ಕಾಂಗರೂನಾಡಿನಲ್ಲಿ ಏಲಕ್ಕಿ ಬೀಜದ ಅನ್ ಲಕ್ಕಿ ಕಥೆ !
ಕಳೆದ ತಿಂಗಳು ವಾರಾಣಸಿಗೆ ಹೋದಾಗ, ಸಾಯಂಕಾಲದ ಸಪ್ತಋಷಿ ಆರತಿಯ ವೇಳೆ, ಅರ್ಚಕರು ಕೊಟ್ಟ ವಿಶೇಷ ಪ್ರಸಾದ ಬ್ಯಾಗಿನಲ್ಲೇ ಉಳಿದಿತ್ತು. ಹೂವು ನಮ್ಮ ಜೀವನದ ಅವಿಭಾಜ್ಯ ಅಂಗ. ಅದು ದೇವರನ್ನು ಸ್ಪರ್ಶಿಸಿ ಬರುತ್ತವೆ. ಆದ್ದರಿಂದ ಅವು ನಮಗೆ ಅಮೂಲ್ಯ ಅಂದೆ. ಲ್ಯಾಪ್ಟ್ ಟಾಪ್ ಮತ್ತು ವ್ಯಾನಿಟಿ ಬ್ಯಾಗ್, ಪ್ರತಿನಿತ್ಯ ಆಫೀಸ್ ಗೆ ತೆಗೆದುಕೊಂಡು ಹೋಗುತ್ತೇನೆ. ದೇವರ ಪ್ರಸಾದ ಬ್ಯಾಗಿನಲ್ಲೇ ಇಟ್ಟರೆ, ಪಾಸಿಟಿವ್ ಎನರ್ಜಿ ಬರುತ್ತೆ ಅಂದೆ. ಎಂಥಾ ಮೂರ್ಖಳಪ್ಪಾ ಇವಳು ಎಂಬಂತೆ ಆಕೆ ಮತ್ತೊಮ್ಮೆ ಮುಖ ನೋಡಿದಳು!
- ಲೀನಾ ಜೋಶಿ
ಏರ್ ಪೋರ್ಟ್ ನಲ್ಲಿ ನಾಯಿ "ಛೂ" ಬಿಡ್ತಾರಂತೆ, ಬಟ್ಟೆ ಪೂರಾ ಬಿಚ್ಚಿ ತಪಾಸಣೆ ನಡೆಸ್ತಾರಂತೆ, ಗಂಟೆಗಟ್ಟಲೆ ರೂಮ್ ನಲ್ಲಿ ಕೂಡಿ ಹಾಕಿ ವಿಚಾರಣೆ ನಡೆಸ್ತಾರಂತೆ, ಕುಡಿಯಲು ನೀರು ಕೊಡದೇ, ತಿನ್ನಲು ಊಟವೂ ಕೊಡದೇ ಸತಾಯಿಸುತ್ತಾರಂತೆ, ಅಂತೆ ಕಂತೆ ಎಲ್ಲ ಕೇಳಿದ್ದೆ. ಕೆಲವೊಂದು ವಿಷಯ ಪತ್ರಿಕೆಯಲ್ಲಿ ಓದಿದ್ದು, ಟಿವಿಯಲ್ಲಿ ನೋಡಿದ್ದು, ಸಿನಿಮಾಗಳಲ್ಲಿ ನೋಡಿದ್ದ ಅನುಭವಷ್ಟೇ. ಹಾಗೆಲ್ಲ, ಅಷ್ಟು ತೀರಾ ಕಷ್ಟ ಕೊಡಲ್ಲ, ಬಹುಶಃ ಅತಿರೇಕ ಮಾಡ್ತಾರೆ ಅನಿಸತ್ತೆ ಎನ್ನುವ ಭಾವನೆ ಇತ್ತು. ಆದರೆ ಸ್ವಂತ ಅನುಭವ ಆದ್ಮೇಲೆ ಗೊತ್ತಾಯ್ತು, ಇದರಲ್ಲಿ ಕೆಲವೊಂದು ಪ್ರತಿಶತಃ ಸತ್ಯವೂ ಇರುತ್ತೆಂದು.
