ಸಿಂಹದ ಜತೆ ಹೆಜ್ಜೆ ಹಾಕಲು ನಿಯಮಗಳಿವೆ..
ದಕ್ಷಿಣ ಆಫ್ರಿಕಾದ ಉಕುಟುಲಾ ಲಾಜ್ ಮತ್ತು ಗೇಮ್ ರಿಸರ್ವೆ ಅಭಯಾರಣ್ಯಗಳಿಗೆ ಭೇಟಿ ನೀಡಿದ ಡಾ. ಕಿರಣ್ ಅಂಕಲೇಕರ ತಮ್ಮ ಅನುಭವವನ್ನು ರೋಚಕ ಪದಗಳಲ್ಲಿ ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸಿದ್ದಾರೆ. ಸಿಂಹ ಮತ್ತು ಚೀತಾಗಳನ್ನು ಸ್ಪರ್ಶಿಸಿ, ಅವುಗಳೊಂದಿಗೆ ವಾಕಿಂಗ್ ಮಾಡಿ, ಮುದ್ದಿಸಿದ ಕಥೆ ಕೇಳಿದರೆ ಓದುಗರಿಗೆ ಒಮ್ಮೆಯಾದರೂ ಆಫ್ರಿಕನ್ ಕಾಡುಗಳಿಗೆ ಹೋಗಬೇಕೆನಿಸುವುದು ಖಚಿತ.
- ಕಿರಣ ಅಂಕ್ಲೇರ
ನೀವು ವನ್ಯಜೀವಿ ಪ್ರೇಮಿಗಳೇ ? ಹಾಗಿದ್ದರೆ ಖಂಡಿತವಾಗಿ ಯಾವುದಾದರೊಂದು ಅಭಯಾರಣ್ಯಕ್ಕೆ ಭೇಟಿ ಕೊಟ್ಟಿರುತ್ತೀರಿ. ತೆರೆದ ಸಫಾರಿ ಜೀಪಿನಲ್ಲಿ ದಿನವಿಡೀ ಕಾಡು ಸುತ್ತಾಡಿ, ಯಾವುದೇ ಪ್ರಾಣಿ ಕಣ್ಣಿಗೆ ಬೀಳದೆ ಸುಸ್ತಾಗಿ, ಕೊನೆ ಕ್ಷಣದಲ್ಲಿ ನಿಮ್ಮ ಮುಂದಿನಿಂದಲೇ ಒಂದು ಹುಲಿ ರಾಜಗಾಂಭೀರ್ಯದಿಂದ ಹಾದು ಹೋದಾಗ ನಿಮಗೆಷ್ಟು ಖುಷಿ ಆಗಿರುತ್ತದಲ್ಲವೇ? ಪೈಸಾ ವಸೂಲ್!
ಕೇವಲ ಹುಲಿ ಕಂಡ ಮಾತ್ರಕ್ಕೆ ಇಷ್ಟು ಖುಷಿಪಟ್ಟ ನಿಮಗೆ, ಸಿಂಹಗಳ ಜತೆಜತೆಯಲ್ಲಿ ಹೆಜ್ಜೆ ಹಾಕಲು ಮತ್ತು ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಓಡುವ ಪ್ರಾಣಿ, ಚೀತಾದ ಜೊತೆ ಕುಳಿತು ಅದರಿಂದ ನಿಮ್ಮ ಕೈ ನೆಕ್ಕಿಸಿಕೊಳ್ಳುವುದೆಂದರೆ ಹೇಗಿರಬಹುದು? ಊಹಿಸಲೂ ಕಷ್ಟ ಸಾಧ್ಯ. ಇಂಥ ಕನಸು ಕೂಡ ಬೀಳಲಿಕ್ಕಿಲ್ಲ. ಒಂದು ವೇಳೆ ಬಿದ್ದರೂ, ಭಯದಿಂದ ಎಚ್ಚರವಾಗಿ ದಢ್ ಎಂದು ನಿದ್ರೆಯಿಂದೆದ್ದು ಕುಳಿತುಬಿಡುವಿರಿ. ಅಲ್ಲವೇ ?

