ಏರ್‌ಬಿಎನ್‌ಬಿ ಎಂಬ ಮಾಯಾಲೋಕ!
ಯುರೋಪಿನ ಏರ್‌ಬಿಎನ್‌ಬಿ ಗಳಿಗಂತೂ ಮನುಷ್ಯರ ಸಹವಾಸವೇ ಅಲರ್ಜಿ! ಬುಕ್ ಮಾಡುವುದು, ಹಣ ಪಾವತಿಸುವುದು ಎಲ್ಲ ಆನ್ ಲೈನ್ ನಲ್ಲಿ ನಡೆಯುವುದೇನೋ ಸರಿ. ಮನೆಯ ಗೇಟು, ಮುಖ್ಯ ದ್ವಾರ, ರೂಮಿನ ಕೀಯನ್ನು ತೆಗೆದುಕೊಳ್ಳುವುದು ಕೂಡ ಮಾನವ ಹಸ್ತಕ್ಷೇಪವಿಲ್ಲದೇ ಕೇವಲ ಕೋಡ್ ನಂಬರುಗಳ ಮುಖಾಂತರ ನಡೆಯುತ್ತದೆ.
- ಸುಚಿತ್ರಾ ಹೆಗಡೆ
ಯುರೋಪಿನ ಬಹಳಷ್ಟು ದೇಶಗಳನ್ನು ಒಂದೇ ಏಟಿಗೆ ಸುತ್ತಿ ಬಂದುಬಿಡಬಹುದು. ನಮ್ಮದೊಂದು ಜಿಲ್ಲೆಗಿಂತ ಚಿಕ್ಕದಾದ ದೇಶಗಳೂ ಇವೆ. ಅಷ್ಟೇ ಏಕೆ… ಬರೀ ಕಾಲ್ನಡಿಗೆಯಲ್ಲಿ ಸಂಜೆಯ ವಾಕಿಂಗಿನಂತೆ ನೋಡಿ ಮುಗಿಸುವಂಥ ವ್ಯಾಟಿಕನ್ ದೇಶವೂ ಅಲ್ಲಿದೆ. ಆದರೆ ಫ್ರಾನ್ಸ್, ಇಟಲಿ, ಇಂಗ್ಲೆಂಡ್, ಗ್ರೀಸಿನಂಥ ಕೆಲವು ದೇಶಗಳು ವಿಸ್ತಾರದಲ್ಲಿ, ವೈವಿಧ್ಯದಲ್ಲಿ ತೀರ ಭಿನ್ನವಾದಂಥವು. ಇತಿಹಾಸ, ಕಲೆ, ಸಂಸ್ಕೃತಿ, ಆಹಾರ… ಹೀಗೆ ತಮ್ಮದೇ ಆದ ಛಾಪನ್ನು ಮೂಡಿಸಿದ ದೇಶಗಳಿವು. ಎಷ್ಟು ಸಲ ನೋಡಿದರೂ ಇನ್ನೇನೋ ಉಳಿದುಕೊಂಡು ಮತ್ತೆ ನೋಡಬೇಕೆನ್ನುವ ಹಂಬಲ ಹುಟ್ಟಿಸದೇ ಬಿಡುವುದಿಲ್ಲ. ಆದ್ದರಿಂದಲೇ ನಮ್ಮ ಇಟಲಿಯ ಪ್ರವಾಸವನ್ನು ಆರಂಭಿಸುವ ಮೊದಲಿನ ಮೂರು ದಿನಗಳನ್ನು ಮತ್ತೊಮ್ಮೆ ಪ್ಯಾರಿಸ್ಸಿಗೆ ಮೀಸಲಿಟ್ಟಿದ್ದೆವು.
ಈ ಸಲದ ಪ್ರವಾಸದಲ್ಲಿ ನಾವು ಸಾಮಾನ್ಯವಾಗಿ ಉಳಿದುಕೊಳ್ಳುವ ಹೊಟೇಲ್ ಗಳನ್ನು ತ್ಯಜಿಸಿ ಏರ್‌ಬಿಎನ್‌ಬಿ ಗಳೆಂಬ ಅಪಾರ್ಟ್ ಮೆಂಟುಗಳನ್ನು ಬುಕ್ ಮಾಡಿದ್ದೆವು. ನಾವು ವಿಭಿನ್ನವಾದ ಪ್ರವಾಸದ ಅನುಭವ ಹೊಂದಲು, ನಗರದ ಹೃದಯಭಾಗದಲ್ಲಿರಲು ಇದೇ ಅತ್ಯುತ್ತಮವೆಂದು ಮಗಳು ನಮ್ಮನ್ನು ಈ ಹೊಸ ಅನುಭವಕ್ಕೆ ತೆರೆದುಕೊಳ್ಳಲು ಒತ್ತಾಯಿಸಿದ್ದೂ ಒಂದು ಪ್ರಬಲವಾದ ಕಾರಣವಾಗಿತ್ತು. ಇವು ನಮ್ಮಂತೆ ಸಾಮಾನ್ಯರ ಮನೆಗಳು ಅಥವಾ ಸ್ವಂತಮನೆಯ ಒಂದು ಭಾಗ. ಬಾಡಿಗೆಗೆ ಬಿಡುವ ಬದಲಾಗಿ ಹೀಗೆ ಪ್ರವಾಸಿಗರ ವಸತಿಗಾಗಿ ಮೀಸಲಾಗಿಡುತ್ತಾರೆ. ಅಡುಗೆ ಮನೆ, ಪಾತ್ರೆಗಳು, ದಿನಸಿ, ವಾಷಿಂಗ್ ಮಷಿನ್ನು, ಡಿಶ್ ವಾಷರ್ ಗಳಂಥ ಸಕಲ ಸರಂಜಾಮುಗಳಿರುವ ಈ ಮನೆಗಳು ನಗರಕ್ಕೆ ಹತ್ತಿರವಾಗಿರುವುದಲ್ಲದೇ ಯಾವ ನಿರ್ಬಂಧಗಳಿಲ್ಲದೇ ಮನೆಯ ಸೌಕರ್ಯದೊಂದಿಗೆ ಪ್ರವಾಸ ಮಾಡುವ ಸುಖ ನಮ್ಮದಾಗಿಸಿಕೊಳ್ಳಬಹುದು.

