ಬಜೆಟ್ 2026–27: ಪ್ರವಾಸೋದ್ಯಮ ಮತ್ತು ಪ್ರಯಾಣಿಕ ಸಾರಿಗೆ ಕ್ಷೇತ್ರಕ್ಕೆ ನಿರ್ಣಾಯಕ ಕ್ಷಣ
ಇಂದಿಗೂ “India is a costly destination” ಎಂಬ ಭಾವನೆ ಅಂತಾರಾಷ್ಟ್ರೀಯ ಪ್ರವಾಸಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ. ಈ ಭಾವನೆಯನ್ನು ಬದಲಾಯಿಸಿ, ಭಾರತವನ್ನು ಅಫೋರ್ಡಬಲ್, ಮೌಲ್ಯಯುತ ಮತ್ತು ಗುಣಮಟ್ಟದ ಪ್ರವಾಸಿ ತಾಣವಾಗಿ ರೂಪಿಸುವ ಜವಾಬ್ದಾರಿ ಕೇಂದ್ರ ಸರಕಾರದ ಮೇಲಿದೆ. ಪ್ರವಾಸೋದ್ಯಮಕ್ಕೆ ನೀಡುವ ಪ್ರತಿಯೊಂದು ರುಪಾಯಿಯ ಹೂಡಿಕೆ ಉದ್ಯೋಗ, ಸ್ಥಳೀಯ ಆರ್ಥಿಕತೆ ಮತ್ತು ರಾಷ್ಟ್ರೀಯ ಆದಾಯವಾಗಿ ಮರಳುತ್ತದೆ ಎಂಬ ಸತ್ಯವನ್ನು ಸರಕಾರ ಮನಗಾಣಬೇಕು.
ಕೆ. ರಾಧಾಕೃಷ್ಣ ಹೊಳ್ಳ
ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ (ರಿ)
--
ಬಜೆಟ್ 2026–27 ಭಾರತದ ಪ್ರವಾಸೋದ್ಯಮ ಮತ್ತು ಪ್ರಯಾಣಿಕ ಸಾರಿಗೆ ಉದ್ಯಮಕ್ಕೆ ಕೇವಲ ಹಣಕಾಸಿನ ದಾಖಲೆ ಮಾತ್ರವಲ್ಲ; ಅದು ಈ ಕ್ಷೇತ್ರದ ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಮಹತ್ವದ ನೀತಿ ಘೋಷಣೆಯಾಗಬೇಕು. ಗುರುತಿಸಲ್ಪಟ್ಟ ಮತ್ತು ನಿಯಮ ಪಾಲಿಸುವ ಪ್ರವಾಸೋದ್ಯಮ ಸಂಸ್ಥೆಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸುವುದು ಸರಕಾರದ ಮೊದಲ ಆದ್ಯತೆಯಾಗಬೇಕಿದೆ. ಪರವಾನಗಿ ಪ್ರಕ್ರಿಯೆಗಳ ಸರಳೀಕರಣ, ನಿಯಂತ್ರಣ ಶುಲ್ಕಗಳಲ್ಲಿ ಇಳಿಕೆ, ವಾಹನ ನವೀಕರಣಕ್ಕೆ ಪ್ರೋತ್ಸಾಹ, ಹಾಗೂ ಉಚಿತ ಅಥವಾ ದೀರ್ಘಾವಧಿಯ ರೂಟ್ ಮತ್ತು ಪ್ರಿ-ಫ್ಲೈಯಿಂಗ್ ರಹದಾರಿ ಮೂಲಕ ಸಂಘಟಿತ ಪ್ರವಾಸಿ ಸೇವೆಗಳಿಗೆ ಉತ್ತೇಜನ ನೀಡುವುದು ಅತ್ಯಾವಶ್ಯಕ.
ಇದನ್ನೂ ಓದಿ: ಕರಾವಳಿ ಪ್ರವಾಸೋದ್ಯಮ: ಕಾರ್ಯಗತಗೊಳಿಸುವಿಕೆಗೆ ಆದ್ಯತೆ ಬೇಕು
ಇದರ ಜತೆಗೆ, ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಅತಿಯಾದ ಪಾರ್ಕಿಂಗ್ ಮತ್ತು ಪ್ರವೇಶ ಶುಲ್ಕಗಳಿಗೆ ಕಡಿವಾಣ, ಹಾಗೂ ಪ್ರವಾಸಿ ಮಾರ್ಗಗಳಲ್ಲಿ ಪ್ರಯಾಣಿಕ ವಾಹನಗಳಿಗೆ ರಿಯಾಯಿತಿ ಟೋಲ್ ದರಗಳನ್ನು ಜಾರಿಗೊಳಿಸುವುದು ಪ್ರವಾಸ ವೆಚ್ಚವನ್ನು ಗಣನೀಯವಾಗಿ ಇಳಿಸಬಲ್ಲದು. ಇ-ವಾಹನ ಹಾಗೂ ಕಡಿಮೆ ಮಾಲಿನ್ಯ ವಾಹನಗಳಿಗೆ ಹಣಕಾಸು ನೆರವು ಮತ್ತು ಸುಲಭ ಸಾಲ ವ್ಯವಸ್ಥೆಗಳು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಬಲ ತುಂಬಲಿವೆ. ಅಲ್ಲದೆ, ಇನ್ನೂ ಹೆಚ್ಚಿನ ಮಿತ್ರ ದೇಶಗಳಿಗೆ ಮೂವತ್ತು ದಿನಗಳ ವೀಸಾ-ಫ್ರೀ ಪ್ರವೇಶ ಯೋಜನೆಗಳ ವಿಸ್ತರಣೆ ಮೂಲಕ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ತಂತ್ರವೂ ಸಮಾನವಾಗಿ ಮಹತ್ವದ್ದಾಗಿದೆ.
