Monday, October 13, 2025
Monday, October 13, 2025

ಹುಲಿಯನ್ನು ನೋಡಿ... ಬಂಡಿಪುರಕ್ಕೆ ಹೋಗಿಬನ್ನಿ

ಬಂಡೀಪುರ ಸಫಾರಿ ಲಾಡ್ಜ್, ಕರ್ನಾಟಕ ಸರಕಾರದ ಸಹಯೋಗದ ಉಪಕ್ರಮವಾದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ನಿರ್ವಹಿಸುವ ಪರಿಸರ-ವಿಹಾರಧಾಮ. ಮೈಸೂರು-ಊಟಿ ಹೆದ್ದಾರಿಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದ ಗಡಿಯಿಂದ ಕೇವಲ ಒಂದು ಕಿಮೀ ದೂರದಲ್ಲಿದೆ. ಇದು ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ವನ್ಯಜೀವಿಗಳನ್ನು ವೀಕ್ಷಿಸುವ ಸಾಹಸಮಯ ಕ್ಷಣಗಳಿಗೆ ಸೂಕ್ತವಾದ ಸ್ಥಳವಾಗಿದೆ. ಜತೆಗೆ ಇದು ಭವ್ಯವಾದ ನೀಲಗಿರಿ ಬೆಟ್ಟಗಳ ತಪ್ಪಲಿನಲ್ಲಿದೆ.

ಮನುಷ್ಯರಾದ ನಾವು ಎಷ್ಟೋ ಸಲ ಪ್ರಾಣಿಗಳನ್ನು ಮರೆತುಬಿಡುತ್ತೇವೆ. ಅಕ್ಟೋಬರ್‌ 4 ವಿಶ್ವ ಪ್ರಾಣಿಯ ದಿನ. ಎಷ್ಟೋ ಬಾರಿ ಈ ಚಿಂತನೆ ಎಲ್ಲರಿಗೂ ಬಂದಿರಬಹುದು. ಅದೇನೆಂದರೆ, ಮನುಷ್ಯರೇ ಇಲ್ಲದಿದ್ದರೆ, ಹೇಗಿರುತ್ತಿತ್ತು ಅಂತ. ಮನೆಯ ಹೊರಗೆ ನಾವು ಹಾಕುವ ಊಟಕ್ಕೆ ನಾಯಿಗಳಿಗೆ ಕಾಯುವ ತಾಪತ್ರಯವೇ ಬರುತ್ತಿರಲಿಲ್ಲ. ಇಲಿ ಹಿಡಿಯಲೋ, ಹಾಲು ಕುಡಿಯಲೋ ಮನೆಗೆ ಹೊಕ್ಕುವ ಬೆಕ್ಕಿಗೆ ಮನೆ ಎಂದರೇನು ಎಂದು ಗೊತ್ತಾಗುತ್ತಿರಲಿಲ್ಲ. ಕರುವನ್ನು ಮುಂದೆ ಬಿಟ್ಟು ಆಕಳಿನ ಹಾಲನ್ನು ಕದಿಯುವುದೂ ಅದಕ್ಕೆ ಗೊತ್ತಾಗುತ್ತಿರಲಿಲ್ಲ. ಕಾಡಿಂದ ನಾಡಿಗೆ ಆನೆಗಳು ಬರುತ್ತಿರಲಿಲ್ಲ, ಅಥವಾ ಮನೆಯ ಮುಂದೆ ಕಟ್ಟಿದ್ದ ಆಕಳನ್ನು ಚಿರತೆ ಹುಲಿಗಳು ಕದ್ದುಕೊಂಡು ಹೋಗುತ್ತಿರಲಿಲ್ಲ. ಮನುಷ್ಯರ ರಕ್ತ ಹೀರುವ ಸೊಳ್ಳೆಗಳು ಇರುತ್ತಿರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಮನುಷ್ಯರು ಇಲ್ಲದೆ ಇದ್ದರೆ, ಇದೆಲ್ಲದರ ಬಗ್ಗೆ ಸ್ವಲ್ಪವೂ ಗೊತ್ತಾಗುತ್ತಿರಲಿಲ್ಲ!

