ಪಿನಾಕವೇ ಇಲ್ಲಿ ಪೂಜಾಮೂರ್ತಿ
ಸಂಪೂರ್ಣ ಶಿಲಾಮಯವಾದ ಈ ದೇವಾಲಯ ಗರ್ಭಗುಡಿ, ಸುಖನಾಸಿ ಮತ್ತು ಪ್ರತ್ಯೇಕ ಮುಖ ಮಂಟಪ ಹೊಂದಿದ್ದು ದೇವಾಲಯದ ಸುತ್ತಲಿನ ಪೌಳಿ ವಿಜಯನಗರ ಕಾಲದಲ್ಲಿ ಸೇರ್ಪಡೆಗೊಂಡಿದೆ. ಗರ್ಭಗುಡಿಯಲ್ಲಿನ ಸಿಂಹ ಪೀಠದ ಮೇಲೆ ಇರುವ ಮೂಲ ಶಿಲ್ಪ ಶ್ರಿಶೂಲವಾಗಿದ್ದು, ದಕ್ಷಿಣ ಭಾರತದಲ್ಲಿನ ಏಕ ಮಾತ್ರ ತ್ರಿಶೂಲಿನಿ ದೇವಾಲಯವಿದು.
- ಶ್ರೀನಿವಾಸ ಮೂರ್ತಿ ಎನ್. ಎಸ್.
ರಾಜ್ಯದಲ್ಲಿ ದೇವಿಯನ್ನು ಹಲವು ಸ್ವರೂಪದಲ್ಲಿ ಆರಾಧಿಸಲಾಗುತ್ತದೆ. ಆದರೆ ತ್ರಿಶೂಲ ಸ್ವರೂಪದಲ್ಲಿ ದೇವಿಯನ್ನು ಆರಾಧಿಸುವ ಅಪರೂಪದ ದೇವಾಲಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳ್ಪ ಗ್ರಾಮದಲ್ಲಿದೆ.
ಇತಿಹಾಸ ಪುಟದಲ್ಲಿ ಈ ಗ್ರಾಮ ಗುರುತಿಸಿಕೊಂಡಿದೆ. ಇಲ್ಲಿ 1360ರ ಸಮಯದ ಶಾಸನ ದೊರೆತಿದ್ದು, ವಿಜಯನಗರದ ಅರಸ ದೇವರಾಯರ ಕಾಲದಲ್ಲಿ ಅಮ್ಮನವರ ಪೂಜೆ ಮತ್ತು ಸುಮಂಗಳೆ ಪೂಜೆಗೆ ಐತ್ತೂರು ಗ್ರಾಮವನ್ನು ದತ್ತಿ ನೀಡಿದ ಉಲ್ಲೇಖವಿದೆ. ಕದಂಬರ ಕಾಲದಲ್ಲಿ ಭೋಗವರ್ಮ ಇಲ್ಲಿ ಭೋಗಾಯನಕೆರೆ ನಿರ್ಮಾಣ ಮಾಡಿದ ಉಲ್ಲೇಖವಿದೆ. ಸ್ಥಳೀಯವಾಗಿ ಪ್ರಬಲರಾಗಿದ್ದ ಬಲ್ಲಾಳ ಅರಸರ ಪ್ರಭಾವ ಈ ದೇವಾಲಯದಲ್ಲಿ ಕಾಣ ಸಿಗುವುದಿಲ್ಲ. ಮತ್ತೊಂದು ಶಾಸನದಲ್ಲಿ ಕಡಬದ ಕೆಂಚ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖ ನೋಡಬಹುದು. ಮೂಲೆಗುಂಪಾಗಿದ್ದ ದೇವಾಲಯವನ್ನು ಸಂಶೋಧಕ ಗುರುರಾಜ ಭಟ್ ಅವರ ಪ್ರಯತ್ನದಿಂದ ಪುರಾತತ್ವ ಇಲಾಖೆ ಗುರುತಿಸಿತು. ಸಂರಕ್ಷಿತ ಸ್ಮಾರಕವೆಂದು ಘೋಷಣೆ ಮಾಡಿತು. ಇದರ ನಿರ್ವಹಣೆಯನ್ನೂ ಮಾಡುತ್ತಿದೆ. ಹಿಂದಿನಿಂದಲೂ ಶೃಂಗೇರಿ ಮಠದ ಜತೆ ದೇವಾಲಯಕ್ಕೆ ಅವಿನಾಭವ ಸಂಬಂಧವಿದ್ದು, ದೇವಾಲಯಕ್ಕೆ ತಂತ್ರಿಗಳನ್ನು ಮಠವೇ ನೇಮಿಸುತ್ತದೆ. ಶೃಂಗೇರಿ ಜಗದ್ಗುರುಗಳು 2017ರಲ್ಲಿ ಇಲ್ಲಿ ಕುಂಭಾಭಿಷೇಕ ಮಾಡಿದ್ದರು. ದೇವಾಲಯದಲ್ಲಿ ಹಲವು ಉಬ್ಬು ಶಿಲ್ಪಗಳು, ಭೈರವನ ಶಿಲ್ಪಗಳು ಇವೆ.

