ಮರಾಠ ನಾಡಿನಲ್ಲಿ ಭಾಷಾ ಪಾಠ!
ತಂದ ಭಾಕರಿ, ಸಾಬೂದಾನದ ಕಿಚಡಿ ತಿಂದಿರುವುದು ಜೀವಕ್ಕೇ ಹೊಸ ಅನುಭವ! ನಾವು ಚಪ್ಪರಿಸುತ್ತಲೇ ತಿಂದು ಮುಗಿಸಿದ್ದೆವು. ನಂತರ ಬಿಲ್ ಕೇಳಿದಾಗ ಹೊಟೇಲ್ ನವನು ಶಾಂತವಾಗಿ "ದೋನ್ ಶೆ ತೀಸ್ ರುಪ್ಯೇ ಡಾಲೆ" ಎಂದ. “ದೋನ್‌ಶೇ?” ಎಂದರೇನು ಎಂದು ನಾವು ಮುಖ ನೋಡಿಕೊಳ್ಳುತ್ತಿದ್ದೆವು. ಕೊನೆಗೆ ಅಂದಾಜು ಹೊಡೆದು ₹230 ಕೊಟ್ಟು ಪಾರಾದ್ವಿ.
- ಸೌಮ್ಯಾ ಕಾಗಲ್
ಪ್ರವಾಸ ಎಂದರೆ ಕೇವಲ ಹೊಸ ಸ್ಥಳಗಳ ಭೇಟಿಯಲ್ಲ. ಅದು ನವೀನ ಅನುಭವಗಳ ಸುಂದರ ಸಂಗ್ರಹ. ಆದರೆ ಈ ನವೀನತೆಯ ಹಿಂದೆ ಹಲವಾರು ಅಸಾಧಾರಣ ಘಟನೆಗಳೂ ಅಡಗಿರುವಂತೆ, ಕೆಲವೊಮ್ಮೆ ಅವುಗಳು ನಗಿಸಬಲ್ಲದು, ಕೆಲವೊಮ್ಮೆ ಕಲಿಸಬಲ್ಲದು. ನನ್ನ ಶಿರಿಡಿ ಪ್ರವಾಸವೂ ಅಂಥದ್ದೇ, ಒಂದು ಪಾಠ ಕಲಿಸಿದ ಫಜೀತಿ.
ನಾನು ಮತ್ತು ನನ್ನ ಮೂವರು ಸ್ನೇಹಿತರು ದೇವರ ದರ್ಶನಕ್ಕಾಗಿ ಮಹಾರಾಷ್ಟ್ರದ ಶಿರಿಡಿಗೆ ಹೊರಟಿದ್ದೆವು. ರೈಲ್ವೆ ಪ್ರಯಾಣ, ಆಟೋಡ್ರೈವರ್‌ಗಳ ದರಪಡೆ, ಲಾಡ್ಜಿನಲ್ಲಿ ತಂಗುವ ವ್ಯವಸ್ಥೆ ಇತ್ಯಾದಿ all perfect. ದೇವಾಲಯದ ವಾತಾವರಣವು ಭಕ್ತಿಯಿಂದ ಕೂಡಿದಂತಿತ್ತು. ಗಂಟೆಗಳು ಮಿಡಿಯುತ್ತ, ಧೂಪದ ಪರಿಮಳ ಹರಡುತ್ತ ದೇವರ ದರ್ಶನವು ತೀವ್ರ ಭಾವನಾತ್ಮಕ ಅನುಭವವಾಯಿತು.

ಅದಾದಮೇಲೆ ಹೊಟ್ಟೆ ಕಿರಿಕಿರಿ ಆರಂಭವಾಯಿತು. ನಾವೆಲ್ಲರೂ ಹತ್ತಿರದ ಊಟದ ಮಳಿಗೆ ಹುಡುಕಲಾರಂಭಿಸಿದೆವು. ಕೊನೆಗೆ ದೇವಸ್ಥಾನ ಹತ್ತಿರವೇ ಇರುವ ಸರಳ ಹೊಟೇಲಿಗೆ ಹೋದ್ವಿ. ಆದರೆ ಅಲ್ಲಿ ಆರಂಭವಾಯಿತು ನಿಜವಾದ ಫಜೀತಿ. ಭಾಷೆಯ ಫಜೀತಿ!
