ಷಿಲ್ಲಾಂಗ್ ನಲ್ಲಿ ಪೊಲೀಸರ ಅತಿಥಿಯಾದ ಕಥೆ!
ಕೋಲ್ಕತ್ತಾದ್ದು ದೊಡ್ಡ ಏರ್ಪೋರ್ಟ್. ವಿಪರೀತ ಜನಸಂದಣಿ. ಕತ್ತಲಾಗುತ್ತಿದ್ದಂತೆ ನಮಗೆ ಟೆನ್ಷನ್ ಶುರುವಾಯ್ತು. ಎನ್ಕ್ವಯರಿ ಆಫೀಸರ್ ಹತ್ತಿರ ಮಾತಾಡುವುದು, ಪೊಲೀಸ್ ಅಧಿಕಾರಿಯ ಹಿಂದೆ ಮುಂದೆ ಸುತ್ತುವುದೇ ಆಯ್ತು..
- ಲಲಿತಾ ಬೆಳವಾಡಿ, ಬೆಂಗಳೂರು
ಅಖಿಲ ಭಾರತ ಕವಯತ್ರಿಯರ ಸಮ್ಮೇಳನ (ರಿ)ಸಂಸ್ಥೆಯಿಂದ ಮೂರು ದಿನದ ಮೆಗಾ ಸಮ್ಮೇಳನಕ್ಕಾಗಿ ಬೆಂಗಳೂರಿನಿಂದ ನಾನು ನನ್ನ ಗೆಳತಿ ಕಮಲಾ ಸುದರ್ಶನ್ ಇಬ್ಬರೂ ಷಿಲ್ಲಾಂಗ್ ಹೋಗಿದ್ದೆವು. ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬರುವಾಗ ನಮ್ಮ ಪೇಚಾಟದ ಒಂದು ಸನ್ನಿವೇಶವಿದು.
ಷಿಲ್ಲಾಂಗ್ ತುಂಬಾ ಸುಂದರ ಹಾಗು ಸ್ವಚ್ಛ ನಗರ. ಅಲ್ಲಿಯ ಜನರೂ ಸಹ ಅಷ್ಟೇ ಶಾಂತಿ ಪ್ರಿಯರು.
ಕಾರ್ಯಕ್ರಮ ಮೂರು ದಿನವೂ ವಿಜೃಂಭಣೆಯಿಂದ ನೆರವೇರಿತು. ನಾನು ಮತ್ತು ನನ್ನ ಗೆಳತಿ ಕಮಲಾ ಇಬ್ಬರು ಸ್ಟೇಜ್ ಮೇಲೆ ಕನ್ನಡ ಫಿಲ್ಮ್ ಡ್ಯುಯೆಟ್ ಸಾಂಗ್ ಗೆ ಡಾನ್ಸ್ ಮಾಡಿದ್ದು ಹೊಸ ಉತ್ಸಾಹ ತಂದಿತು. ನಮ್ಮ ಕನ್ನಡ ಸಾಹಿತ್ಯದ ಕೃಷಿಗಾಗಿ ಸನ್ಮಾನ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ನೀಡಿ ಕರ್ನಾಟಕದ ಬೆಸ್ಟ್ ಕವಯಿತ್ರಿ ಎಂದು ನನ್ನನ್ನು ಗೌರವಿಸಿದರು..
