Sunday, July 27, 2025
Sunday, July 27, 2025

ಮೆಕ್ಸಿಕೋದ ಮರುಭೂಮಿಯಲ್ಲಿ ಕವಿದ ’ಕಾರ್’ ಮೋಡ!

ದಾರಿ ಮಧ್ಯದಲ್ಲಿ ಕಾರ್ ನಿಲ್ಲಿಸಬೇಡಿ, Don’t pick Hitchhinkers, ದಾರಿಹೋಕರಿಗೆ ಲಿಫ್ಟ್ ಕೊಡಬೇಡಿ, ಹೀಗೆ…..ಅಲ್ಲೆಲ್ಲ ಎಚ್ಚರಿಕೆಯ ಚಿಹ್ನೆಗಳನ್ನು ಹಾಕಲಾಗಿತ್ತು.

- ಯಮುನಾ ಶ್ರೀನಿಧಿ

ʼಪ್ರ‍್ಯಾಕ್ಟಿಸ್ ಗ್ರ‍್ಯಾಟಿಟ್ಯೂಡ್’! ಕೃತಜ್ಞತೆಯನ್ನು ಅಭ್ಯಾಸ ಮಾಡಿ ಅಂತ ಹೇಳುವುದನ್ನು ಆಗಾಗ ಕೇಳುತ್ತಿರುತ್ತೇವೆ. ಕೃತಜ್ಞತೆಯಿಂದಿರಬೇಕು ಎಂಬುದರ ಅರಿವು ನನಗಿತ್ತಾದರೂ, ಅದರ ನಿಜವಾದ ಅನುಭವವಾಗಿದ್ದು 25 ವರ್ಷಗಳ ಹಿಂದೆ. ಅದಕ್ಕೆ ಕಾರಣ ನಾನು ನನ್ನ ಪತಿ ಶ್ರೀನಿಧಿಯವರು ಮೆಕ್ಸಿಕೋಗೆ ಪ್ರವಾಸಕ್ಕೆ ಹೋದಾಗ ನಡೆದ ಒಂದು ಘಟನೆ.

2001ರ ಅಕ್ಟೋಬರ್ ತಿಂಗಳು. ನಾನು ಹಾಗೂ ಶ್ರೀನಿಧಿ, ಮೆಕ್ಸಿಕೋದ EI Paso ನಗರಕ್ಕೆ Houstonನಿಂದ ಪ್ರವಾಸ ಹೊರಟಿದ್ದೆವು. ಅದು ಹೆಚ್ಚುಕಡಿಮೆ 1200ಕಿಮೀ ದೂರ! ನಾವು ಕಾರಲ್ಲಿ ಇಡೀ ದಾರಿ ಡ್ರೈವ್ ಮಾಡಬೇಕಾಗಿತ್ತು. ಮೊದಲ ದಿನ 700 ಕಿಲೋಮೀರ್‌ ಗಳು ಡ್ರೈವ್ ಮಾಡಿ. ಎರಡನೇ ದಿನ 500 ಕಿಮೀ ಡ್ರೈವ್ ಮಾಡುವ ಯೋಜನೆ ಇತ್ತು. ಅದಕ್ಕೂ ಮೊದಲೇ ಮೊದಲು ನಾವು ಅಮೆರಿಕದ ಬಹಳಷ್ಟು ರಾಜ್ಯಗಳಿಗೆ ಡ್ರೈವ್ ಮಾಡಿಕೊಂಡು ಹೋಗಿದ್ದೆವು, ಅಲ್ಲಿ ರಸ್ತೆಗಳು ಬಹಳ ಚೆನ್ನಾಗಿಯೂ ಇತ್ತು. ಅದರ ಜತೆಗೆ ನಿಸರ್ಗವನ್ನು ಆನಂದಿಸುವ ನಿಟ್ಟಿನಲ್ಲಿ ಆರಾಮವಾಗಿ ಡ್ರೈವ್ ಮಾಡಿಕೊಂಡು ಹೋಗುವ ನಿರ್ಧಾರ ಮಾಡಿದ್ದೆವು. ಬಹಳ ಉತ್ಸಾಹದಿಂದ ಬೆಳಿಗ್ಗೆ 5 ಗಂಟೆಗೆ ಡ್ರೈವಿಂಗ್ ಶುರು ಮಾಡಿ ಹೊರಟೆವು. 300 ಕಿಮೀ ಕ್ರಮಿಸಿದ ನಂತರ ಸಂಪೂರ್ಣ ಮರುಭೂಮಿ ಮತ್ತು ಜನನಿಬಿಡ ಪ್ರದೇಶ ತಲುಪಿದೆವು. ದಾರಿ ಮಧ್ಯದಲ್ಲಿ ಕಾರ್ ನಿಲ್ಲಿಸಬೇಡಿ, Don’t pick Hitchhinkers, ದಾರಿಹೋಕರಿಗೆ ಲಿಫ್ಟ್ ಕೊಡಬೇಡಿ, ಹೀಗೆ…..ಅಲ್ಲೆಲ್ಲ ಎಚ್ಚರಿಕೆಯ ಚಿಹ್ನೆಗಳನ್ನು ಹಾಕಲಾಗಿತ್ತು. ಫೋನ್ ನೆಟ್ ವರ್ಕ್ ಅಪರೂಪವಾಗಿ ಸಿಗುತಿತ್ತು. ಹಾಗೂ 200 ಕಿಲೋಮೀಟರ್ ಗೊಮ್ಮೆ ಮಾತ್ರ ಪೆಟ್ರೋಲ್ ಸಿಗುವ ಮುನ್ಸೂಚನೆಯನ್ನು ನೀಡಲಾಗಿತ್ತು. 600 ಕಿಮೀವರೆಗೆ ಏನೂ ತೊಂದರೆ ಇಲ್ಲದೆ ಸಾಗಿದೆವು. ಇನ್ನು ಕೇವಲ 100 ಕಿಮೀ ಇದ್ದಾಗ ಆ ರಾತ್ರಿ ತಂಗಲು ತಲುಪಬೇಕಿದ್ದ ಊರನ್ನು ತಲುಪಬೇಕಾಗಿತ್ತು. ರಾತ್ರಿ ಒಂಬತ್ತು ಗಂಟೆಯಾಗಿತ್ತು, ನಮ್ಮ ಕಾರ್‌ ನ transmission ಕೆಟ್ಟು, ಕಾರ್ ನಿಂತು ಹೋಯಿತು. ಸ್ಟಾರ್ಟ್‌ ಆಗುತ್ತಿರಲಿಲ್ಲ.

