ಅಂಡಮಾನ್ ನಲ್ಲಿ ಏಳರಾಟ!
3 ತಾಸಿನ ಕಾಯುವಿಕೆಯ ನಂತರ ನಮ್ಮ ಇಂದಿನ ವಿಮಾನ ರದ್ದಾಗಿದೆಯೆಂದೂ, ಮರುದಿನ ಅದೇ ಸಮಯಕ್ಕೆ ಕಳಿಸುತ್ತೇವೆಂದೂ ನಿಲ್ದಾಣದ ಅಧಿಕಾರಿಗಳು ಅನೌನ್ಸ್ ಮಾಡಿದರು. ನಮಗಾದ ತೊಂದರೆಗೆ ಜವಾಬ್ದಾರಿ ತೆಗೆದುಕೊಳ್ಳಲೇ ಇಲ್ಲ. ನಮ್ಮ ಜನಗಳು ವಿಮಾನ ನಿಲ್ದಾಣದಲ್ಲಿ ಕಾಲ್ತುಳಿತ ಆಗುವುದೊಂದು ಬಾಕಿ ಎಂಬಂತೆ ನುಗ್ಗತೊಡಗಿದರು.
- ಮೇಘಾ ಭಟ್
ನಾವು 2023 ರ ಅಕ್ಟೋಬರ್ ನಲ್ಲಿ ಅಂಡಮಾನ್ ಪ್ರವಾಸ ಹೋಗಿದ್ದೆವು. 6 ರಾತ್ರಿ ಮತ್ತು 7 ದಿನದ ಪ್ರವಾಸದಲ್ಲಿ, ಸಾಧ್ಯವಾದಷ್ಟು ಬೀಚ್ ಗಳನ್ನು ನೋಡುವುದು, ಆದಷ್ಟು ವಾಟರ್ ಗೇಮ್ ಗಳನ್ನು ಆಡುವುದು ನಮ್ಮ ಯೋಜನೆಯಾಗಿತ್ತು. ಎಲ್ಲವೂ ನಾವಂದುಕೊಂಡಂತೆ ನಡೆದು ಪ್ಲಾನ್ ಪ್ರಕಾರ ಇದೆ ಎಂದು ಖಚಿತಪಡಿಸಿ ಕೊಳ್ಳುತ್ತ ಖುಶಿಯಲ್ಲೇ 6 ದಿನ ಕಳೆದಿದ್ದೆವು.
ಅಂದು ಪ್ರವಾಸದ 7 ನೆಯ ಮತ್ತು ಕೊನೆಯ ದಿನ. ಸುಮಾರು 12 ಗಂಟೆಗೆ ನಿಗದಿತ ಸಮಯಕ್ಕಿಂತ ಸುಮಾರು 2 ತಾಸು ಮೊದಲೇ ವಿಮಾನ ನಿಲ್ದಾಣಕ್ಕೆ ಹೋದೆವು. ಹೊರಡುವಾಗಲೇ ಸಣ್ಣ ಮಳೆ ಶುರುವಾಗಿತ್ತು. ಸಮಯ ಕಳೆದಂತೆ ಮಳೆಯ ರಭಸವೂ ಹೆಚ್ಚಾಗುತ್ತಾ ಬಂತು. ಮಳೆಯ ಜೊತೆ ವಿಪರೀತ ಗಾಳಿ, ಏನೂ ಕಾಣದಷ್ಟು ಮಂಜು ಕೂಡಾ ಮುಸುಕಿತ್ತು.

