ಕಾಶಿಗೆ ಹೊರಟಾಗ ಕಾಸಿಗೆ ಕತ್ತರಿ !
ಮುಂಬಯಿಯ ರಾತ್ರಿ ಪ್ರಯಾಣ ಅಪಾಯ ಎಂದು ಓದಿದ ನೆನಪು. ಬಂದಿಳಿದ ನಿಲ್ದಾಣದಲ್ಲಿ ಎಲ್ಲ ಕಡೆ ಸುತ್ತಾಡಿದರೂ ಯಾರಿಗೆ ಕೇಳಬೇಕು ಅನ್ನುವಷ್ಟರಲ್ಲಿ, ಪೊಲೀಸ್ ನಿಂತಿದ್ದ. ಆತನಲ್ಲಿ ನನ್ನ ಸಮಸ್ಯೆಯನ್ನು ಹೇಳಿಕೊಂಡೆ. ನಗೆಯಾಡಿದ.
- ಮೋಹನ ಭಟ್ಟ, ಅಗಸೂರು.
ಹತ್ತಾರುವರ್ಷಗಳ ಹಿಂದಿನಮಾತು. ಪತ್ನಿಯೊಡನೆ ಕಾಶಿಗೆ ಹೊರಟಿದ್ದೆ. ಗೋವಾದಿಂದ ಮುಂಬಯಿ ಶತಾಬ್ದಿ ರೈಲಿನಲ್ಲಿ, ನಂತರ ಮುಂಬಯಿ-ವಾರಾಣಸಿ ರಾತ್ರಿ ರೈಲಿನಲ್ಲಿ. ಮುಂಬಯಿಯ ಬಾಂದ್ರಾದಲ್ಲಿ ಇಳಿಯುವಾಗ ರಾತ್ರಿ ಹನ್ನೊಂದು ಗಂಟೆ. ಅಲ್ಲಿಂದ ನಾಲ್ಕು ಕಿಮೀ ದೂರದ ರೈಲು ನಿಲ್ದಾಣದಿಂದ ವಾರಾಣಸಿಗೆ ರೈಲು ಹೊರಡಲು ಎರಡು ಗಂಟೆ ಇತ್ತು.
ಮುಂಬಯಿಯ ರಾತ್ರಿ ಪ್ರಯಾಣ ಅಪಾಯ ಎಂದು ಓದಿದ ನೆನಪು. ಬಂದಿಳಿದ ನಿಲ್ದಾಣದಲ್ಲಿ ಎಲ್ಲ ಕಡೆ ಸುತ್ತಾಡಿದರೂ ಯಾರಿಗೆ ಕೇಳಬೇಕು ಅನ್ನುವಷ್ಟರಲ್ಲಿ, ಪೊಲೀಸ್ ನಿಂತಿದ್ದ. ಆತನಲ್ಲಿ ನನ್ನ ಸಮಸ್ಯೆಯನ್ನು ಹೇಳಿಕೊಂಡೆ. ನಗೆಯಾಡಿದ. ಹೊಸಬರು ಎಂದು ಹೇಳಿಕೊಂಡ. ಪಕ್ಕದಲ್ಲಿಯೇ ಇದ್ದವನನ್ನು ಕರೆದು, ನಮ್ಮನ್ನು ಸಮೀಪವೇ ಇರುವ ಇನ್ನೊಂದು ನಿಲ್ದಾಣಕ್ಕೆ ಬಿಡು ಎಂದ. ಆತ ತನ್ನ ವಾಹನದ ಹಿಂದಿನ ಸೀಟಿನಲ್ಲಿ ನಮ್ಮನ್ನು ಆಸೀನರಾಗಲು ಹೇಳಿ, ಪಾನ್ ತರಲು ಅಂಗಡಿಗೆ ಹೋದ. ಬರುವಾಗ ಆತನ ಜೊತೆಗೆ ಇನ್ನೊಬ್ಬ ಇದ್ದ. ಬ್ಯಾಗ್ ಕೊಡಿ ಎಂದ. ಹಿಂಜರಿದೆ. ಅದನ್ನು ಕಸಿದು ಮುಂದಿನ ಸೀಟಿನಲ್ಲಿ ಕುಳಿತ.
ಕತ್ತಲೆಯಲ್ಲಿ ವಾಹನ ಎಲ್ಲಿಗೆ ಹೋಗುತ್ತಿದೆ ಅಂತ ಗೊತ್ತಾಗಲಿಲ್ಲ. ಚಾಲಕ ಯಾರೊಂದಿಗೋ ಮಾತಾಡಲು ಮೊಬೈಲ್ ನಲ್ಲಿ ಪ್ರಯತ್ನಿಸುತ್ತಿದ್ದ. ಬ್ಯಾಗ್ ಹಿಡಿದು ಕುಳಿತವನು ಹಣಕೊಡಿ ಎಂದ. ನಾನು ಎರಡು ಸಾವಿರ ನೋಟನ್ನು ನೀಡಿದೆ. ಇನ್ನೊಂದು ಅಂದ ಆತ. ಮರುಮಾತಾಡದೇ ಮತ್ತೆ ಒಂದು ಸಾವಿರ ಕೊಟ್ಟೆ. ಬೆವೆತು ಹೋಗಿದ್ದೆ. ಎಲ್ಲ ದೇವರಿಗೂ ಕೈ ಮುಗಿಯುತ್ತಿದ್ದೆ. ಚಾಲಕನ ಮೊಬೈಲು ಜಾರಿ ಕೆಳಗೆ ಬಿತ್ತು. ಇನ್ನೋರ್ವ ಆತನಿಗೆ ಥಳಿಸಲು ಪ್ರಾರಂಭಿಸಿದ. ವಾಹನ ಚಾಲನೆಯಲ್ಲಿ ಇತ್ತು.
ಚಾಲಕ ವೇಗವಾಗಿ ಚಲಿಸಿ ಬೆಳಕಿದ್ದಲ್ಲಿ ನಿಲ್ಲಿಸಿ ಪರಾರಿಯಾದ. ಸಮೀಪದಲ್ಲಿಯೇ ಇದ್ದ ಪೊಲೀಸ್, ತಪ್ಪುಸ್ಥಳದಲ್ಲಿ ನಿಲ್ಲಿಸಿದ ಬಗ್ಗೆ ತಕರಾರು ಮಾಡಿದ. ನಾವಿಬ್ಬರೂ ವಾಹನದಿಂದ ಕೆಳಗೆ ಇಳಿದು ಪೊಲೀಸನಿಗೆ ನಡೆದ ವಿಷಯ ವಿವರಿಸಿದೆವು. ಬ್ಯಾಗನ್ನು ಹಿಡಿದ ಆಗಂತುಕ ಬ್ಯಾಗನ್ನು ಕೆಳಗಿಟ್ಟು ಪರಾರಿಯಾದ. ಸಮೀಪವೇ ಇದ್ದ ರೈಲು ನಿಲ್ದಾಣಕ್ಕೆ ನಡೆದು ಹೋದೆವು. ಪ್ಲಾಟ್ ಫಾರ್ಮಲ್ಲಿ ವಾರಾಣಸಿ ರೈಲು ನಿಂತಿತ್ತು. ರೈಲು ಏರಿ ನಿಗದಿ ಪಡಿಸಿದ ಸೀಟಿನಲ್ಲಿ ಕುಳಿತೆವು. ನಿಟ್ಟುಸಿರು ಬಿಟ್ಟು ದೇವರೇ ಎಂದು ಕೈಮುಗಿದೆವು.