ಒಬ್ಬಳೇ ಊರು ಸುತ್ತೋದು ಇನ್ನು ಸುಲಭ!
ಒಂಟಿಯಾಗಿ ಊರೂರ ಸುತ್ತಿ ಸಂತಸ ಪಡುವ ಆಸೆ ಒಂದೆಡೆಯಿದ್ದರೆ, ಒಬ್ಬಳೇ ಹೋದರೆ ಎಲ್ಲವನ್ನು ನಿಭಾಯಿಸಬಲ್ಲೆನಾ ಎನ್ನುವ ಆತಂಕ ಬಹುತೇಕ ಮಹಿಳೆಯರಿಗೆ ಇರುತ್ತದೆ. ಈ ಆತಂಕ ಕೇವಲ ಸುರಕ್ಷತಾ ದೃಷ್ಟಿಯಿಂದ ಬಂದದ್ದಲ್ಲ ಬದಲಾಗಿ ಒಬ್ಬರೇ ಪ್ರವಾಸ ಮಾಡುವಾಗ ಹೇಗಿರಬೇಕು ಎಂಬುದರ ಸರಿಯಾದ ಮಾಹಿತಿ ಇಲ್ಲದಿರುವುದರಿಂದ ಬಂದಿರುವುದು. ಒಬ್ಬರೇ ಪ್ರಯಾಣಿಸುವಾಗ ಮಾಡಬೇಕಾದದ್ದು ಇಷ್ಟೇ.
ಸರಿಯಾದ ಪ್ಲಾನಿಂಗ್
ಹೋಗುವ ಜಾಗಗಳ ಬಗ್ಗೆ ಮೊದಲೇ ತಿಳಿದುಕೊಳ್ಳಿ. ಅಲ್ಲಿಗೆ ಈಗಾಗಲೇ ಭೇಟಿ ನೀಡಿದವರ ಅಭಿಪ್ರಾಯಗಳನ್ನು ಕೇಳಿ. ಮುಂಚಿತವಾಗಿಯೇ ಬಸ್ಸು, ಟ್ರೈನು, ಫ್ಲೈಟ್, ಹೊಟೇಲ್‌ಗಳ ಬುಕ್ಕಿಂಗ್ ಮಾಡಿಕೊಳ್ಳಿ. ಹೊಟೇಲ್ ಬುಕ್ಕಿಂಗ್ ಮಾಡುವ ಮೊದಲು ಗೂಗಲ್ ರಿವ್ಯೂ ನೋಡುವುದನ್ನು ಮರೆಯಬೇಡಿ. ಬುಕ್ ಮಾಡುವ ಹೊಟೇಲ್ ನೀವು ಬಂದು ಇಳಿಯುವ ಮತ್ತು ಸುತ್ತಾಡ ಬಯಸುವ ಜಾಗಗಳಿಗೆ ಹತ್ತಿರವಾಗುವಂತಿರಲಿ. ಸಾಧ್ಯವಾದಷ್ಟು ಹಗಲಿನ ವೇಳೆ ಬಂದು ತಲುಪಲು ಪ್ರಯತ್ನಿಸಿ ಮತ್ತು ಮುಂಚಿತವಾಗಿಯೇ ಹೊಟೇಲ್ ಸಿಬ್ಬಂದಿಗೆ ನಿಮ್ಮ ಬರುವಿಕೆಯ ಸಮಯವನ್ನು ತಿಳಿಸಿ. ಸಾಧ್ಯವಾದಷ್ಟು ಆಧಾರ್, ಪ್ಯಾನ್ ನೀಡದಿರಿ, ಬದಲಾಗಿ ಡಿ.ಎಲ್., ಎಪಿಕ್ ಅಂಥ ಸರಕಾರಿ ದಾಖಲೆಗಳನ್ನು ನೀಡಿ. ನೀವು ಮಹಿಳಾ ಪ್ರವಾಸಿಗರಿಗಾಗಿಯೇ ಇರುವ ಪ್ಲಾನ್ ಸಹ ಪಡೆಯಬಹುದು.