ಆ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದವರೆಲ್ಲರೂ ಶುದ್ಧ ಮರಾಠಿಯಲ್ಲಿ ಮಾತ್ರ ಮಾತನಾಡುತ್ತಿದ್ದವರು. ನಾವು ಹಿಂದಿಯಲ್ಲಿ ಮಾತನಾಡಿದಾಗ ಅವರು ಸ್ಪಷ್ಟವಾಗಿ ಉತ್ತರ ಕೊಡದೆ ಏನೋ ಬೇರೆ ಭಾಷೆಯಲ್ಲಿ ಮುಜುಗರದಲ್ಲಿ ಪ್ರತಿಕ್ರಿಯಿಸುತ್ತಿದ್ದರು. ನಾನು “ಸಬ್ಜಿ ಚಪಾತಿ ಹೇ?” ಎಂದು ಕೇಳಿದಾಗ ಹೊಟೇಲ್ ನ ಮಾಲೀಕನು " ಆಹೇ, ಪಣ ಖಾಸ್ ನಸ್ತಾ " ಎಂದರು. ಇಂಥ ಮಾತು ಕೇಳಿ ನಮಗೆ ಅರ್ಥ ಆಗ್ಲಿಲ್ಲ. ಅರ್ಥ ಮಾಡಿಕೊಳ್ಳಲು ಗೊಂದಲ. ತಕ್ಷಣ ಮತ್ತೊಬ್ಬ ಗ್ರಾಹಕ, ನಮ್ಮನ್ನು ನೋಡಿ ಹೇಳಿದ – “ಅರ್ಧ ಪ್ಲೇಟ್ ಭಾಕ್ರಿ ಘೇವೂ ಕಶಾಸಾಠೀ ಥಾಂಬತಾ?
ನಾವು "ಹೌದು, ತಿನ್ನೋಣ" ಅಂತ ನಿರ್ಧರಿಸಿದ್ದೆವು.
ಅವರು ತಂದ ಭಾಕರಿ, ಸಾಬೂದಾನದ ಕಿಚಡಿ. ಅದು ಜೀವಕ್ಕೇ ಹೊಸ ಅನುಭವ! ನಾವು ಚಪ್ಪರಿಸುತ್ತಲೇ ತಿಂದು ಮುಗಿಸಿದ್ದೆವು. ನಂತರ ಬಿಲ್ ಕೇಳಿದಾಗ ಹೊಟೇಲ್ ನವನು ಶಾಂತವಾಗಿ " ದೋನ್ ಶೆ ತೀಸ್ ರುಪ್ಯೇ ಡಾಲೆ" ಎಂದ. “ದೋನ್‌ಶೇ?” ಎಂದರೇನು ಎಂದು ನಾವು ಮುಖ ನೋಡಿಕೊಳ್ಳುತ್ತಿದ್ದೆವು. ಕೊನೆಗೆ ಅಂದಾಜು ಹೊಡೆದು ₹230 ಕೊಟ್ಟು ಪಾರಾದ್ವಿ.
ಈ ಹಾಸ್ಯ ಹಾಗೂ ಗೊಂದಲದಿಂದ ಕೂಡಿದ ಘಟನೆ ನಮ್ಮ ಪ್ರವಾಸವನ್ನು ವಿಶಿಷ್ಟವಾಗಿಸಿತು. ಆದರೆ ಈ ಫಜೀತಿ ನನಗೆ ಒಂದು ಗಂಭೀರ ಪಾಠ ಕಲಿಸಿತು. ಪ್ರವಾಸವೆಂದರೆ ನಕ್ಷೆ, ತಾಣ, ದರ್ಶನಗಳು ಮಾತ್ರವಲ್ಲ; ಭಾಷೆ ಕೂಡ ಪ್ರಮುಖ ಭಾಗ. ಸ್ಥಳೀಯ ಭಾಷೆಯ ಕನಿಷ್ಠ ಜ್ಞಾನವಿಲ್ಲದೆ ಹೊರಡುವುದು ದಿಕ್ಕು ತಪ್ಪಿದ ನ್ಯಾವಿಗೇಟರ್‌ನಂತೆಯೇ. ಇಂದು ನಾನು ಯಾವುದೇ ಪ್ರದೇಶಕ್ಕೆ ಹೊರಡುವಾಗ, ಆ ಭಾಷೆಯ ಕೆಲವು ಶಬ್ದಗಳು, ಶುಭಾಶಯಗಳು, ಆಹಾರದ ಹೆಸರುಗಳನ್ನಾದರೂ ಕಲಿತು ಹೋಗುವೆ.
ಇಂಥ ಅನುಭವಗಳು ನಮ್ಮನ್ನು ಪ್ರವಾಸೋದ್ಯಮದ ಕಣ್ಣಿನಿಂದ ನೋಡಿ, ಮಾನವತೆಯ ಸಂಪರ್ಕದ ಕಣ್ಣಿನಿಂದ ನೋಡುವಂತೆ ಮಾಡುತ್ತವೆ. ಭಾಷೆ ಶಕ್ತಿಯಾಗಿರುತ್ತದೆ ಅಥವಾ ಫಜೀತಿಯ ಕಾರಣವೂ ಆಗಬಹುದು. ಆಯ್ಕೆ ನಮ್ಮದು!