ಕಗ್ಗತ್ತಲು ಆವರಿಸಿತ್ತು. ಆಗ ಮರುಭೂಮಿಯ ಮಧ್ಯದಲ್ಲಿ ನಾವಿಬ್ಬರೇ! ಒಂದು ಕಿಮೀ ದೂರದಲ್ಲಿ ಪೆಟ್ರೊಲ್ ಬಂಕ್ ಇರುವ ಚಿಹ್ನೆ ಇತ್ತು. ಅಲ್ಲಿಗೆ ನಡೆದುಕೊಂಡು ಹೋಗಬೇಕು. ಆದರೆ ಹೋಗದೆ ಬೇರೆ ದಾರಿಯಿಲ್ಲ. ಫೋನ್ ನೆಟ್ವರ್ಕ್‌ ಸಿಗಬಹುದೇನೋ, ಸಹಾಯಕ್ಕೆ ಜನರು ಬರಬಹುದೇನೋ ಅಂತ ಇಬ್ಬರೂ ನಡೆದುಕೊಂಡು ಹೋದೆವು. ಬಹಳ ಪ್ರಯತ್ನ ಪಟ್ಟನಂತರ ಸದ್ಯ ನೆಟ್ವರ್ಕ್‌ ಸಿಕ್ಕಿತು. ಕಾರ್ ಟೋಯಿಂಗ್ ಕಂಪನಿಗೆ ಕರೆ ಮಾಡಿ, ನಾವು ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಿದೆವು. ಅವನಿರುವ ಜಾಗದಿಂದ ನಮ್ಮನ್ನು ತಲುಪೋದಕ್ಕೆ ಕನಿಷ್ಠ ಏಳು ಗಂಟೆಗಳು ಬೇಕಾಗುತ್ತದೆ ಅಂದ. ಅಂದರೆ, ಬೆಳಿಗ್ಗೆ 5 ಗಂಟೆಗೆ ಸುಮಾರಿಗೆ, ನಮಗೋ ಬೇರೆ ದಾರಿಯಿರಲಿಲ್ಲ. ನಮ್ಮ ಕಾರ್‌ ಗೆ ವಾಪಸ್ಸು ನಡೆದುಕೊಂಡು ಹೋಗುವ ಮುಂಚೆ ಬಹಳ ಹಸಿವಾಗಿದ್ದರಿಂದ ಏನಾದರೂ ತಿನ್ನಲು ತೆಗೆದುಕೊಳ್ಳೋಣ ಅಂತ ವಿಚಾರಿಸಿದೆವು. ತಡರಾತ್ರಿಯಾಗಿದ್ದರಿಂದ ಅಂಗಡಿಗಳೂ ಮುಚ್ಚಿದ್ದವು. ಸರಿ ವಾಷ್ ರೂಮ್ ಉಪಯೋಗಿಸಿ ಹೊರಡೋಣ ಅಂತ ಹೋದೆ. ನಾನು ಲೇಡೀಸ್ ವಾಷ್ ರೂಮ್ ಒಳಗೆ ಹೋದ ತಕ್ಷಣ ಯಾರೋ ಒಬ್ಬ ಗಂಡಸು ಒಳಗೆ ಬಂದುಬಿಟ್ಟ. ಕ್ಲೀನ್ ಮಾಡುವ ಕಾರಣ ನೀಡಿ ಅಲ್ಲಿಯೇ ಹಾಗೆಯೇ ನಿಂತುಬಿಟ್ಟ. ಅದೂ ರಾತ್ರಿ 11 ಗಂಟೆಯಲ್ಲಿ!

