ಲಂಡನ್ ಏರ್ ಪೋರ್ಟ್ ನಲ್ಲಿ ಪತ್ರಿಕೆ ಹೊದ್ದು ಮಲಗಿದ್ದು!
ನಮ್ಮನ್ನು 'ವೀಲ್-ಚೇರ್' ವ್ಯಕ್ತಿಗಳಿಗೆ ಮಾತ್ರ 'ಸೇವೆ' ಇರುವ ಒಂದು ಕಡೆಗೆ ಕರೆದೊಯ್ಯಲಾಯಿತು. ಅಲ್ಲಿ ಕೇವಲ ಒಂದು ಕೌಂಟರ್ ಮಾತ್ರ ತೆರೆದಿತ್ತು. ಇತರ ಎರಡು ಕೌಂಟರ್ ಗಳಲ್ಲಿ ಪರಿಚಾರಕರು ಇರಲಿಲ್ಲ. ಸರತಿಯ ವ್ಯವಸ್ಥೆ ಇರಲಿಲ್ಲ ಮತ್ತು ನಾವು ಪ್ರಯಾಣಿಕರು ನಿಂತೇ ಇರಬೇಕಾಗಿತ್ತು.
- ವಾಸುದೇವ ಮಯ್ಯ, ಧಾರವಾಡ
ಅಂದು ಬೆಂಗಳೂರಿನಿಂದ ಲಂಡನ್‌ಗೆ ನನ್ನ ವಿಮಾನ ತಡವಾಗಿ ತಲುಪಿತು. ಚಿಕಾಗೋ ಮೂಲಕ ಆಸ್ಟಿನ್‌ಗೆ ಹೋಗಬೇಕಾದ ನನ್ನ ಮುಂದಿನ ವಿಮಾನ ಹೊರಟುಹೋಗಿತ್ತು. ನಮ್ಮ ಮತ್ತು ಬೇರೆ ಬೇರೆ ಕಡೆಗಳಿಗೆ ಹೋಗಬೇಕಾದ ಅನೇಕ ಸಹಪ್ರಯಾಣಿಕರ ಭವಿಷ್ಯದ ಬಗ್ಗೆ ಯಾವುದೇ ಸಿಬ್ಬಂದಿ ನಮಗೆ ಏನನ್ನೂ ಹೇಳಲು ತಯಾರಿರಲಿಲ್ಲ. ಪ್ರತಿ ಹಂತದಲ್ಲೂ ನಮಗೆ ಕಾಯಲು ಹೇಳಲಾಯಿತು. ನಮ್ಮ ಪ್ರಶ್ನೆಗಳಿಗೆ ಉತ್ತರಗಳು ಯಾವಾಗಲೂ ಅಸ್ಪಷ್ಟವಾಗಿರುತ್ತಿದ್ದವು. ನಿಜವಾಗಿಯೂ ಪರಿಸ್ಥಿತಿ ಏನೆಂದು ತಿಳಿಸಲೇ ಇಲ್ಲ. ನಾನು ಏನನ್ನಾದರೂ ದೂಷಿಸಬಹುದು. ಭಾಷಾ ಸಮಸ್ಯೆ, ಉಚ್ಚಾರಣಾ ಸಮಸ್ಯೆ ಮತ್ತು ಅಂತಿಮವಾಗಿ ಅದೃಷ್ಟವನ್ನು! ಇದು ಬ್ರಿಟಿಷ್ ಏರ್‌ಲೈನ್ಸ್‌ನ ಸಮಸ್ಯೆ ಎಂದು ವ್ಯಕ್ತಿಯೊಬ್ಬರು ತಿಳಿಸಿದರು. ಈಗ ಅವರು ವಸತಿ ಮತ್ತು ಆಹಾರವನ್ನು ಒದಗಿಸಬೇಕು.