ನನಗೆ ತುಂಬಾ ದೇಶಗಳನ್ನು ಸುತ್ತಿದ ಅನುಭವವಿದೆ. ಪ್ರವಾಸಕ್ಕೆ ಹೊರಡುವ ಮುಂಚೆ, ಆಯಾ ದೇಶದ ಕಾನೂನಿನ ಅರಿವಿದೆ. ಸ್ವಲ್ಪ ಮಟ್ಟಿಗೆ ಪರಿಸ್ಥಿತಿಯನ್ನು ನಿಭಾಯಿಸುವದು ಹೇಗೆಂಬ ಸಾಮಾನ್ಯ ಜ್ಞಾನವೂ ಇದೆ ಅಂತ ಅತಿಯಾದ ಆತ್ಮವಿಶ್ವಾಸವಿತ್ತು. ಆದರೆ ಕೆಲವೊಮ್ಮೆ, "ಅತಿ" ಆದರೆ "ಅಪಾಯ" ಎಂಬುದು ಸಾಬೀತಾಯಿತು.
ಬೆಂಗಳೂರಿನಿಂದ ಸಿಂಗಾಪುರ್ ಮಾರ್ಗವಾಗಿ 12 ಗಂಟೆ ವಿಮಾನದಲ್ಲಿ, 4 ಗಂಟೆ ಸಿಂಗಾಪುರ್ ಏರ್ ಪೋರ್ಟ್ ನಲ್ಲಿ ಸುತ್ತಾಡಿ, ಆಸ್ಟ್ರೇಲಿಯಾದ ಬ್ರಿಸ್ಬೇನ್ ತಲುಪಿದಾಗ, ಸಾಯಂಕಾಲ ಏಳೂವರೆಯಾಗಿತ್ತು. ವಿಶೇಷತೆಯೆಂದರೆ ಬ್ರಿಸ್ಬೇನ್ ಏರ್ ಪೋರ್ಟ್ ನಲ್ಲಿ ಒಳ ಬರುವ ವೀಸಾ ಮುದ್ರೆ ಬೀಳಲಿಲ್ಲ. ಇದೆಂಥ ಹೊಸ ಪದ್ಧತಿ? ಆಸ್ಟ್ರೇಲಿಯಾಗೆ ಭಾರತೀಯರಿಗೆ ಇ- ವೀಸಾ (ಇಲೆಕ್ಟ್ರಾನಿಕ್ ವೀಸಾ) ಅನ್ವಯ. ಆದರೆ ಇದೇನು ಪಾಸ್ ಪೋರ್ಟ್ ಮೇಲೆ ಸ್ಟ್ಯಾಂಪ್ ಹಾಕದೆ ಇರೋದು? ಇದು ಮೊದಲ ಅನುಭವ ಅಂದ್ಕೊಂಡೆ. ವೀಸಾ ಅಧಿಕಾರಿ ನನಗೆ ಇ-ವೀಸಾ ಪ್ರತಿಯನ್ನು ಕೇಳಲಿಲ್ಲ. ಪಾಸ್ ಪೋರ್ಟ್ ನಂಬರ್ ಸ್ಕ್ಯಾನ್ ಮಾಡಿದ್ರೆ ಎಲ್ಲ ಮಾಹಿತಿ ಅವನ ಸ್ಕ್ರೀನ್ ಮೇಲೆ ಕಾಣಿಸುತ್ತಿತ್ತು. ಇದೆ ಥರ ಎಲ್ಲ ದೇಶಗಳೂ ಇದ್ದರೆ, ಪದೇಪದೆ ಪಾಸ್ ಪೋರ್ಟ್ ಮಾಡಿಸೋ/ಬದಲಾಯಿಸೋ ಅವಶ್ಯಕತೆಯೇ ಇರಲ್ಲ ಎಂದು ಮನಸ್ಸಲ್ಲೇ ಅಂದುಕೊಳ್ಳುತ್ತ, ಲಗೇಜ್ ಕಲೆಕ್ಟ್ ಮಾಡೋಕೆ ನಿಂತಾಗ, ದೂರದಲ್ಲಿ 2 ನಾಯಿಗಳು ಕಂಡವು. ಮನಸಲ್ಲಿ ಒಂಥರಾ ಭಾವನೆಗಳು. ಏನೋ ಎಡವಟ್ಟು ಆಗಬಹುದಾ? ಲಗೇಜ್ ಬಂತು. ನೋಡಿದರೆ ಸ್ವಲ್ಪ ಡ್ಯಾಮೇಜ್ ಆಗಿತ್ತು. ಸಿಂಗಾಪುರ್ ಏರ್ ಲೈನ್ಸ್ ನಲ್ಲೂ ಈ ಥರದ ಕಳಪೆ ನಿರ್ವಹಣೆ ಇರತ್ತಾ ಅಂದುಕೊಳ್ಳುತ್ತ, ಕಂಪ್ಲೇಂಟ್ ವಿಭಾಗಕ್ಕೆ ಹೋಗಿ ದೂರು ಕೊಟ್ಟು, ಡ್ಯಾಮೇಜ್ ಆಗಿರೋ ಸೂಟ್ ಕೇಸ್ ಫೊಟೋಸ್ ಅಂಟಿಸಿ, ಇಮೇಲ್ ಮಾಡುವಷ್ಟರಲ್ಲಿ 45 ನಿಮಿಷಗಳು ಕಳೆದು ಹೋಗಿದ್ದವು.
ಎಕ್ಸಿಟ್ ದಾರಿಯಲ್ಲಿ ಹೋಗುವಾಗ, ಯಾಕೋ ನೀರವತೆ ಇದೆಯೆನಿಸಿತು. ಸ್ಮಶಾನ ಮೌನ ಆವರಿಸಿರುವ ಥರ ಕಾಣಿಸಿತು. ನನ್ನ ಜತೆ ಬಂದಿದ್ದ ಪ್ರಯಾಣಿಕರೆಲ್ಲ ಬಹುಶ: ತಮ್ಮ ತಮ್ಮ ತಲುಪುವ ಸ್ಥಾನಗಳನ್ನು ಸೇರಿ ಬಿಟ್ಟಿದ್ದರು ಅನಿಸುತ್ತೆ. ಕೊನೆಯ ಫ್ಲೈಟ್ ಇರಬೇಕು, ಏರ್ ಪೋರ್ಟ್ ನಲ್ಲಿ ನಾನ್-ಆಸ್ಟ್ರೇಲಿಯನ್ ನಾನೊಬ್ಬಳೇ! ಇನ್ನೇನು ಹೊರಹೋಗಬೇಕು ಅನ್ನುವಷ್ಟರಲ್ಲೇ, ಒಂದು ಧಡೂತಿ ಅರೆಚೈನೀಸ್, ಅರೆಯುರೋಪಿಯನ್ ಮುಖಚರ್ಯೆಯ ಮಹಿಳೆ ತಡೆಗಟ್ಟಿ, ನಿಮ್ಮ ಸೂಟ್ ಕೇಸ್ ಒಮ್ಮೆ ತಪಾಸಣೆ ಮಾಡಬೇಕು ಎಂದಳು. ಏನಿರುತ್ತೆ ಹುಡುಕಿ ತೆಗೆಯಲು ಅಂದುಕೊಳ್ಳುವಷ್ಟರಲ್ಲಿ, ಜರ್ಮನ್ ಶೆಫರ್ಡ್ ನಾಯಿ ಪ್ರತ್ಯಕ್ಷ! ಒಮ್ಮೆ ನನ್ನ ಬಳಿ ಬಂದು ಮೂಸಿತು, ಸೂಟ್ ಕೇಸ್ ಮೂಸಿ ಕೆಲ ಕ್ಷಣ ನಿಂತು, ಲ್ಯಾಪ್ ಟಾಪ್ ಬ್ಯಾಗನ್ನೊಮ್ಮೆ ಮೂಸಿ, ಮಂಡಿಯೂರಿ ಕುಳಿತು ಬಿಟ್ಟಿತು. ಅದರರ್ಥ, ಬ್ಯಾಗಿನಲ್ಲಿ ಏನೋ ಇದೆ, ಈ ದೇಶದಲ್ಲಿ ನಿಷೇಧವಾಗಿದ್ದು ಅಂತರ್ಥ.