ಸಾರಿಗೆ ಬಳಕೆ
ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಹೊಂದಿರುವ ಈ ದೇಶಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು
ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆಯನ್ನೇ ಬಳಸಿ, ಮಹಿಳೆಯರಿಗಾಗಿ ಕಾಯ್ದಿರಿಸಿದ ಆಸನಗಳಲ್ಲಿ, ಅಥವಾ ಬೋಗಿಗಳಲ್ಲಿ ಪ್ರಯಾಣಿಸಿ. ಆನ್‌ಲೈನ್ ಬುಕ್ಕಿಂಗ್ ಆಪ್ ಬಳಸಿ, ನಿಮ್ಮ ನಂಬಿಕಸ್ಥರೊಂದಿಗೆ ಲೊಕೇಷನ್ ಶೇರ್ ಮಾಡುವುದನ್ನು ಮರೆಯದಿರಿ. ಒಂದೊಮ್ಮೆ ನಿಮಗೆ ಅಪಾಯವೆನಿಸಿದರೆ ತಕ್ಷಣವೇ ತುರ್ತು ಸಹಾಯವಾಣಿ (112) ಗೆ ಕರೆಮಾಡಿ, ಅಪಾಯ ಎದುರಾಗುವ ಆತಂಕವಿದ್ದರೆ ನಿಮ್ಮ ಪ್ರೀತಿಪಾತ್ರರಿಗೆ ಕರೆ ಮಾಡಿ ನಿಮ್ಮ ಕ್ಷಣ ಕ್ಷಣದ ಮಾಹಿತಿ ನೀಡಿ, ಅವರು ನಿಮಗಾಗಿ ಅಲ್ಲಿ ಕಾಯುತ್ತಿರುವಂತೆ ಮಾತನಾಡಿ. ಅನಗತ್ಯವಾಗಿ ಎಲ್ಲಿಯೂ ನೀವೊಬ್ಬರೆ ಪ್ರವಾಸ ಮಾಡುತ್ತಿರುವ ಬಗ್ಗೆ ಹೇಳಿಕೊಳ್ಳಬೇಡಿ.
ತಂತ್ರಜ್ಞಾನದ ಬಳಕೆ

ಮೊಬೈಲ್ ಫೋನಿನ ಬ್ಯಾಟರಿ ಯಾವಾಗಲೂ ಚಾರ್ಜಾಗಿರುವಂತೆ ನೋಡಿಕೊಳ್ಳಿ. ಚಾರ್ಜಿರುವ ಪವರ್ ಬ್ಯಾಂಕ್ ಒಯ್ಯುವುದನ್ನು ಮರೆಯದಿರಿ. ಅಗತ್ಯವಿಲ್ಲದಿದ್ದರೆ ಲ್ಯಾಪ್‌ಟಾಪ್ ಅಥವಾ ಟ್ಯಾಬಲೆಟ್‌ಗಳನ್ನು ಒಯ್ಯಬೇಡಿ. ಈಯರ್ ಫೋನ್ ಬಳಸಲು ಹಿಂಜರಿಯಬೇಡಿ, ಇದರಿಂದ ಅನಗತ್ಯ ಮಾತುಕತೆಗಳನ್ನು ಕಡಿಮೆ ಮಾಡಬಹುದು. ತುರ್ತು ಕರೆಯ ಸೌಲಭ್ಯ ಬಳಸುವುದನ್ನು ಮೊದಲೇ ಕಲಿತಿರಿ ಹಾಗೂ ಅಗತ್ಯ ಬಿದ್ದಾಗ ಬಳಸಲು ಹಿಂಜರಿಯಬೇಡಿ. ಎಲ್ಲಿಗಾದರೂ ಹೋಗುವಾಗ ಆ ಜಾಗದ ಆಫ್‌ಲೈನ್ ಮ್ಯಾಪ್ ಡೌನ್‌ಲೋಡ್ ಮಾಡಿಕೊಂಡಿರಿ, ಅದರಲ್ಲೂ ನೀವು ಉಳಿಯುವ ಹೊಟೇಲಿನದ್ದನ್ನು ತಪ್ಪದೇ ಮಾಡಿ. ಎಲ್ಲಾ ಕಡೆಯ ಫ್ರೀ ವೈ-ಫೈ ಬಳಸಬೇಡಿ ಮತ್ತು ಯುಪಿಐ ಮೂಲಕ ಪೇ ಮಾಡುವಾಗಲೂ ಎಚ್ಚರ ವಹಿಸಿ. ಯುಪಿಐ ಎಲ್ಲೆಡೆ ಇದ್ದರೂ ಸ್ವಲ್ಪ ಹಣ ಯಾವಾಗಲೂ ನಿಮ್ಮ ಬಳಿಯಿರಲಿ.
