ಪ್ರೀತಿಯನ್ನು ಬೀಗದಲ್ಲಿ ಬಂಧಿಸಿ.. ಕೀಲಿಕೈಯನ್ನು ನದಿಗೆಸೆಯಿರಿ..!
2014ರಲ್ಲೇ 7 ಲಕ್ಷಕ್ಕೂ ಅಧಿಕ ಬೀಗ ಇಲ್ಲಿ ಜಡಿಯಲಾಗಿದೆ ಎಂದರೆ ಇದರ ತೀವ್ರತೆ ಅರ್ಥವಾಗಬಹುದು. ಈ ಬೀಗಗಳ ಭಾರ ತಡೆಯಲಾಗದೆ, ಕಬ್ಬಿಣದ ತಡೆಗೋಡೆ ಕುಸಿದಿವೆ. ಈ ರೀತಿ ಕುಸಿದ ಮೂರು ಪ್ಯಾನೆಲ್ ಗಳನ್ನು ಬದಲಿಸಿ ಹಾಕಲಾಗಿದೆ. ಆದರೇನಂತೆ, ಅವಕ್ಕೂ ಬೀಗ ಜಡಿಯುವುದು ಜನ ಬಿಟ್ಟಿಲ್ಲ. lovewithoutlocks ಹ್ಯಾಶ್ ಟ್ಯಾಗ್ ಅಡಿಯಲ್ಲಿ ‘ಸ್ವಾಮಿ ಬೀಗ ಹಾಕಬೇಡಿ ಬದಲಿಗೆ ಸೆಲ್ಫಿ ತೆಗೆದುಕೊಳ್ಳಿ’ ಎಂದು ಮನವಿ ಮಾಡಿ ಕೊಳ್ಳುತ್ತಿದ್ದಾರೆ. ಆತನ ಕೂಗು ನಮ್ಮ ಜನರಿಗೆ ಕೇಳುವುದೇ?
- ರಂಗಸ್ವಾಮಿ ಮೂಕನಹಳ್ಳಿ
ತಮಿಳುನಾಡಿನ ಕಾಂಚಿಪುರಂನಲ್ಲಿ ವರದರಾಜ ಪೆರುಮಾಳ್ ದೇವಸ್ಥಾನವಿದೆ. ಇಲ್ಲಿ ಬೆಳ್ಳಿ ಹಾಗೂ ಚಿನ್ನದ ಹಲ್ಲಿಯ ವಿಗ್ರಹಗಳಿವೆ. ದೇವತೆಗಳ ರಾಜ ದೇವೇಂದ್ರ ಸರಸ್ವತಿ ಮಾತೆಯ ಶಾಪದಿಂದ ವಿಮೋಚನೆ ಪಡೆದ ನಂತರ ಇದನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿದ ಎನ್ನುವ ಪ್ರತೀತಿ ಇದೆ. ಈ ಹಲ್ಲಿಯ ಬಾಲ ಮುಟ್ಟುವುದರಿಂದ ತಮಗಂಟಿದ ದುರದೃಷ್ಟ ಕೊನೆಯಾಗುತ್ತದೆ ಎನ್ನುವುದು ಜನರ ನಂಬಿಕೆ. ಜನರ ಸ್ಪರ್ಶದಿಂದ ಇಂದು ಆ ಬಾಲಗಳು ಸವೆದು ಹೋಗಿವೆ.
