ಅಮೆರಿಕ ಮ್ಯೂಸಿಯಮ್ಮಿನಲ್ಲಿ ತಗಲಾಕ್ಕೊಂಡೇ ನಾನು..!
ನಮ್ಮ ಭಾರತ ಮೂಲದ ಗೋಲ್ಕೊಂಡಾ ಪ್ರಾಂತ್ಯದ ಕೊಲ್ಲೂರ್ ಮೈನ್ಸ್‌ನಲ್ಲಿ ದೊರಕಿದ್ದ ಚಂದದ ನೀಲಿ ಬಣ್ಣದ ‘Hope of diamond,’ ಮೊದಲಿಗೆ French crown ನಲ್ಲಿ ಭದ್ರವಾಗಿದ್ದು, ನಂತರ ಯುರೋಪಿಯನ್ ಹಾಗೂ ಅಮೆರಿಕದ ಮಾಲೀಕತ್ವದಿಂದ ಇದೀಗ ಈ ಮ್ಯೂಸಿಯಮ್ಮಿನಲ್ಲಿ ನೋಡುವ ಹಾಗಾಯಿತು.
- ಧಾರಿಣಿ ಮಾಯಾ
ಅಮೆರಿಕಗೂ ನನಗೂ ತಗಲಾಕ್ಕೊಳ್ಳೋದ್ರಲ್ಲಿ ಅದೇನೋ ಒಂಥರ ನಂಟು ಎನ್ನಬಹುದೇನೋ. ಪರದೇಶಿ ನೆಲದಲ್ಲಿ ಮೊದಲ ಬಾರಿಗೆ ಕಾಲಿಟ್ಟಾಗಲೇ ಟ್ರಾಷ್ ರೂಮಿನಲ್ಲಿ ಸಿಕ್ಕಿಕೊಂಡಿದ್ದು ಭಯಾನಕ ಅನುಭವವಾಗಿದ್ದರೆ, 15 ದಿನದ ಅಂತರದಲ್ಲಿ ವಾಷಿಂಗ್ಟನ್ನಿನ ಪ್ರಖ್ಯಾತ Smithsonian’s ನ National Museum Of Natural History ಯಲ್ಲಿ ಸಿಕ್ಕಿಕೊಂಡು ಪರದಾಡಿದ್ದು ಮತ್ತಷ್ಟು ಸೂಪರ್ ಭಯಾನಕ ಅನುಭವ. ಅದನ್ನು ನೆನೆದರೆ ಈಗಲೂ ಎದೆ ಝಲ್ ಎನ್ನುವುದು.
ಮ್ಯೂಸಿಯಮ್ಮಿನ ಒಂದೊಂದು ಮಹಡಿಯಲ್ಲೂ ಅನೇಕ ವಿಭಾಗಗಳಿದ್ದು ಜಗತ್ತಿನ ಮೂಲೆಮೂಲೆಗಳಿಂದ ಕಲೆ ಹಾಕಿದ್ದ ವಿಸ್ಮಯಕಾರಿ ವಸ್ತುಸಂಗ್ರಹವಿದೆ. 1.5 ಮಿಲಿಯನ್. ಚ. ಅಡಿಯ ಈ ಮ್ಯೂಸಿಯಮ್ಮಿನಲ್ಲಿ ಮೂರು ಅಂತಸ್ತುಗಳಿದ್ದು ಜಾಗತಿಕ ಮಟ್ಟದಲ್ಲಿ ಮಾನವ ಸಂಸ್ಕೃತಿ, ಸಾಂಸ್ಕೃತಿಕ ಕಲಾಕೃತಿಗಳು, ನೈಸರ್ಗಿಕ ವಿಜ್ಞಾನ ಮಾದರಿಗಳು, ಡೈನೋಸಾರ್, ಮ್ಯಾಮ್ಮಲ್ಸ್, ಖನಿಜಗಳು, ಭೂಗೋಳ, ಕ್ರಿಸ್ಟಲ್ಸ್ ಹೀಗೆ ಇನ್ನೂ ಅನೇಕಾನೇಕ ನೈಸರ್ಗಿಕ ಇತಿಹಾಸ ಸಂಗ್ರಹಗಳ ವಿಪುಲ ಮಾಹಿತಿಯುಳ್ಳ ಆಗರವಾಗಿದೆ. ಇಲ್ಲಿ ಮೂರು ಮಿಲಿಯನ್ ಐತಿಹಾಸಿಕ ವಸ್ತುಸಂಗ್ರಹವಿದೆ. ಕೀಟ, ಕಾಡುಮೃಗಗಳ ಮಾದರಿಗಳು ಅಚ್ಚರಿ ಹುಟ್ಟಿಸುತ್ತವೆ.