ಉಡುಗೆ ತೊಡುಗೆ
ಫೊಟೋಗಳಿಗೆ ಚಂದಕಾಣುವುದಕ್ಕಿಂತ ನಿಮಗೆ ಹಾಯೆನಿಸುವ, ಆ ಪ್ರಾದೇಶಿಕತೆಗೆ ಸರಿಹೊಂದುವ ಬಟ್ಟೆಗಳನ್ನು ಧರಿಸಿ. ಇಸ್ತ್ರಿ ಇಲ್ಲದೆಯೂ ಬಳಸಬಹುದಾದ ಕಡಿಮೆ ಜಾಗ ಸಾಕಾಗುವ ಬಟ್ಟೆಗಳನ್ನು ಒಯ್ಯುವುದು ಹೆಚ್ಚು ಸೂಕ್ತ. ಉದಾಹರಣೆಗೆ ಒಂದೇ ಪ್ಯಾಂಟಿಗೆ ಸರಿಹೊಂದಬಹುದಾದ ಎರಡು ಮೂರು ಟಾಪ್‌ಗಳನ್ನು ಒಯ್ಯುವುದು. ಎಲ್ಲಾ ಬಟ್ಟೆಗಳಿಗೂ ಸರಿಹೊಂದುವ, ಸಾಕಷ್ಟು ದೂರ ನಡೆಯಲು ಅನುಕೂಲವಾದ ಒಂದು ತಪ್ಪಿದರೆ ಎರಡು ಜತೆ ಚಪ್ಪಲಿಗಳನ್ನು ಬಳಸಿ. ಮೇಕಪ್ ಸಾಮಾಗ್ರಿಗಳು ಸಣ್ಣ ಗಾತ್ರದಲ್ಲಿರಲಿ. ಅನಗತ್ಯ ಆಕ್ಸೇಸರೀಸ್ ಬೇಡ. ಕ್ಯಾಪ್, ಶಾಲು ಮತ್ತು ಕೂಲಿಂಗ್ ಗ್ಲಾಸ್ ಬಳಸಿ. ತೀರಾ ದಪ್ಪವಾಗಿರದ ತೀರಾ ತೆಳುವಾಗಿರುವ ಜ್ಯಾಕೇಟ್ ಹಾಕುವುದನ್ನು ಮರೆಯಬೇಡಿ. ಅನಗತ್ಯವಾಗಿ ಹೆಚ್ಚು ಬಟ್ಟೆ ಬೇಡವಾದರೂ ಒಂದು ಜತೆಯಾದರೂ ಹೆಚ್ಚಿನ ಬಟ್ಟೆ ಇರಲಿ.
ಆಹಾರ ಮತ್ತು ಆರೋಗ್ಯ
ಫಿಲ್ಟರ್ ನೀರು ಅಥವಾ ಸೀಲ್ಡ್ ವಾಟರ್ ಬಾಟಲಿಗಳನ್ನೇ ಬಳಸಿ. ಆಹಾರಕ್ಕೆ ಅಲ್ಲಿನ ಸ್ಥಳೀಯರ ಅಭಿಪ್ರಾಯ ಕೇಳಿ. ರುಚಿಯೊಂದಿಗೆ ಶುಚಿಗೆ ಮಹತ್ವ ಕೊಡುವುದನ್ನು ಮರೆಯದಿರಿ. ಹೊರಡುವಾಗಲೇ ಸ್ವಲ್ಪ ತಿನಿಸುಗಳನ್ನು ಇಟ್ಟುಕೊಳ್ಳುವುದು ಒಳಿತು. ಅವರಿವರು ಕೊಟ್ಟದ್ದು ಅಥವಾ ನಿಮಗೆ ಸರಿಯನ್ನಿಸಿದ್ದನ್ನು ತಿನ್ನದಿರಿ. ಜತೆಗೆ ಗ್ಲೂಕೋಸ್, ಬೇಕಾಗುವ ಮಾತ್ರೆಗಳು, ನೋವಿನ ಸ್ಪ್ರೇ, ಬ್ಯಾಂಡೇಡ್, ಒಂದೆರೆಡು ಸ್ಯಾನಿಟರಿ ನ್ಯಾಪ್‌ಕಿನ್ ಇವುಗಳು ನಿಮ್ಮ ಬ್ಯಾಗಿನಲ್ಲಿದ್ದರೆ ಉತ್ತಮ. ಸ್ಯಾನಿಟೈಸರ್ ಮತ್ತು ಟಾಯಲೆಟ್ ಸೀಟ್ ಸ್ಯಾನಿಟೈಸರ್ ಸ್ಪ್ರೇ ಇಟ್ಟುಕೊಳ್ಳುವುದು ಒಳ್ಳೆಯದು, ಯಾಕೆಂದರೆ ಯಾವಾಗಲೂ ಸಾರ್ವಜನಿಕ ಶೌಚಾಲಯಗಳು ಸ್ವಚ್ಛವಾಗಿರುತ್ತವೆಯೆಂಬ ಖಾತರಿಯಿಲ್ಲ.