ಇಂದಿಗೂ “India is a costly destination” ಎಂಬ ಭಾವನೆ ಅಂತಾರಾಷ್ಟ್ರೀಯ ಪ್ರವಾಸಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ. ಈ ಭಾವನೆಯನ್ನು ಬದಲಾಯಿಸಿ, ಭಾರತವನ್ನು ಅಫೋರ್ಡಬಲ್, ಮೌಲ್ಯಯುತ ಮತ್ತು ಗುಣಮಟ್ಟದ ಪ್ರವಾಸಿ ತಾಣವಾಗಿ ರೂಪಿಸುವ ಜವಾಬ್ದಾರಿ ಕೇಂದ್ರ ಸರಕಾರದ ಮೇಲಿದೆ. ಪ್ರವಾಸೋದ್ಯಮಕ್ಕೆ ನೀಡುವ ಪ್ರತಿಯೊಂದು ರುಪಾಯಿಯ ಹೂಡಿಕೆ ಉದ್ಯೋಗ, ಸ್ಥಳೀಯ ಆರ್ಥಿಕತೆ ಮತ್ತು ರಾಷ್ಟ್ರೀಯ ಆದಾಯವಾಗಿ ಮರಳುತ್ತದೆ ಎಂಬ ಸತ್ಯವನ್ನು ಸರಕಾರ ಮನಗಾಣಬೇಕು. ಆದ್ದರಿಂದ, ಬಜೆಟ್ 2026–27 ಪ್ರವಾಸೋದ್ಯಮವನ್ನು ಪೂರಕ ಕ್ಷೇತ್ರವಾಗಿ ಅಲ್ಲ, ದೇಶದ ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿ ಪರಿಗಣಿಸುವ ಧೈರ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಸಮಯವಾಗಿದೆ.

ಇನ್ನೊಂದು ಪ್ರಮುಖ ಅಂಶವೆಂದರೆ, ನಮ್ಮ ದೇಶದೊಳಗೆ ನಡೆಯಬೇಕಾದ ಅನೇಕ ಕಾರ್ಪೊರೇಟ್ ಕಾರ್ಯಕ್ರಮಗಳು, ಮದುವೆಗಳು ಮತ್ತು ಮೆಗಾ ಇವೆಂಟ್‌ಗಳು ಹೆಚ್ಚಿನ ವೆಚ್ಚದ ಕಾರಣ ವಿದೇಶಗಳಿಗೆ ಸ್ಥಳಾಂತರವಾಗುತ್ತಿರುವುದು. ಈ ಪ್ರವೃತ್ತಿಗೆ ತಡೆ ನೀಡಲು, ದೇಶದೊಳಗಿನ ಡೆಸ್ಟಿನೇಷನ್ ವೆಡ್ಡಿಂಗ್ ಮತ್ತು MICE (Meetings, Incentives, Conferences and Exhibitions) ಪ್ರವಾಸೋದ್ಯಮಕ್ಕೆ ವಿಶೇಷ ಪ್ರೋತ್ಸಾಹಕ ಯೋಜನೆಗಳು, ತೆರಿಗೆ ರಿಯಾಯಿತಿಗಳು ಹಾಗೂ ಮೂಲಸೌಕರ್ಯ ಬೆಂಬಲ ಒದಗಿಸುವ ಹೊಸ ಇನ್ಸೆಂಟಿವ್ ಸ್ಕೀಮ್‌ಗಳನ್ನು ಜಾರಿಗೊಳಿಸುವ ಅಗತ್ಯ ತುರ್ತುವಾಗಿದೆ. ಇದರಿಂದ ವಿದೇಶಕ್ಕೆ ಹರಿದುಹೋಗುತ್ತಿರುವ ವೆಚ್ಚ ದೇಶದೊಳಗೇ ಉಳಿದು, ಸ್ಥಳೀಯ ಉದ್ಯಮಗಳು ಮತ್ತು ಉದ್ಯೋಗಗಳಿಗೆ ದೊಡ್ಡ ಬೆಂಬಲ ದೊರೆಯಲಿದೆ.
ಇದರ ಜತೆಗೆ, ದೇಶೀಯ ಪ್ರವಾಸಕ್ಕಾಗಿ ಕುಟುಂಬಗಳು ಮತ್ತು ವ್ಯಕ್ತಿಗಳು ಮಾಡುವ ಪ್ರಯಾಣ ವೆಚ್ಚಗಳಿಗೆ ನಿರ್ದಿಷ್ಟ ಮಿತಿಯೊಳಗೆ ಆದಾಯ ತೆರಿಗೆ ವಿನಾಯಿತಿ (Income Tax Deduction) ಘೋಷಿಸುವುದಾದರೆ, ದೇಶೀಯ ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನ ಸಿಗುತ್ತದೆ. ಇದು ಮಧ್ಯಮ ವರ್ಗದ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಕ್ಕೆ ಪ್ರೇರೇಪಿಸುವುದರ ಜತೆಗೆ, ಹೊಟೇಲ್, ಸಾರಿಗೆ, ಮಾರ್ಗದರ್ಶಕರು ಮತ್ತು ಸ್ಥಳೀಯ ವ್ಯಾಪಾರಿಗಳಿಗೆ ನೇರ ಲಾಭ ತರುತ್ತದೆ.