ಕಲ್ಪತರು ನಾಡಿನಲ್ಲಿ ಗುಪ್ತ ನಿಧಿಯಂಥ ಬೆಟ್ಟ
ಅಲ್ಲಿ ಪ್ರಕೃತಿಯ ಮೈಮಾಟವಿದೆ. ಮುಸ್ಸಂಜೆಯ ಹೊತ್ತಿಗೆ ಕೆಂಬಣ್ಣದ ಮೋಡ ಚಿತ್ತಾರ ಬರೆದಿರುತ್ತದೆ. ಸೂರ್ಯ ತನ್ನ ನಿತ್ಯ ಕಾಯಕಕ್ಕೆ ವಿರಾಮ ಹೇಳುತ್ತಾ ಹೊರಟಿರುತ್ತಾನೆ. ಪ್ರಶಾಂತವಾದ ಕೆರೆಯ ಸುತ್ತಲೂ ಹಕ್ಕಿಗಳು ಗಾನಮೇಳ ಶುರುಮಾಡಿಕೊಂಡಿರುತ್ತವೆ. ಅಲ್ಲಿರುವ ಸುಂದರ ಉದ್ಯಾನವು ಮನ ಸೆಳೆಯುತ್ತದೆ. ಬೆಟ್ಟವನ್ನೇರಿದ ಖುಷಿ ನಮ್ಮಲ್ಲಿರುತ್ತದೆ. ಬೆಟ್ಟದ ಮೇಲೆ ನಿಂತು ನೀವು ʼನಮ್ಮೂರ ಮಂದಾರ ಹೂವೇʼ ಎಂದು ಹಾಡಬಹದು. ಹಾಂ. ಆ ಬೆಟ್ಟದ ಹೆಸರು ಮಂದರಗಿರಿ. ಕಲ್ಪತರುಗಳ ನಾಡಾದ ತುಮಕೂರಿನಲ್ಲಿ ಆ ಬೆಟ್ಟ ನೆಲೆಗೊಂಡಿದೆ.
- ಯತೀಶ ಎಸ್
ʼಮಂದರಗಿರಿʼ ಎಂಬ ಹೆಸರನ್ನು ಎಲ್ಲೋ ಹತ್ತಿರದಿಂದ ಕೇಳಿದ್ದೀರಿ ಅಲ್ಲವೇ? ನಿಮ್ಮ ಊಹೆ ಸರಿಯಿದೆ. ಬಸದಿ ಬೆಟ್ಟಕ್ಕೆ ಅಂಟಿಕೊಂಡು ಸಾಕಷ್ಟು ಪ್ರಸಿದ್ಧವಾಗಿರುವ ಈ ಜಾಗದ ಹೆಸರು ಮಂದರಗಿರಿ ಬೆಟ್ಟ. ತುಮಕೂರಿನಲ್ಲಿ ನೆಲೆಯೂರಿರುವ ಈ ಬೆಟ್ಟ ಸಕಲ ಧರ್ಮೀಯರ ಯಾತ್ರಾ ತಾಣವಾಗಿ ಹೊರ ರಾಜ್ಯದ ಪ್ರವಾಸಿಗರ ಮನಸನ್ನೂ ಸೆಳೆಯುತ್ತಿದೆ. ನಿಮ್ಮ ಧಾರ್ಮಿಕ ಭಕ್ತಿಗೆ ಇಲ್ಲಿ ದೇವಾಲಯಗಳಿವೆ. ನಿಮ್ಮನ್ನು ಉತ್ಸಾಹಿಗಳನ್ನಾಗಿಸಲು ಚಾರಣವಿದೆ. ವಾರವಿಡೀ ಆಫೀಸಿನ ಕೆಲಸಗಳ ಮಧ್ಯೆ ರೋಸಿ ಹೋದವರು, ನಗರ ಜೀವನದ ಗಲಭೆ ಗೊಂದಲಗಳಿಗೆ ಬೇಸತ್ತು ಹೋದವರು ಕೆಲ ಹೊತ್ತಿನ ಆತ್ಮ ನೆಮ್ಮದಿ ಮತ್ತು ಸಂತೋಷಕ್ಕಾಗಿ ಈ ಬೆಟ್ಟಕ್ಕೆ ಬರಬಹುದು. ಮಂದರಗಿರಿಯಲ್ಲಿ ಚಾರಣವಿದೆ. ಶಾಂತ ವಾತಾವರಣವಿದೆ. ಹಳ್ಳಿಯ ಸೊಗಡಿದೆ. ಭಕ್ತಿ ಭಾವವಿದೆ. ಅಂದಹಾಗೆ ಪ್ರಮುಖ ಜೈನ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಈ ಬೆಟ್ಟವು 19ನೆಯ ತೀರ್ಥಂಕರರಾದ ಮಲ್ಲಿನಾಥರಿಂದ ಮಂದರಗಿರಿ ಎಂಬ ಹೆಸರನ್ನು ಪಡೆದುಕೊಂಡಿದೆ. 