maxican desert

ನನಗೆ ಏನು ಮಾಡೋದೆಂದು ದಿಕ್ಕೇ ತೋಚಲಿಲ್ಲ. ಕಿರುಚಲು ಹೆದರಿಕೆಗೆ ಗಂಟಲಿಂದ ಧ್ವನಿ ಹೊರಗೆ ಬರುತ್ತಿಲ್ಲ. ಧೈರ್ಯ ಮಾಡಿ ಬಾಗಿಲು ತೆಗೆದು ಓಡಿ ಹೊರಗೆ ಬಂದೆ. ನಡೆದದ್ದನ್ನು ಶ್ರೀನಿಧಿಗೆ ಹೇಳಿ, ಇಬ್ಬರೂ ಅಲ್ಲಿಂದ ತಕ್ಷಣವೇ ಓಡಿ ನಮ್ಮ ಕಾರಿಗೆ ಹೋದೆವು. ಕಗ್ಗತ್ತಲು. ಕಾರ್ ಸ್ಟಾರ್ಟ್ ಆಗುತ್ತಲೇ ಇಲ್ಲ. ಕಾರಿನ ಬಾಗಿಲು ತೆಗೆದು ಕೂರಲು ಭಯ. ಬಾಗಿಲು ಹಾಕಿಕೊಂಡು ಉಸಿರು ಕಟ್ಟುವ ಪರಿಸ್ಥಿತಿ. ತಂದಿದ್ದ ನೀರು, ತಿಂಡಿ ಎಲ್ಲ ಖಾಲಿ. ಹೇಗೋ ರಾತ್ರಿ ಇಡೀ ಕಳೆದೆವು. ಆ ಪರಿಸ್ಥಿತಿಯಲ್ಲಿ ಜೀವಂತವಾಗಿ ಇರುತ್ತೀವೋ? ಇಲ್ಲವೋ? ಎನ್ನುವ ಭಯದಲ್ಲೇ ಸೂರ್ಯನ ಉದಯವಾಯಿತು. 6.30ಕ್ಕೆ ಟೋಯಿಂಗ್ ಟ್ರಕ್ ಬಂದಮೇಲೆ ಜೀವ ಬಂದಂತಾಯಿತು. ಕಾರನ್ನು ಆ ಟ್ರಕ್ಕಿಗೆ ಹಾಕಿಕೊಂಡು 600ಕಿಮೀ ಪ್ರಯಾಣಿಸಿ EI Paso ನಗರವನ್ನು ತಲುಪಿದೆವು. ನಾವು ಸಾಮಾನ್ಯವಾಗಿ ಡ್ರೈವಿಂಗ್ನಲ್ಲಿ ಪ್ರವಾಸ ಮಾಡುವಾಗ, ಪೆಟ್ರೋಲ್, ಚಕ್ರಗಳನ್ನು ತಪಾಸಣೆ ಮಾಡಿಸಿರುತ್ತೀವಿ. ಆದರೆ, ವಿವರವಾಗಿ engine ಮತ್ತು transmissionಗಳ ತಪಾಸಣೆ ಮಾಡಿರುವುದಿಲ್ಲ. ಅವು ಅಷ್ಟು ಸುಲಭವಾಗಿ ಕೆಡುವುದೂ ಇಲ್ಲ. ಆದರೆ ಜೀವನದಲ್ಲಿ ಏನು ಬೇಕಾದರೂ ಆಗಬಹುದು. ರೆಗ್ಯುಲರ್ ಆಗಿ ಆರೋಗ್ಯ ತಪಾಸಣೆ ಮಾಡಿಸುತ್ತಿದ್ದರೂ ಕೆಲವೊಮ್ಮೆ ಅನಿರೀಕ್ಷಿತವಾಗಿ ದೊಡ್ಡ ಏರುಪೇರಾಗಬಹುದು. ಮಾನವನ ಜೀವನ ಬಹಳ ಅನಿರೀಕ್ಷಿತವಾದದ್ದು.

yamuna srinidhi

ನಮ್ಮ ಎರಡು ದಿನಗಳ ಆ ಮೆಕ್ಸಿಕೋ ಪ್ರಯಾಣ ಜೀವನದಲ್ಲಿ ಬಹಳಷ್ಟು ಪಾಠವನ್ನು ಕಲಿಸಿತು. ಜೀವನದಲ್ಲಿ ಎಷ್ಟೊಂದು ವಿಷಯಗಳನ್ನು ನಾವು ಲಘುವಾಗಿ ತೆಗೆದುಕೊಂಡುಬಿಟ್ಟಿರುತ್ತೇವೆ. ನಾವು ಉಸಿರಾಡುವ ಗಾಳಿಯೂ ಸಿಗದಂತಾಗುವ ಪರಿಸ್ಥಿತಿ ಯಾವಾಗ ಬೇಕಾದರೂ ಬರಬಹುದು. ಆದ್ದರಿಂದ ನಾವು ಜೀವನದಲ್ಲಿ ಎಲ್ಲದಕ್ಕೂ ಕೃತಜ್ಞರಾಗಿರೋದು ಬಹಳ ಮುಖ್ಯ. ಪ್ರವಾಸ ನಮಗೆ ಜೀವನದ ಪಾಠಗಳನ್ನು ಬಹಳ ಚೆನ್ನಾಗಿ ಕಲಿಸುತ್ತೆ.