ಪಾಶ್ಚಿಮಾತ್ಯ ದೇಶಗಳಲ್ಲಿ ಜನರ ಬಂಡವಾಳ ಕಡಿಮೆ. ಅವರ ಜೀವನಕ್ಕೆ ತಂತ್ರಜ್ಞಾನವೇ ಆಧಾರ. ನಾವು ತಂತ್ರಜ್ಞಾನಕ್ಕಿಂತ ಜನರ ಶ್ರಮವನ್ನೇ ನೆಚ್ಚಿಕೊಳ್ಳುವುದು ಹೆಚ್ಚು. ಯುರೋಪಿನ ಏರ್‌ಬಿಎನ್‌ಬಿ ಗಳಿಗಂತೂ ಮನುಷ್ಯರ ಸಹವಾಸವೇ ಅಲರ್ಜಿ!
ಬುಕ್ ಮಾಡುವುದು, ಹಣ ಪಾವತಿಸುವುದು ಎಲ್ಲ ಆನ್ ಲೈನ್ ನಲ್ಲಿ ನಡೆಯುವುದೇನೋ ಸರಿ. ಮನೆಯ ಗೇಟು, ಮುಖ್ಯ ದ್ವಾರ, ರೂಮಿನ ಕೀಯನ್ನು ತೆಗೆದುಕೊಳ್ಳುವುದು ಕೂಡ ಮಾನವ ಹಸ್ತಕ್ಷೇಪವಿಲ್ಲದೇ ಕೇವಲ ಕೋಡ್ ನಂಬರುಗಳ ಮುಖಾಂತರ ನಡೆಯುತ್ತದೆ. ಮನೆಯಿಂದ ಅನತಿದೂರ ಅಥವಾ ಸಮೀಪದಲ್ಲಿ, ಕೆಲವು ಸಲ ಗೇಟಿಗೆ ಒಂದು ಲಾಕರ್ ಇಟ್ಟಿರುತ್ತಾರೆ. ಅಲ್ಲಿ ಅವರು ಕೊಡುವ ನಂಬರಿನ ಸಹಾಯದಿಂದ ಅದನ್ನು ಓಪನ್ ಮಾಡಿದಾಗ ಒಳಗೆ ಮನೆಯ ಕೀ ಸಿಗುತ್ತದೆ. ಮತ್ತೆ ನಾವು ಮನೆ ಬಿಡುವಾಗ ಹಾಗೆಯೇ ಕೀಯನ್ನು ಮನೆಯಲ್ಲಿ ಅಥವಾ ಅದೇ ಬಾಕ್ಸಿನಲ್ಲಿ ಹಾಕಿ ಬಂದರಾಯಿತು. ಈ ಹಿಂದೆ ನ್ಯೂಯಾರ್ಕಿನಲ್ಲಿ ಕೂಡ ಹೀಗೆಯೇ ಪ್ರವಾಸ ಮಾಡಿದ್ದೆ. ತುಂಬ ಸುಲಭವಾದ, ರಗಳೆಯೇ ಇಲ್ಲದೆ ಮನೆಯಲ್ಲಿ ಇರುವಂತೆ ಆರಾಮಾಗಿ ಇರಬಹುದೆಂದು ಈ ವ್ಯವಸ್ಥೆಯನ್ನು ತುಂಬ ಇಷ್ಟಪಟ್ಟಿದ್ದೆ. ಆದರೆ ಏರ್‌ಬಿಎನ್‌ಬಿಗೆ ನನ್ನನ್ನು ಕಂಡರೆ ಇಷ್ಟವಿಲ್ಲವೆನ್ನುವುದು ಆಗ ಗೊತ್ತಿರಲಿಲ್ಲ.
ಹನ್ನೆರಡು ವರುಷಗಳ ಹಿಂದೆ ಪ್ಯಾರಿಸ್ ಗೆ ಹೋದಾಗಿನ ಫಜೀತಿಯ ಕುರಿತು ಬರೆದಿದ್ದೆ. ಈ ಸಲದ ನಾನು ಅಪ್ಡೇಟೆಡ್ ವರ್ಶನ್ ಆಗಿ ಹೋಗುತ್ತಿರುವುದರಿಂದ ಯಾವ ಫಜೀತಿಯೂ ಆಗಲಾರದೆಂದು ಖಾತ್ರಿಯಾಗಿ ನಂಬಿದ್ದೆ. ಅದ್ಯಾವ ಮಾಯೆಯೋ… ಮುಂದಿನ ಇಟಲಿಯ ಪಯಣದಲ್ಲಿ ಎಲ್ಲವೂ ಹೂವೆತ್ತಿದಂತೆ ಸರಾಗವಾಗಿದ್ದು ನೋಡಿದ ಮೇಲಂತೂ ಫಜೀತಿಯಿಲ್ಲದೇ ಪ್ಯಾರಿಸ್ಸಿಲ್ಲ ಎನ್ನುವುದು ನನಗೆ ಖಾತ್ರಿಯಾಯ್ತು.
ದೋಹಾದ ಐದು ಗಂಟೆಗಳ ಲೇಓವರನ್ನೂ ಸೇರಿಸಿ ಹದಿನೈದು ತಾಸುಗಳ ವಿಮಾನ ಪ್ರಯಾಣ ಮಾಡಿ ಫ್ರಾನ್ಸ್ ನ ಚಾರ್ಲ್ಸ್ ಡಿ ಗಾಲಿನ ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಹಿಡಿದು ಹಳೆಯ ಚಾರ್ಮಿನ ಮೊಂಟ್ ಮಾರ್ಟ್ ಹತ್ತಿರದ ಮಧ್ಯಯುಗಕ್ಕೆ ಸೇರಿದ ಏರ್‌ಬಿಎನ್‌ಬಿಗೆ ಪ್ರಯಾಣ ಬೆಳೆಸಿದೆವು. ಅದಕ್ಕೆ ‘ಹಳೆಯ ಸೊಬಗಿನ, ಸಕಲ ಸೌಲಭ್ಯಗಳನ್ನು ಹೊಂದಿರುವ, ರೋಮ್ಯಾಂಟಿಕ್ ಭಾವನೆಗಳನ್ನು ಮೂಡಿಸುವ ಮನೆ’ ಯೆಂಬ ವಿವರಣೆ ಬೇರೆ ಕೊಟ್ಟಿದ್ದರಿಂದ ನನಗೆ ಇನ್ನಷ್ಟು ಕುತೂಹಲವಿತ್ತು. ಮೊಂಟ್ ಮಾರ್ಟ್ ಹಳೆಯ ಪ್ಯಾರಿಸ್ಸಿನ ಸೊಬಗನ್ನುಳಿಸಿಕೊಂಡ ನೂರಾರು ವರ್ಷಗಳಿಂದ ನೆಲೆಗೊಂಡ ಪಕ್ಕಾ ಫ್ರೆಂಚರ ಬೀಡು. ಅತಿಯಾದ ಪ್ರವಾಸಿಗಳ ಹಾವಳಿಯಿಲ್ಲದ ಶಾಂತ ಪರಿಸರ. ಇಲ್ಲಿ ದಕ್ಕುವ ಅಸಲಿ ಪ್ಯಾರಿಸ್ಸಿನ ದರ್ಶನದ ಸುಖವೇ ಬೇರೆ.