ಆದರೆ ಈ ಘಟನೆಗಳ ಅನುಭವ ಪಡೆದ ಅದೃಷ್ಟ ನನ್ನದು. ಇಂಥ ಅನುಭವ ನಮ್ಮ ದೇಶದಲ್ಲಿ ದೊರೆಯಬಹುದೋ ಗೊತ್ತಿಲ್ಲ. ಸಿಂಹಗಳ ಒಡನಾಟ ಗುಜರಾತಿನ ಗಿರ್ ಅಭಯಾರಣ್ಯದಲ್ಲಿ ಲಭ್ಯವಾಗಬಹುದು. ಆದರೆ, ಚೀತಾ ಭಾರತದಲ್ಲಿ ಇದೀಗ ತಾನೆ ಬಂದಿವೆಯಷ್ಟೇ. ಅವುಗಳನ್ನು ಸದ್ಯ ನೋಡುವುದೂ ಕಷ್ಟ. ಹೀಗಾಗಿ ಈ ಅನುಭವ ಪಡೆಯಲು ನೀವು ದಕ್ಷಿಣ ಆಫ್ರಿಕಾಗೆ ಹೋಗಬೇಕು.
ದಕ್ಷಿಣ ಆಫ್ರಿಕಾದ ಉಕುಟುಲಾ ಲಾಜ್ ಮತ್ತು ಗೇಮ್ ರಿಸರ್ವೆ
ದಕ್ಷಿಣ ಆಫ್ರಿಕಾದ ಮಹಾನಗರವಾದ ಜೋಹಾನ್ಸ್ ಬರ್ಗ್ ನಿಂದ ಸುಮಾರು 100 ಕಿಮೀ ದೂರದಲ್ಲಿರುವುದೇ " ಉಕುಟುಲಾ ಲಾಜ್ ಮತ್ತು ಗೇಮ್ ರಿಸರ್ವೆ". ಸುಮಾರು ಎರಡು ತಾಸುಗಳ ರಸ್ತೆ ಮಾರ್ಗದಲ್ಲಿ ಸಂಚಾರ ಮಾಡಬೇಕು. ವಿಶೇಷ ಗಾಡಿ ಮಾಡಿಕೊಂಡು ಅಥವಾ ಯಾವುದೇ ಟೂರಿಸ್ಟ್ ಏಜನ್ಸಿಗಳ ಮೂಲಕ ನೀವು ಇಲ್ಲಿಗೆ ಹೋಗಬಹುದು.
ಉಕುಟುಲಾ ಗೇಮ್ ರಿಸರ್ವೆ, ಕೇವಲ ಮನರಂಜನಾ ತಾಣವಷ್ಟೇ ಅಲ್ಲ, ಇದೊಂದು ವನ್ಯ ಜೀವಿಗಳ ಜೀವನಶೈಲಿಯನ್ನು ಅಧ್ಯಯನ ಮಾಡಲು ಉನ್ನತಮಟ್ಟದ ಸಂಶೋಧನಾ ಕೇಂದ್ರವೂ ಹೌದು. ಸದ್ಯ ಇಲ್ಲಿ ಹುಲಿ, ಸಿಂಹ, ಚೀತಾ, ಕತ್ತೆಕಿರುಬ ಮತ್ತು ವಿವಿಧ ಜಾತಿಯ ಕಾಡು ಬೆಕ್ಕುಗಳ ಮೇಲೆ ಸಂಶೋಧನೆ ನಡೆಯುತ್ತಿದೆ.
ಸಿಂಹದ ಜತೆ ಹೆಜ್ಜೆ ಹಾಕಲು ನಿಯಮಗಳಿವೆ..