ಬನ್ನಿ ಈ ಕಡೆ ಎಂದು ಪ್ರತ್ಯೇಕ ಸಾಲಿನಲ್ಲಿ ನಿಲ್ಲಿಸಿ, ಪ್ರಶ್ನೆಗಳ ಹಾವಳಿ ಶುರುವಾಯಿತು. ನಾನೇನೂ ನಿಷೇಧಿತ ವಸ್ತುಗಳನ್ನು ತಂದಿಲ್ವಲ್ಲ ಎಂದೆ. ಲ್ಯಾಪ್ ಟಾಪ್ ಬ್ಯಾಗಿನ ಯಾವುದೋ ಮೂಲೆಯಲ್ಲಿ, ಎಂದೋ ಇರಿಸಿದ ಒಂದು ಏಲಕ್ಕಿ ಇತ್ತು. ಆಸ್ಟ್ರೇಲಿಯಾಕ್ಕೆ ಬೀಜಗಳನ್ನು ತರುವಂತಿಲ್ಲ. ನೀವೇ ಸ್ವತಃ: ಡಿಕ್ಲೇರ್ ಮಾಡಿದ್ದೀರಾ, ಮತ್ತೆ ಯಾಕೆ ಈ ಬೀಜಗಳು ಇಲ್ಲಿ? ಭಾರತದಲ್ಲಿ ಏಲಕ್ಕಿ ಮೌತ್ ಫ್ರೆಷನರ್ ಥರ ಬಳಸುತ್ತೇವೆ. ಬೇಕಾದರೆ ನಿಮ್ಮ ಎದುರಿಗೆ ತಿಂದು ಬಿಡ್ತೀನಿ ಎಂದೆ. ಅದರ ಇಂಗ್ಲಿಷ್ ಹೆಸರು ಕಾರ್ಡಮಮ್. ನೀವೇ ಪರೀಕ್ಷಿಸಿ ಅಂದೆ. ಕಂಪ್ಯೂಟರ್ ನಲ್ಲಿ ನೋಡಿ, ಒಂದಷ್ಟು ಹೊತ್ತು ಸ್ಕ್ರೋಲ್ ಮಾಡಿ, ಆಯ್ತು ಎಂದು, ಅದನ್ನು ತೆಗೆದು ಪಕ್ಕಕ್ಕಿಟ್ಟಳು. ಮಲೆನಾಡಿನ ಏಲಕ್ಕಿ ಸೇಫ್ ಆಗಿ ಪಾರಾಯ್ತು ಅಂದ್ಕೊಂಡೆ. ಅವಳಿಗೆ ಸಮಾಧಾನ ವಾಗಲಿಲ್ಲ. ಸೂಟ್ ಕೇಸ್ ಓಪನ್ ಮಾಡು ಅಂದಳು. ನನಗೆ, ಈ ರಾತ್ರಿಯಲ್ಲಿ ಯಾರನ್ನು ಎಬ್ಬಿಸೋದು? ನಾಳೆ ಮಹತ್ವದ ಮೀಟಿಂಗ್ ಇದೆ. ಬೆಂಗಳೂರಿನಲ್ಲಿ ಯಾರಿಗಾದ್ರೂ ಫೋನ್ ಮಾಡೋದಾ? ಹತ್ತಾರು ಪ್ರಶ್ನೆಗಳು. ದಢೂತಿ ಹೆಂಗಸು, ಪ್ರತಿ ಮೂಲೆಯಲ್ಲೂ ಹುಡುಕಾಟ ನಡೆಸುತ್ತಿದ್ದಾಳೆ. ದೇವ್ರೇ, ಗರಿಗರಿ ಡ್ರೈ ಕ್ಲೀನ್ ಆಗಿರೋ, ಬಿಳಿ ಶರ್ಟ್, ಬ್ಲೇಜರ್ ಗಳು ಕಣ್ಣೆದುರಿಗೆ ಗರಿಗೆಟ್ಟು ಹೋಗ್ತಾ ಇವೆಯಲ್ಲ ಅನ್ನುವ ಸಂಕಟ.
