ರಾಂಗು ಡೇಟು ಕೊಟ್ಟ ಏಟು!
ಗಂಡಿಕೋಟದಿಂದ ನಾವು ಶ್ರೀಶೈಲಕ್ಕೆ ಹೊರಡುತ್ತಿರುವಾಗ, ನಾವು ವಾಪಸ್ ಮೈಸೂರಿಗೆ ಹೊರಡಲು ಬುಕ್ ಮಾಡಿದ ರೈಲು ಟಿಕೆಟ್ ಬಗ್ಗೆ ಗೊಂದಲ ಎದುರಾಯಿತು.
- ರುಕ್ಮಿಣಿಮಾಲಾ
2023ರಲ್ಲಿ ನಾವು ಒಂದಷ್ಟು ಗೆಳತಿಯರೊಡಗೂಡಿ ಶ್ರೀಶೈಲ ಮತ್ತು ಗಂಡಿಕೋಟಕ್ಕೆ ಪ್ರವಾಸ ಹೊರಟಿದ್ದೆವು. ಮೈಸೂರಿನಿಂದ ಬಸವ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊರಟೆವು. ಬೆಂಗಳೂರಿನಿಂದ ರೈಲು ತುಂಬತೊಡಗಿತು. ಚಿಕ್ಕಬಳ್ಳಾಪುರದಲ್ಲಂತೂ ಜನರ ದಂಡೇ ನುಗ್ಗಿತು. ನಾವಿದ್ದ ರಿಸರ್ವ್ಡ್ ಬೋಗಿಗೇ ಹತ್ತಿಬಿಟ್ಟರು. ಟಿಕೆಟ್ ಪರೀಕ್ಷಕರ ಪತ್ತೆಯೇ ಇಲ್ಲ. ಅವರ ಭಯವೂ ಇವರಿಗಿರಲಿಕ್ಕಿಲ್ಲ.
ರಿಸರ್ವೇಷನ್ ಇಲ್ಲದವರನ್ನು ಕೆಳಗೆ ಇಳಿಯಲು ಕೇಳಿಕೊಂಡೆವು. ಆದರೆ ಅವರು ಕೇಳುವ ಸ್ಥಿತಿಯಲ್ಲಿರಲಿಲ್ಲ. ನಮಗೆ ನಿಗದಿಮಾಡಿದ ಸ್ಥಳದಲ್ಲಿ ನಾವು ಮಲಗಿದೆವು. ಓಡಾಡುವ ಸ್ಥಳದಲ್ಲಿಯೇ ಸುಮಾರು ಮಂದಿ ಕೂತು, ಮಲಗಿದ್ದರು. ಇಳಿಯುವಾಗ, ಸೀಟಡಿಯಿಂದ ಚಪ್ಪಲಿ ಎಳೆದುಕೊಳ್ಳಲು ನೋಡಿದರೆ, ಚಪ್ಪಲಿ ಮೇಲೆ ತಲೆ ಇಟ್ಟು ಒಬ್ಬಾಕೆ ಸೀಟಡಿಯಲ್ಲಿ ತೂರಿ ಮಲಗಿದ್ದಳು! ಅಬ್ಬಾ ಅವರ ತಾಕತ್ತೇ ಅನಿಸಿತು. ರೈಲು ಪಯಣ ಅಪಾರ ಜೀವನಾನುಭವ ನೀಡುತ್ತದೆ. ನಾವು ಕೂರಲು ಸೀಟಿದ್ದರೂ ನೆಮ್ಮದಿಯಿಂದ ಕೂರುವುದಿಲ್ಲ. ಇವರು ಎಲ್ಲಿ ಜಾಗ ಇದೆಯೋ ಅಲ್ಲೇ ಸೀಟಿನ ಅಡಿಯಲ್ಲೂ ಓಡಾಡುವ ಜಾಗದಲ್ಲೂ, ಪಾಯಿಖಾನೆಯ ಬಳಿಯೂ, ನೆಮ್ಮದಿಯಿಂದ ನಗು ನಗುತ್ತ ಕೂತು ಹರಟೆ ಹೊಡೆಯುತ್ತಾರೆ.
ಗಂಡಿಕೋಟದಿಂದ ನಾವು ಶ್ರೀಶೈಲಕ್ಕೆ ಹೊರಡುತ್ತಿರುವಾಗ, ನಾವು ವಾಪಸ್ ಮೈಸೂರಿಗೆ ಹೊರಡಲು ಬುಕ್ ಮಾಡಿದ ರೈಲು ಟಿಕೆಟ್ ಬಗ್ಗೆ ಗೊಂದಲ ಎದುರಾಯಿತು.

