2025
Friday, October 3, 2025

ಈ ದೇವಾಲಯಕ್ಕೆ ಭೇಟಿ ಕೊಟ್ಟರೆ ಹೃದಯ ಸಂಬಂಧಿ ಕಾಯಿಲೆಗಳು ಮಾಯವಾಗುತ್ತೆ..

ತಮಿಳುನಾಡಿನ ಹೃದಯಲೀಶ್ವರರ್ ದೇವಾಲಯವು ಹೃದಯ ಕಾಯಿಲೆಗಳಿಗೆ ಹೆಸರುವಾಸಿಯಾಗಿದೆ. ಅಧಿಕ ರಕ್ತದೊತ್ತಡ, ಹೃದಯಾಘಾತದಂತಹ ಸಮಸ್ಯೆಗಳಿರುವ ಮಂದಿ, ಇಲ್ಲಿಗೆ ಭೇಟಿ ನೀಡುವುದರಿಂದ ಗುಣಮುಖರಾಗುತ್ತಾರೆ ಎಂಬುದು ನಂಬಿಕೆ.

ಭಾರತದಲ್ಲಿ ಲೆಕ್ಕವಿಲ್ಲದಷ್ಟು ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವೂ ತಮ್ಮದೇ ಆದ ವಿಶಿಷ್ಟ ನಂಬಿಕೆಗಳನ್ನು ಹೊಂದಿವೆ. ಕಣ್ಣಿನ ಸಮಸ್ಯೆಗಳನ್ನು ಗುಣಪಡಿಸುವ ದೇವಾಲಯಗಳನ್ನು ನೈನಿ ದೇವಿ ದೇವಾಲಯವೆನ್ನುತ್ತಾರೆ. ಮಧುಮೇಹವನ್ನು ಗುಣಪಡಿಸುವ ದೇವಾಲಯಗಳನ್ನು ವೆನ್ನಿ ಕರುಂಬೇಶ್ವರರ್ ದೇವಾಲಯ ಎಂದು ಕರೆಯಲಾಗುತ್ತದೆ. ಈಗ ಈ ಪಟ್ಟಿಯಲ್ಲಿ ಹೃದಯ ಕಾಯಿಲೆಯನ್ನು ಗುಣಪಡಿಸುವ ಮತ್ತೊಂದು ದೇವಾಲಯ ಸೇರಿಕೊಂಡಿದೆ.

ಅಧಿಕ ರಕ್ತದೊತ್ತಡ, ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರುವವರು ತಮಿಳುನಾಡಿನ ತಿರುನಿನ್ರವೂರ್‌ನಲ್ಲಿರುವ ಹೃದಯಲೀಶ್ವರರ್ ದೇವಾಲಯಕ್ಕೆ ಭೇಟಿ ನೀಡಿ, ಶಿವನನ್ನು ಪೂಜಿಸುವುದರಿಂದ ಗುಣಮುಖರಾಗುತ್ತಾರೆ ಎಂದು ನಂಬಲಾಗಿದೆ. ಈ ದೇವಾಲಯದಲ್ಲಿ, ಶಿವನು ಪಶ್ಚಿಮ ದಿಕ್ಕಿಗೆ ಮುಖ ಮಾಡಿಯೂ, ತಾಯಿಯು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಪ್ರತ್ಯೇಕ ಗರ್ಭಗುಡಿಗಳಲ್ಲಿ ನೆಲೆಸಿದ್ದಾಳೆ. ಸೋಮವಾರದಂದು ವಿಶೇಷವಾಗಿ ಹೃದಯ ಕಾಯಿಲೆಗಳಿಂದ ಬಳಲುತ್ತಿರುವ ಜನರು ಬಂದು ಇಲ್ಲಿ ದೇವರನ್ನು ಪ್ರಾರ್ಥಿಸುತ್ತಾರೆ.

hrudayalishwar temple 2

ದೇವಾಲಯದ ಹೆಸರಿನ ಹಿಂದಿದೆ ಐತಿಹ್ಯ

ದೇವಾಲಯದ ಹೆಸರು ಹೃದಯಲೀಶ್ವರರ್, ಅಂದರೆ ಹೃದಯದಲ್ಲಿರುವ ಈಶ್ವರ ಎಂದರ್ಥ. ಇಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಭಕ್ತರು ಇಲ್ಲಿಗೆ ಭೇಟಿ ನೀಡುವಾಗ ಹಾಲು ಮತ್ತು ಹೂವುಗಳನ್ನು ತಂದು ಶಿವನಿಗೆ ಅರ್ಪಿಸುತ್ತಾರೆ.