ಹೀಗೇ ಯೋಚಿಸಿ, ಮನುಷ್ಯನೇ ಇಲ್ಲದೇ ಇದ್ದಿದ್ದರೆ, ನೀವು ಈಗ ಈ ಪತ್ರಿಕೆ ಓದುತ್ತಿರುವ ಸ್ಥಳ ಕಾಡು ಆಗಿರುತ್ತಿತ್ತು. ಮೀಸಲು ಅರಣ್ಯ ಇರುತ್ತಿರಲಿಲ್ಲ. ಜೂಗಳೂ ಇರುತ್ತಿರಲಿಲ್ಲ. ಪ್ರಾಣಿ ಮನುಷ್ಯನಿಗೆ ಕಾಟ ಕೊಡುತ್ತಿರಲಿಲ್ಲ. ಹೀಗೆ ಯಾವಾಗಲಾದರು ಯೋಚಿಸಿದ್ದೀರಾ? ಮನುಷ್ಯರಂತೆ ಬೇರೆ ಯಾವುದೋ ಪ್ರಾಣಿ ಬುದ್ಧಿವಂತ ಆಗಿದ್ದು, ಅದಕ್ಕೆ ಬೇಕಾದ ಹಾಗೆ ಭೂಮಿಯನ್ನು ಬಳಸುತ್ತಿದ್ದು, ಮನುಷ್ಯ ಬುದ್ಧಿ ಇರದ ಮೂಕ ಪ್ರಾಣಿಯಾಗಿದ್ದರೆ? ಒಂದು ನಾಯಿಯ ಬಗ್ಗೆಯೇ ಯೋಚಿಸಿ, ಮನೆಯ ಯಜಮಾನನಾಗಿ ನಾಯಿ ಇದ್ದು, ನಾವೆಲ್ಲ ಮನೆಯ ಸಾಕು ಪ್ರಾಣಿ ಆಗಿದ್ದರೆ? ನಮ್ಮ ಕುತ್ತಿಗೆಗೆ ಬೆಲ್ಟ್‌ ಹಾಕಿ ರೋಡಿನಲ್ಲಿ ಕರೆದುಕೊಂಡು ಹೊರಟಿದ್ದರೆ? ಒಂದೇ ಒಂದು ಬೌಲ್‌ನಲ್ಲಿ ಊಟಕ್ಕೆ ಇಡುತ್ತಿದ್ದರೆ? ಇಂಥ ಯೋಚನೆಗಳು ಅನೇಕಾನೇಕ. ಇರಲಿ..

jungle lodge - bandipur 2

ಊರಲ್ಲಿ ಅದೇ ನಾಯಿ, ಬೆಕ್ಕು, ಆಕಳನ್ನು ನೋಡ್ತಾ ಇದೇವೆ. ಆದರೆ, ಪಕ್ಷಿಗಳು ಮಾತ್ರ ವಿಶೇಷ ಆತಿಥಿಗಳಾಗುತ್ತಿವೆ. ಕಾಗೆ, ಕೋಗಿಲು, ನವಿಲು, ಗುಬ್ಬಚ್ಚಿಗಳೆಲ್ಲ ಕಣ್ಮರೆಯಾಗುತ್ತಿವೆ. ಆದರೆ, ಇನ್ನೂ ನೋಡದೇ ಇರುವ ಪಕ್ಷಿ ಪ್ರಾಣಿಗಳ ಬಗ್ಗೆ ನಮಗೆ ಎಷ್ಟು ಗೊತ್ತು? ನಾವು ರೀಲ್ಸ್‌ನಲ್ಲಿ, ಟಿವಿಯಲ್ಲಿ ನೋಡುವ ಎಷ್ಟೋ ಪ್ರಾಣಿಗಳನ್ನು ನೇರವಾಗಿ ನೋಡಿರುವುದೇ ಇಲ್ಲ. ಆನೆಯನ್ನೇ ತಗೊಳ್ಳಿ ಊರ ಜಾತ್ರೆಯಲ್ಲೋ ಉತ್ಸವದಲ್ಲೋ ನೋಡಿರುತ್ತೇವೆ. ಅದನ್ನು ಬಿಟ್ಟರೆ, ಈಗ ದಸರಾ ಶುರುವಾಯ್ತಲ್ಲ, ಆನೆಗಳನ್ನು ಆಗಾಗ ನೋಡುತ್ತಿರುತ್ತೇವೆ. ಅದನ್ನು ಬಿಟ್ಟರೆ ಜೂನಲ್ಲಿ ನೋಡಿರಬಹುದಷ್ಟೆ. ಆದರೆ ಇವುಗಳನ್ನು ಅದರದ್ದೇ ಮನೆಯಲ್ಲಿ, ಜುಮ್‌ ಎಂದು ಓಡಾಡುತ್ತಿರುವಾಗ, ಅದರ ಸಂಗಾತಿಗಳ ಜತೆ ಒಳ್ಳೆಯ ಸಮಯ ಕಳೆಯುತ್ತಿರುವಾಗ ನೋಡುವ ಮಜವೇ ಬೇರೆ ಅಲ್ವ? ಇದನ್ನು ನೋಡೋದಕ್ಕೆ ಕಾಡುಗಳಿಗೆ ಹೋಗೊ ಹಾಗೆ ಇಲ್ಲ! ಕಾಡಿಗೆ ಹೋದರೂ ನಮ್ಮನ್ನು ನೋಡಿಕೊಳ್ಳೋರು ಬೇಕಲ್ವ? ಎಲ್ಲರೂ ಬಿಯರ್‌ ಗ್ರಿಲ್ಸ್‌ ಥರ ಆಗೋಕೆ ಆಗಲ್ಲ. ನಮ್ಮೆಲ್ಲ ಅನುಕೂಲಗಳು ಅಂದರೆ ಊಟ ಸೇರಿ ಬೇರೆಲ್ಲದಕ್ಕೂ ಸಮಯಕ್ಕೆ ಸರಿಯಾಗಿ ಸಹಕರಿಸುವವರು, ಉಪಚರಿಸುವವರು ಬೇಕಲ್ವಾ? ಅದು ಜೆಎಲ್‌ಆರ್‌ ಬಂಡೀಪುರ ಸಫಾರಿ ಲಾಡ್ಜ್‌!