ನಮ್ಮ ಈ ಪ್ರವಾಸದ ರೂವಾರಿ ನಾವು ಕೂತಿದ್ದ ಕಡೆ ಬಂದು ಅವರ ಮೊಬೈಲಿಗೆ ರೈಲ್ವೇಯಿಂದ ಬಂದ ಸಂದೇಶವನ್ನು ತೋರಿಸಿದರು. ಆದದ್ದು ಇಷ್ಟೆ: ನಮಗೆ ಮೈಸೂರಿಗೆ ತೆರಳಲು ಗುತ್ತಿಯಿಂದ 22ರ ರಾತ್ರಿಗೆ ಟಿಕೆಟ್ ಆಗಿತ್ತು. ಗುತ್ತಿಯಿಂದ ರೈಲು ಬೆಳಗಿನ ಜಾವ 12.45ಕ್ಕೆ ಇದ್ದದ್ದು. ಅಂದರೆ ತಾರೀಕು 23 ಆಗುತ್ತದೆ. ಅವರು ಟಿಕೆಟ್ ತೆಗೆದಿರುವುದು 22ಕ್ಕೆ!
ಎಲ್ಲರಿಗೂ ವಿಷಯ ಗೊತ್ತಾಗಿ ಆತಂಕವಾಯಿತು. ಟಿಕೆಟ್ ರದ್ದುಗೊಳಿಸಲು ಆಗುವುದಿಲ್ಲ. ಹಣ ವ್ಯರ್ಥವಾಯಿತು. 23ಕ್ಕೆ ಟಿಕೆಟ್ ಸಿಗಬಹುದಾ ಎಂಬ ಪ್ರಶ್ನೆ ಎದುರಾಯಿತು. ಆಗ ನಮಗೆ ಹಿಂದಿನ ದಿನದ ರಾತ್ರಿಯ ರೈಲುಪಯಣ ನೆನಪಿಗೆ ಬಂತು. ನಾಳೆಗೆ ಟಿಕೆಟ್ ಸಿಗದಿದ್ದರೆ ಏನು ಮಾಡುವುದು? ರಿಸರ್ವ್ಡ್ ಬೋಗಿಗೆ ನುಗ್ಗಿದ ಆ ಜನರು ನೆನಪಾದರು. ಯಾರು ಏನು ಕಷ್ಟದಲ್ಲಿ ಪಯಣಿಸುತ್ತಾರೋ? ಏನು ಒತ್ತಡ ಇರುತ್ತದೊ ಬಲ್ಲವರಾರು?
ಯಾರೂ ಏನು ಆತಂಕಗೊಳ್ಳಬೇಡಿ, ಆ ಮಲ್ಲಿಕಾರ್ಜುನ ಏನಾದರೂ ದಾರಿ ತೋರುತ್ತಾನೆ. ನಾಳೆಗೆ ಟಿಕೆಟ್ ಸಿಗಬಹುದು. ಎಲ್ಲರೂ 45 ವಯಸ್ಸು ದಾಟಿದ ಮಹಿಳೆಯರು. ಟಿಕೆಟ್ ಸಿಕ್ಕೇ ಸಿಗುತ್ತದೆ ಯಾರೂ ಗಾಬರಿಯಾಗಬೇಡಿ ಎಂದು ನಮ್ಮೊಂದಿಗೆ ಇದ್ದ ಸುಷ್ಮಾ ತಣ್ಣಗೆ ಹೇಳಿದರು. ಹೇಳಿ ಸುಮ್ಮನೆ ಕೂರಲಿಲ್ಲ. ನಮಗೆ ಆರು ಜನರಿಗೆ ಟಿಕೆಟ್ ಮಾಡಿಯೇ ಬಿಟ್ಟರು. ವೇಟಿಂಗ್ ಲಿಸ್ಟಲ್ಲಿ ಇದ್ದರೂ 22ರ ಸಂಜೆಗೆ ಸಿಗಬಹುದು ಎಂದರು. ಅಷ್ಟರಲ್ಲಿ ಗಂಟೆ ರಾತ್ರಿ 9 ದಾಟಿತ್ತು. ನಾವು ಶ್ರೀಶೈಲ ತಲುಪಿದ್ದೆವು. ನಮಗೆಲ್ಲರಿಗೂ ಜಾಗ ಸಿಕ್ಕಿ ನೆಮ್ಮದಿಯಿಂದ ನಿದ್ದೆ ಮಾಡಿ ಪಯಣಿಸಿ ನಾವು ಮೈಸೂರು ತಲುಪಿದ್ದೆವು.
ಆ ಘಟನೆ ನಮಗೆ ಸರಿಯಾಗಿ ಜೀವನ ಪಾಠ ಕಲಿಸಿತ್ತು.