ನಾವು ಮೂರು ದಿನಗಳ ಸಮ್ಮೇಳನ ಮುಗಿಸಿಕೊಂಡು ವಾಪಸ್ ಬರುವಾಗ ಅಲ್ಲಿ ಎಂಟು ಡಿಗ್ರಿಯ ಚಳಿ. ಮೋಡ ಕವಿದ ವಾತಾವರಣದ ಕಾರಣ ನಮ್ಮ ಫ್ಲೈಟ್ ಕ್ಯಾನ್ಸಲ್ ಆಯಿತು. ನಮ್ಮನ್ನು ಮಿನಿ ಬಸ್ಸಿನಲ್ಲಿ ಗೌಹಾತಿಗೆ ಕರೆದುಕೊಂಡು ಬಂದು ಅಲ್ಲಿಂದ ಕೋಲ್ಕತ್ತಾ ಫ್ಲೈಟ್ ಹತ್ತಿಸಿದರು. ಕೋಲ್ಕತ್ತಾ ಲ್ಯಾಂಡ್ ಆದ ಕೂಡಲೆ ಅಲ್ಲಿಂದ ನಮ್ಮ ಜೊತೆಗೆ ಬಂದ ಎಐಪಿಸಿ ಸದಸ್ಯೆಯರು ಬೇರೆ ಬೇರೆ ಕಡೆಗೆ ಹೋಗುವವರು ಹೊರಟುಹೋದರು. ಬೆಂಗಳೂರಿಗೆ ಬರಲು ನಾನು ನನ್ನ ಸ್ನೇಹಿತೆ ಕಮಲಾ ಇಬ್ಬರೇ ಉಳಿದೆವು.
ಕೋಲ್ಕತ್ತಾದ್ದು ದೊಡ್ಡ ಏರ್ಪೋರ್ಟ್. ವಿಪರೀತ ಜನಸಂದಣಿ. ಕತ್ತಲಾಗುತ್ತಿದ್ದಂತೆ ನಮಗೆ ಟೆನ್ಷನ್ ಶುರುವಾಯ್ತು. ಎನ್ಕ್ವಯರಿ ಆಫೀಸರ್ ಹತ್ತಿರ ಮಾತಾಡುವುದು, ಪೊಲೀಸ್ ಅಧಿಕಾರಿಯ ಹಿಂದೆ ಮುಂದೆ ಸುತ್ತುವುದೇ ಆಯ್ತು..
“ಮೇಮ್ ಸಾಬ್, ಆಪ್ಕೊ ಡರ್ನೇಕಿ ಕೊಯಿ ಜರೂರತ್ ನಹಿ..ಹಮ್ ಆಪ್ಕೋ ಘರ್ ಪಹುಂಚಾನೇಕಾ ವ್ಯವಸ್ಥಾ ಕರೇಂಗೆ” ಏನೂ ಭಯಪಡಬೇಡಿ. ನಿಮ್ಮನ್ನು ಮನೆಗೆ ತಲುಪಿಸುವ ವ್ಯವಸ್ಥೆ ನಾವು ಮಾಡುತ್ತೇವೆ ಎಂದು ಹಿಂದಿಯಲ್ಲಿ ಹೇಳಿದರು.
ಈಗ ಫ್ಲೈಟ್ ಇಲ್ಲ. ನಾಳೆ ಸಂಜೆ 4 ಗಂಟೆಯ ಬೆಂಗಳೂರು ಫ್ಲೈಟ್ ಗೆ ಬುಕ್ ಮಾಡಿದೀವಿ.
ಈ ದಿನ ಇಲ್ಲಿ ಹಾಲ್ಟ್ ಮಾಡಲು ನಮ್ಮ ಡಿಪಾರ್ಟ್ಮೆಂಟ್ ನವರು ವ್ಯವಸ್ಥೆ ಮಾಡುತ್ತೇವೆ. ಎಂದು ಕಸ್ಟಮರ್ ಆಫೀಸರ್ ಹೇಳಿದರು.
ನಮ್ಮನ್ನು ಇಬ್ಬರು ಲೇಡಿ ಪೊಲೀಸ್ ಜತೆಗೆ ವ್ಯವಸ್ಥಿತ ಹೊಟೇಲ್ ಗೆ ಕಳಿಸಿಕೊಟ್ಟರು.
"ಮೇಡಂ ನಾಳೆ ಫ್ಲೈಟ್ ಹತ್ತಿಸುವವರೆಗೂ ನಿಮ್ಮ ಜೊತೆಗೆ ನಾವು ಇರುತ್ತೇವೆ" ಎಂದು ಆ ಇಬ್ಬರು ಲೇಡಿ ಪೊಲೀಸ್ ನಮಗೆ ಧೈರ್ಯ ಹೇಳಿದರು.