3 ತಾಸಿನ ಕಾಯುವಿಕೆಯ ನಂತರ ನಮ್ಮ ಇಂದಿನ ವಿಮಾನ ರದ್ದಾಗಿದೆಯೆಂದೂ, ಮರುದಿನ ಅದೇ ಸಮಯಕ್ಕೆ ಕಳಿಸುತ್ತೇವೆಂದೂ ನಿಲ್ದಾಣದ ಅಧಿಕಾರಿಗಳು ಅನೌನ್ಸ್ ಮಾಡಿದರು. ನಮಗಾದ ತೊಂದರೆಗೆ ಜವಾಬ್ದಾರಿ ತೆಗೆದುಕೊಳ್ಳಲೇ ಇಲ್ಲ. ನಮ್ಮ ಜನಗಳು ವಿಮಾನ ನಿಲ್ದಾಣದಲ್ಲಿ ಕಾಲ್ತುಳಿತ ಆಗುವುದೊಂದು ಬಾಕಿ ಎಂಬಂತೆ ನುಗ್ಗತೊಡಗಿದರು. ಎಲ್ಲಾ ಸ್ವಲ್ಪ ಶಾಂತವಾಗುವ ತನಕ, ನಮ್ಮ ವಿದ್ಯಾವಂತ ಭಾರತೀಯರ ಧಾವಂತ, ಸಾಮಾಜಿಕ ನಡವಳಿಕೆಗಳನ್ನು ನೋಡುತ್ತಾ ಒಂದು ಮೂಲೆಯಲ್ಲಿ ನಾವೂ ಕಾದೆವು. ಕೊನೆಗೆ ಮರುದಿನದ ಪ್ರಯಾಣಕ್ಕೆ ಟಿಕೆಟ್ ಪಡೆದು ಹೊರಟೆವು. ಇಷ್ಟೆಲ್ಲಾ ಪಡಿಪಾಟಲಿನ ನಡುವೆ ಖುಷಿಯಿಂದ ಇದ್ದಿದ್ದು ನನ್ನ ಮಗಳು ಮಾತ್ರ. ಒಂದು ದಿನ ಜಾಸ್ತಿ ಉಳಿಯಬಹುದು ಎಂದು.
ಇದರಲ್ಲಿ ಇನ್ನೊಂದು ಸಮಸ್ಯೆಯಾಗಿದ್ದು ಎಂದರೆ, ನಮ್ಮ ವಿಮಾನ ಚೆನ್ನೈ ಗೆ ಬುಕ್ ಆಗಿತ್ತು. ಅಲ್ಲಿಂದ ಬೆಂಗಳೂರಿಗೆ ರೈಲು ಟಿಕೆಟ್ ಬುಕ್ ಮಾಡಿಸಿದ್ದೆವು. ಈಗ ವಿಮಾನ ಒಂದು ದಿನ ವಿಳಂಬ ಆಗಿದ್ದರಿಂದ ಬಸ್ಸು ಅಥವಾ ಬೇರೆ ವ್ಯವಸ್ಥೆ ಮಾಡಿಕೊಳ್ಳುವುದು ಸಹ ಅನಿವಾರ್ಯವಾಗಿತ್ತು. ಇದೆಲ್ಲ ತಲೆಬಿಸಿಗಳ ಮಧ್ಯೆ ಮರುದಿನ ಸ್ವಲ್ಪ ಬೇಗನೆ ವಿಮಾನ ನಿಲ್ದಾಣಕ್ಕೆ ಬಂದೆವು. ಬೋರ್ಡಿಂಗ್ ಪಾಸ್ ಪಡೆಯಲು ಕೌಂಟರಿಗೆ ಹೋಗುವಾಗ ಕೂಡಾ ಕಮ್ಮಿ ಜನರಿದ್ದರು. ನನ್ನ ಯಜಮಾನರು ನಾವು ವಾಸ್ತವ ತಿಳಿಸಿ, ನಮಗೆ ಸೀದಾ ಬೆಂಗಳೂರಿನ ವಿಮಾನ ಸಿಗಬಹುದೇ ಎಂದು ವಿಚಾರಿಸಿದರು. ಅದು ಯಾವ ದೇವರನ್ನು ನೋಡಿ ಎದ್ದಿದ್ದೆವೋ ಏನೋ, ನಮಗೆ ಬೆಂಗಳೂರಿನ ವಿಮಾನಕ್ಕೆ ಸೀಟು ಕೊಟ್ಟರು. ನಮ್ಮ ಅಷ್ಟೂ ಫಜೀತಿ ಆತಂಕ ಒಂದೇ ಕ್ಷಣದಲ್ಲಿ ಮಾಯವಾಯಿತು. ಇಲ್ಲದಿದ್ದರೆ ಚೆನ್ನೈ ಹೋಗಿ, ಮಗಳು ಮತ್ತು ಲಗೇಜ್ ಗಳನ್ನು ಸಂಭಾಳಿಸಿ ಇನ್ನೆಷ್ಟು ಫಜೀತಿ ಆಗುತ್ತಿತ್ತೋ ಗೊತ್ತಿಲ್ಲ.