12ನೆಯ ಶತಮಾನದಲ್ಲಿ ಸ್ಥಾಪಿತವಾದ ಈ ಬೆಟ್ಟವು 435 ಮೆಟ್ಟಿಲುಗಳನ್ನು ಹೊಂದಿದ್ದು, ಹತ್ತಲು ಸುಲಭವಾಗಿದೆ. ಮಕ್ಕಳು, ವಯಸ್ಕರು ಮತ್ತು ವೃದ್ಧರು ಆರಾಮವಾಗಿ ಬೆಟ್ಟ ಹತ್ತಿ ದೇವಾಲಯದ ಪ್ರವೇಶ ದ್ವಾರವನ್ನು ತಲುಪಬಹುದು. ಬೆಟ್ಟ ಹತ್ತುತ್ತಾ ಹೋದಂತೆ ಅಲ್ಲಿ ನಿಮಗೆ ಪ್ರಕೃತಿಯ ಮೈಮಾಟ ಕಾಣಿಸುತ್ತದೆ. ಮುಸ್ಸಂಜೆಯ ಹೊತ್ತಿಗೆ ಕೆಂಬಣ್ಣದ ಮೋಡ ಚಿತ್ತಾರ ಬರೆದಿರುತ್ತದೆ. ಸೂರ್ಯ ತನ್ನ ನಿತ್ಯ ಕಾಯಕಕ್ಕೆ ವಿರಾಮ ಹೇಳುತ್ತಾ ಹೊರಟಿರುತ್ತಾನೆ. ಪ್ರಶಾಂತವಾದ ಕೆರೆಯ ಸುತ್ತಲೂ ಹಕ್ಕಿಗಳು ಗಾನಮೇಳ ಶುರುಮಾಡಿಕೊಂಡಿರುತ್ತವೆ. ಅಲ್ಲಿರುವ ಸುಂದರ ಉದ್ಯಾನವು ಮನ ಸೆಳೆಯುತ್ತದೆ. ಬೆಟ್ಟವನ್ನೇರಿದ ಖುಷಿ ನಮ್ಮಲ್ಲಿರುತ್ತದೆ. ಬೆಟ್ಟದ ಮೇಲೆ ನಿಂತು ನೀವು ʼನಮ್ಮೂರ ಮಂದಾರ ಹೂವೇʼ ಎಂದು ದನಿಬಿಚ್ಚಿ ಹಾಡಬಹುದು.
ಇದನ್ನೂ ಓದಿ: ಬೀದರ್ ಎಂದರೆ ಬಿಸಿಲುನಾಡಲ್ಲ ಇತಿಹಾಸ, ಶಿಲ್ಪಕಲೆಯ ತೊಟ್ಟಿಲು
ಪ್ರಖ್ಯಾತ ಜಿನ ಮಂದಿರ
ಮಂದರಗಿರಿಯು ರಾಜ್ಯದ ಪವಿತ್ರ ಮತ್ತು ಪ್ರಖ್ಯಾತ ಜೈನ ಯಾತ್ರಾ ತಾಣ. ತುಮಕೂರಿನ ಕ್ಯಾತ್ಸಂದ್ರದಿಂದ 3 ಕಿಮೀ ದೂರದಲ್ಲಿ ಈ ತಾಣವಿದೆ. ಹೈವೇ ರಸ್ತೆಗೆ ತೆರೆದುಕೊಳ್ಳುವ ಪಂಡಿತರಹಳ್ಳಿ ಗ್ರಾಮದಲ್ಲಿ ಬೃಹತ್ ಕಮಾನಿನ ಪ್ರವೇಶದ್ವಾರವನ್ನು ಕಾಣಬಹದು. ಅಲ್ಲಿಯೇ ಸಮೀಪದಲ್ಲಿ ಬಾಹುಬಲಿಯಂತೆ ಕಾಣುವ ಶಾಂತ ವದನದ ಮೂರ್ತಿ ಕಾಣಿಸುತ್ತದೆ. ಅದು ಜೈನ ಗುರು ದಿಗಂಬರ ಚಂದ್ರನಾಥ ತೀರ್ಥಂಕರರ ಮೂರ್ತಿ. ಇನ್ನು ಬೆಟ್ಟವನ್ನು ಹತ್ತುವ ಮೊದಲೇ ನಿಮ್ಮ ಕಣ್ಣುಗಳನ್ನು ದೂರಕ್ಕೆ ನೆಟ್ಟರೆ ನೀಲಿ ಬಣ್ಣದ ನವಿಲು ಗರಿಗಳ ಆಕಾರದ ಗುರು ಮಂದಿರ ಕಾಣಿಸುತ್ತದೆ. ಇದು 1855 ರಿಂದ 1955ರವರೆಗೆ ಬದುಕಿದ್ದ ಆಚಾರ್ಯ ದಿಗಂಬರ ಜೈನ ಚಾರಿತ್ರ ಚಕ್ರವರ್ತಿ ಶ್ರೀಶಾಂತಿ ಸಾಗರ್ ಜೀ ಮಹಾರಾಜ್ ಗುರು ಮಂದಿರ. ದಿಗಂಬರ ಜೈನ ತಪಸ್ವಿಗಳು ಬಳಸುತ್ತಿದ್ದ ನವಿಲುಗರಿಯ ಮುಚ್ಚಳಿಕೆಯ ಆಕಾರದ ಈ ಮಂದಿರ ಸರಿ ಸುಮಾರು 81 ಅಡಿ ಎತ್ತರವಿದೆ. ಅದರ ನಿರ್ಮಾಣ ಮತ್ತು ವಿನ್ಯಾಸ ನಿಮ್ಮ ಎದೆಯಲ್ಲಿ ಶಾಂತಿಯ ಸ್ವಾದವನ್ನು ಹರಿಸುತ್ತದೆ. ಹಾಗೆ ಮುಂದೆ ಸಾಗಿದರೆ ಒಂದು ಮಾನವ ನಿರ್ಮಿತ ಮರ, ಅದರ ಕೆಳಗೆ ನಾಲ್ಕು ತೀರ್ಥಂಕರರು ಕುಳಿತು ಧ್ಯಾನದಲ್ಲಿ ನಿರತರಾಗಿರುವ ಪ್ರತಿಮೆಗಳನ್ನು ಕಾಣಬಹುದು. ಈ ಏಕಶಿಲೆಯಲ್ಲಿ ಒಟ್ಟು ನಾಲ್ಕು ದೇವಾಲಯಗಳಿವೆ, ಒಂದು ದೇವಾಲಯ ಕೇವಲ ಖಾಲಿ ಕೋಣೆ, ಉಳಿದ ಮೂರು ದೇವಾಲಯ ಚಂದ್ರಪ್ರಭಾ , ಪಾರ್ಶ್ವನಾಥ ಮತ್ತು ಸುಪಾರ್ಶ್ವನಾಥರಿಗೆ ಸಮರ್ಪಿತವಾಗಿವೆ.

ಮೈದಳೆದ ಮೈದಾಳ ಕೆರೆ
ಬೆಟ್ಟದ ತುದಿಯಿಂದ ಹತ್ತು ಹನ್ನೆರಡು ನಿಮಿಷ ನಿಮಿಷ ಚಾರಣ ಮಾಡಿದರೆ ಜೈನ ಬಸದಿಗಳಿಗೆ ಹೋಗಿ ತೀರ್ಥಂಕರ ದರ್ಶನ ಮಾಡಬಹುದು. ಮಂದರಗಿರಿಯ ಹಿಂಭಾಗದಲ್ಲಿ ಬೆಟ್ಟದ ಸಾಲುಗಳು ಮುತ್ತಿಗೆ ಮುತ್ತು ಪೋಣಿಸಿದಂತೆ ಕಾಣಿಸುತ್ತವೆ. ಒಂದರ ಹಿಂದೆ ಒಂದರಂತೆ ಆಗಸದವರೆಗೂ ಮೈ ಚಾಚಿಕೊಂಡಿವೆ. ವಿಶಾಲವಾಗಿ ಹರಡಿಕೊಂಡಿರುವ ಮೈದಾಳದ ಕೆರೆ ಸುಪ್ತ ಮನಸಿಗೆ ಕಚಗುಳಿಯಿಟ್ಟು ಚೈತನ್ಯ ತುಂಬುತ್ತದೆ . ಮೈದಾಳಕೆರೆ ಮಂದರಗಿರಿಯ ಪ್ರಮುಖ ಆಕರ್ಷಣೆ ಎನ್ನಬಹುದು. ಕೆರೆಯ ಹತ್ತಿರ ನಿಂತು ಬೆಳಗ್ಗೆಯ ಸೂರ್ಯೋದಯ ಮತ್ತು ಸಂಜೆಯ ಸೂರ್ಯಾಸ್ತವನ್ನು ಕಣ್ತುಂಬಿಕೊಂಡು ಸಂಭ್ರಮಿಸಬಹುದು. ಕೆರೆ ತಲುಪಬೇಕಾದರೆ ಸಣ್ಣ ಗುಡ್ಡಗಳನ್ನು ಇಳಿಯಬೇಕು. ಇತಿಹಾಸ ಮತ್ತು ಪುರಾತನ ಶಾಸ್ತ್ರಗಳ ಬಗ್ಗೆ ಆಸಕ್ತಿ ಇರುವವರು ಜಿನಮಂದಿರದ ಆವರಣದಲ್ಲಿರುವ ಶಾಸನಗಳಿಂದ ಮಾಹಿತಿಪಡೆಯಬಹುದು. ದೂರದಲ್ಲೆಲ್ಲೋ ವೀಣೆಯ ತಂತಿ ಮೀಟಿದಂತೆ ಹರಿಯುವ ಸಣ್ಣ ತೊರೆಗಳು, ಕುಹೂ ಕುಹೂ ಎನ್ನುವ ಕೋಗಿಲೆಗಳು, ನಾಟ್ಯ ವೈಭವ ಮೆರೆಯುವ ನವಿಲುಗಳು, ಅಚ್ಚ ಹಸಿರಿನ ಹೊಲ,ಗದ್ದೆಗಳು ಮುಗ್ಧವಾಗಿ ಮಾತಿಗಿಳಿಯುವ ಅಲ್ಲಿನ ಜನರು ಇಡೀ ಪ್ರವಾಸವನ್ನು ಬೆಚ್ಚನೆಯ ನೆನಪಾಗಿಸುತ್ತಾರೆ.

ವಿ.ಸೂ : ಬೆಟ್ಟದ ಸುತ್ತಲೂ ತಿನ್ನಲು ಹಾಗೂ ಕುಡಿಯಲು ಸ್ನ್ಯಾಕ್ಸ್ ಸಿಗುತ್ತದೆ. ಮನೆಯಿಂದ ನೀವೇ ಕೊಂಡೊಯ್ದರೆ ಇನ್ನೂ ಉತ್ತಮ. ನಿಮ್ಮ ತಿಂಡಿ ತಿನಿಸನ್ನು ತಿಂದು ಮುಗಿಸಿದ ಮೇಲೆ ಪ್ಲಾಸ್ಟಿಕ್ ವೇಸ್ಟ್ ಅನ್ನು ದಯಮಾಡಿ ನಿಮ್ಮ ಬಳಿ ಇರಿಸಿ ಅಥವಾ ಕಸದ ತೊಟ್ಟಿಗೆ ಹಾಕಬೇಕಾಗಿ ವಿನಂತಿ. ಪರಿಸರ ನಮ್ಮೆಲ್ಲರ ಆಸ್ತಿ, ಅದನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.
ದಾರಿ ಹೇಗೆ?
ರಾಜಧಾನಿ ಬೆಂಗಳೂರಿನಿಂದ ತುಮಕೂರು ಕಡೆ ಸಾಗುವ ಬಸ್ಸಿನಲ್ಲಿ ಪ್ರಯಾಣಿಸಿ ಕ್ಯಾತ್ಸಂದ್ರದಲ್ಲಿ ಇಳಿದು ಅಲ್ಲಿಂದ ಆಟೋ ರಿಕ್ಷಾದಲ್ಲಿ ಮಂದಾರ ಬೆಟ್ಟ ತಲುಪಬಹುದು.
ಕಾರು ಮತ್ತು ಬೈಕುಗಳಿದ್ದರೆ ಅನುಕೂಲ ಮತ್ತು ಪ್ರಯಾಣ ಸುಗಮ.
ಬೆಳಗ್ಗೆ 7 ರಿಂದ ಸಂಜೆ 6ರ ವರೆಗೂ ಮಂದರ ಬೆಟ್ಟಕ್ಕೆ ಪ್ರವೇಶವಿದೆ.