ಅದಕ್ಕೇ ಈ ಸಾರಿ ಫ್ರೆಂಚರು ವಾಸಿಸುವ ಜಾಗದಲ್ಲಿಯೇ ಇದ್ದು, ಸಾವಿರ ವರ್ಷಗಳಷ್ಟು ಹಳೆಯ ಮಧ್ಯಯುಗದ ಕಟ್ಟಡವೊಂದರಲ್ಲಿ ಅಪ್ಪಟ ಫ್ರೆಂಚ್ ಜನರ ಜೊತೆಯಲ್ಲಿ ಮೂರು ದಿನಗಳ ಕಾಲ ಕಳೆಯುವ ಹಂಬಲದಲ್ಲಿ ಮೊಂಟ್ ಮಾರ್ಟಿನಲ್ಲೇ ತಂಗಲು ನಿರ್ಧರಿಸಿದ್ದೆ. ಅಲ್ಲಿಯ ಮನಸೆಳೆಯುವ ಬೀದಿಗಳಲ್ಲಿ ಮನಸಾರೆ ಓಡಾಡುವದರ ಜೊತೆಗೆ ವಿಶ್ವವಿಖ್ಯಾತ ಬೋಲಂಜರಿಗಳಲ್ಲಿ (ಬೇಕರಿಗಳಲ್ಲಿ) ಕ್ವಾಸೋ, ಪಾ ಒ ಶೊಕಾಲಾಟ್ ಮೊದಲಾದ ತಿನಿಸುಗಳನ್ನು ತಿನ್ನುವ ಕನಸೂ ಕಂಡಿದ್ದೆ.
ಪಕ್ಕದ ರಸ್ತೆಯ ಲಾಂಡ್ರಿಯೊಂದರಲ್ಲಿ ಮನೆಯ ಕೀ ತೆಗೆದುಕೊಳ್ಳಬೇಕಿತ್ತು. ನಮ್ಮ ಟ್ಯಾಕ್ಸಿಯವನು ಯಾವುದೇ ತಕರಾರಿಲ್ಲದೇ ಮೊದಲು ಕೀ ತೆಗೆದುಕೊಂಡು, ನಂತರ ನಮ್ಮ ನಿಗದಿತ ಸ್ಥಳಕ್ಕೆ ಬಿಡಲು ಒಪ್ಪಿದ್ದ. ಅಲ್ಲಿಗೆ ಹೋಗಿ ಕೊಟ್ಟಿದ್ದ ಕೋಡ್ ಒತ್ತಿ ಮನೆಯ ಕೀಯನ್ನು ತೆಗೆದುಕೊಂಡು ಬರಬೇಕಿತ್ತು. ಹೋಗಾಯಿತು, ನಂಬರುಗಳನ್ನು ಒತ್ತಿದ್ದಾಯಿತು. ಲಾಕರೂ ತೆರೆದುಕೊಂಡಿತು. ಕೀ ಮಾತ್ರ ನಾಪತ್ತೆ!
ಮೊದಲೇ ಏರ್‌ಬಿಎನ್‌ಬಿ ಐಡಿಯಾ ಸಹ್ಯವಾಗದಿದ್ದ ನಮ್ಮವರು ಫ್ರೆಂಚರಷ್ಟೇ ಸೀರಿಯಸ್ ನೋಟ ಬೀರಿದರು.
ಮನೆ ಮಾಲಕಿ ಇರುವುದು ಜೋರ್ಡಾನಿನಲ್ಲಿ! ಅವಳ ಜೊತೆಗೆ ಕೇವಲ ಸಂದೇಶಗಳಲ್ಲಿ ವ್ಯವಹರಿಸಬೇಕು. ಮನೆಗೊಬ್ಬ ಕೇರ್ ಟೇಕರ್ ಇರುವನಾದರೂ ಅವನ ಪತ್ತೆಯಿಲ್ಲ, ಅವನ ಫೋನ್ ನಂಬರ್ ಗೊತ್ತಿಲ್ಲ.
ನಮ್ಮ ಟ್ಯಾಕ್ಸಿಯವನೇನೋ ಫ್ರೆಂಚ್ ಸಜ್ಜನ. ‘ನಾನೇನು ಮಾಡಲಿ…ವೇಟ್ ಮಾಡಲಾ?’ ಕೇಳಿದ. ತಕ್ಷಣಕ್ಕೆ ನಮಗೇನೆನ್ನಬೇಕು ಗೊತ್ತಾಗದೇ ಸ್ವಲ್ಪ ಮಾತುಕತೆ ನಡೆಸಿ ನಾನು ಲಗೇಜಿನೊಂದಿಗೆ ಬುಕ್ ಮಾಡಿದ್ದ ಮನೆಗೆ ಬಂದು ಕಾಯುವುದು ಮತ್ತು ನಮ್ಮವರು ಅಲ್ಲೇ ನಿಂತು ಮನೆಯೊಡತಿಯೊಂದಿಗೆ ಪರಿಸ್ಥಿತಿಯ ಕುರಿತು ಮನದಟ್ಟು ಮಾಡಿಕೊಡುವುದೆಂದು ನಿರ್ಧರಿಸಿದೆವು.