ಬಂಡೀಪುರ ಸಫಾರಿ ಲಾಡ್ಜ್, ಕರ್ನಾಟಕ ಸರಕಾರದ ಸಹಯೋಗದ ಉಪಕ್ರಮವಾದ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ನಿರ್ವಹಿಸುವ ಪರಿಸರ-ವಿಹಾರಧಾಮ. ಮೈಸೂರು-ಊಟಿ ಹೆದ್ದಾರಿಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದ ಗಡಿಯಿಂದ ಕೇವಲ ಒಂದು ಕಿಮೀ ದೂರದಲ್ಲಿದೆ. ಇದು ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ವನ್ಯಜೀವಿಗಳನ್ನು ವೀಕ್ಷಿಸುವ ಸಾಹಸಮಯ ಕ್ಷಣಗಳಿಗೆ ಸೂಕ್ತವಾದ ಸ್ಥಳವಾಗಿದೆ. ಜತೆಗೆ ಇದು ಭವ್ಯವಾದ ನೀಲಗಿರಿ ಬೆಟ್ಟಗಳ ತಪ್ಪಲಿನಲ್ಲಿದೆ.

ನಿಸರ್ಗದ ರಮ್ಯ ನೋಟದ ಜತೆಗೆ ಸುಂದರ ಕ್ಷಣಗಳನ್ನು ಅನುಭವಿಸಲು ಈ ಲಾಡ್ಜ್‌ ಅನ್ನು ವಿನ್ಯಾಸ ಗೊಳಿಸಲಾಗಿದೆ. ಇದು ಗೌರ್, ಆನೆ ಮತ್ತು ಹುಲಿಯಂಥ ಪ್ರಾಣಿಗಳ ಹೆಸರಿನ 22 ವಿಶಿಷ್ಟ ಕುಟೀರಗಳನ್ನು ಒಳಗೊಂಡಿದೆ. ಈ ಕುಟೀರಗಳು ವನ್ಯಜೀವಿ- ಪ್ರೇರಿತ ಚಿತ್ರಣಗಳಿಂದ ಅಲಂಕರಿಸಲ್ಪಟ್ಟ ಒಳಾಂಗಣಗಳಿಂದ ಕೂಡಿದ್ದು ಸ್ನೇಹಮಯ, ಮತ್ತು ಕಾಡಿನ ಅನುಭವವನ್ನು ನೀಡುತ್ತದೆ.

ಈ ಎಲ್ಲ ಅನುಭವದ ಜತೆಗೆ ತರಬೇತಿ ಪಡೆದ ಪರಿಣಿತರ ನೇತೃತ್ವದ ಮಾರ್ಗದರ್ಶಿ ಸಫಾರಿಗಳು ಇವೆ. ಇದರಿಂದ ಸಫಾರಿಯಲ್ಲಿ ಬಂಡೀಪುರದ ವೈವಿಧ್ಯಮಯ ವನ್ಯಜೀವಿಗಳನ್ನು ಹತ್ತಿರದಿಂದ ನೋಡಲು ಸಿಗುತ್ತವೆ. ಆನೆಗಳು, ಜಿಂಕೆಗಳು, ನವಿಲುಗಳು ಮತ್ತು ಹುಲಿ ಅಥವಾ ಚಿರತೆಗಳನ್ನು ಅತಿ ಹತ್ತಿರದಿಂದ ನೋಡಬಹುದು. ಈ ಪ್ರದೇಶವು ಹಾರ್ನ್‌ಬಿಲ್‌ಗಳು ಮತ್ತು ಕ್ರೆಸ್ಟೆಡ್ ಹಾಕ್ ಹದ್ದುಗಳು ಸೇರಿದಂತೆ 200 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿದೆ, ಅದರಿಂದ ಪಕ್ಷಿಪ್ರೇಮಿಗಳಿಗೆ ಹಾಗು ನೋಡುವವರಿಗೂ ಇಲ್ಲಿ ರಸದೌತಣ. ಹಾಂ.. ಹಕ್ಕಿಗೆ ಕಾಳ್‌? ಕೂಡ ಹಾಕಬಹುದು. ಲಾಡ್ಜ್ ಮೈದಾನವು ಗಿಡಮೂಲಿಕೆ ತೋಟಗಳನ್ನು ಹೊಂದಿದ್ದು, ಸಂಜೆ ವಿಶ್ರಾಂತಿ ನೀಡುವ ಕ್ಯಾಂಪ್‌ಫೈರ್ ಬಾರ್ಬಿಕ್ಯೂಗಳು ಇರುತ್ತದೆ.

ನಾಗರಹೊಳೆ, ಮುದುಮಲೈ ಮತ್ತು ವಯನಾಡ್ ರಾಷ್ಟ್ರೀಯ ಉದ್ಯಾನಗಳನ್ನು ಒಳಗೊಂಡಿರುವ ವಿಶಾಲವಾದ ಸಂರಕ್ಷಿತ ವಲಯದೊಳಗೆ ಈ ಲಾಡ್ಜ್ ನೆಲೆಗೊಂಡಿದೆ. ದಕ್ಷಿಣ ಏಷ್ಯಾದ ಅತ್ಯಂತ ಶ್ರೀಮಂತ ಮತ್ತು ವಿಸ್ತಾರವಾದ ಅರಣ್ಯ ಪರಿಸರ ವ್ಯವಸ್ಥೆಗಳಲ್ಲಿ ಇದು ಒಂದಾಗಿದೆ. ಈ ಪ್ರದೇಶವು ಹುಲಿಗಳು ಮತ್ತು ಆನೆಗಳೆರಡಕ್ಕೂ ನಿರ್ಣಾಯಕ ಅಭಯಾರಣ್ಯವಾಗಿದೆ.

jungle lodge - bandipur 1

ಬಂಡಿಪುರದಲ್ಲಿ ಏನೆನೆಲ್ಲ ಅವಕಾಶಗಳು

ಸಫಾರಿ ಅನುಭವ

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ಮಾಡುವುದೇ ಒಳ್ಳೆಯ ಅನುಭವ. ಇದು ಬಂಡೀಪುರ ಸಫಾರಿ ಲಾಡ್ಜ್ ಮೂಲಕ ಲಭ್ಯವಿರುವ ಅತ್ಯಂತ ರೋಮಾಂಚಕಾರಿ ಚಟುವಟಿಕೆಗಳಲ್ಲಿ ಒಂದು. ಎಲ್ಲ ಸಫಾರಿ ಸಾಹಸಗಳು ಬಂಡೀಪುರ ಹುಲಿ ಅಭಯಾರಣ್ಯದೊಳಗೆ ನಡೆಯುತ್ತವೆ, ಅತಿಥಿಗಳಿಗೆ ಈ ಪ್ರಸಿದ್ಧ ಸಂರಕ್ಷಿತ ಪ್ರದೇಶವನ್ನು ಅನ್ವೇಷಿಸಲು ನಿಜವಾದ ಅವಕಾಶವಾಗಿದೆ.

ಅತಿಥಿಗಳು ಎರಡರಲ್ಲಿ ಒಂದನ್ನು ಆಯ್ಕೆ ಮಾಡಬಹುದು:

ಜೀಪ್ ಸಫಾರಿ ಬೆಳಗ್ಗೆ 6 - 9 ಮತ್ತು ಸಂಜೆ 4 – 6

ವನ್ಯಜೀವಿ ಉತ್ಸಾಹಿಗಳು ಮತ್ತು ಛಾಯಾಗ್ರಾಹಕರಿಗೆ ಸೂಕ್ತವಾದ ಹೆಚ್ಚು ನಿಕಟ ಅನುಭವ.