ನಮ್ಮ ಭಾರತ ಮೂಲದ ಗೋಲ್ಕೊಂಡಾ ಪ್ರಾಂತ್ಯದ ಕೊಲ್ಲೂರ್ ಮೈನ್ಸ್‌ನಲ್ಲಿ ದೊರಕಿದ್ದ ಚಂದದ ನೀಲಿ ಬಣ್ಣದ ‘Hope of diamond,’ ಮೊದಲಿಗೆ French crown ನಲ್ಲಿ ಭದ್ರವಾಗಿದ್ದು, ನಂತರ ಯುರೋಪಿಯನ್ ಹಾಗೂ ಅಮೆರಿಕದ ಮಾಲೀಕತ್ವದಿಂದ ಇದೀಗ ಈ ಮ್ಯೂಸಿಯಮ್ಮಿನಲ್ಲಿ ನೋಡುವ ಹಾಗಾಯಿತು. ಒಟ್ಟಿನಲ್ಲಿ ಈ ಮ್ಯೂಸಿಯಮ್ ನಮ್ಮ ಇತಿಹಾಸ ಹಾಗೂ ಇಂದಿನ ನೆಲೆಗಟ್ಟನ್ನು ಅರಿತುಕೊಳ್ಳಲು ಒಂದು ಬೃಹತ್ ಪಾಠಶಾಲೆ ಎಂದೇ ಹೇಳಬಹುದು.
ಅದನ್ನೆಲ್ಲಾ ನೋಡಿ ಮುಗಿಸಲು ಒಂದು ಇಡೀ ದಿನ ಬೇಕಾಗುತ್ತದೆ. ನಿತ್ರಾಣಗೊಂಡ ಕಾಲುಗಳಿಗೆ ರೆಸ್ಟ್ ಮತ್ತು ಉದರ ತುಂಬಿಸಿಕೊಳ್ಳಲು ಬೇರೆಬೇರೆ ರೆಸ್ಟೋರೆಂಟ್‌ಗಳಿದ್ದವು. ಅವರ ಆಹಾರಗಳಾವುವೂ ಒಗ್ಗದಿದ್ದರೂ, ವಿಧಿಯಿಲ್ಲದೆ ಹೊಟ್ಟೆಯನ್ನು ತಣಿಸಬೇಕಿತ್ತು. ಇಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು 90 ವರ್ಷಗಳ ಮೇಲ್ಪಟ್ಟ ಹಿರಿಯರೂ ಉತ್ಸುಕತೆಯಿಂದ ಎಲ್ಲವನ್ನೂ ವೀಕ್ಷಿಸುತ್ತಿದ್ದರು.
ಅಂತೂ ಎಲ್ಲವನ್ನೂ ನೋಡಿದ ಮೇಲೆ ಮ್ಯೂಸಿಯಮ್ಮಿನಿಂದ ಹೊರಬೀಳುವ ಮುನ್ನ ರೆಸ್ಟ್ ರೂಮಿಗೆ ಹೋಗಿಬರೋಣವೆಂದು ನಾನು ಮತ್ತು ನನ್ನ ಪತಿ ಹುಡುಕತೊಡಗಿದೆವು. ಆಗ ಸಮಯ ಸಂಜೆ ಐದೂವರೆ ಗಂಟೆ. ಮ್ಯೂಸಿಯಮ್ ಮುಚ್ಚಲು ಇನ್ನೂ ಅರ್ಧ ಗಂಟೆ ಸಮಯವಿತ್ತು. ನನ್ನನ್ನು ಒಂದು ಕಡೆ ಕುಳಿತುಕೊಳ್ಳಲು ಹೇಳಿ, ನನ್ನ ಪತಿ ತಮ್ಮ ರೆಸ್ಟ್ ರೂಮ್ ಕೆಲಸ ಮುಗಿಸಿ ಬಂದರು. ಸರಿ, ಇದೀಗ ನನ್ನ ಸರದಿಯಾಗಿದ್ದು ನಾನು ನನ್ನ ಕೈಲಿದ್ದ ವ್ಯಾನಿಟಿ ಬ್ಯಾಗನ್ನು ನನ್ನ ಪತಿಗೆ ಕೊಟ್ಟು ಅವರು ಹೇಳಿದ ದಿಕ್ಕಿನತ್ತ ಸರಸರನೆ ಹೆಜ್ಜೆ ಹಾಕಿದೆ.