ನಮ್ಮವರು ಅಲ್ಲಿಯೇ ನಿಂತರು. ನನ್ನನ್ನು ನಾವು ಕಾದಿರಿಸಿದ್ದ ಮನೆಗೆ ಕರೆತಂದು ನಮ್ಮ ಹೊರೆಯನ್ನು ಇಳಿಸಿ ಡ್ರೈವರು ಹೊರಟುಹೋದ. ಕಟ್ಟಡವೇನೋ ತುಂಬ ಹಳೆಯದಾಗಿ, ನಾನೆಂದುಕೊಂಡ ಹಾಗೆ ಚೆಂದವಾಗಿತ್ತು. ಪ್ಯಾರಿಸ್ಸಿನ ಪ್ರವಾಸಿಗಳ ಗೌಜು ಗದ್ದಲವಿಲ್ಲದೇ ಶಾಂತವಾಗಿತ್ತು. ಶತಮಾನಗಳ ಹಿಂದಿನ ಪ್ಯಾರಿಸ್ಸು ಒಂಚೂರೂ ಬದಲಾಗದೇ ನಿಂತ ಹಾಗಿತ್ತು. ಪ್ರವಾಸಿಗಳಿರಲಿ, ಜನರ ಓಡಾಟವೂ ಕಾಣುತ್ತಿರಲಿಲ್ಲ.
ಪ್ಯಾರಿಸ್ಸಿನ ಹಳೆಯ ವಸತಿ ಪ್ರದೇಶಗಳೆಲ್ಲ ಒಂದೇ ಥರದ್ದು. ಇಲ್ಲಿಯೂ ರಸ್ತೆಗೆ ಅಂಟಿಕೊಂಡಂತೆ ಸಾಲಾಗಿರುವ ನಾಲ್ಕೈದು ಅಂತಸ್ತಿನ ಮನೆಗಳು ಒತ್ತಾಗಿದ್ದವು. ಯಾವುದೂ 1900 ಕ್ಕಿಂತ ನಂತರ ಕಟ್ಟಿದ್ದಲ್ಲ. ಎಲ್ಲ ಮನೆಗಳ ಮಾದರಿಯೂ ಒಂದೇ ಥರ. ಹೊರಗೊಂದು ದೊಡ್ಡ ಬಾಗಿಲು, ಒಳಗೊಂದು ಚಿಕ್ಕ ಹೂದೋಟ, ನಂತರ ಮನೆಗಳ ಸಮುಚ್ಚಯ. ಥೇಟ್ ನಮ್ಮ ವಠಾರಗಳಂತೆ. ದೊಡ್ಡದಾದ ಫ್ರೆಂಚ್ ಕಿಟಕಿಗಳು, ಪುಟ್ಟದಾದ ಬಾಲ್ಕನಿಗಳು. ಮನೆಗಳ ಗೋಡೆಗಳಿಗೆ ಹಬ್ಬಿಸಿರುವ ಹೂಬಳ್ಳಿಗಳಂತೂ ಆವರಣಕ್ಕೆ ಮತ್ತಷ್ಟು ಹಳೆಯ ಸೊಬಗು ಕೊಡುತ್ತದೆ. ಹೊರಗಿನ ಬಾಗಿಲನ್ನು ತೆರೆಯಲು ಒಂದು ಕೀ ಅಥವಾ ಸಂಖ್ಯೆಗಳ ಕೋಡ್…ನಂತರ ಒಳಗಿನ ಮನೆಗೊಂದು ಕೀ… ಹೀಗೆ ಕೆಲವು ಬಾರಿ ಚಳಿಯಿಂದ ರಕ್ಷಿಸಿಕೊಳ್ಳಲು ಇರುವ ಮಧ್ಯದ ಬಾಗಿಲೂ ಸೇರಿಸಿ ಮೂರು ನಾಲ್ಕು ಕೀಗಳ ಗೊಂಚಲೇ ಇರುತ್ತದೆ. ಕೀ ಇಲ್ಲದೇ ನಾನು ಮನೆಯಿರಲಿ, ಆ ವಠಾರವನ್ನು ಪ್ರವೇಶಿಸುವುದೂ ಸಾಧ್ಯವಿರಲಿಲ್ಲ. ಯಾರಾದರೂ ಕಟ್ಟಡದೊಳಗೆ ಹೋಗುವವರಿಗಾಗಿ ಕಾಯುವುದೊಂದೇ ದಾರಿಯಾಗಿತ್ತು.
ಇಳಿ ಮಧ್ಯಾಹ್ನದ ಹೊತ್ತಿನಲ್ಲಿ ಪ್ಯಾರಿಸ್ಸಿನ ರಸ್ತೆಯ ಪಕ್ಕ ಮಣಭಾರದ ಸೂಟುಕೇಸುಗಳೊಂದಿಗೆ ಅಕ್ಷರಶಃ ಪರದೇಶಿಯಾಗಿ ನಿಂತಿದ್ದೆ. ನನ್ನ ಪತಿ ಕಿಂಕರ್ತವ್ಯವಿಮೂಢರಾಗಿ ಲಾಂಡ್ರಿಯಲ್ಲಿ! ಒಳಗೊಳಗೇ ಹೆದರಿಕೆಯಿಂದ, ಆಯಾಸದಿಂದ ತತ್ತರಿಸಿದ್ದರೂ ಹಿಂದೆ ಮಾಡಿರುವ ಬಹಳಷ್ಟು ಪ್ರವಾಸದ ಅನುಭವಗಳೇ ನನ್ನನ್ನು ಆ ಸಮಯದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳಲು ಬಿಡಲಿಲ್ಲವೆನ್ನುವುದು ಸತ್ಯ.