ಇಸ್ರೇಲ್ ದೇಶದ ಜೆರುಸಲೇಂನಲ್ಲಿ’ವಿಯಾ ದೋಲೊರೋಸ’ (Via Dolorosa) ಎನ್ನುವ ರಸ್ತೆ ಇದೆ. ವಿಯಾ ಎಂದರೆ ರಸ್ತೆ ಅಥವಾ ದಾರಿ ಎನ್ನುವ ಅರ್ಥ ನೀಡುತ್ತೆ. ದೋಲೊರೋಸ ಎಂದರೆ ನೋವು. ಇಸ್ರೇಲ್ ನಲ್ಲಿ ಸ್ಪ್ಯಾನಿಷ್ ಭಾಷೆಯ ಪ್ರಭಾವ ಬಹಳಷ್ಟಿದೆ. ಯೇಸು ಕ್ರಿಸ್ತನನ್ನು ಶಿಲುಬೆ ಏರಿಸುವ ಸಲುವಾಗಿ ಒಂದು ಜಾಗದಿಂದ ಶಿಲುಬೆಗೆ ಏರಿಸುವ ಜಾಗಕ್ಕೆ ಕರೆತರುತ್ತಾರೆ. ಅರ್ಧ ಕಿಲೋಮೀಟರ್ ಗಿಂತ ಸ್ವಲ್ಪ ಹೆಚ್ಚಿರುವ ಈ ರಸ್ತೆಯಲ್ಲಿ ಯೇಸು ಪ್ರಭು ನೋವಿನಿಂದ, ಬಳಲಿಕೆಯಿಂದ ತೂರಾಡುತ್ತ ರಸ್ತೆಯ ಇಕ್ಕೆಲಗಳಲ್ಲಿ ಬೀಳದೆ ಇರಲು ಕೈ ಊರಿ ಸಹಾಯ ಪಡೆದನಂತೆ. ಹೀಗೆ ಆತ ಎಲ್ಲೆಲ್ಲಿ ಕೈ ಮುಟ್ಟಿದನೋ ಅಲ್ಲಿ ಜನ ಮುಗಿಬಿದ್ದು ತಾವು ಆ ಜಾಗವನ್ನು ಸ್ಪರ್ಶಿಸಿ ಗೋಡೆಯಲ್ಲಿ ಒಂದು ಸಣ್ಣ ಹಳ್ಳ ನಿರ್ಮಾಣ ಮಾಡಿದ್ದಾರೆ!
ಇಟಲಿಯ ರೋಮ್ ನಗರದಲ್ಲಿ ಫೌಂಟನ್ ಟ್ರೆವಿ ಎನ್ನುವ ಕಾರಂಜಿಯಿದೆ. ಹಿಮ್ಮುಖವಾಗಿ ನಿಂತು ಚಿಲ್ಲರೆ ಕಾಸು ಬಿಸಾಕಿದರೆ ಅದು ಸರಿಯಾಗಿ ಕಾರಂಜಿಯಲ್ಲಿ ಬಿದ್ದರೆ ಮತ್ತೆ ರೋಮ್ ನಗರಕ್ಕೆ ಮರಳಿ ಬರುವ ಅವಕಾಶ ಸಿಗುತ್ತದೆ ಎನ್ನುವುದು ಒಂದುನಂಬಿಕೆ. ಅಲ್ಲಿ ಜನರ ಜಾತ್ರೆಯೇ ಇದೆ ಎಂದು ಬಿಡಿಸಿ ಹೇಳಬೇಕಿಲ್ಲ.
ವ್ಯಾಟಿಕನ್ ಸಿಟಿಯಲ್ಲಿ ಸಂತ ಪೀಟರ್ ದೇವಾಲಯವಿದೆ. St.Peter’s Basilica ಎಂದು ನೀವು ಕೇಳಿರುತ್ತೀರಿ. ಅಲ್ಲಿ ಸಂತ ಪೀಟರ್ ಅವರ ಮೂರ್ತಿ ಇದೆ. ಈ ಪ್ರತಿಮೆಯ ಬಲಗಾಲಿಗೆ ಮುತ್ತಿಕ್ಕುವುದು ಸಂಪ್ರದಾಯ. ಈ ಮೂರ್ತಿಯ ಬಲಗಾಲಿನ ಹೆಬ್ಬೆರಳು ಪೂರ್ಣ ಸವೆದು ಹೋಗಿದೆ.