ಇಲ್ಲಿಯ ಪ್ರಮುಖ ಆಕರ್ಷಣೆ , ಸಿಂಹಗಳ ಜತೆಯಲ್ಲಿ ಹೆಜ್ಜೆ ಹಾಕುವುದು!. ಈ ಸಿಂಹಗಳು ಇಲ್ಲಿಯೇ ಹುಟ್ಟಿರುವುದರಿಂದ ಅಲ್ಲಿನ ಮೇಲ್ವಿಚಾರಕರ ಜತೆ ಅವುಗಳಿಗೆ ಸಲುಗೆ ಇವೆ. ಎಷ್ಟೆಂದರೂ ಅವು ಕಾಡು ಮೃಗಗಳು. ಆದಷ್ಟು ಎಚ್ಚರಿಕೆಯಿಂದಲೇ ಅವುಗಳಿಗೆ ಯಾವುದೇ ತೊಂದರೆ, ಕಿರಿಕಿರಿ ಆಗದಂತೆ ವ್ಯವಹರಿಸಬೇಕಾಗುತ್ತದೆಂದು ಅವರೇ ಹೇಳುತ್ತಿದ್ದರು.
ನಾವು ಪ್ರವಾಸಿಗರ ತಂಡದಲ್ಲಿ ವಿವಿಧ ದೇಶಗಳ ಸುಮಾರು ಹತ್ತು ಜನರಿದ್ದೆವು. ಬೇಲಿ ಹಾಕಿರುವ ಸಿಂಹಗಳ ಜಾಗದಿಂದ ಅವುಗಳನ್ನು ಹೊರಬಿಡುವ ಮೊದಲು ನಮಗೆಲ್ಲ ಎಚ್ಚರಿಕೆ ಕೊಟ್ಟಾಗಿತ್ತು. ಗಲಾಟೆ ಮಾಡಬಾರದು. ಎಲ್ಲರೂ ಕೈಯಲ್ಲೊಂದು ಕೋಲು ಹಿಡಿದುಕೊಳ್ಳಬೇಕು. ಅಕಸ್ಮಾತ್ ಸಿಂಹ ನಿಮ್ಮ ಬಳಿ ಬಂದರೆ, ಹೆದರದೆ ಕೇವಲ ಕೋಲಿನಿಂದ ನೆಲಕ್ಕೊಮ್ಮೆ ಬಡಿಯಬೇಕು. ಸಿಂಹ ನಿಮಗೇನೂ ಮಾಡುವುದಿಲ್ಲ. ಅಲ್ಲದೆ ಸಿಂಹಗಳು ನಡೆಯುತ್ತಿರುವಾಗ ಅವುಗಳಿಗಿಂತ ಕನಿಷ್ಠ ಎರಡು ಮೀಟರ್ ದೂರದಲ್ಲಿರಬೇಕು. ಇದಕ್ಕೆ ಒಪ್ಪಿದ ನಾವೆಲ್ಲರೂ ಹೆಜ್ಜೆಹಾಕಲು ಸಿದ್ಧರಾದೆವು.

ಮೂರು ಬಲಿಷ್ಠ ಗಂಡು ಸಿಂಹಗಳು ಹೊರಬಂದು, ನಮ್ಮನ್ನೊಮ್ಮೆ ನೋಡಿ ಅವುಗಳ ನಿತ್ಯದ ವಾಕಿಂಗ್ ರೋಡಿನಲ್ಲಿ ಹೊರಟವು. ಅವು ಮುಂದೆ ಮುಂದೆ, ನಾವು ಹಿಂದೆ ಹಿಂದೆ ..! ಕೇವಲ ಮಾರು ಅಂತರದೊಳಗೆ ಒಂದು ಮರದಡಿ ಸಿಂಹಗಳಿಗೆ ಮಾಂಸದ ತಿಂಡಿಯ ವ್ಯವಸ್ಥೆಯಾಗಿತ್ತು. ಅಲ್ಲಿಯೇ ನಮ್ಮ ಫೊಟೋಶೂಟ್ ಕೂಡ. ಅದರ ಜತೆಗೆ ತಿರುಗಿ ಬರುವಾಗ, ಅಲ್ಲಿನ ಮೇಲ್ವಿಚಾರಕರು ಸಿಂಹಗಳೊಡನೆ ನಮ್ಮ ನಡುಗೆಯ ಪ್ರತ್ಯೇಕ ಚಿತ್ರಗಳನ್ನು ತೆಗೆದುಕೊಟ್ಟರು. ನಡೆಯುತ್ತಿರುವ ಸಿಂಹಗಳು ಒಂದು ಕ್ಷಣ ತಿರುಗಿ ನೋಡಿದರೆ ಎಷ್ಟೇ ಧೈರ್ಯವಂತರಿಗೂ ಒಂದರೆಕ್ಷಣ ಎದೆಬಡಿತ ಹೆಚ್ಚಾಗುತ್ತಿತ್ತು.