ಏರ್ಪೋರ್ಟ್ ನಿಂದ ಹೊಟೇಲ್ ಮುಂದೆ ಕಾರು ನಿಂತ ತಕ್ಷಣ ನಮಗೆ ಲಗೇಜ್ ಎತ್ತಲೂ ಬಿಡದೆ ನಮಗೆ ವ್ಯವಸ್ಥೆ ಮಾಡಿದ ರೂಮಿಗೆ ಬಿಟ್ಟು, ನಮ್ಮ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾ ಊಟ ತಂದುಕೊಟ್ಟು “ಔರ್ ಕುಚ್ ಚಾಹಿಯೆ ಮೇಡಂ…ಆಪ್ ಸೋ ಜಾಯಿಯೆ ಮೇಡಂ”
‘ಇನ್ನೇನಾದರು ಬೇಕಾದರೆ ಹೇಳಿ ಮೇಡಂ, ಆರಾಮಾಗಿ ಮಲಗಿ ಮೇಡಂ’ ಎನ್ನುತ್ತಾ ಬೀಗರಂತೆ ನಮ್ಮನ್ನು ಉಪಚರಿಸಿದರು ಕೋಲ್ಕತ್ತಾದ ಹೊಟೇಲ್ ನ ಆ ಹುಡುಗರು.
ಮಾರನೆಯ ದಿನ ಹೊಟೇಲ್ ನಲ್ಲೇ ಕುಳಿತು ನಮ್ಮಿಬ್ಬರಿಗೂ ಬೇಜಾರಾಗಬಾರದೆಂದು, ನಮ್ಮ ಹತ್ತಿರ ದುಡ್ಡೆಲ್ಲ ಖಾಲಿಯಾಗಿದೆ ಎಂದರೂ ಕೇಳದೆ, ಇಬ್ಬರು ಲೇಡೀಸ್ ಪೊಲೀಸ್, ತಮ್ಮ ಖರ್ಚಿನಲ್ಲಿ ನಮಗೆ ಕಾಳಿ ಟೆಂಪಲ್ ಮತ್ತು ವಿಕ್ಟೋರಿಯಾ ಮೆಮೊರಿಯಲ್ ಪ್ಯಾಲೆಸ್ ಎರಡನ್ನೂ ತೋರಿಸಿಕೊಂಡು, ಹೊಟೇಲ್ ಗೆ ಕರೆದುಕೊಂಡು ಬಂದರು. ನಂತರ ನಮ್ಮನ್ನು ಏರ್ಪೋರ್ಟ್ ಗೆ ಕರೆದುಕೊಂಡು ಹೋದರು.
ನಮಗೆ ಫ್ಲೈಟ್ ಟಿಕೆಟ್ ಕೊಟ್ಟು, ಅವರೇ ಲಗೇಜ್ ಚೆಕಿನ್ ಮಾಡಿಸಿ, ನಮ್ಮ ಬೆಂಗಳೂರು ಪ್ರಯಾಣಕ್ಕೆ ಆತ್ಮೀಯ ಬೀಳ್ಕೊಡುಗೆ ನೀಡಿ.. ಏರ್ ಪೋರ್ಟ್ ಒಳಗೆ ಕಳುಹಿಸಿಕೊಟ್ಟ ಆ ಇಬ್ಬರು ಲೇಡಿ ಪೊಲೀಸರು ನಮಗೆ ಆತ್ಮೀಯರಾದರು.
ಇದೆಲ್ಲವು ಡಿಪಾರ್ಟ್ ಮೆಂಟ್ ಕರ್ತವ್ಯವೇ ಆದರೂ ಅಪರಿಚಿತ ಊರಲ್ಲಿ ಸರಿಯಾಗಿ ಭಾಷೆಯೂ ಬಾರದ ಊರಲ್ಲಿ “ನಿಮ್ಮ ಜವಾಬ್ದಾರಿ ನಮ್ಮದು ಹೆದರಬೇಡಿರಿ” ಎಂದು ಧೈರ್ಯ ಹೇಳುತ್ತಾ, ಕೋಲ್ಕತ್ತಾ ಊರನ್ನೂ ತೋರಿಸಿ, ನಮ್ಮನ್ನು ಆತ್ಮೀಯತೆಯಿಂದ ನೋಡಿಕೊಂಡ ಅವರುಗಳು ಒಂದು ದಿನದಲ್ಲಿ ಮನೆಯವರಂತೆ ಕಂಡರು.