ಒಮ್ಮೆಲೇ ಹೆಂಗಸು ಇದೇನು ಎಂದಳು? ವ್ಯಾನಿಟಿ ಬ್ಯಾಗ್ ನಲ್ಲಿ ಒಂದು ಚಿಕ್ಕ ಬಾಡಿದ ಹೂವಿನ ಪಕಳೆ, ಜೊತೆಗೆ ಒಣಗಿದ ಎಕ್ಕದ ಹೂವಿನ ಮಾಲೆ. ನಾವು ಭಾರತೀಯರು, ಇದು ನಮ್ಮ ದೇವರ ಪ್ರಸಾದ ಎಂದೆ. ಈ ದೇಶಕ್ಕೆ ಹೂವು ತರುವಂತಿಲ್ಲ ಅಂದಳು. ಆಯ್ತು, ಆದರೆ ಇದು ಒಣಗಿದ ಹೂವು ಅಲ್ವಾ ಅಂತ ಕೇಳ್ದೆ.. ಒಣಗಿರಲಿ, ಹಸಿಯಿರಲಿ, ಹೂವು ತರುವಂತಿಲ್ಲ. ಇದು ನಮ್ಮ ಕಾನೂನು ಎಂದು ಗುಡುಗಿದಳು.
ನಿಂತಲ್ಲೇ ನೆನಪಾದ ಕಾಶಿಯ ವಿಶ್ವೇಶ್ವರ! ಕಳೆದ ತಿಂಗಳು ವಾರಾಣಸಿಗೆ ಹೋದಾಗ, ಸಾಯಂಕಾಲದ ಸಪ್ತಋಷಿ ಆರತಿಯ ವೇಳೆ, ಅರ್ಚಕರು ಕೊಟ್ಟ ವಿಶೇಷ ಪ್ರಸಾದ ಬ್ಯಾಗಿನಲ್ಲೇ ಉಳಿದಿತ್ತು. ಹೂವು ನಮ್ಮ ಜೀವನದ ಅವಿಭಾಜ್ಯ ಅಂಗ. ಅದು ದೇವರನ್ನು ಸ್ಪರ್ಶಿಸಿ ಬರುತ್ತವೆ. ಆದ್ದರಿಂದ ಅವು ನಮಗೆ ಅಮೂಲ್ಯ ಅಂದೆ. ಲ್ಯಾಪ್ಟ್ ಟಾಪ್ ಮತ್ತು ವ್ಯಾನಿಟಿ ಬ್ಯಾಗ್, ಪ್ರತಿನಿತ್ಯ ಆಫೀಸ್ ಗೆ ತೆಗೆದುಕೊಂಡು ಹೋಗುತ್ತೇನೆ. ದೇವರ ಪ್ರಸಾದ ಬ್ಯಾಗಿನಲ್ಲೇ ಇಟ್ಟರೆ, ಪಾಸಿಟಿವ್ ಎನರ್ಜಿ ಬರುತ್ತೆ ಅಂದೆ. ಎಂಥಾ ಮೂರ್ಖಳಪ್ಪಾ ಇವಳು ಎಂಬಂತೆ ಆಕೆ ಮತ್ತೊಮ್ಮೆ ಮುಖ ನೋಡಿದಳು! ಇಂಡಿಯಾ ದಿಂದ ತಿಂಡಿ ತಗೊಂಡು ಬಂದಿದ್ರಾ ಅಂತ ಕೇಳಿದ್ಳು. ಕಳೆದ ಇಪ್ಪತ್ತು ವರ್ಷಗಳಿಂದ ಪ್ರಯಾಣ ಮಾಡ್ತಾ ಇದ್ದೀನಿ, ಒಮ್ಮೆಯೂ ಮನೆಯಿಂದ ಯಾವುದೇ ತಿಂಡಿ ಹೊರದೇಶಕ್ಕೆ ತೆಗೆದುಕೊಂಡು ಹೋಗಿಲ್ಲ. ಏನಿದ್ದರೂ ತಿನ್ನೋದು ಏರ್ ಪೋರ್ಟ್ ಮತ್ತು ವಿಮಾನದಲ್ಲೇ ಅಂದೆ. ಅವಳಿಗೆ ಸಮಾಧಾನವಾಗಲಿಲ್ಲ. ನನಗೆ ಸ್ಪಷ್ಟವಾಗಿ ಗೊತ್ತಾಗುತ್ತಾ ಇತ್ತು, ಅಲ್ಲಿ ಸುತ್ತಲೂ ಇರುವ ಸಿಸಿಟಿವಿ ಕ್ಯಾಮೆರಾಗಳು ನನ್ನನ್ನೇ ನೋಡುತ್ತಿವೆ ಎಂದು. ಅಷ್ಟೇ ಅಲ್ಲ ಒಳಗೆ ಕುಳಿತಿರುವ ಈ ಹೆಂಗಸಿನ ಬಾಸ್ ನನ್ನನ್ನೇ ನೋಡುತ್ತಿದ್ದ!