ಇಷ್ಟೆಲ್ಲಾ ಪೀಠಿಕೆ, ವಿಚಾರ ಏಕೆ ತಿಳಿಸಬೇಕಾಯ್ತು ಗೊತ್ತಾ? ಮುಕ್ಕಾಲು ಪಾಲು ಪ್ರವಾಸಿಗರು ಪ್ಯಾರಿಸ್, ರೋಮ್, ಲಂಡನ್ ಹೀಗೆ ಪಾಶ್ಚ್ಯಾತ್ಯ ದೇಶಗಳ ನಗರಗಳಿಗೆ ಹೋಗಿ ಬಂದ ನಂತರ ಅದರ ವೈಭವ, ಗತ್ತು ತಿಳಿಸುವುದರಲ್ಲಿ ಮುಗಿಸುತ್ತಾರೆ. ಆದರೆ ಬಾಹ್ಯರೂಪವೇ. ಬೇರೆ ಆಂತರಿಕ ರೂಪವೇ ಬೇರೆ. ಸೂಕ್ಷ್ಮವಾಗಿ ನೋಡುತ್ತಾ ಹೋದರೆ ಅರೆರೇ ಇವರು ನಮ್ಮಂತೆ ಎನ್ನುವ ಹಲವು ಉದಾಹರಣೆಗಳು ಸಿಗುತ್ತವೆ.
ಪ್ಯಾರಿಸ್ ನಲ್ಲಿ ಹೀಗೆ ಆಯ್ತು. ಪೊಂಟ್ ದೇಸ್ ಆರ್ಟ್ಸ್ (Pont des Arts) ಎನ್ನುವ ಸೇತುವೆಯನ್ನು ಸೇಯ್ನ್ ( River Seine.) ಎನ್ನುವ ನದಿಯ ಮೇಲೆ ಪ್ಯಾರಿಸ್ ಇನ್ಸ್ಟಿಟ್ಯೂಟ್ ಮತ್ತು ಲೌರ್ಬೇ ಸಂಗ್ರಹಾಲಯದ ಸೆಂಟ್ರಲ್ ಸ್ಕ್ಯೂಯರ್ ಬೆಸೆಯಲು ಕಟ್ಟಿದ್ದಾರೆ.

ಈ ಸೇತುವೆಯ ಇಕ್ಕೆಲಗಳಲ್ಲಿ ರಕ್ಷಣೆಗೆ ಎಂದು ಸ್ಥಾಪಿಸಿರುವ ಕಬ್ಬಿಣದ ತಡೆಗೋಡೆಯ ಮೇಲೆ ಬೀಗದ ಸಾಮ್ರಾಜ್ಯ! ಏನಪ್ಪಾ ಇದು ಅಂತ ಕುತೂಹಲದಿಂದ ಹತ್ತಿರ ಹೋಗಿ ನೋಡಿದರೆ, ಕಬ್ಬಿಣದ ಬೀಗದ ಮೇಲೆ ತಮ್ಮ ಮೊದಲ ಹೆಸರ ಕೆತ್ತಿಸಿ ಹಾಕಿದ್ದಾರೆ.
ಉದಾಹರಣೆಗೆ ಅಲ್ಫೋನ್ಸೋ ಲವ್ ಲೌರಾ ಅಂತಲೋ ಅಂಟೋನಿಯೋ ಲವ್ ಕ್ರಿಸ್ಟಿನಾ ಎಂದೋ ಬರೆದು ಹಾಕಿಸಿದ್ದಾರೆ. ಇನ್ನು ಕೆಲವರದು ಹೆಸರಿನ ಜೊತೆಗೆ ಫಾರೆವರ್ (forever) ಎಂದೋ, ಆಲ್ವೆಸ್ ಟುಗೆದರ್ (always together ) ಅಂತಲೋ ಬರೆಸಿ ಹಾಕುತ್ತಾರೆ. ಇವಕ್ಕೆ ‘ಲವ್ ಲಾಕ್ಸ್’ ಎನ್ನುವ ಹೆಸರಿದೆ.
ಏನಿದು ‘ಲವ್ ಲಾಕ್ಸ್’ ? ಇದು ಫ್ರಾನ್ಸ್ ನ ಸಂಪ್ರದಾಯವೇ?