ಸಂಪೂರ್ಣ ಶಿಲಾಮಯವಾದ ಈ ದೇವಾಲಯ, ಗರ್ಭಗುಡಿ, ಸುಖನಾಸಿ ಮತ್ತು ಪ್ರತ್ಯೇಕ ಮುಖ ಮಂಟಪ ಹೊಂದಿದೆ. ದೇವಾಲಯದ ಸುತ್ತಲಿನ ಪೌಳಿ ವಿಜಯನಗರ ಕಾಲದಲ್ಲಿ ಸೇರ್ಪಡೆಗೊಂಡಿದೆ. ಗರ್ಭಗುಡಿಯಲ್ಲಿನ ಸಿಂಹ ಪೀಠದ ಮೇಲೆ ಮೂಲ ಶಿಲ್ಪ ಶ್ರಿಶೂಲವಿದೆ. ದಕ್ಷಿಣ ಭಾರತದಲ್ಲಿನ ಏಕ ಮಾತ್ರ ತ್ರಿಶೂಲಿನಿ ದೇವಾಲಯ ಇದಾಗಿದೆ. ಪಂಚಲೋಹದ ಉತ್ಸವ ಮೂರ್ತಿ ಇದ್ದು ಶಂಖ, ಚಕ್ರ, ತ್ರಿಶೂಲ ಮತ್ತು ಪಾನ ಪಾತ್ರೆಯೊಂದಿಗೆ ಸ್ಥಾನಿಕ ಭಂಗಿಯಲ್ಲಿದೆ.
ಪ್ರತ್ಯೇಕ ಮುಖಮಂಟಪವಿದ್ದು, ಮಂಟಪದ ಪ್ರವೇಶದಲ್ಲಿ ಸಹ ಸೋಪಾನವನ್ನು ಹೊಂದಿದೆ. ಸೋಪಾನದ ಪಕ್ಕದ ಕಂಭಗಳಲ್ಲಿ ಕಾಳಮುಖ ಗುರುವಿನ ಶಿಲ್ಪ, ಹಲ್ಲಿ, ಚೇಳು, ಮಿಥುನ ಶಿಲ್ಪಗಳು ಇವೆ. ಸುಮಂಗಲಿ ಮಂಟಪದಲ್ಲಿ ನಾಲ್ಕು ಕಂಭಗಳಿದ್ದು ಇಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ, ಹಲವು ಪ್ರಾಣಿಗಳ ಶಿಲ್ಪಗಳನ್ನು ಕಾಣಬಹುದು. ದೇವಾಲಯ ಪೌಳಿಯಲ್ಲಿನ ಮಂಟಪದ ಗೋಡೆಯಲ್ಲಿ ಯಕ್ಷಿಯ ಶಿಲ್ಪಗಳು, ಚಿಕ್ಕ ಮಂದಿರದಲ್ಲಿ ಗಣಪತಿಯ ಶಿಲ್ಪ, ದೇವಾಲಯ ಹಿಂಭಾಗದಲ್ಲಿ ಎರಡು ಕಲ್ಲಿನ ಶಿಲ್ಪಗಳಿದ್ದು, ಕೈಮುಗಿದು ಭಂಗಿಯ ಸ್ತ್ರೀಯ ಶಿಲ್ಪವಿದೆ. ದೇವಾಲಯದಲ್ಲಿ ಮತ್ತೊಂದು ಸುತ್ತಿನ ವಿಶಾಲವಾದ ಪ್ರಾಕಾರವಿದ್ದು, ಇಲ್ಲಿ ವಸಂತ ಮಂಟಪವಿದೆ. ವಾಯವ್ಯದ ಗೋಡೆಯಲ್ಲಿ ಕಾರ್ಯಸಿದ್ದಿ ಆಂಜನೇಯನ ಉಬ್ಬು ಶಿಲ್ಪವಿದೆ. ಇಲ್ಲಿ ಕಾಳರಾತ್ರಿ ಎಂಬ ದೈವವೂ ಇರುವುದು ವಿಶೇಷ.
ಸ್ಥಳ ಪುರಾಣದ ಪ್ರಕಾರ, ಇಲ್ಲಿ ಕ್ರೋಡ ಮುನಿಗಳು ತ್ರಿಶೂಲವೊಂದನ್ನು ಸ್ಥಾಪಿಸಿ ಪೂಜಿಸುತ್ತಿದ್ದರು. ರಾಕ್ಷಸನ ಸಂಹಾರಕ್ಕಾಗಿ ಅದನ್ನು ಬಳಸಲು ದೇವಿಯು ಮುನಿಗಳ ಬಳಿ ಕೇಳಿದಾಗ, ದೇವಿಯನ್ನು ಇಲ್ಲಿಯೇ ನೆಲೆಸುವಂತೆ ಮುನಿಗಳು ಕೇಳಿದರು. ಅದರಂತೆ ದೇವಿ ಪಾರ್ವತಿಯು ಇಲ್ಲಿ ತ್ರಿಶೂಲ ರೂಪಿಯಾಗಿ ನೆಲೆಸಿದಳು ಎನ್ನಲಾಗಿದೆ.