ಇದೇ ಕಾರಣಕ್ಕೆ ಹತ್ತು ವರ್ಷಗಳ ಹಿಂದೆ ನಾವು ನಮ್ಮ ಧಾರಾವಾಹಿಯ ಚಿತ್ರೀಕರಣಕ್ಕಾಗಿ ಒಂದು ಚಿಕ್ಕ ಊರಿಗೆ ಹೋದಾಗ, ರಾತ್ರಿ ಶೂಟಿಂಗ್ ಮುಗಿಯುವುದು ತಡವಾಯಿತು. ಪಾಪ ಮ್ಯಾನೇಜರ್ ಎಲ್ಲೋ ಹೇಗೋ ಹುಡುಕಿಕೊಂಡು ಎಲ್ಲರಿಗೂ ಊಟ ತೆಗೆದುಕೊಂಡು ಬಂದಿದ್ದರು, ಹಸಿದಿದ್ದ ಕಾರಣ ಗಬಗಬನೆ ಊಟ ಮಾಡಿಬಿಟ್ಟೆ. ಅರ್ಧ ಗಂಟೆಯ ನಂತರ ಮ್ಯಾನೇಜರ್ ಬಂದು ತೊಂದರೆಗೆ ಕ್ಷಮಿಸಿ ಅಂದರು, ನನಗೆ ಅರ್ಧವಾಗಲಿಲ್ಲ. ಯಾಕೆ ಎಂದು ಕೇಳಿದೆ. ಆಗ ಆತ “ಕೆಲವು ಕಲಾವಿದರು, ಆ ಊಟ ಚೆನ್ನಾಗಿಲ್ಲ, ನಮಗೆ ಸೇರುತ್ತಿಲ್ಲ, ಈಗಲೇ ಬೇರೆ ಊಟ ತನ್ನಿ ಎಂದು ಜೋರಾಗಿ ಜಗಳ ಮಾಡುತ್ತಿದ್ದಾರೆ. ಅದಕ್ಕೆ ನಿಮ್ಮನ್ನು ವಿಚಾರಿಸೋದಕ್ಕೆ ಬಂದೆ” ಅಂತ ಹೇಳಿದರು. ನಾನು ಹೇಳಿದೆ “ಸರ್ ಈ ತಡರಾತ್ರಿಯಲ್ಲಿ ಊಟ ಸಿಕ್ಕಿದ್ದೇ ಹೆಚ್ಚು. ಬಹಳ ಹಸಿವಾಗಿತ್ತು. ಚೆನ್ನಾಗಿ ತಿಂದೆ” ಅಂತ ಹೇಳಿದೆ. ಅವರಿಗೆ ಆನಂದಭಾಷ್ಪವೇ ಬಂದಿತು. ಇದೇ ಕಾರಣಕ್ಕೆ ಇರಬೇಕು ನಾನು ಕೆಲಸ ಮಾಡಿದ ಎಲ್ಲ ಯೋಜನೆಗಳ ಮ್ಯಾನೇರ‍್ಗಳಿಗೆ ನನ್ನನ್ನು ಕಂಡರೆ ವಿಶೇಷ ಅಭಿಮಾನ. ಅದನ್ನು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

30 ಕ್ಕೂ ಹೆಚ್ಚು ದೇಶಗಳನ್ನು ಸುತ್ತಿರುವ ನನಗೆ, ಎಲ್ಲ ಅನುಭವಗಳು ಸಂತಸಮಯವಾಗೇನೂ ಇಲ್ಲ. ನಮ್ಮ ಜೀವನದ ರೀತಿ ಪ್ರವಾಸಗಳೂ ಸವಾಲು ಮತ್ತು ಸಾಹಸಗಳಿಂದ ಕೂಡಿರುತ್ತವೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?