ಅಷ್ಟರಲ್ಲಿ ಯಾರೋ ಫ್ರೆಂಚ್ ಹುಡುಗಿಯೊಬ್ಬಳು ಬಿಲ್ಡಿಂಗಿನೊಳಗೆ ಹೋಗಲು ಗೇಟು ತೆರೆದಳು. ನಾನು ಹೋಗಿ ಅವಳಿಗೆ ನನ್ನ ಕತೆಯನ್ನು ಹೇಳುವ ಪ್ರಯತ್ನ ಮಾಡಿದೆ. ಅವಳಿಗೆ ಅರ್ಥವಾಯಿತೋ ಬಿಟ್ಟಿತೋ ಗೊತ್ತಿಲ್ಲ. ಆದರೆ ಬಿಲ್ಡಿಂಗಿನ ಒಳಗೆ ಕರೆತಂದು ಬಿಟ್ಟಳು. ಅಂತೂ ರಸ್ತೆಯಿಂದ ಕಂಪೌಂಡಿನೊಳಗೆ ಬಂದಿದ್ದೆ. ಅವಳೂ ತಡಮಾಡದೇ ಅಲ್ಪ ಸ್ವಲ್ಪ ಇಂಗ್ಲಿಷ್ ಗೊತ್ತಿರುವ ವಠಾರದೊಳಗಿರುವ ಇನ್ನೊಂದು ಮನೆಯ ದಂಪತಿಯನ್ನು ಕರೆತಂದಳು. ಅವರಿಗೂ ನನ್ನ ಕತೆಯನ್ನು ಮತ್ತೆ ಹೇಳಿದೆ. ಜೆ ಸ್ವಿ ಡಿಸೋಲೆ… ಸಾರಿ ಅನ್ನುತ್ತಲೇ ನನ್ನ ಪರಿಸ್ಥಿತಿಗೆ ಮರುಗಿದರು. ಪುಣ್ಯಕ್ಕೆ ಈ ಸಲ ಆ ಮನುಷ್ಯನಿಗೆ ಸ್ವಲ್ಪ ಜಾಸ್ತಿ ಇಂಗ್ಲಿಷ್ ಗೊತ್ತಿತ್ತು.
ಅಷ್ಟೇ ಅಲ್ಲ, ಆ ದಂಪತಿಗಳಿಗೆ ನಾವು ಬುಕ್ ಮಾಡಿದ ಮನೆಯೊಡತಿಯ ಪರಿಚಯವಿತ್ತು ಮತ್ತು ಅವಳ ಫೋನ್ ನಂಬರೂ ಇತ್ತು. ಫೋನ್ ಮಾಡಿದರೆ ಅವಳು ಉತ್ತರಿಸುತ್ತಿಲ್ಲ. ಮತ್ತೆ ಮತ್ತೆ ಪ್ರಯತ್ನಿಸಿದ ಆ ದಂಪತಿ ಒಂದು ವಾಯ್ಸ್ ಮೆಸೇಜು ಕಳಿಸಿ, ನನ್ನೆಡೆಗೆ ಕರುಣೆಯ ದೃಷ್ಟಿ ಬೀರುತ್ತ ತಮ್ಮ ಮನೆ ಹೊಕ್ಕರು. ಪ್ರವಾಸಕಾಲದಲ್ಲಿ ಅಷ್ಟು ಸುಲಭವಾಗಿ ಸೋಲೊಪ್ಪದ ನಾನು ಅಸಲಿ ಪ್ಯಾರಿಸ್ಸಿನ ನೋಟವನ್ನು ಕಣ್ತುಂಬಿಸಿಕೊಳ್ಳುವ ಅವಕಾಶಕ್ಕೆ ಖುಷಿಯಾಗು ಮನವೇ ಎಂದು ಹುಮ್ಮಸ್ಸು ತಂದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಗಲೇ ಸುತ್ತಲ ಹೂಗಿಡಗಳಲ್ಲಿ ಅಡಗಿದ್ದ ಚಿಕ್ಕ ಚಿಕ್ಕ ಹುಳುಗಳು ನಮ್ಮ ಲಗೇಜಿನ ಮೇಲೆ, ನನ್ನ ಶೂಗಳ ಮೇಲೆ ಹರಿದಾಡುವುದು ಕಂಡಿತು. ನೋಡಲು ತಿಗಣೆಗಳ ಹಾಗಿದ್ದ ಆ ಹುಳುಗಳೇನಾದರೂ ಕಚ್ಚಿದರೆಂದು ಭಯವಾಗಿ ಅವನ್ನು ದೂರ ತಳ್ಳತೊಡಗಿದೆ. ಒಂದನ್ನು ತಳ್ಳಿದರೆ ಹನ್ನೊಂದಾಗಿ ಮತ್ತೆ ಬರುತ್ತಿದುದನ್ನು ನೋಡಿದ ನನಗೆ ಯಾವುದೋ ಚಿತ್ರ ವಿಚಿತ್ರ ಹಾಲಿವುಡ್ ಚಿತ್ರಗಳ ಸೀನುಗಳೆಲ್ಲ ನೆನಪಾಗತೊಡಗಿದವು. ಅಷ್ಟರಲ್ಲಿ ಒಂದು ಹುಳು ನನಗೆ ಕಚ್ಚಿಯೇ ಬಿಟ್ಟಿತು! ನನ್ನ ಭ್ರಮೆಯೋ ಅಂದುಕೊಳ್ಳುವಷ್ಟರಲ್ಲಿ ಆ ಜಾಗದಲ್ಲಿ ನವೆ ಬೇರೆ ಶುರುವಾಯಿತು. ಅಪರಿಚಿತ ದೇಶದಲ್ಲಿ, ಕಂಡರಿಯದ ಹುಳುಗಳಿಂದ ಕಚ್ಚಿಸಿಕೊಂಡು ಅನಾಮಧೇಯ ಪ್ರವಾಸಿಯೊಬ್ಬಳ ಮರಣವೆಂಬ ತಲೆಬರಹ ಓದುವಷ್ಟು ನಿಚ್ಚಳವಾಗಿ ನನಗೆ ಕಾಣತೊಡಗಿತು. ಇದ್ಯಾವ ಹುಳುಗಳಿರಬಹುದೆಂದು ‘ಇನ್ಸೆಕ್ಟ್ಸ್ ಇನ್ ಪ್ಯಾರಿಸ್’ ಎಂದು ಗೂಗಲಿಸಿ ನೋಡಿದರೆ ಓಲಿಂಪಿಕ್ಸ್ ಸಮಯದಲ್ಲಿ ಪ್ಯಾರಿಸ್ ತಿಗಣೆಗಳ ಕಾಟಕ್ಕೆ ತಿಣುಕಾಡುತ್ತಿದೆಯೆಂಬ ವಿಷಯವೇ ಎಲ್ಲೆಲ್ಲೂ ಕಂಡು ಮತ್ತಷ್ಟು ದಿಗ್ಭ್ರಾಂತಳಾದೆ.

