ಊರು ಹೋಗು ಅಂತಿತ್ತು.. ಕಾರ್ಡು ಬರಲ್ಲ ಅಂತಿತ್ತು!
ಯಾರಿಗೆ ಹೇಳುವುದು ನನ್ನ ಕಷ್ಟ ಎಂದು ಯೋಚಿಸುತ್ತಿದ್ದಾಗ ನಡುವಯಸ್ಸಿನ ಗೃಹಸ್ಥರೊಬ್ಬರು ಅಲ್ಲಿಗೆ ಬಂದಿರುವುದನ್ನು ಗಮನಿಸಿ, ಆಂಗ್ಲ ಭಾಷೆಯಲ್ಲಿ ಅವರಿಗೆ ವಿವರಿಸಿದೆ. ಅವರು " ಏನೂ ಮಾಡಲಾಗುವುದಿಲ್ಲ. ಬೆಳಗ್ಗೆ ಹತ್ತಿರದ ಬ್ಯಾಂಕ್ ಓಪನ್ ಆಗುವವರೆಗೆ ಕಾದು ಮ್ಯಾನೇಜರ್ ಗೆ ಹೇಳಿದರೆ ನಿಮ್ಮ ಕೆಲಸ ಆಗುತ್ತದೆ ಅಂದರು.
- ಅರವಿಂದ.ಜಿ.ಜೋಷಿ. ಮೈಸೂರು.
ಕೆಲವು ವರ್ಷಗಳ ಹಿಂದೆ ಬೀದರ್ ನಗರದ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಮುಂದಿನ ತಿಂಗಳು ರಾಜ್ಯದ ದಕ್ಷಿಣದಲ್ಲಿರುವ ಜಿಲ್ಲೆಗೆ ವರ್ಗವಾಗುತ್ತದೆ ಎಂದು ಪಕ್ಕಾ ಸುದ್ದಿ ತಿಳಿದು ಬಂದಿತ್ತು. ಆಗ ಬೀದರ್ ಪಕ್ಕದಲ್ಲೇ ಇರುವ ಹೈದರಾಬಾದ್ ಗೆ ಹೋಗಿ ಒಂದೆರಡು ದಿನ ಇದ್ದು ಅಲ್ಲಿನ ಪ್ರೇಕ್ಷಣೀಯ ಸ್ಥಳ ನೋಡಿಕೊಂಡು ಬರುವ ಯೋಚನೆ ಬಂದಿತ್ತು. ಹೀಗಾಗಿ ಎರಡು ದಿನಗಳ ನಂತರ ಎರಡನೇ ಶನಿವಾರ, ಅದರ ಮರುದಿನ ಭಾನುವಾರ ರಜ ಇದ್ದುದರಿಂದ ಶುಕ್ರವಾರ ಸಂಜೆ ಬಸ್ ಮೂಲಕ ಹೈದರಾಬಾದ್ ಗೆ ಪ್ರಯಾಣ ಬೆಳೆಸಿದ್ದೆ.
ಅಲ್ಲಿ ತಲುಪಿದಾಗ ರಾತ್ರಿ ಎಂಟೂವರೆ ಆಗಿತ್ತು. ಬಸ್ ನಿಲ್ದಾಣದಲ್ಲಿ ನನ್ನ ಬ್ಯಾಗ್ ನೊಂದಿಗೆ ಇಳಿಯುವಾಗ ಒಂದು ಬಾರಿ ಪರ್ಸ್ ಇರುವುದರ ಬಗ್ಗೆ ಖಾತರಿ ಮಾಡಿಕೊಳ್ಳಲು ಜೇಬಿಗೆ ಕೈ ಹಾಕಿ ನೋಡಿದಾಗ ಅದು ಕಾಣಲಿಲ್ಲ. ಗಾಬರಿಗೊಂಡು ಮತ್ತೆ ಮತ್ತೆ ಎಲ್ಲ ಜೇಬು ತಡಕಾಡಿದೆ. ಊಹೂಂ ಎಲ್ಲೂ ಕಾಣದಾದಾಗ ಜಂಘಾಬಲವೇ ಉಡುಗಿ ಹೋದಂತಾಯ್ತು. ಅರಿಯದ ಊರು, ಅರಿಯದ ಭಾಷೆ ಇನ್ನಷ್ಟು ತಬ್ಬಿಬ್ಬು ಮಾಡಿತ್ತು. ಆಗ ಸಹಜವಾಗಿ ಶರ್ಟಿನ ಜೇಬಿಗೆ ಕೈ ಹಾಕಿದಾಗ ಅಲ್ಲಿದ್ದ ಪುಟ್ಟ ಡೈರಿಯೊಳಗೆ ನನ್ನ ಎಟಿಎಂ ಕಾರ್ಡು ಕಂಡವನಿಗೆ ಕೊಂಚ ಧೈರ್ಯ ಬಂದಂತಾಗಿತ್ತು.