ನಾನು ಮೊದಲ ಬಾರಿಗೆ ಪ್ಯಾರಿಸ್ ಗೆ ಭೇಟಿ ಕೊಟ್ಟಾಗ ಇಂಥ ಯಾವುದೇ ವಿಷಯ ಕಣ್ಣಿಗೆ ಬಿದ್ದಿರಲಿಲ್ಲ. 2005 ರಿಂದ ಈಚೆಗೆ ಯಾವ ಪುಣ್ಯಾತ್ಮ ಇದನ್ನ ಹುಟ್ಟು ಹಾಕಿದನೋ ತಿಳಿಯದು. ಇದರ ಹಿಂದಿನ ರೋಚಕತೆ ಹೇಳಿಬಿಡುತ್ತೇನೆ. ಬೀಗ ಕೊಂಡು ಅದರ ಮೇಲೆ ತಮ್ಮ ಹೆಸರ ಬರೆಸಿ ಅದನ್ನ ಪ್ಯಾನೆಲ್ ಗೆ ಹಾಕಿ ಕೀಯನ್ನು ನದಿಗೆ ಎಸೆಯುವುದರಿಂದ ಜೋಡಿಗಳ ಬಂಧ ಚಿರಂತನವಾಗಿರುತ್ತದೆ ಎನ್ನುವ ನಂಬಿಕೆ. ಇದು ಯಾರು ಯಾವಾಗ ಏಕೆ ಹುಟ್ಟು ಹಾಕಿದರು ಎನ್ನುವುದು ಯಕ್ಷ ಪ್ರಶ್ನೆ. ಆದರೆ ಜನ ಅದರಲ್ಲೂ ಮುಖ್ಯವಾಗಿ ಪ್ರವಾಸಿಗರು ‘ಜನ ಮರುಳೋ , ಜಾತ್ರೆ ಮರುಳೋ’ ಎನ್ನುವ ರೀತಿಯಲ್ಲಿ ಮುಗಿಬಿದ್ದು ಇದನ್ನು ಖರೀದಿಸಿ ಬೀಗವ ಜಡಿದು ಕೀಲಿಕೈ ನದಿಗೆ ಎಸೆದು ಒಬ್ಬರನೊಬ್ಬರು ಚುಂಬಿಸಿ, ಇನ್ನು ನಮ್ಮ ಬಂಧನ ನಿರಂತರ ಎನ್ನುವ ನಿರಾಳತೆ ಪಡೆಯುವುದು ನೋಡುವುದು ಕೌತುಕ ಹುಟ್ಟಿಸುತ್ತೆ. ಪ್ರತಿ ಸಂಪ್ರದಾಯ, ರೀತಿ ನೀತಿಗಳ ಹಿಂದೆ ಲೆಕ್ಕಾಚಾರ ಹುಡುಕುವ ನನ್ನ ದುರ್ಬುದ್ಧಿ ಇಲ್ಲೂ ಕೆಲಸಕ್ಕೆ ಇಳಿದಿತ್ತು. ಯಾವನೋ ಒಬ್ಬ ವ್ಯಾಪಾರಿ ತನ್ನ ಬಳಿ ಮಾರಾಟವಾಗದೆ ಉಳಿದಿದ್ದ ಬೀಗವನ್ನು ಮಾರಲು ಈ ತಂತ್ರ ಉಪಯೋಗಿಸಿರಬಹುದು ಎನ್ನುವುದೇ ನನ್ನ ಶಂಕೆ. ಅಲ್ಲಿಂದೀಚೆಗೆ ಅವನ ವ್ಯಾಪಾರ ಎಷ್ಟು ವೃದ್ಧಿಸಿರಬಹುದು? ತನ್ನೊಬ್ಬನದೇ ಅಲ್ಲದೆ ಇನ್ನು ಹಲವು ಹತ್ತು ವ್ಯಾಪಾರಿಗಳಿಗೆ ಬದುಕು ಕಟ್ಟಿ ಕೊಟ್ಟಿರುವ ಆತನ ಬುದ್ಧಿಮತ್ತೆಗೆ ನಾನೇನೋ ತಲೆದೂಗಿದೆ. ಆದರೆ ಪ್ಯಾರಿಸ್ ನ ಕಾರ್ಪೊರೇಷನ್ ಗೆ, ಅಲ್ಲಿನ ಮೇಯರ್ ಗೆ ಇದರಿಂದ ತಲೆ ಬಿಸಿ ಹೆಚ್ಚಾಗಿದೆ. ಅಲ್ಲಿನ ಪೌರ ಕಾರ್ಮಿಕರು ಸಾಧ್ಯವಾದಷ್ಟು ಬೀಗವನ್ನು ಮುರಿದು ತೆಗೆದು ಬಿಸಾಡುತ್ತಾರೆ. ದಿನನಿತ್ಯ ಲಕ್ಷಗಳ ಸಂಖ್ಯೆಯಲ್ಲಿ ಬರುವ ಪ್ರವಾಸಿಗಳ ಮತ್ತು ಅವರ ನಂಬಿಕೆಯ ಮುಂದೆ ಇವರ ಕೆಲಸ ಸಪ್ಪೆ ಎನ್ನುವಂತಾಗಿದೆ. 2014ರಲ್ಲೇ 7 ಲಕ್ಷಕ್ಕೂ ಅಧಿಕ ಬೀಗ ಇಲ್ಲಿ ಜಡಿಯಲಾಗಿದೆ ಎಂದರೆ ಇದರ ತೀವ್ರತೆ ಅರ್ಥವಾಗಬಹುದು.

ಈ ಬೀಗಗಳ ಭಾರ ತಡೆಯಲಾಗದೆ, ಕಬ್ಬಿಣದ ತಡೆಗೋಡೆ ಕುಸಿದಿವೆ. ಈ ರೀತಿ ಕುಸಿದ ಮೂರು ಪ್ಯಾನೆಲ್ ಗಳನ್ನು ಬದಲಿಸಿ ಹಾಕಲಾಗಿದೆ. ಆದರೇನಂತೆ, ಅವಕ್ಕೂ ಬೀಗ ಜಡಿಯುವುದು ಜನ ಬಿಟ್ಟಿಲ್ಲ. ಮೊದಲೇ ಹೇಳಿದಂತೆ ಇದು ಫ್ರೆಂಚರ ಸಂಪ್ರದಾಯ ಅಲ್ಲವೇ ಅಲ್ಲ. 2005ರಿಂದ ಶುರುವಾದ ಈ ಕ್ರಿಯೆ 2008ರಿಂದ ಈಚೆಗೆ ಬಹಳಷ್ಟು ಹೆಚ್ಚಾಗಿದೆ. 2014ರಲ್ಲಿ ಪ್ಯಾರಿಸ್ ಮೇಯರ್ “Our bridges can no longer withstand your gestures of love. Set them free by declaring your love without locks ” ಎಂದು ಹೇಳಿಕೆ ನೀಡಿ ಸೋಶಿಯಲ್ ಮೀಡಿಯಾ ದಲ್ಲಿ lovewithoutlocks ಹ್ಯಾಶ್ ಟ್ಯಾಗ್ ಅಡಿಯಲ್ಲಿ ‘ಸ್ವಾಮಿ ಬೀಗ ಹಾಕಬೇಡಿ ಬದಲಿಗೆ ಸೆಲ್ಫಿ ತೆಗೆದುಕೊಳ್ಳಿ’ ಎಂದು ಮನವಿ ಮಾಡಿ ಕೊಳ್ಳುತ್ತಿದ್ದಾರೆ. ಆತನ ಕೂಗು ನಮ್ಮ ಜನರಿಗೆ ಕೇಳುವುದೇ? 2025ರ ಮೇ ತಿಂಗಳಲ್ಲಿ ರಾಜಾರೋಷವಾಗಿ ಯುವ ಪ್ರೇಮಿಗಳು ಬೀಗ ಜಡಿಯುತ್ತಿದ್ದಾರೆ. ಕೀಲಿಕೈ ನದಿಗೆ ಎಸೆದು ಖುಷಿಯಿಂದ ಚುಂಬಿಸುತ್ತಾ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಬೀಗದ ಜತೆಗೆ ಸೆಲ್ಫಿಯೂ ಜತೆಯಾಗಿದೆ!