ನೋಡಿ ನಿಮಗೆ ಸತ್ಯವನ್ನೇ ಹೇಳುತ್ತಿದ್ದೇನೆ, ನನಗೆ ಇಷ್ಟೊಂದು ಕಠಿಣ ಕಾನೂನು ನಿಮ್ಮ ದೇಶದಲ್ಲಿದೆ ಎಂದು ಗೊತ್ತಿರಲಿಲ್ಲ. ಗೊತ್ತಿದ್ದರೆ ಇಷ್ಟೊಂದು ರಿಸ್ಕ್ ಯಾಕೆ ತಗೋತಾ ಇದ್ದೆ? ಮೊದಲ ಬಾರಿಗೆ ನಿಮ್ಮ ದೇಶಕ್ಕೆ ಬಂದಿದ್ದೇನೆ. ಐದು ದಿನಗಳಲ್ಲಿ ವಾಪಸ್ ಹೋಗುತ್ತೇನೆ. ಕೇವಲ ಅಲ್ಪಕಾಲದ ಅಫಿಷಿಯಲ್ ವಿಸಿಟ್ ಇದು. ದಯವಿಟ್ಟು ಕನ್ಸಿಡರ್ ಮಾಡಿ ಅಂದೆ. ಅಷ್ಟರಲ್ಲೇ ನಮ್ಮಮ್ಮನ ಕಾಲ್ ಬಂತು. ನನ್ನನ್ನೊಮ್ಮೆ ದುರುಗುಟ್ಟಿ ನೋಡಿ, ಇನ್ವೆಸ್ಟಿಗೇಷನ್ ಮಾಡುವಾಗ ಮೊಬೈಲ್ ಫೋನ್ ಬಳಸುವಂತಿಲ್ಲ ಅಂದಳು. ಪಾಸ್ ಪೋರ್ಟ್ ಜೊತೆಗೆ ಮೊಬೈಲ್ ತೆಗೆದು ಪಕ್ಕದಲ್ಲಿಟ್ಟಳು. ಹೂವನ್ನು ತೆಗೆದು ಕೊಂಡು ಬೇರೆ ರೂಮ್ ಗೆ ಹೋದಳು. ಬಹುಶಃ ಅವಳ ಬಾಸ್ ಅನ್ಸತ್ತೆ. ನನ್ನ ತಲೆಯಲ್ಲಿ ನೂರಾರು ಯೋಚನೆಗಳು. ಅಷ್ಟರಲ್ಲೇ ಮತ್ತೊಬ್ಬ ಬಂದ, ಮಿನಿಮಮ್ $4,000 ದಂಡ, ಮ್ಯಾಕ್ಸಿಮಮ್ $6,000 ಅಂದ. ನಾನು ರುಪಾಯಿಗೆ ಕನ್ವರ್ಟ್ ಮಾಡಿ ಲೆಕ್ಕ ಮಾಡಿದೆ. ಕ್ರೆಡಿಟ್ ಕಾರ್ಡ್ ಉಪಯೋಗಿಸಿದರೆ ಭಾರಿ ಪಾಯಿಂಟ್ಸ್ ಬರುತ್ತೆ ಎಂಬ ಆಲೋಚನೆ ಮನಸ್ಸಲ್ಲಿ ಮೂಡಿ ನಗು ಬಂತು. ದಂಡ ಕಟ್ಟದಿದ್ದರೆ ಎಷ್ಟು ದಿನ ಕೃಷ್ಣಜನ್ಮಸ್ಥಾನ ವಾಸ್ತವ್ಯ ಅಂತ ಕೇಳಲೇ ಅಂದ್ಕೊಂಡೆ. ಸರಿಸುಮಾರು