ಹೃದಯಲೀಶ್ವರರ್ ದೇವಾಲಯದ ಐತಿಹ್ಯವನ್ನು ತಿಳಿಯುವುದಾದರೆ, ಪೂಸಲಾರ ನಾಯನಾರ್ ಎಂಬ ಒಬ್ಬ ಮಹಾನ್ ಶಿವಭಕ್ತ ಶಿವಲಿಂಗವನ್ನು ನಿತ್ಯವೂ ಪೂಜಿಸುತ್ತಾನೆ. ಆದರೆ ತನ್ನ ದೇವರನ್ನು ಪ್ರತಿಷ್ಠಾಪಿಸಿ, ಪೂಜಿಸಲು ಸರಿಯಾದ ಜಾಗ ಸಿಗದೆ ಬೇಸರಗೊಳ್ಳುತ್ತಾನೆ. ದೇವರಿಗೆ ಒಂದು ದೇವಾಲಯವನ್ನು ನಿರ್ಮಿಸಬೇಕೆಂದು ಅವನು ಬಯಸಿದರೂ ಹಣದ ಕೊರತೆಯಿಂದಾಗಿ, ಅವನು ತನ್ನ ಹೃದಯದಲ್ಲೇ ಒಂದು ಭವ್ಯವಾದ ದೇವಾಲಯವನ್ನು ನಿರ್ಮಿಸಿದನು.

ಶಿವನು ಅವನ ಭಕ್ತಿಗೆ ಮೆಚ್ಚಿ ಅವನು ಇಚ್ಛಿಸಿದ ಸ್ಥಳದಲ್ಲಿಯೇ ಭವ್ಯವಾದ ದೇವಾಲಯ ನಿರ್ಮಾಣ ಮಾಡಿಕೊಟ್ಟರು ಎಂಬುದು ನಂಬಿಕೆ. ಅಲ್ಲದೆ ಶಿವನು ಪೂಸಲಾರ ಹೃದಯದಲ್ಲಿ ವಾಸಿಸುತ್ತಿದ್ದರಿಂದ, ಈ ದೇವಾಲಯಕ್ಕೆʼಹೃದಯಲೀಶ್ವರರ್‌ʼ ಹೆಸರಿಸಲಾಯಿತು.

ಶಿವನೊಂದಿಗೆ ಶಿವ ಭಕ್ತನಿಗೂ ಪೂಜೆ

ಶಿವನ ಭಕ್ತರಾದ ಪೂಸಲಾರ ನಾಯನಾರ್ ಅವರಿಗೆ ಈ ದೇವಾಲಯದ ಗರ್ಭಗುಡಿಯಲ್ಲಿ ಶಿವನ ಜೊತೆಗೆ ಸ್ಥಾನ ನೀಡಲಾಗಿದೆ. ಹೃದಯ ಕಾಯಿಲೆಗಳಿಂದ ಬಳಲುತ್ತಿರುವ ಮಂದಿ ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಚೆನ್ನೈ, ಕಾಂಚಿಪುರಂ ಮತ್ತು ತಿರುವಳ್ಳೂರಿನಿಂದ ಅನೇಕ ಪ್ರಸಿದ್ಧ ಹೃದಯ ವೈದ್ಯರು ಸಹ ಇಲ್ಲಿಗೆ ಬಂದು ತಮ್ಮ ರೋಗಿಗಳ ಯೋಗಕ್ಷೇಮಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ.

ಭೇಟಿಯ ಸಮಯ, ತಲುಪುವುದು ಹೇಗೆ ?

ಹೃದಯಲೀಶ್ವರರ್ ದೇವಾಲಯವು ಬೆಳಿಗ್ಗೆ 6:30 ರಿಂದ ಮಧ್ಯಾಹ್ನ 12:30 ರವರೆಗೆ ಮತ್ತು ಸಂಜೆ 4:30 ರಿಂದ ರಾತ್ರಿ 8:30 ರವರೆಗೆ ತೆರೆದಿರುತ್ತದೆ. ಈ ದೇವಾಲಯವು ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯಲ್ಲಿದೆ. ಇಲ್ಲಿಗೆ ತಲುಪಲು, ನೀವು ಚೆನ್ನೈನಿಂದ ಸ್ಥಳೀಯ ರೈಲು ಅಥವಾ ಬಸ್ ಆಯ್ಕೆ ಮಾಡಬಹುದು. ಹತ್ತಿರದ ರೈಲು ನಿಲ್ದಾಣ ತಿರುವಲ್ಲೂರು, ಅಲ್ಲಿಂದ ದೇವಸ್ಥಾನವನ್ನು ತಲುಪಲು ಆಟೋ ಅಥವಾ ಟ್ಯಾಕ್ಸಿ ತೆಗೆದುಕೊಳ್ಳಬಹುದು. ದೇವಸ್ಥಾನವು ಚೆನ್ನೈನಿಂದ ಸುಮಾರು 50 ಕಿ.ಮೀ ದೂರದಲ್ಲಿದ್ದು, ಪ್ರಯಾಣ ಸುಲಭ ಮತ್ತು ಆರಾಮದಾಯಕವಾಗಿದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವ್ಹಾವ್..ವ್ಹಾವ್..ಗೋವಾ!

Read Next

ವ್ಹಾವ್..ವ್ಹಾವ್..ಗೋವಾ!