ಒನಕೆ ಓಬವ್ವನ ಊರಲ್ಲಿ 1k ಪ್ರಾಬ್ಲಮ್!
ಹಸಿವು ಅಂದ್ರೆ ಏನು ಅನ್ನೋದು ಅವತ್ತು ನಮಗೆ ಗೊತ್ತಾಯ್ತು. ಹೊಟೇಲ್ ಮಾಲೀಕನಿಗೆ “ಅನ್ನದಾತ ಸುಖೀಭವ” ಎಂದು ಮನಸ್ಸಿನಲ್ಲಿ ಹಾರೈಸಿ ಬಂದೆವು. ಆವತ್ತಿಂದ ಇವತ್ತಿನವರೆಗೂ ಕೈಯಲ್ಲಿ ಕ್ಯಾಶ್ ಇರದ ಹೊರತೂ ಎಲ್ಲಿಗೂ ಹೋಗೋದಿಲ್ಲ.
- ವೀಣಾ ವೀರೇಂದ್ರ ದೇಸಾಯಿ
ಸುಮಾರು ಮೂರು ವರ್ಷದ ಕೆಳಗೆ ನಾವು ಚಿತ್ರದುರ್ಗ ನೋಡೋಕೆ ಹೋಗೋದು ಅಂತ ಪ್ಲಾನ್ ಮಾಡಿದ್ವಿ. ಚಿತ್ರದುರ್ಗದಲ್ಲಿರುವ ನಮ್ಮ ಫ್ರೆಂಡ್ಸ್ ಗೆ ಫೋನ್ ಮಾಡಿ ರಾತ್ರಿ ಬಂದು ನಿಮ್ಮ ಮನೆಯಲ್ಲಿ ಉಳಿದು, ಬೆಳಗ್ಗೆ ಚಿತ್ರದುರ್ಗ ರೌಂಡ್ಸ್ ಹಾಕ್ತೀವಿ ಅಂತ ಹೇಳಿದ್ವಿ. ಅವರು ಆಗಲಿ ಅಂದರು. ನಾವು ಮೊದಲ ಬಾರಿಗೆ ಚಿತ್ರದುರ್ಗ ನೋಡೋಕೆ ಹೋಗಿದ್ದು. ಆದ್ದರಿಂದ ನಮಗೆ ಅಲ್ಲಿ ಹೆಚ್ಚಿನ ಮಾಹಿತಿ ಏನೂ ಇರಲಿಲ್ಲ. ನಮ್ಮ ಫ್ರೆಂಡ್ ಬೆಳಿಗ್ಗೆ ಆರು ಗಂಟೆಗೆ ಎದ್ದು, ಮೊದಲು ಮದಕರಿನಾಯಕನಾಳಿದ ಕಲ್ಲಿನ ಕೋಟೆ ನೋಡೋದಕ್ಕೆ ಹೋಗೋಣ, ನಾವೂ ಕೂಡ ನಿಮ್ಮ ಜೊತೆ ಬರುತ್ತೇವೆ ಅಂದ್ರು. ನಮಗೂ ಖುಷಿ ಆಯ್ತು. ರಾತ್ರಿ ಬೇಗ ಊಟ ಮಾಡಿ ಹರಟೆ ಹೊಡೆಯುತ್ತಾ ಹಾಗೆ ಮಲಗಿದ್ವಿ.
ಬೆಳಿಗ್ಗೆ ಬೇಗ ಎದ್ದು, ಸ್ನಾನ ಮಾಡಿ, ಕೋಟೆ ದಾರಿ ಹಿಡಿದೆವು. ಕೋಟೆ ಹತ್ತಿ, ಎಲ್ಲಾ ನೋಡಿಕೊಂಡು, ಫೊಟೋ ಕ್ಲಿಕ್ಕಿಸಿಕೊಂಡು ಬರೋ ಅಷ್ಟರಲ್ಲಿ ಸುಮಾರು ಹನ್ನೊಂದು ಗಂಟೆ ಆಗಿತ್ತು. ನಂತರ ಅಲ್ಲೇ ಹತ್ತಿರ ಇರೋ ಹೊಟೇಲ್ ಗೆ ಹೋಗಿ ಒಂದೊಂದು ಮಸಾಲ ದೋಸೆ ತಂದ್ವಿ. ಅಲ್ಲಿ ನಮ್ಮ ಫ್ರೆಂಡ್ ನಮಗೆ ಬಿಲ್ ಕೊಡೋದಕ್ಕೆ ಬಿಡಲಿಲ್ಲ. ಅವರೇ ಉಪಾಹಾರದ ಬಿಲ್ ಕೊಟ್ಟರು.