5 ಜನರಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಅಥವಾ

ಕ್ಯಾಂಟರ್ ಸಫಾರಿ ಬೆಳಗ್ಗೆ 6 - 9 ಮತ್ತು ಸಂಜೆ 3 – 6

ಕುಟುಂಬ ಸಮೇತ ಅಥವಾ ದೊಡ್ಡ ಗುಂಪುಗಳಿಗೆ ಸೂಕ್ತವಾದ 18 ಆಸನಗಳ ಆರಾಮದಾಯಕ ಸಫಾರಿ ಬಸ್.

ಹುಲಿಗಳು, ಆನೆಗಳು, ಚಿರತೆಗಳು ಮತ್ತು ಹೆಚ್ಚಿನ ಪ್ರಾಣಿಗಳನ್ನು ವಿಕ್ಷಿಸಬಹುದು.

ಇದು ಜೀವನದಲ್ಲಿ ಮರೆಯಲಾಗದ ಅನೂಭವವನ್ನು ನೀಡುತ್ತದೆ. ಅಕ್ಟೋಬರ್‌ನಲ್ಲಿ ಇಲ್ಲಿಗೆ ಭೇಟಿವುದು ಸೂಕ್ತ ಸಮಯವಾಗಿದೆ. ಈ ಸಮಯದಲ್ಲಿ ಉದ್ಯಾನವನ್ನು ವೀಕ್ಷಿಸುವುದು ವಿಶೇಷ ಮತ್ತು ರೋಮಾಂಚಕವಾಗಿರುತ್ತದೆ. ಭಾರತೀಯ ಪ್ಯಾಂಗೊಲಿನ್‌ಗಳು, ಧೋಲ್‌ಗಳು, ಕತ್ತೆಕಿರುಬಗಳು, ಬೊಗಳುವ ಜಿಂಕೆಗಳು ಮತ್ತು ಇಲಿ ಜಿಂಕೆಗಳನ್ನು ನೋಡಲೂ ಇದು ಉತ್ತಮ ಸಮಯ.

ಪಕ್ಷಿ ವೀಕ್ಷಣೆ

ಬಂಡೀಪುರ ರಾಷ್ಟ್ರೀಯ ಉದ್ಯಾನವು ಪಕ್ಷಿ ಪ್ರಿಯರ ಸ್ವರ್ಗವಾಗಿದ್ದು, 200 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿಗೆ ಇಲ್ಲಿ ನೆಲೆಕಂಡುಕೊಂಡಿವೆ. ನೀವು ವರ್ಣರಂಜಿತ ಇಂಡಿಯನ್ ರೋಲರ್‌ ಅಂದರೆ ನೀಲಕಂಠ, ಕ್ರೆಸ್ಟೆಡ್ ಸರ್ಪೆಂಟ್ ಈಗಲ್ ಮತ್ತು ಇತರ ಅದ್ಭುತ ಪಕ್ಷಿಗಳನ್ನು ನೋಡಬಹುದು. ಸಫಾರಿಗಳ ಸಮಯದಲ್ಲಿ ಅಥವಾ ಉದ್ಯಾನದಲ್ಲಿ ಶಾಂತಿಯುತ ನಡಿಗೆಯ ಮೂಲಕ ಪಕ್ಷಿ ವೀಕ್ಷಣೆಯನ್ನು ಆನಂದಿಸಬಹುದು. ನಿಮ್ಮ ದೃಶ್ಯಗಳನ್ನು ದಾಖಲಿಸಲು ಕ್ಯಾಮೆರಾ, ಬೈನಾಕ್ಯುಲರ್ ಮತ್ತು ನೋಟ್‌ಬುಕ್ ಅನ್ನು ತರಲು ಮರೆಯಬೇಡಿ - ಇದು ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಅದ್ಭುತ ಮಾರ್ಗ.