ಗಂಡನಿಗೆ ಫೋನಾಯಿಸಿ ಕೀ ಬೇಗ ಸಿಗದಿದ್ದರೆ ನಿಮ್ಮಾ’ಕೀ’ಯೂ ಕೈಗೆ ಸಿಗುವುದು ಅನುಮಾನವೆಂದೆ. ಬ್ಯಾಗುಗಳನ್ನೂ ಸೇರಿಸಿ ನನ್ನ ಮೇಲೆ ಸಮರ ಸಾರಿದ್ದ ಹುಳುಗಳನ್ನು ಓಡಿಸುವ ಪ್ರಯತ್ನ ಮಾಡುತ್ತಾ ಮತ್ತಷ್ಟು ಹೊತ್ತು ಕಳೆಯಿತು.
ಈ ಮಧ್ಯೆ ಕಟ್ಟಡದಿಂದ ಹೋಗಿ ಬರುವ ನಾಲ್ಕಾರು ಜನರು ನನ್ನೆಡೆ ನೋಡಿ ನಿಂತು ಕೆಸ್ ಕೀ ಸೆಪಾಸೇ…ಏನಾಯ್ತು…ಎಂದು ವಿಚಾರಿಸಿಕೊಂಡು ಅಯ್ಯೋ ಎಂದು ನಾನಾ ಮುಖಭಾವಗಳನ್ನು ಮಾಡಿ ಹೋಗುತ್ತಿದ್ದರು. ಮೊದಲು ಮಾತನಾಡಿದ ಆ ದಂಪತಿಗಳ ಮನೆ ನಾನು ನಿಂತಿದ್ದ ಜಾಗದ ಎದುರಿಗೇ ಇತ್ತು. ಕಿಟಕಿಯಲ್ಲೇ ನನ್ನ ಮೇಲೊಂದು ಕಣ್ಣಿಟ್ಟಿದ್ದರು ಅನ್ನಿಸುತ್ತೆ. ನನ್ನ ಪರದಾಟ ನೋಡಲಾಗದೇ ಮತ್ತೆ ಮೆಲ್ಲನೆ ಕಿಟಕಿ ತೆರೆದು ತಮ್ಮ ಫ್ರೆಂಚ್ ಗಾಂಭೀರ್ಯವನ್ನು ಬಿಟ್ಟು ನನ್ನನ್ನು ಮನೆಗೆ ಕರೆದರು! ಇದು ನಿಜ! ಇಡೀ ಯುರೋಪಿನಲ್ಲೇ ತಮ್ಮ ಸ್ನೇಹಪರವಲ್ಲದ ಸ್ವಭಾವಕ್ಕೆ ಖ್ಯಾತರಾದವರು ಈ ಫ್ರೆಂಚರು!
ಅರೆಬರೆ ಇಂಗ್ಲೀಷಿನಲ್ಲಿ ಗಂಡ ‘ನಮ್ಮಲ್ಲಿ ಒಂದು ಖಾಲಿ ರೂಮಿದೆ. ನಿಮಗೇನು ತೊಂದರೆಯಿಲ್ಲದಿದ್ದರೆ ಒಳಗೆ ಬಂದಿರಬಹುದು’ ಅಂದ. ಅವನ ಮಾತುಗಳು ಕಿವಿಗೆ ಇನ್ನಷ್ಟು ಇಂಪಾಗಿ ಕೇಳಿಸಿತು. ಫ್ರೆಂಚ್ ಜನರು ವಾಸಮಾಡುವ ಜಾಗದಲ್ಲಿರಬೇಕೆಂದಷ್ಟೇ ಬಯಸಿದ್ದೆ. ಆದರೆ ನೇರವಾಗಿ ಅವರ ಮನೆಯೊಳಗೆ ಹೋಗುವ ಅವಕಾಶಕ್ಕೆ ಖುಷಿಯಾಗಲೇ ಬೇಡವೇ ನನ್ನ ಸಂಚಾರಿ ಭಾವಲಹರಿಯ ಮನಸ್ಸು ಕ್ಷಣಕಾಲ ತರ್ಕಿಸಿತು. ಕೊನೆಗೆ ಬೇಡವೆಂದು ನಿರ್ಧರಿಸಿತು. ಅದಾಗಲೇ ಹುಳುಗಳಿಗೆ ಹೆದರಿದ್ದ ಹೆಜ್ಜೆಗಳು ಕೇಳಬೇಕಲ್ಲ. ಒಂದು ಗಂಟೆಯ ಹಿಂದಷ್ಟೇ ನೋಡಿದ ದಂಪತಿಗಳ ಮನೆಯತ್ತ ಏನು ಎತ್ತ ನೋಡದೇ ಹೊರಟೇ ಬಿಟ್ಟವು.
ಆದರೆ ಹುಳುಗಳ ಹಳುವಿನಲ್ಲಿ ಲಗೇಜನ್ನು ಬಿಡಲು ಮನಸ್ಸಾಗದೇ ಅವರಿಗೆ ಅದರ ಕುರಿತು ಹೇಳಿದೆ. ಅವರು ಈ ಸಮಯದಲ್ಲಿ ಗಿಡಗಳಿಗೆ ಈ ಹುಳಗಳು ಬರುವುದು ಸಾಮಾನ್ಯ. ಅವು ತಿಗಣೆಗಳಲ್ಲವೆಂಬ ಭರವಸೆ ನೀಡಿ ನನ್ನನ್ನು ಒಳಗೆ ಕರೆದೊಯ್ದರು. ಅವರ ಮನೆಯ ಬಾಗಿಲ ಬಳಿಯೇ ನಮ್ಮ ಸೂಟ್ ಕೇಸುಗಳನ್ನು ತಂದಿಟ್ಟರು.
ಮನೆಯೊಳಗೆ ಮಂದವಾದ ಬೆಳಕಿತ್ತು. ನನ್ನ ದಯನೀಯ ಸ್ಥಿತಿಯನ್ನು ಮರೆತು ಸುತ್ತಲೂ ನಿರುಕಿಸಿದೆ. ಅದೊಂದು ಚಿಕ್ಕದಾದ ಅಪ್ಪಟ ಫ್ರೆಂಚ್ ಶೈಲಿಯ ಕಾಟೇಜಿನಂತೆ ಕಂಡಿತು. ಮರದ ಕಂಬಗಳನ್ನು ಕೀಲಿಸಿಕೊಂಡ ಛಾವಣಿ, ಒರಟು ಕಲ್ಲುಗಳ ಬಿಳಿಯ ಗೋಡೆಗಳು, ಅಲ್ಲಲ್ಲಿ ಕಾಣುವ ಬೆತ್ತದ ಬುಟ್ಟಿಗಳು, ಲೇಸಿನ ಪರದೆಗಳು, ಗೋಡೆಗೆ ತಗುಲಿ ಹಾಕಿದ ಚೀನಿ ಮಣ್ಣಿನ ತಟ್ಟೆಗಳು ಎಲ್ಲವೂ ದೇಸಿ ಸೊಗಡು ಸೂಸುತ್ತಿತ್ತು. ಅಲಮಾರಿಯೊಂದರಲ್ಲಿ ಪಿಂಗಾಣಿ ಪಾತ್ರೆಗಳು ಮತ್ತು ವೈನಿನ ಬಾಟಲಿಗಳ ಕಲಾತ್ಮಕವಾಗಿ ಜೋಡಿಸಿದ್ದರು. ಅಲ್ಲೇ ಮೂಲೆಯಲ್ಲಿ ಒಂದಡಿಯಷ್ಟೇ ಅಗಲದ ಅಡುಗೆ ಮನೆ, ಅಡುಗೆ ಮಾಡಿದ ಕುರುಹೂ ಇಲ್ಲದೇ ಸ್ವಚ್ಛವಾಗಿ ಹೊಳೆಯುತ್ತಿತ್ತು. ಫ್ರೆಂಚರು ಅದರಲ್ಲೂ ಪ್ಯಾರಿಸ್ಸಿನವರು ಮನೆಗಿಂತ ಹೊರಗೇ ಜಾಸ್ತಿ ಸಮಯ ಕಳೆಯುವವರೆಂದು ಗೊತ್ತಿದ್ದರಿಂದ ಅದೇನೂ ಆಶ್ಚರ್ಯವೆನಿಸಲಿಲ್ಲ. ಸಂಪೂರ್ಣ ಅಪರಿಚಿತಳಾದ ನನ್ನನ್ನು ಕೂರಿಸಿ, ಮಾತನಾಡಿಸಿ, ಆತ್ಮೀಯತೆ ತೋರಿದ ಆ ದಂಪತಿಗಳ ಅಂತಃಕರಣಕ್ಕೆ ಇಂದಿಗೂ ತಲೆ ಬಾಗುತ್ತದೆ. ಎಲ್ಲಿಯ ಮೈಸೂರು? ಎಲ್ಲಿಯ ಪ್ಯಾರಿಸ್ಸು?
ಇಂಥ ಅನಿರೀಕ್ಷಿತ ಘಟನೆಗಳು, ಅವಘಡಗಳು ಪ್ರವಾಸವನ್ನು ಅಹಿತಕರಗೊಳಿಸುವ ಹುನ್ನಾರದಲ್ಲಿರುವಾಗಲೇ ಸಿಹಿಯಾದ ಅಚ್ಚರಿಗಳೂ ನಡೆದುಬಿಡುತ್ತವೆ. ಮನುಷ್ಯಜಾತಿ ತಾನೊಂದೆ ವಲಂ ಅನಿಸಿಬಿಡುತ್ತದೆ.
ಸುಮಾರು ಒಂದು ಗಂಟೆಯ ಮೇಲೆ, ಮನೆಯೊಡತಿಯ ಜೊತೆ ಕಡೆಗೂ ಸಂಪರ್ಕ ಬೆಳೆಸುವಲ್ಲಿ ಯಶಸ್ವಿಯಾಗಿ ಕೀಯೊಂದಿಗೆ ಬಂದ ನಮ್ಮವರು ಆತಂಕದ ಮೂಟೆಯಾಗಿದ್ದರು. ನಾನು ಆರಾಮಾಗಿ ಕುಳಿತು ಹರಟುತ್ತಿದುದನ್ನು ನೋಡಿ ನಿರಾಳವಾದರು. ದಂಪತಿಗೆ ನಮ್ಮವರನ್ನು ಪರಿಚಯಿಸಿದೆ. ಮನೆಯ ಕೀಲಿ ಹೇಗೆ ಸಿಕ್ಕಿತೆಂದು ಅರಿಯಲು ಅವರಿಬ್ಬರೂ ಕುತೂಹಲಿಗಳಾಗಿದ್ದರು. ನಮಗಿಂತ ಮೊದಲು ಮನೆಯಲ್ಲಿದ್ದವರು ತಪ್ಪು ಲಾಕರಿನಲ್ಲಿ ಕೀಯನ್ನಿಟ್ಟು ಹೋಗಿದ್ದುದೇ ಈ ಅವಘಡಕ್ಕೆ ಕಾರಣವಾಗಿತ್ತು. ಕೊನೆಗೊಮ್ಮೆ ಮನೆಯೊಡತಿ ಸಂದೇಶಗಳನ್ನು ನೋಡಿ, ಹಿಂದೆ ಇದ್ದವರನ್ನು ವಿಚಾರಿಸಿ, ಡ್ಯಾಮೇಜ್ ಕಂಟ್ರೋಲ್ ಮಾಡಿದ್ದಳು.