ಆದರೆ ಅಲ್ಲಿದ್ದ ವಾಷ್ ರೂಮಿಗೆ ಬೀಗ ಜಡಿಯಲಾಗಿತ್ತು. ಅಲ್ಲಿದ್ದ ಸೆಕ್ಯೂರಿಟಿ ಗಾರ್ಡನ್ನು ಕೇಳಿದರೆ basement ನಲ್ಲೊಂದು ರೆಸ್ಟ್ ರೂಮ್ ಇರುವುದಾಗಿ ಹೇಳಿದ. ನಾನು basementನಲ್ಲಿ ಇಳಿದು ಅವ ಹೇಳಿದ ದಿಕ್ಕಿನತ್ತ ಹೋದೆ. ಅಲ್ಲೊಂದು ಕಿರಿದಾದ ಬಾಗಿಲು ಇದ್ದಿತು. ಒಳಗೆ ಹೋದರೆ ಅದೊಂದು ಓಣಿ. ಹೋಗಹೋಗುತ್ತಲೇ ಆಜೂ ಬಾಜೂ ನಿರ್ಜೀವ ಪ್ರಾಣಿ, ಪಕ್ಷಿಗಳು ಕೆಕ್ಕರಿಸಿಕೊಂಡು ನನ್ನನ್ನೇ ನೋಡುತ್ತಿದ್ದವು. ಹೃದಯ ಗಟ್ಟಿ ಮಾಡಿಕೊಂಡು ಹೆಜ್ಜೆ ಹಾಕಿದೆ. ಆದರೂ ಅಲ್ಯಾವ ವಾಷ್ ರೂಮೂ ಕಾಣಲಿಲ್ಲ. ಭರಭರನೆ ಬಂದ ದಾರಿಗೆ ಓಡಿದೆ. ಮತ್ಯಾರೋ ಇನ್ನೊಂದು ದಿಕ್ಕು ತೋರಿಸಿದರು. ಅಲ್ಲಿಗೆ ಓಡಿದೆ. ಸದ್ಯ, ಮೂತ್ರ ಹಿಡಿದಿಡುವುದು ಒಂದು ಕಡೆಯಾದ್ರೆ, ಜೋರಾಗಿ ಹೊಡೆದುಕೊಳ್ಳುತ್ತಿದ್ದ ನನ್ನ ಪುಟ್ಟ ಹಾರ್ಟನ್ನು ನಿಗ್ರಹಿಸುವುದು ತ್ರಾಸಾಗಿತ್ತು.
ಅಂತೂ ಮೈಮನ ಹಗುರ ಮಾಡಿಕೊಳ್ಳಲು escalator ಹತ್ತಲು ದಡದಡನೆ ಓಡಿದೆ. ಅಲ್ಲೊಬ್ಬಳು ಕಪ್ಪಗಿನ ಹೆಣ್ಣಿನ ಆಕೃತಿ (ನೀಗ್ರೋ/ಬ್ಲಾಕ್ ವುಮನ್) ನಿಂತಿತ್ತು. ಅವರನ್ನು ನೀಗ್ರೋ ಎಂದು ಕರೆಯಬಾರದು, ಬ್ಲಾಕ್ಸ್ ಎನ್ನಬೇಕು ಎನ್ನುತ್ತಾರೆ. ಆಕೆ ನನ್ನನ್ನು ತಡೆದು, “You can’t go there, upstairs exit is already locked” ಎಂದಳು. ಈಗ ಜೀವ ಬಾಯಿಗೆ ಬಂದ ಹಾಗಾಗಿತ್ತು. ನನ್ನ ಪತಿಮಹಾಶಯ ಮೇಲಿನ ಮಹಡಿಯಲ್ಲಿ ನನ್ನ ಬರುವಿಕೆಯನ್ನೇ ಕಾಯುತ್ತಾ ಕುಳಿತಿದ್ದರು. ಇತ್ತ ನೋಡಿದರೆ ನನಗೆ ಅಲ್ಲಿಗೆ ಹೋಗಲು ‘No entry’ ಮಾಡಿದ್ದರು. "My husband is waiting there for me, he doesn’t know that I am in the basement. Please allow me to go there” ಎಂದು ಪರಿಪರಿಯಾಗಿ ಅಂಗಲಾಚಿದೆ. ಆದರೂ ಆ ಕಪ್ಪು ಕಲ್ಲು ಹೃದಯ ಕರಗಲಿಲ್ಲ. ಅವಳನ್ನು ಮನಸ್ಸಲ್ಲೇ ಶಪಿಸಿಕೊಂಡರೂ ಒಳಗೊಳಗೇ ದುಃಖ ಒತ್ತರಿಸುತ್ತಿತ್ತು. ಬೇರೆ exit ನಲ್ಲಿ ಹೊರಬಂದರೆ ನಾನು ಎಲ್ಲಿದ್ದೇನೆಂದು ನನ್ನ ಪತಿ ಹುಡುಕಿಯಾರು? ಹಾಗಾಗಿ ನಾನು ಅವರಿದ್ದಲ್ಲಿಗೇ ಹೋಗಬೇಕಿತ್ತು. ಪತಿ ಮಹಾನುಭಾವನಿಗೆ ಫೋನ್ ಮಾಡಿ ಅಲ್ಲಿಗೇ ಬರಲು ಹೇಳೋಣವೆಂದರೆ, ನನ್ನ ಫೋನ್, ವ್ಯಾನಿಟಿ ಬ್ಯಾಗ್ ಎಲ್ಲವನ್ನೂ ಅವರ ಕೈಗೊಪ್ಪಿಸಿ ಬರಿಗೈಲಿ ಬಂದಿದ್ದೆ.