ನಂತರ ಅಲ್ಲಿಂದ ಮುರುಘರಾಜೇಂದ್ರ ಪಾರ್ಕ್ ನೋಡೋಕೆ ನೀವೇ ಹೋಗಿ. ನಮಗೆ ಇರೋದೊಂದು ಭಾನುವಾರ ರೆಸ್ಟ್ ಮಾಡ್ತೀವಿ ಅಂದ್ರು. ಸರಿ ಅಂತ ಹೇಳಿ ನಾವು ಮುರುಘಾ ಮಠದ ಪಾರ್ಕ್ ದಾರಿ ಹಿಡಿದ್ವಿ. ಪಾರ್ಕ್ ತುಂಬ ದೊಡ್ಡದಿತ್ತು. ಸುಮಾರು ನಾಲ್ಕು ಗಂಟೆವರೆಗೂ ಎಲ್ಲಾ ಸುತ್ತಾಡಿದ್ವಿ. ಮೊದಲೇ ಬೆಟ್ಟ ಹತ್ತಿ ಸ್ವಲ್ಪ ಸುಸ್ತಾಗಿತ್ತು. ಈಗ ಹೊಟ್ಟೆ ಹಸಿಯೋಕೆ ಶುರು ಆಯ್ತು. ಒಳಗಡೆ ಯಾವುದೇ ಹೊಟೇಲ್ ಇರಲಿಲ್ಲ. ಆದರೆ ಒಂದು ಚಿಕ್ಕ ಅಂಗಡಿ ಇತ್ತು. ಬಿಸ್ಕೆಟ್, ಚಾಕೋಲೇಟ್, ಕುರುಕುರೆ, ಪಿಜ್ಜಾ ಮಾತ್ರ ಇತ್ತು. ಸರಿ, ನಮಗೇ ಬೇಕಾದ್ದನ್ನು ಆರ್ಡರ್ ಮಾಡಿದ್ವಿ. ಅಂಗಡಿಯಾತ ಎಲ್ಲಾ ಕವರ್‌ಗೆ ಹಾಕಿ ಕೊಟ್ರು. ಗೂಗಲ್ ಪೇ ಮಾಡೋಕೆ ಹೋದ್ರೆ, ಇಲ್ಲಿ ಗೂಗಲ್ ಪೇ, ಫೋನ್ ಪೇ ಯಾವುದೂ ಇಲ್ಲ, ಕೇವಲ ನಗದು ಮಾತ್ರ ತಗೋತೀವಿ ಅಂದ್ರು ಅಂಗಡಿ ಮಾಲೀಕರು. ನಮ್ಮ ಹತ್ತಿರ ಹತ್ತು ರುಪಾಯಿ ಕ್ಯಾಶ್ ಕೂಡ ಇಟ್ಟುಕೊಂಡಿರಲಿಲ್ಲ. ಯಾಕಂದ್ರೆ ನಮ್ಮ ಬೆಂಗಳೂರಿನಲ್ಲಿ ಎಲ್ಲದಕ್ಕೂ ಗೂಗಲ್ ಪೇನೇ ಮಾಡ್ತಾ ಇದ್ವಿ.
ಅಂಗಡಿ ಮಾಲೀಕನ ಹತ್ತಿರ ತುಂಬಾ ರಿಕ್ವೆಸ್ಟ್ ಮಾಡ್ಕೊಂಡ್ವಿ. ಆದರೆ ಆತ ಒಪ್ಪಲೇ ಇಲ್ಲ. ಸ್ಕ್ಯಾನರ್ ಇಲ್ಲ ಅಂದ್ರೆ ನಿಮ್ ಮೊಬೈಲ್ ಸಂಖ್ಯೆ ಹೇಳಿ ಅಮೌಂಟ್ ಕೊಡ್ತೀವಿ ಅಂದ್ರೂ ಆತ ಒಪ್ಪಲೇ ಇಲ್ಲ. ಕೊನೆಗೆ ವಿಧಿಯಿಲ್ಲದೇ ಪಾರ್ಕ್ ನಿಂದ ಆಚೆ ಬಂದು ಹತ್ತಿರದ ಹೊಟೇಲ್ ಗೆ ಹೋಗಿ, ಮೊದಲೇ ಕೇಳಿದ್ವಿ ಫೋನ್ ಪೇ ಇದೆಯಾ ಅಂತ. ಅವರು ಹೂಂ ಅಂದ ಮೇಲೆ ಊಟ ಆರ್ಡರ್ ಮಾಡಿ, ಯಾವತ್ತೂ ಊಟ ಕಂಡಿಲ್ಲ ಅನ್ನೋ ಹಾಗೆ ಹೊಟ್ಟೆ ತುಂಬಾ ಊಟ ಮಾಡಿದ್ವಿ. ಹಸಿವು ಅಂದ್ರೆ ಏನು ಅನ್ನೋದು ಅವತ್ತು ನಮಗೆ ಗೊತ್ತಾಯ್ತು ಅಂದ್ರೂ ತಪ್ಪಿಲ್ಲ. ಹೊಟೇಲ್ ಮಾಲೀಕನಿಗೆ “ಅನ್ನದಾತ ಸುಖೀಭವ” ಎಂದು ಮನಸ್ಸಿನಲ್ಲಿ ಹಾರೈಸಿ ಬಂದೆವು. ಆವತ್ತಿಂದ ಇವತ್ತಿನವರೆಗೂ ಕೈಯಲ್ಲಿ ಕ್ಯಾಶ್ ಇರದ ಹೊರತೂ ಎಲ್ಲಿಗೂ ಹೋಗೋದಿಲ್ಲ.