ಇನ್ನೊಂದು ವಿಶೇಷ ಏನೆಂದರೆ, ಚೀತಾಗಳ ಒಡನಾಟ. ಮೊದಲೇ ಹೇಳಿದಂತೆ, ಇವುಗಳ ಜೀವನ ಶೈಲಿಯ ಬಗ್ಗೆ ಸಂಶೋಧನೆ ನಡೆಯುತ್ತಿರುವುದರಿಂದ, ಇವುಗಳು ಮೇಲ್ವಿಚಾರಕರ ಜತೆ ಸ್ನೇಹದಿಂದಿರುತ್ತವೆ. ನಾನು ನನ್ನ ಕ್ಯಾಮೆರಾದಿಂದ ಇವುಗಳ ವಿಶೇಷ ಭಂಗಿಗಳ ಚಿತ್ರ ತೆಗೆಯಲು ಪ್ರಯತ್ನಿಸುತ್ತಿರುವಾಗ, ಅವುಗಳ ಹತ್ತಿರ ಕರೆದುಕೊಂಡು ಹೋಗುತ್ತೇನೆಂದು ಮೇಲ್ವಿಚಾರಕ ನನಗೆ ಭರವಸೆ ಕೊಟ್ಟ. ಆದರೆ ಅದನ್ನು ನಾನು ಮುಟ್ಟಬಲ್ಲೆ ಎಂದು ನಾನು ಕನಸಿನಲ್ಲೂ ಎಣಿಸಿರಲಿಲ್ಲ.
ನಾವು ಚೀತಾದ ಬಳಿ ಹೋದಾಗ ಅದರ ಮೂಡ್ ಚೆನ್ನಾಗಿತ್ತು, ಶಾಂತವಾಗಿತ್ತು. ಮೇಲ್ವಿಚಾರಕ ಅದರ ಬಳಿ ಹೋಗಿ ಮುದ್ದು ಮಾಡಿದ. ಬಳಿಕ ನನ್ನನ್ನು ಕರೆದು, ಕೇವಲ ಅದರ ಹಣೆ ಮತ್ತು ತಲೆ ನೇವರಿಸಲು ಹೇಳಿದ. ನಾನು ನಿಧಾನವಾಗಿ ಅದರ ತಲೆ ನೇವರಿಸಿದೆ. ಹಾಗೆಯೇ ಕೈ ಅದರ ಬಾಯಿ ಬಳಿ ಇಟ್ಟಾಗ, ನನ್ನ ಹಸ್ತವನ್ನು ಅದು ನೆಕ್ಕಲಾರಂಭಿಸಿತು.. ಸ್ವಲ್ಪ ಮುಳ್ಳು ಮುಳ್ಳಾಗಿರುವ ನಾಲಿಗೆ. ನಿಮಿಷಗಟ್ಟಲೆ ನನ್ನ ಚೀತಾದ ಜತೆ ದೋಸ್ತಿ ನಡೆಯಿತು. ಚೀತಾದ ತಲೆ ಬಿಟ್ಟು ಬೇರೆ ಯಾವ ಭಾಗವನ್ನೂ ಮುಟ್ಟಬೇಡ ಎಂದು ನನಗೆ ಆಗಲೇ ಎಚ್ಚರಿಸಿದ್ದ. ಏಕೆಂದರೆ ಅದು ಒಮ್ಮೆ ಸುಮ್ಮನೆ ಕೈ ತಾಕಿಸಿದರೂ ನನ್ನ ಚರ್ಮ ಹರಿದು ರಕ್ತ ಬರುವುದು ಖಚಿತ. ಹಾಗೇನೂ ಆಗಲಿಲ್ಲ ಬಿಡಿ. ಆದರೂ ನನ್ನ ಜೀವನದ ಅವಿಸ್ಮರಣೀಯ ಅನುಭವಗಳ ಪೈಕಿ ಇದು ಬಹಳ ಪ್ರಮುಖವಾದುದು.