ಸಾಂಕ್ರಾಮಿಕ ರೋಗಗಳು ಹರಡುವಂತೆ, ಇಂಥ ನಂಬಿಕೆಗಳು ಶೀಘ್ರವಾಗಿ ಹರಡುತ್ತವೆ.
ಸ್ಪೇನ್ ನ ಗಿರೋನ ಎನ್ನುವ ನಗರದ ಸಮೀಪ ‘ಯೋರತ್ ದೇ ಮಾರ್’ ಎನ್ನುವ ನಗರವಿದೆ. ಅಲ್ಲಿಯೂ ಹೇರಳವಾಗಿ ಜಡಿದ ಬೀಗ ನಮ್ಮ ಈ ಪ್ರವಾಸದಲ್ಲಿ ಕಣ್ಣಿಗೆ ಬಿತ್ತು. ಹಾಗೆಯೇ ಲಂಡನ್ ನಗರದಲ್ಲಿನ ಮಿಲಿನಿಯಮ್ ಬ್ರಿಡ್ಜ್ ಮೇಲೆ ಕೂಡ ಈ ಬೀಗಗಳು ಸ್ಥಾಪಿತವಾಗಲು ಶುರುವಾಗಿವೆ.
13ನೇ ಸಂಖ್ಯೆ ಕುರಿತು ಯುರೋಪಿಯನ್ನರಲ್ಲಿ ಇರುವ ಭಯದ ಬಗ್ಗೆ ಪುಟಗಟ್ಟಲೆ ಬರೆಯಬಹುದು. ಈ ಭಯ ಎಷ್ಟರ ಮಟ್ಟಿಗೆ ಎಂದರೆ ಕಟ್ಟಡದಲ್ಲಿ 13ನೇ ಮಹಡಿ ಇರುವುದೇ ಇಲ್ಲ. ಅಂದರೆ ಅದನ್ನು 12ಎ ಅಂತಲೋ ಅಥವಾ ನೇರವಾಗಿ 14 ಅಂತಲೋ ಹಾಕುತ್ತಾರೆ. ನೀವು ಲಿಫ್ಟ್ ನಲ್ಲಿ ಹೋದರೆ 12ರ ನಂತರ ಸಿಗುವುದು 14! ಆದರೆ ಅದು 13 ಅಲ್ಲವೇ? ಹೌದು, ಆದರೆ 13 ಸಂಖ್ಯೆ ಯಾರಿಗೂ ಬೇಡ, ಪಾಪ!
ಹೀಗೆ ದೇಶ, ಭಾಷೆ, ಆಚಾರ, ವಿಚಾರ ಬದಲಾದರೂ ನಮ್ಮಲ್ಲಿ ಸಾಮ್ಯಗಳೂ ಕಡಿಮೆ ಏನಿಲ್ಲ. ಇಲ್ಲಿ ನನ್ನ ಉದ್ದೇಶ ಯಾರೊಬ್ಬರ ನಂಬಿಕೆಯ ಅವಹೇಳನ ಮಾಡುವುದಲ್ಲ. ತಮ್ಮ ನಂಬಿಕೆಯ ಪಾಲಿಸಲು ಎಲ್ಲರೂ ಸ್ವತಂತ್ರರು. ನನ್ನದೇನಿದ್ದರೂ ಹೇಗೆ ಈ ನಂಬಿಕೆಗಳು ಇಡೀ ಒಂದು ಸಮುದಾಯ, ಜನಾಂಗವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತವೆ ಎನ್ನುವ ಕೌತುಕ ಅಷ್ಟೇ.