ನೇಚರ್‌ ವಾಕ್‌ ಮತ್ತು ಚಾರಣ

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸೌಂದರ್ಯವನ್ನು ಅನುಭವಿಸಲು ಉತ್ತಮ ಮಾರ್ಗವೆಂದರೆ ಪ್ರಕೃತಿ ನಡಿಗೆ ಮತ್ತು ಚಾರಣ. ಉದ್ಯಾನವನವು ಹಚ್ಚ ಹಸಿರಿನ ಕಾಡುಗಳು ಮತ್ತು ರೋಮಾಂಚಕ ಭೂದೃಶ್ಯಗಳ ಮೂಲಕ ಸುತ್ತುವ ಹಲವಾರು ರಮಣೀಯ ಹಾದಿಗಳನ್ನು ನೀಡುತ್ತದೆ. ಈ ನಡಿಗೆಗಳು ನಿಮಗೆ ಕಾಡಿನ ದೃಶ್ಯಗಳು ಮತ್ತು ಶಬ್ದಗಳನ್ನು ಹತ್ತಿರದಿಂದ ಆನಂದಿಸಲು ಅನುವು ಮಾಡಿಕೊಡುತ್ತದೆ. ನೀವು ದಾರಿಯುದ್ದಕ್ಕೂ ಜಿಂಕೆ, ಮಂಗಗಳು ಮತ್ತು ಆಗಾಗ ಆನೆಗಳನ್ನು ಸಹ ಕಾಣಬಹುದು.

ಚಾರಣಿಗರು ಖಂಡಿತವಾಗಿಯೂ ಪ್ರಯತ್ನಿಸಲೇಬೇಕಾದದ್ದು, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಚಾರಣ, ಇದು ನಿಮ್ಮನ್ನು ಇಲ್ಲಿನ ಅತಿ ಎತ್ತರದ ಬೆಟ್ಟಕ್ಕೆ ಕರೆದೊಯ್ಯುತ್ತದೆ. ಸುತ್ತಮುತ್ತಲಿನ ಬೆಟ್ಟಗಳು ಮತ್ತು ಕಣಿವೆಗಳ ಮರೆಯಲಾಗದಂಥ ಅನುಭವಗಳನ್ನು ನೀಡುತ್ತದೆ.

jungle lodge - bandipur

ವನ್ಯಜೀವಿ ಚಲನಚಿತ್ರಗಳು

ಒಂದು ದಿನದ ತಿರುಗಾಟದ ನಂತರ, ಅತಿಥಿಗಳು ಲಾಡ್ಜ್ ಆಯೋಜಿಸುವ ಆಕರ್ಷಕ ವನ್ಯಜೀವಿ ಚಲನಚಿತ್ರ ನೋಡುತ್ತಾ ವಿಶ್ರಾಂತಿ ಪಡೆಯಬಹುದು. ಈ ಚಲನಚಿತ್ರಗಳು ಶೈಕ್ಷಣಿಕ ಮತ್ತು ಮನರಂಜನೆ ಎರಡಕ್ಕೂ ಆಗಿದ್ದು, ಬಂಡೀಪುರ ಹುಲಿ ಅಭಯಾರಣ್ಯದ ಪ್ರಾಣಿಗಳು, ಪರಿಸರ ವ್ಯವಸ್ಥೆಗಳು ಮತ್ತು ಸಂರಕ್ಷಣಾ ಪ್ರಯತ್ನಗಳ ಬಗ್ಗೆ ಸಿಂಹಾವಲೋಕನ ನೀಡುತ್ತವೆ. ಎಲ್ಲ ವಯಸ್ಸಿನ ಪ್ರಕೃತಿ ಪ್ರಿಯರಿಗೆ ತಾವು ಅನ್ವೇಷಿಸಿದ ಕಾಡುಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳವ ಕುತೂಹಲತೆಗೆ ಇದು ಒಂದು ಪರಿಪೂರ್ಣ ಸಂಜೆ ಚಟುವಟಿಕೆಯಾಗಿದೆ.

ಬಂಡೀಪುರ ಹುಲಿ ಮೀಸಲು

ಭಾರತದ ಕರ್ನಾಟಕ ರಾಜ್ಯದಲ್ಲಿರುವ ಬಂಡೀಪುರ ಹುಲಿ ಮೀಸಲು ಪ್ರದೇಶವು ಸಂರಕ್ಷಿತ ಪ್ರದೇಶವಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗೊತ್ತುಪಡಿಸಿದ ನೀಲಗಿರಿ ಮೀಸಲು ಪ್ರದೇಶದ ಪ್ರಮುಖ ಭಾಗವಾಗಿದೆ. ಸುಮಾರು 874 ಚಕಿಮೀ ವಿಸ್ತೀರ್ಣದಲ್ಲಿರುವ ಈ ಉದ್ಯಾನವನವು ಜೀವವೈವಿಧ್ಯದಿಂದ ಸಮೃದ್ಧವಾಗಿದೆ. ಇದು ಸುಮಾರು 100ಕ್ಕೂ ಹೆಚ್ಚು ಜಾತಿಯ ಸಸ್ತನಿಗಳು ಮತ್ತು 300 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ.