ಬಸ್ ನಿಂದ ಇಳಿದವನಿಗೆ ಬಾಯಿ ಒಣಗಿದಂತಾಗಿ ಒಂದು ಕಪ್ ಚಹಾ ಕುಡಿಯಬೇಕೆಂದೆನಿಸಿದರೂ ಹಣ ಇಲ್ಲ ಎಂದು ಅರಿತು ಅಲ್ಲಿಯೇ ಇದ್ದ ಎಟಿಎಂಗೆ ಹೋಗಿ ಹಣ ಡ್ರಾ ಮಾಡಲು ಕಾರ್ಡ್ ಮಿಶಿನ್ ಒಳಗೆ ಹಾಕಿದ್ದೆ. ಅಷ್ಟರಲ್ಲಿ ನನ್ನ ಸೆಲ್ ಗೆ ಕಾಲ್ ಬಂದಿದ್ದರಿಂದ ಯಾರ ಕಾಲ್ ಎಂದು ನೋಡಲು ಮುಂದಾದೆ. ಅಷ್ಟರಲ್ಲಿ ಸಮಯ ಮುಗಿದುಹೋಗಿ, ಕಾರ್ಡು ಮಷಿನ್ ಒಳಗೆ ಸಿಲುಕಿತು. ಹಣ ಡ್ರಾ ಮಾಡಲು ಆಗದೇ ಇನ್ನಷ್ಟು ಟೆನ್ಶನ್ ಒಳಗಾದೆ.
ಯಾರಿಗೆ ಹೇಳುವುದು ನನ್ನ ಕಷ್ಟ ಎಂದು ಯೋಚಿಸುತ್ತಿದ್ದಾಗ ನಡುವಯಸ್ಸಿನ ಗೃಹಸ್ಥರೊಬ್ಬರು ಅಲ್ಲಿಗೆ ಬಂದಿರುವುದನ್ನು ಗಮನಿಸಿ, ಆಂಗ್ಲ ಭಾಷೆಯಲ್ಲಿ ಅವರಿಗೆ ವಿವರಿಸಿದೆ. ಅವರು " ಏನೂ ಮಾಡಲಾಗುವುದಿಲ್ಲ. ಬೆಳಗ್ಗೆ ಹತ್ತಿರದ ಬ್ಯಾಂಕ್ ಓಪನ್ ಆಗುವವರೆಗೆ ಕಾದು ಮ್ಯಾನೇಜರ್ ಗೆ ಹೇಳಿದರೆ ನಿಮ್ಮ ಕೆಲಸ ಆಗುತ್ತದೆ ಅಂದರು. ನನಗಂತೂ ನಿಂತ ನೆಲ ಕುಸಿದಂತಾಗಿತ್ತು. ಏನು ಮಾಡಲಿ ಹೇಗೆ ಮಾಡಲಿ ಎಂದು ಯೋಚಿಸುತ್ತಾ ನನ್ನ ಸಹೋದ್ಯೋಗಿ ಗೆ ಕಾಲ್ ಮಾಡಿ ನನಗಾದ ಫಜೀತಿ ವಿವರಿಸಿದೆ. ಆತ ನೀವೇನೂ ಯೋಚನೆ ಮಾಡಬೇಡಿ
ನನ್ನ ಹತ್ತಿರ ಸಂಬಂಧಿ ಅದೇ ನಗರದ ಪೊಲೀಸ್ ಇಲಾಖೆಯಲ್ಲಿ ಇದ್ದಾರೆ. ನಾನು ಅವರಿಗೆ ನಿಮ್ಮನ್ನು ಕಾಂಟಾಕ್ಟ್ ಮಾಡಲು ಹೇಳುವೆ ಎಂದು ಅಭಯ ನೀಡಿದಾಗ ಸ್ವಲ್ಪ ನಿರಾಳನಾದೆ. ಅದಾಗಿ ಒಂದು ಗಂಟೆ ಬಳಿಕ ಅವರು ನಾನಿದ್ದಲ್ಲಿಗೆ ಬಂದು ಆ ರಾತ್ರಿ ಒಳ್ಳೆಯ ಹೊಟೇಲ್ ನಲ್ಲಿ ತಂಗುವ ವ್ಯವಸ್ಥೆ ಮಾಡಿದ್ದಲ್ಲದೇ ಖರ್ಚಿಗೆಂದು ಒಂದಿಷ್ಟು ಹಣ ಕೂಡ ಕೊಟ್ಟಿದ್ದರು. ಮಾರನೇ ದಿನ ಪುನಃ ಅವರೇ ಬಂದು ನನ್ನನ್ನು ಬ್ಯಾಂಕ್ ಗೆ ಕರೆದೊಯ್ದು ಮ್ಯಾನೇಜರ್ ಗೆ ವಿವರಿಸಿದಾಗ ಅವರು ತಮ್ಮ ಸಿಬ್ಬಂದಿ ಯೊಬ್ಬರನ್ನು ಕಳುಹಿಸಿ ಅಂತೂ ನನ್ನ ಎಟಿಎಂ. ಕಾರ್ಡು ಸಿಗುವಂತೆ ಮಾಡಿದ್ದರು. ನನಗೆ ಸಹಾಯ ಮಾಡಿದ ವ್ಯಕ್ತಿ ಗೆ ಅವರ ಹಣ ವಾಪಸ್ ಮಾಡಿ ಮತ್ತೆಲ್ಲಿಗೂ ಹೋಗದೇ ವಾಪಸ್ ಬೀದರ್ ಬಂದೆ. ಈ ಫಜೀತಿ ಪ್ರಸಂಗ ಇಂದಿಗೂ ಮರೆಯಲಾಗಿಲ್ಲ.