ಅವರಿಗೆ ಮನಸಾರೆ ವಂದಿಸಿ ನಮ್ಮ ಮನೆಗೆ ಬಂದು ನೋಡಿದರೆ ಒಳಗೇನೂ ಹುಳುಗಳಿರಲಿಲ್ಲ. ಆದರೆ ಇನ್ನೊಂದು ಅಚ್ಚರಿ ಕಾದಿತ್ತು! ಅಂತರ್ಜಾಲದ ಪುಟದಲ್ಲಿ ವಿಶಾಲವಾಗಿ ಕಂಡ ‘ಮನೆ’ ಇಲ್ಲಿ ಬಾರ್ಬಿಯ ಮನೆಯಂತೆ ಕಂಡಿತು. ಪ್ಯಾರಿಸ್ಸಿನಲ್ಲಿ ತೀವ್ರವಾದ ಸ್ಥಳಾಭಾವದ ಕಾರಣ ಇರುವ ಪುಟಾಣಿ ಮನೆಗಳು, ಅಪಾರ್ಟ್ಮೆಂಟುಗಳ ಬಗ್ಗೆ ಕೇಳಿದ್ದೆ. ಈಗ ಸಾಕ್ಷಾತ್ ದರ್ಶನವಾಯಿತು! ಅದಕ್ಕಿಂತಲೂ ಆಶ್ಚರ್ಯವೆನಿಸಿದ್ದು ಅಂಗೈ ಅಗಲದ ರೂಮಿನಲ್ಲಿ ಸಕಲ ಸರಂಜಾಮುಗಳನ್ನು ಜೋಡಿಸಿಟ್ಟ ರೀತಿ!
ಮನೆಯ ಬಾಗಿಲು ತೆಗೆದ ಕೂಡಲೇ ಅಡುಗೆ ಮನೆಯ ಕಟ್ಟೆ, ಕಟ್ಟೆಯ ಮೇಲೊಂದು ಚಿಕ್ಕ ಫ್ರಿಜ್ಜು, ಫ್ರಿಡ್ಜಿನ ಮೇಲೆ ಮಸಾಲೆ ಪದಾರ್ಥಗಳು, ಸಾಸುಗಳು, ಕೆಳಗಿನ ಡ್ರಾವರಿನಲ್ಲಿ ಕೆಲವು ಪಾತ್ರೆಗಳು, ಕಟ್ಲೆರಿ, ಕಪ್ಪುಗಳು, ಗ್ಲಾಸುಗಳಿದ್ದವು. ಕಾಫಿ, ಚಹಾದ ಜೊತೆಗೆ ಕೆಟಲ್ಲೂ ಇತ್ತು. ಟೀಕಪ್ಪುಗಳು, ಕಾಫಿ ಮಗ್ಗುಗಳು, ನೀರಿಗೆ, ವೈನಿಗೆ ಅಂತೆಲ್ಲ ಗ್ಲಾಸುಗಳು, ಇಲೆಕ್ಟ್ರಿಕ್ ಒಲೆಯ ಕೆಳಗೆ ಡಿಶ್ ವಾಶರು, ಸಿಂಕಿನ ಕೆಳಗೊಂದು ಪುಟ್ಟ ವಾಷಿಂಗ್ ಮಷಿನ್ನು, ಮಡಿಚಿದರೆ ಸೋಫಾ, ಬಿಚ್ಚಿದರೆ ಮಂಚವಾಗುವ ಬೆಡ್ರೂಮು, ಒಬ್ಬರು ಕಷ್ಟದಿಂದ ಹಿಡಿಸುವಷ್ಟು ದೊಡ್ಡದ ಸ್ನಾನದ ಮನೆ ಮತ್ತು ಶೌಚಾಲಯ. ಒಂದು ಬದಿಯ ಗೋಡೆಗಳಿಗೆ ಹಲಗೆಗಳನ್ನು ಜೋಡಿಸಿ ಕಪಾಟಿನಂತಾಗಿಸಿದ್ದರು. ಮೂಲೆಯಲ್ಲಿ ಒಂದು ಚಿಕ್ಕ ವಾರ್ಡರೋಬು, ಅಲ್ಲಿ ಹಾಸುವ ಮತ್ತು ಹೊದೆಯುವ ಬಟ್ಟೆಗಳು, ಬಾತ್ ರೋಬು, ಹೇರ್ ಡ್ರೈಯರ್, ಇಸ್ತ್ರಿ ಪೆಟ್ಟಿಗೆ, ಓದಲು ಪುಸ್ತಕಗಳು, ಬಟ್ಟೆ ಒಣಹಾಕಲು ಸ್ಟ್ಯಾಂಡು, ಚಪ್ಪಲಿಗಳು, ಕೊಡೆ, ಕೋಟುಗಳನ್ನು ನೇತು ಹಾಕುವ ಹುಕ್ಕುಗಳು…ಅವರು ಕೊಟ್ಟಿದ್ದ ವಿವರಣೆಯಲ್ಲಿದ್ದ ಎಲ್ಲ ಸೌಲಭ್ಯಗಳೂ ಚಾಚೂ ತಪ್ಪದೇ ಮನೆಯಲ್ಲಿತ್ತು ನಿಜ. ಆದರೆ ಯಾವುದನ್ನು ಕದಲಿಸಿದರೂ ತಕ್ಷಣ ಮತ್ತೆ ಅದೇ ಜಾಗದಲ್ಲಿ ಇಡಲೇಬೇಕಾದ ಅನಿವಾರ್ಯತೆಯ ಕುರಿತು ಮಾತ್ರ ಹೇಳಿರಲೇ ಇಲ್ಲ. ಒಳಗೆ ನಾವಿಬ್ಬರೂ ಬಿಡುಬೀಸಾಗಿ ಓಡಾಡಲಾಗದೇ ಮೈ ಸವರಿಕೊಂಡೇ ಹೋಗಬೇಕಾದಾಗ ಅವರು ಕೊಟ್ಟಿದ್ದ ‘ರೋಮ್ಯಾಂಟಿಕ್ ಭಾವನೆಗಳನ್ನು ಮೂಡಿಸುವ ಪೆರಿಶಿಯನ್ ಹೋಮ್’ ಅನ್ನುವ ವರ್ಣನೆಯೂ ನಿಜವೇ ಅನಿಸಿತು. ಅಷ್ಟು ಚಿಕ್ಕ ಜಾಗವನ್ನು ಅಷ್ಟೊಂದು ಸುಸಜ್ಜಿತವಾಗಿ ಮತ್ತು ಕಲಾತ್ಮಕವಾಗಿ ಸಿಂಗರಿಸಿದ ರೀತಿಗೆ ಮರುಳಾಗಿ, ಪಟ್ಟ ಪಾಡನ್ನೆಲ್ಲ ಮರೆತು ಪತಂಗದಂತೆ ಮತ್ತೆ ಪ್ಯಾರಿಸ್ಸೆಂಬ ಉರಿಯುವ ದೀಪದ ಸುತ್ತ ಹಾರತೊಡಗಿದೆವು.