ನಮ್ಮನ್ನು 'ವೀಲ್-ಚೇರ್' ವ್ಯಕ್ತಿಗಳಿಗೆ ಮಾತ್ರ 'ಸೇವೆ' ಇರುವ ಒಂದು ಕಡೆಗೆ ಕರೆದೊಯ್ಯಲಾಯಿತು. ಅಲ್ಲಿ ಕೇವಲ ಒಂದು ಕೌಂಟರ್ ಮಾತ್ರ ತೆರೆದಿತ್ತು. ಇತರ ಎರಡು ಕೌಂಟರ್ ಗಳಲ್ಲಿ ಪರಿಚಾರಕರು ಇರಲಿಲ್ಲ. ಸರತಿಯ ವ್ಯವಸ್ಥೆ ಇರಲಿಲ್ಲ ಮತ್ತು ನಾವು ಪ್ರಯಾಣಿಕರು ನಿಂತೇ ಇರಬೇಕಾಗಿತ್ತು. ಗಾಜಿನ ಆವರಣದ ಮೂಲಕ ಸೇವಾ ನಿರತರಾದ ವ್ಯಕ್ತಿಯ ಸನ್ನೆಗಳು ಕಂಪ್ಯೂಟರ್ ಪ್ರತಿಕ್ರಿಯಿಸುತ್ತಿಲ್ಲ ಎಂದು ಹೇಳುತ್ತಿದ್ದವು. ಯಾರೋ ಒಂದು ಜಡ್ಜ್ ಮೆಂಟ್ ಪಾಸ್ ಮಾಡಿದರು... ಭಾರತದಲ್ಲಿ ತಂತ್ರಜ್ಞಾನ ಹೆಚ್ಚು ಉತ್ತಮವಾಗಿದೆ. ಇನ್ನೊಬ್ಬ ವ್ಯಕ್ತಿಯು ಇಷ್ಟೊಂದು ಪ್ರಯಾಣಿಕರಿರುವಾಗ, ಹೆಚ್ಚಿನ ಕೌಂಟರ್‌ಗಳನ್ನು ಏಕೆ ತೆರೆಯುತ್ತಿಲ್ಲ ಎಂದು ಕೇಳಿದರು. ಒಬ್ಬ ವೃದ್ಧ ಮಹಿಳೆ 'ಸಿಬ್ಬಂದಿ ತಮ್ಮ ಕೈಲಾದಷ್ಟು ಮಾಡುತ್ತಿದ್ದಾರೆ ಮತ್ತು ಪ್ರಯಾಣಿಕರು ಅವರೊಂದಿಗೆ ಉತ್ತಮವಾಗಿ ವರ್ತಿಸಬೇಕು' ಎಂದು ಸೂಚನೆಯ ಫಲಕದತ್ತ ಗಮನಸೆಳೆದರು! ಗದ್ದಲ ಹಾಗು ಆತಂಕ ಮಾತ್ರ ರಾರಾಜಿಸುತ್ತಿತ್ತು.
ದೀರ್ಘ ಸಮಯದ ನಂತರ, ನನ್ನನ್ನು ಮಾತ್ರ ಮತ್ತೊಂದು ಟರ್ಮಿನಲ್‌ಗೆ ಹೋಗಲು ಕೇಳಲಾಯಿತು. (ಒಡೆದು ಅಳುವ ನೀತಿ!) ಮಧ್ಯಾಹ್ನ ಹೋಗಿ ಸಂಜೆಯಾಗಿತ್ತು. ಅಲ್ಲಿಯೂ ಇದೇ ರೀತಿಯ ಅನುಭವ. ಸಂಜೆ ಹೋಗಿ ರಾತ್ರಿಯಾಯ್ತು. ಮರುದಿನ ಬೆಳಿಗ್ಗೆ 11.50 ಕ್ಕೆ ಆಸ್ಟಿನ್ ಗೆ ನೇರ ವಿಮಾನ ಟಿಕೆಟ್ ನೀಡಬಹುದು ಎಂದು ನನಗೆ ಅಂತಿಮವಾಗಿ ತಿಳಿಸಲಾಯಿತು. ವಾಸ್ತವ್ಯಕ್ಕೆ ಯಾವ ವ್ಯವಸ್ಥೆ ಮಾಡಲಾಗುವುದಿಲ್ಲವಂತೆ. ಹೊಟೇಲ್ ಗಳು ತುಂಬಿವೆಯಂತೆ. ರಾತ್ರಿ 10.30ರ ಸುಮಾರಿಗೆ ಗೇಟ್ ಸಂಖ್ಯೆ 7ಕ್ಕೆ ನನ್ನನ್ನು ಕಳುಹಿಸಲಾಯಿತು. ಅಲ್ಲಿ ನಾನು ಅನೇಕರನ್ನು ಕೂಡಿಕೊಂಡೆ. ನನ್ನಂತೆಯೇ ಸಿಕ್ಕಿಬಿದ್ದ ಪ್ರಯಾಣಿಕರಿಂದ ಖುರ್ಚಿಗಳು ತುಂಬಿದ್ದವು. ಅನೇಕರು ನೆಲದ ಮೇಲೆ ಮಲಗಿದ್ದರು. ಆ ಸನ್ನಿವೇಶವು ನಮ್ಮ ರೈಲ್ವೆ ನಿಲ್ದಾಣ ಅಥವಾ ಬಸ್ ನಿಲ್ದಾಣಕ್ಕಿಂತ ಉತ್ತಮವಾಗಿರಲಿಲ್ಲ. ಒಬ್ಬ ವ್ಯಕ್ತಿ ಸ್ಟ್ಯಾಂಡ್ ನಿಂದ ಪತ್ರಿಕೆಯೊಂದನ್ನು ತೆಗೆದುಕೊಂಡಾಗ, ನನ್ನ ಮನಸ್ಸಿಗೆ ಒಂದು ಯೋಚನೆ ಬಂತು ಮತ್ತು ಅದನ್ನು ತಕ್ಷಣವೇ ಕಾರ್ಯಗತಗೊಳಿದೆ. ನನ್ನ ಕಣ್ಣುಗಳಲ್ಲ, ನನ್ನ ಇಡೀ ದೇಹವು ದಿನಪತ್ರಿಕೆಯನ್ನು ಬಳಸಿದವು! ಇಂಥದ್ದು ಭಾರತದಲ್ಲಿ ಮಾತ್ರ ಸಂಭವಿಸುತ್ತದೆ ಎನ್ನುವುದು ಮಾತ್ರ ಸುಳ್ಳು