ನವರಾತ್ರಿಯ ಒಂಬತ್ತನೆಯ ದಿನ ತ್ರಿಶೂಲಿನಿಯ ಆರಾಧನೆ ಇಲ್ಲಿ ನಡೆಯುತ್ತದೆ. ಈಕೆ ದೇವಿಯ ರೌದ್ರ ಮತ್ತು ಯೋಧನ ಅವತಾರ ಎಂದೇ ಪರಿಗಣಿಸಲಾಗುತ್ತದೆ. ದಸರಾ ಸಮಯದಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ನಿತ್ಯ ಪಂಚಾಮೃತ ಅಭಿಷೇಕ, ಚಂಡಿಕಾ ಹೋಮ, ಗಣಪತಿಗೆ ಅಪ್ಪದ ಪೂಜೆ, ನಾಗ ಮತ್ತು ದೈವಕ್ಕೆ ತಂಬಿಲ ಪೂಜೆಗಳು ನಡೆಯುತ್ತವೆ. ದೇವಾಲಯದ ಹೊರ ಭಾಗದಲ್ಲಿ ಕಲ್ಯಾಣಿ ಮತ್ತು ಗುಳಿಗನ ಕಟ್ಟೆ ಇದೆ.

ದುರ್ಗಾಪರಮೇಶ್ವರಿ ದೇವಾಲಯ
ತ್ರಿಶೂಲಿನಿಯ ದೇವಾಲಯದ ಸನಿಹದಲ್ಲಿರುವ ಈ ದೇವಾಲಯ ನವೀಕರಣಗೊಂಡಿದೆ. ದೇವಾಲಯ ಸುಖನಾಸಿ ಮತ್ತು ಪ್ರತ್ಯೇಕ ಮುಖಮಂಟಪವನ್ನು ಹೊಂದಿದೆ. ಗರ್ಭಗುಡಿಯಲ್ಲಿ ಸ್ಥಾನಿಕ ದುರ್ಗಾ ಪರಮೇಶ್ವರಿಯ ಶಿಲ್ಪವಿದೆ. ದೇವಾಲಯದ ಹೊರಭಿತ್ತಿಯಲ್ಲಿ ಅರೆಗಂಭಗಳ ಮಾದರಿ ಕೆತ್ತನೆಯಿದೆ. ಹಿಂಭಾಗದಲ್ಲಿ ಪ್ರವೇಶ ದ್ವಾರವಿದೆ. ಮಂಟಪದಲ್ಲಿನ ಕಾಷ್ಟ ಕೆತ್ತನೆಗಳು ಗಮನ ಸೆಳೆಯುತ್ತವೆ. ಮೀನು, ಆಮೆ ಮಕರದಂಥ ಕೆತ್ತನೆಗಳೂ ಇದರಲ್ಲಿವೆ. ಪ್ರದಕ್ಷಿಣಾ ಪಥದಲ್ಲಿ ಬಲಿ ಮತ್ತು ಸಪ್ತಮಾತೃಕೆಯರ ಶಿಲ್ಪಗಳಿವೆ. ದೇವಾಲಯದ ಹೊರಭಾಗದಲ್ಲಿ ದೈವ ಸನ್ನಿಧಿ ಇದೆ. ಇಲ್ಲಿ ಜನಾರ್ಧನ ದೇವಾಲಯವೂ ಇದ್ದು ಈಗ ಹೇಳುವಷ್ಟು ಉಳಿದುಕೊಂಡಿಲ್ಲ.
ದಾರಿ ಹೇಗೆ?
ಸುಳ್ಯ ತಾಲೂಕು ಕೇಂದ್ರದಿಂದ ಸುಮಾರು 34ಕಿಮೀ ದೂರದಲ್ಲಿ ಬಾಳ್ಪವಿದೆ. ಕುಕ್ಕೆ ಸುಬ್ಯಮಣ್ಯದಿಂದ ಸುಮಾರು 20ಕಿಮೀ ದೂರದಲ್ಲಿದ್ದು, ಪಂಜದ ಪಂಚಲಿಂಗೇಶ್ವರ ದೇವಾಲಯವನ್ನು ನೋಡಿಕೊಂಡು ಹೋಗಬಹುದು. ಪಂಜದಿಂದ 7ಕಿಮೀ ದೂರದಲ್ಲಿದೆ.