ಒಂದು ಗಂಟೆ ನಿಂತು ಕಾಲುಗಳು ಸೋತು ಹೋಗಿದ್ದವು. ನನ್ನ ಯೋಚನೆ ಇದ್ದದ್ದು ಮರುದಿನದ ಮೀಟಿಂಗ್ ಬಗ್ಗೆ. ಇದೊಂಥರಾ ಬೇಕಿಲ್ಲದ, ಅನಿರೀಕ್ಷಿತ ಮೂರ್ಖತನ. ಮನಸ್ಸು ನೂರು ಕಡೆ ಓಡುತ್ತಿದ್ದರೂ, ನಾನು ನನ್ನ ಮುಖದ ಮೇಲೆ ಯಾವುದೇ ಭಾವನೆಗಳನ್ನು ತೋರ್ಪಡಿಸದೆ ನಿಂತಿದ್ದೆ. ಸುಮಾರು ಹತ್ತು ನಿಮಿಷದ ನಂತರ ಹೊರಗೆ ಬಂದಳು ಇನ್ವೆಸ್ಟಿಗೇಷನ್ ಆಫೀಸರ್. ನಿಮ್ಮ ಕೇಸ್ ಡಿಸೈಡ್ ಆಗಿದೆ, ಒಂದು ಎಚ್ಚರಿಕೆ ಕೊಟ್ಟು ನಿಮ್ಮನ್ನು ಬಿಡುಗಡೆ ಮಾಡುತ್ತಿದ್ದೀವಿ. ನೀವು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಆದರೆ ಮೊದಲೇ ಡಿಕ್ಲೇರ್ ಮಾಡಿದ್ದಿದ್ರೆ ಒಳ್ಳೆಯದಿತ್ತು ಅಂದಳು. ನೀವು ಮೊದಲ ಬಾರಿಗೆ ಆಸ್ಟ್ರೇಲಿಯಾಗೆ ಬಂದಿದ್ದೀರಿ. ಹೀಗಾಗಿ ನಿಮ್ಮನ್ನು ಕಠಿಣವಾಗಿ ಶಿಕ್ಷಿಸೋದಿಲ್ಲ ಎಂದಳು. ಆದರೆ ಈ ತಪ್ಪನ್ನು ಮತ್ತೆ ಮಾಡಬೇಡಿ ಅಂದಳು. ತುಂಬಾ ಧನ್ಯವಾದಗಳು ಅಂದೆ. ಮನಸಲ್ಲಿ ಖುಷಿ, ಮುಖದಲ್ಲಿ ಪ್ರಸನ್ನತೆಯೊಂದಿಗೆ ಹೊರಬಂದೆ. ಟ್ಯಾಕ್ಸಿಯಲ್ಲಿ ಕುಳಿತು ಬ್ರಿಸ್ಬೇನ್ ಹೊಟೇಲಿಗೆ ಬಂದಾಗ ಬರೋಬ್ಬರಿ 10.30. ಇದೊಂದು ಅವಿಸ್ಮರಣೀಯ ಅನುಭವ. "ನಾಯಿಪಾಡು" ಆಗುವುದನ್ನು ತಪ್ಪಿಸಿದ್ದು ಆ ವಿಶ್ವೇಶ್ವರನೇ ಅಂದುಕೊಂಡೆ.