ಕಡಿಮೆ ಲಗೇಜ್
ನಿಮ್ಮ ಲಗೇಜಿಗೆ ನಾವೇ ಜವಾಬ್ದಾರರು!
ಭಾರದ ಬ್ಯಾಗ್‌ಗಳು ಬೇಡ, ಸಾಧ್ಯವಾದರೆ ಚಕ್ರವಿರುವ ಒಂದು ಬ್ಯಾಗ್ ಬಳಸಿ. ಬೇಕಾದ ಬಟ್ಟೆಬರೆಗಳನ್ನು ಇದರಲ್ಲೇ ತುಂಬಿಸಿ.ಈ ಬ್ಯಾಗ್ ಅರ್ಧವಷ್ಟೇ ತುಂಬಿರಲಿ, ಅರ್ಧ ಜಾಗ ಶಾಪಿಂಗ್ ಮಾಡಿದ್ದನ್ನು ಇಡಲು ಬಳಸಿ. ಇನ್ನೊಂದು ಬ್ಯಾಗ್ ಪ್ಯಾಕಿನಲ್ಲಿ ಪ್ರಯಾಣಕ್ಕೆ ಬೇಕಾದ ನೀರಿನ ಬಾಟಲಿ, ತಿನಿಸು, ಶಾಲು, ಜ್ಯಾಕೇಟ್, ಚಾರ್ಜರ್ ಮೊದಲಾದವು ಇರಲಿ. ಒಂದು ಕ್ರಾಸ್ ಬ್ಯಾಗ್ ನಿಮ್ಮ ಫೋನು, ಈಯರ್ ಫೋನು ಸ್ವಲ್ಪ ಹಣ ಮೊದಲಾದ ಯಾವಾಗಲೂ ಜತೆಗಿರಬೇಕಾದ ಸಾಮಾಗ್ರಿಗಳನ್ನು ಇಡಲು ಬಳಸಿ. ಇದರಲ್ಲಿ ಪೆಪ್ಪರ್ ಸ್ಪ್ರೇ ಇಡಲು ಮರೆಯದಿರಿ.
ಒಂಟಿಯಾಗಿ ಪ್ರವಾಸ ಮಾಡುವುದು ಸುಲಭವಲ್ಲ ಆದರೆ ಮನಸು ಮಾಡಿದರೆ ಸರಿಯಾದ ಮಾಹಿತಿಯಿದ್ದರೆ ಮಾಡಲಸಾಧ್ಯವೂ ಅಲ್ಲ. ನಿಮ್ಮ ಸುರಕ್ಷತೆಯಲ್ಲಿ ನೀವಿದ್ದು ಪ್ರವಾಸ ಮಾಡಿದರೆ ಸಂತಸ ನಿಮ್ಮ ಮಡಿಲಿನಲ್ಲೇ ಮಲಗಿರುತ್ತದೆ, ಎಚ್ಚರ ತಪ್ಪಿದಿರೋ ಸಂತಸದ ಮಗು ಕೈ ಜಾರುತ್ತದೆ.