ಈ ಮೀಸಲು ಪ್ರದೇಶವು ವನ್ಯಜೀವಿ ಪ್ರಿಯರ ಪ್ರಮುಖ ಆಕರ್ಷಣೆಯಾದ ಬಂಗಾಳ ಹುಲಿಗಳ ಸಂಖ್ಯೆಯ ಆರೋಗ್ಯಕರ ಬೆಳವಣಿಗೆಯಿಂದ ಹೆಸರುವಾಸಿಯಾಗಿದೆ. ಇದರ ಜತೆಗೆ, ನೀವು ಆನೆಗಳು, ಗೌರ್‌ಗಳು (ಭಾರತೀಯ ಕಾಡೆಮ್ಮೆ), ವಿವಿಧ ಜಾತಿಯ ಜಿಂಕೆಗಳು ಮತ್ತು ವೈವಿಧ್ಯ ಪಕ್ಷಿಗಳನ್ನು ನೋಡಬಹುದು. ಭಾರತೀಯ ದೈತ್ಯ ಅಳಿಲು ಮತ್ತು ಸಿಂಹ ಬಾಲದ ಮಂಗದಂಥ ಹಲವಾರು ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ಇದು ಆಶ್ರಯ ತಾಣವೂ ಆಗಿದೆ.

ನೀವು ಇಲ್ಲಿ ಸಂದರ್ಶಕರ ಜತೆಗೆ ಸಫಾರಿ, ಪ್ರಕೃತಿ ನಡಿಗೆಗಳು ಮತ್ತು ಪಕ್ಷಿ ವೀಕ್ಷಣೆ ಸೇರಿ ವೈವಿಧ್ಯ ಚಟುವಟಿಕೆಗಳನ್ನು ಆನಂದಿಸಬಹುದು.

ಪ್ಯಾಕೇಜ್‌ಗಳು

ಮಹಾರಾಜ ಪ್ಯಾಕೇಜ್‌

ವೈಸ್‌ರಾಯ್‌ ಪ್ಯಾಕೇಜ್‌

ಡಿಲಕ್ಸ್‌ ರೂಮ್‌

ಪ್ಯಾಕೇಜ್‌ನಲ್ಲಿ: ಊಟ, ವಸತಿ, ಬಂಡೀಪುರ ರಾಷ್ಟ್ರೀಯ ಉದ್ಯಾವನದಲ್ಲಿ ಸಫಾರಿ

ದಿನಚರಿ

ಮಧ್ಯಾಹ್ನ 1:00 ಚೆಕ್ ಇನ್ ಮಾಡಿ, ಕುಳಿತು ಫ್ರೆಶ್ ಆಗಿ.

ಮಧ್ಯಾಹ್ನ 1:30 - 2:30 ಗೋಲ್ ಘರ್‌ನಲ್ಲಿ ರುಚಿಕರವಾದ ಊಟವನ್ನು ಸವಿಯಿರಿ.

ಮಧ್ಯಾಹ್ನ 2:45 - 3:00 ಸ್ವಾಗತ ಪ್ರದೇಶದಲ್ಲಿ ಸಫಾರಿ ಬ್ರೀಫಿಂಗ್‌ನೊಂದಿಗೆ ಚಹಾ/ಕಾಫಿಯೊಂದಿಗೆ ಉದ್ಯಾನವನದೊಳಗೆ ಸಫಾರಿಗೆ ಹೊರಡಲು ಸಿದ್ಧರಾಗಿ.

ಮಧ್ಯಾಹ್ನ 3:00 - 6:15 ಇಲ್ಲಿನ ತಜ್ಞರ ತಂಡ ನಿಮ್ಮನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ವಾಹನದಲ್ಲಿ ವನ್ಯಜೀವಿ ಸಫಾರಿಯಲ್ಲಿ ಕರೆದೊಯ್ಯುತ್ತಾರೆ.

ಕಾಡು ಮತ್ತು ಅಲ್ಲಿ ವಾಸಿಸುವ ಎಲ್ಲ ಪ್ರಾಣಿಗಳ ಬಗ್ಗೆ ಅವರ ಅನುಭವಗಳು ಮತ್ತು ಮಾಹಿತಿಯನ್ನು ತೋರಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ.

bandipur 1

ದಿನ 1

ಸಂಜೆ 6:15 - 7:00 ಪಗ್‌ಮಾರ್ಕ್ ರೆಸ್ಟೋರೆಂಟ್‌ನಲ್ಲಿ ಚಹಾ/ಕಾಫಿ ನೀಡಲಾಗುತ್ತದೆ.

ಸಂಜೆ 7:30 - 8:15 ಸಭಾಂಗಣದಲ್ಲಿ ವನ್ಯಜೀವಿ ಚಲನಚಿತ್ರ ಪ್ರದರ್ಶನವನ್ನು ವೀಕ್ಷಿಸಿ.

ರಾತ್ರಿ 8:30 - 10:00 ಗೋಲ್ ಘರ್‌ನಲ್ಲಿ ಊಟ ಮಾಡುವಾಗ, ಕ್ಯಾಂಪ್‌ಫೈರ್‌ನ ಉಷ್ಣತೆಗೆ ಮೈಯೊಡ್ಡಿ, ಇತರ ಅತಿಥಿಗಳು ಮತ್ತು ಅಲ್ಲಿನ ಸಿಬ್ಬಂದಿಯೊಂದಿಗೆ ಕಾಡಿನ ಕಥೆಗಳನ್ನು, ಅನುಭವಗಳನ್ನು ವಿನಿಮಯ ಮಾಡಿಕೊಳ್ಳಿ

ದಿನ 2

ಬೆಳಗ್ಗೆ 5:45 - 6:00 ಸ್ವಾಗತ ಪ್ರದೇಶದಲ್ಲಿ ಚಹಾ/ಕಾಫಿ ನೀಡಲಾಗುತ್ತದೆ

ಬೆಳಿಗ್ಗೆ 6:00 - 9:15 ಇಲ್ಲಿನ ತಜ್ಞರ ತಂಡ ನಿಮ್ಮನ್ನು ವಾಹನದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ವನ್ಯಜೀವಿ ಸಫಾರಿಯಲ್ಲಿ ಕರೆದೊಯ್ಯುತ್ತಾರೆ. ಕಾಡು ಮತ್ತು ಅಲ್ಲಿ ವಾಸಿಸುವ ಎಲ್ಲ ಪ್ರಾಣಿಗಳ ಬಗ್ಗೆ ಅವರ ಅನುಭವಗಳು ಮತ್ತು ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ ಮತ್ತು ತೋರಿಸುತ್ತಾರೆ.

ಬೆಳಗ್ಗೆ 9:15 - 10:15 ಫ್ರೆಶ್ ಆಗಲು ಮತ್ತು ಉಪಾಹಾರಕ್ಕಾಗಿ ಸಮಯಕ್ಕೆ ಸರಿಯಾಗಿ ಲಾಡ್ಜ್‌ಗೆ ಹಿಂತಿರುಗಿ.

ಬೆಳಗ್ಗೆ 10:30 – ನೆನಪಿನ ಬುತ್ತಿಯೊಂದಿಗೆ ಮರಳಿ ಮನೆಗೆ.

ಹೆಚ್ಚಿನ ಮಾಹಿತಿಗಾಗಿ

ಬಂಡೀಪುರ ಸಫಾರಿ ಲಾಡ್ಜ್, ಅಂಗಲಾ ಪೋಸ್ಟ್, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ, ಮೇಲುಕಾಮನಹಳ್ಳಿ (ಮೈಸೂರು - ಊಟಿ ರಸ್ತೆ) ಮೈಸೂರು ಸುತ್ತಮುತ್ತ - 571 126

ಕರ್ನಾಟಕ, ಭಾರತ

ಮ್ಯಾನೇಜರ್: ಪಂಪಾಪತಿ ಎಚ್.ಪಿ

ಬುಕಿಂಗ್‌ಗಾಗಿ ಸಂಪರ್ಕಿಸಿ : 080-40554055

ದೂರವಾಣಿ ಸಂಖ್ಯೆ: 9449597880 & 9449599794

ಇಮೇಲ್ ಐಡಿ: info@junglelodges.com

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಉತ್ತರ ಕರ್ನಾಟಕದ ರಂಗನತಿಟ್ಟು...

Read Previous

ಉತ್ತರ ಕರ್ನಾಟಕದ ರಂಗನತಿಟ್ಟು...

ಭಾರತದಲ್ಲಿ ನೀವು ನೋಡಲೇಬೇಕಿರುವ 8 ಮ್ಯಾಂಗ್ರೋವ್‌ ಕಾಡುಗಳು..

Read Next

ಭಾರತದಲ್ಲಿ ನೀವು ನೋಡಲೇಬೇಕಿರುವ 8 ಮ್ಯಾಂಗ್ರೋವ್‌ ಕಾಡುಗಳು..