ಮ್ಯೂಸಿಯಮ್ ಮುಚ್ಚಲು ಇನ್ನೂ ಸಮಯವಿದ್ದರೂ, ಸೆಕ್ಯೂರಿಟಿ ಗಾರ್ಡ್‌ಗಳು ಎಲ್ಲರನ್ನೂ ಇನ್ನೂ ಅರ್ಧ ಗಂಟೆ ಮುಂಚೆಯೇ ಎಲ್ಲರನ್ನೂ ಹೊರದಬ್ಬುತ್ತಿದ್ದರು. ದಿಕ್ಕೇ ತೋಚದಂತಾಗಿ ಅಲ್ಲೇ ಹತ್ತಿರ ನಿಂತಿದ್ದ ಒಬ್ಬ ನೀಗ್ರೋ ಜಾನಿಯ ಬಳಿ ನನ್ನ ಮೊರೆ ಇಟ್ಟೆ. ಗಂಡು ಹೃದಯ ನನ್ನ ಅಹವಾಲನ್ನು ಅರ್ಥಮಾಡಿಕೊಂಡು, “Ok, let her go” ಎಂದು ಆ ಕಪ್ಪು ಹೆಂಗಸಿಗೆ ಹೇಳಿದ. ಬದುಕಿದೆಯಾ ಬಡಜೀವ ಎಂದು escalator ಬಳಿ ಓಡುವಷ್ಟರಲ್ಲಿ, ನಗುತ್ತಾ ನನ್ನ ಪತಿಮಹಾಶಯ ನನ್ನ ವ್ಯಾನಿಟಿ ಬ್ಯಾಗನ್ನು ಕಂಕುಳಿಗೆ ಸಿಕ್ಕಿಸಿಕೊಂಡು escalator ನಿಂದ ಇಳಿಯುತ್ತಿದ್ದರು. ಖುಷಿ, ಗಾಬರಿ, ದುಃಖ ಎಲ್ಲವೂ ಒತ್ತರಿಸಿ ಬಂದು, ಮೊದಲು ಇಬ್ಬರೂ ಹೊರ ಬಿದ್ದೆವು.
ಅಕಸ್ಮಾತ್ ನಾನು ಆ ಓಣಿಯಲ್ಲಿ ಸಿಕ್ಕಿಕೊಂಡಿದ್ದರೆ, ಫೋನ್ ನನ್ನ ಕೈಯಲ್ಲಿ ಇಲ್ಲದ್ದರಿಂದ ನನ್ನ ಪತಿ ನನ್ನನ್ನು ಹೇಗೆ ಹುಡುಕುತ್ತಿದ್ದರೋ, ಆ stuffed animals ಮ್ಯೂಸಿಮ್ಮಿನಲ್ಲಿ ಆ ರಾತ್ರಿ ಪೂರಾ ನಿರ್ಜೀವ ಪ್ರಾಣಿಗಳೊಡನೆ ಹೇಗೆ ಕಳೆಯುತ್ತಿದ್ದೆನೋ ಎಂದು ನೆನೆದರೇ ಈಗಲೂ ಕಂಗಾಲಾಗುತ್ತೇನೆ.
ಎಲ್ಲೇ ಇದ್ರೂ, ಅದ್ರಲ್ಲೂ ಪರದೇಶದಲ್ಲಿದ್ದರಂತೂ ಕೈಯಲ್ಲಿ ಫೋನ್ ಮಾತ್ರ ಸದಾ ಇರಲೇಬೇಕೆಂಬ ಪಾಠ ಮಾತ್ರ ಚೆನ್ನಾಗಿ ಕಲಿತೆ.