ಎಲ್ಲೋ ಪ್ರಯಾಣದಲ್ಲಿ ಅನಿರೀಕ್ಷಿತವಾಗಿ ಅಪರಿಚಿತರಾಗಿ ಸಿಕ್ಕ ಸಿಬ್ಬಂದಿ ವರ್ಗದವರು, ಹೊಟೇಲ್ ಬಾಯ್, ಮಹಿಳಾ ಪೊಲೀಸ್, ನಮ್ಮ ನೆನಪಿನ ಬುತ್ತಿ ಸೇರಿದ ಚಿರಪರಿಚಿತರವರು..!
ಮನೆಯಲ್ಲಿ ತಿಳಿಸಿದರೆ ಭಯಪಡುತ್ತಾರೆಂದು ಮನೆಗೂ ತಿಳಿಸದೆ, ಕೈಲಿ ದುಡ್ಡೂ ಇಲ್ಲದೆ ಫ್ಲೈಟ್ ಹತ್ತಿದ ಕೂಡಲೆ ಚಾತಕಪಕ್ಷಿಯಂತೆ ಏರ್ ಹೋಸ್ಟೆಸ್ ಕೊಡುವ ಟಿಫಿನ್ ಗಾಗಿ ಕಾಯುತ್ತಾ ಕುಳಿತದ್ದು ನೆನೆದರೆ ನಮ್ಮ ಅಸಹಾಯಕತೆಗೆ ಈಗಲೂ ನಗು ಬರುತ್ತದೆ.
ಮನೆಬಿಟ್ಟು ಹೊರಗೆ ಬಂದಾಗಲೇ ನಮಗೆ ಇಂಥ ಅನುಭವಗಳಾಗುವುದು. ಆಗ ಕಷ್ಟವೆನಿಸಿದರೂ ಈ ಅನುಭವದಿಂದಾಗಿ ಬಹಳಷ್ಟು ಕಲಿಯುತ್ತೇವೆ.
“ಆ ಕ್ಷಣ ನನಗೆ ಫ್ಲೈಟ್ ಹತ್ತಿ ಇಡೀ ದೇಶ ಒಬ್ಬಳೇ ಸುತ್ತಿ ಬರ್ತೀನಿ ಎನ್ನುವ ಧೈರ್ಯ ಆತ್ಮವಿಶ್ವಾಸ ಮೂಡಿತು”.
ಸಾಹಿತ್ಯ ಪ್ರವಾಸದಲ್ಲಿನ ಷಿಲ್ಲಾಂಗ್ ಪ್ರಯಾಣದ ಅವಘಡ ನಿಜಕ್ಕೂ ನನಗೆ ಹೊಸ ಅನುಭವ ತಂದುಕೊಟ್ಟ ಪ್ರಸಂಗ.
ಯಾವುದೇ ವಿಷಯಗಳಾದರೂ ನಾವು ತಪ್ಪಾಗಿ ಯೋಚಿಸಿ ಭಯ ಪಡುತ್ತೇವೆ. ಪ್ರಯಾಣಿಕರಿಗೆ ಇಷ್ಟು ಸುರಕ್ಷಿತ ವ್ಯವಸ್ಥೆ, ಏರ್ ಫೋರ್ಸ್ ನ ಸಿಬ್ಬಂದಿ ವರ್ಗದವರ ಶ್ರದ್ಧೆ ಸಹನೆ ಸಹಕಾರಕ್ಕೆ ಮನತುಂಬಿ ಬಂದಿತು. ಹ್ಯಾಟ್ಸ್ ಆಫ್ ಏರ್ ಫೋರ್ಸ್ ಸಿಬ್ಬಂದಿ ವರ್ಗಕ್ಕೆ !