Monday, July 28, 2025
Monday, July 28, 2025

ವಿಮಾನದ ಎಂಜಿನ್‌ಗಳು ಫೇಲಾದ್ರೆ ?

ವಿಮಾನದ ಎಂಜಿನ್‌ಗಳು ವಿಫಲವಾದರೆ ಏನಾಗುತ್ತದೆ? ಅದು ಆಕಾಶದಿಂದ ಬೀಳುತ್ತದೆಯೇ? ಈ ಪ್ರಶ್ನೆ ಪ್ರತಿಯೊಬ್ಬ ವಿಮಾನ ಪ್ರಯಾಣಿಕರ ತಲೆಯಲ್ಲಿ ಹಾದುಹೋಗುತ್ತದೆ. ವಿಮಾನ 35000 ಅಡಿ ಎತ್ತರದಲ್ಲಿ ಹಾರುತ್ತಿರುವಾಗ ಈ ಪ್ರಶ್ನೆ ಸುಳಿದರೆ ಏನಾಗಬೇಡ? ಸಿನಿಮಾಗಳಲ್ಲಿ ತೋರಿಸುವಂತೆ, ವಿಮಾನದ ಎಂಜಿನ್‌ಗಳು ಕೆಟ್ಟು ನಿಂತರೆ, ಅದು ನಿಯಂತ್ರಣ ತಪ್ಪಿ ನೇರವಾಗಿ ಭೂಮಿಗೆ ಅಪ್ಪಳಿಸುವುದಿಲ್ಲ.

ವಿಮಾನದ ಎಂಜಿನ್‌ಗಳು ವಿಫಲವಾದರೆ ಏನಾಗುತ್ತದೆ? ಅದು ಆಕಾಶದಿಂದ ಬೀಳುತ್ತದೆಯೇ? ಈ ಪ್ರಶ್ನೆ ಪ್ರತಿಯೊಬ್ಬ ವಿಮಾನ ಪ್ರಯಾಣಿಕರ ತಲೆಯಲ್ಲಿ ಹಾದುಹೋಗುತ್ತದೆ. ವಿಮಾನ 35000 ಅಡಿ ಎತ್ತರದಲ್ಲಿ ಹಾರುತ್ತಿರುವಾಗ ಈ ಪ್ರಶ್ನೆ ಸುಳಿದರೆ ಏನಾಗಬೇಡ? ಸಿನಿಮಾಗಳಲ್ಲಿ ತೋರಿಸುವಂತೆ, ವಿಮಾನದ ಎಂಜಿನ್‌ಗಳು ಕೆಟ್ಟು ನಿಂತರೆ, ಅದು ನಿಯಂತ್ರಣ ತಪ್ಪಿ ನೇರವಾಗಿ ಭೂಮಿಗೆ ಅಪ್ಪಳಿಸುವುದಿಲ್ಲ.

ಅತ್ಯಂತ ಕೆಟ್ಟ ಸಂದರ್ಭಗಳನ್ನು ಎದುರಿಸುವುದನ್ನು ಗಮನದಲ್ಲಿಟ್ಟುಕೊಂಡು ಆಧುನಿಕ ವಿಮಾನಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಒಂದು ವೇಳೆ ಹಾರಾಟದ ಮಧ್ಯದಲ್ಲಿ ಒಂದು ಅಥವಾ ಎಲ್ಲ ಎಂಜಿನ್‌ಗಳು ವಿಫಲವಾದರೂ, ವಿಮಾನವು ಒಂದು ದೊಡ್ಡ ‘ಗ್ಲೈಡರ್’ (Glider) ಆಗಿ ಪರಿವರ್ತನೆ ಯಾಗುತ್ತದೆ. ಹಾಗಾದರೆ ನಿಯಂತ್ರಿತ ಗ್ಲೈಡಿಂಗ್ (Controlled Glide) ಎಂದರೇನು? ವಿಮಾನದ ಎಂಜಿನ್‌ಗಳು ವಿಮಾನಕ್ಕೆ ಮುಂದಕ್ಕೆ ತಳ್ಳುವ ಶಕ್ತಿಯನ್ನು (thrust ) ನೀಡುತ್ತವೆ. ಎಂಜಿನ್‌ಗಳು ನಿಂತಾಗ, ಈ ಶಕ್ತಿ ಇಲ್ಲವಾಗುತ್ತದೆ. ಆದರೆ, ವಿಮಾನದ ರೆಕ್ಕೆಗಳು ಗಾಳಿಯಲ್ಲಿ ತೇಲುವ ಶಕ್ತಿಯನ್ನು (lift) ಉತ್ಪಾದಿಸು ತ್ತಲೇ ಇರುತ್ತವೆ. ಹೀಗಾಗಿ, ವಿಮಾನವು ತಕ್ಷಣವೇ ಕೆಳಗೆ ಬೀಳುವ ಬದಲು, ನಿಯಂತ್ರಿತವಾಗಿ ಮುಂದಕ್ಕೆ ಹಾರಲು ಆರಂಭಿಸುತ್ತದೆ.

ಇದನ್ನೂ ಓದಿ: ವಿಮಾನದಲ್ಲಿ ಆನೆ ಸಾಗಾಟ ಹೇಗೆ?

ಒಂದು ಸಾಮಾನ್ಯ ಪ್ರಯಾಣಿಕ ವಿಮಾನವು ತಾನು ಕಳೆದುಕೊಳ್ಳುವ ಪ್ರತಿ ಒಂದು ಸಾವಿರ ಮೀಟರ್ (1 ಕಿ.ಮೀ) ಎತ್ತರಕ್ಕೆ,15 ರಿಂದ 20 ಪಟ್ಟು ಹೆಚ್ಚು ದೂರವನ್ನು (ಅಂದರೆ, 15 ರಿಂದ 20 ಕಿ.ಮೀ.) ಕ್ರಮಿಸಬಲ್ಲದು. ಉದಾಹರಣೆಗೆ, ವಿಮಾನವು ಹತ್ತು ಸಾವಿರ ಮೀಟರ್ ಎತ್ತರದಲ್ಲಿ ಹಾರುತ್ತಿದ್ದರೆ, ಅದು ಎಂಜಿನ್ ವಿಫಲವಾದ ನಂತರವೂ ಸುಮಾರು 50 ರಿಂದ 125 ಕಿ.ಮೀ. ದೂರ ಹಾರಿಕೊಂಡು ಹೋಗಬಲ್ಲದು!

ಇದು ಬೆಂಗಳೂರಿನಿಂದ ಮೈಸೂರಿಗೆ ಇರುವಷ್ಟು ದೂರ. ಈ ಬೃಹತ್ ವ್ಯಾಪ್ತಿಯು ಪೈಲಟ್‌ಗಳಿಗೆ ಹತ್ತಿರದ ವಿಮಾನ ನಿಲ್ದಾಣವನ್ನು ಹುಡುಕಿ, ತುರ್ತು ಭೂಸ್ಪರ್ಶಕ್ಕೆ ತಯಾರಿ ನಡೆಸಲು ಸಾಕಷ್ಟು ಸಮಯವನ್ನು ನೀಡುತ್ತದೆ. ಎಂಜಿನ್‌ಗಳು ವಿಫಲವಾದಾಗ ಸಂಪೂರ್ಣವಾಗಿ ಸ್ಥಗಿತಗೊಳ್ಳುವುದಿಲ್ಲ. ವಿಮಾನವು ವೇಗವಾಗಿ ಚಲಿಸುತ್ತಿರುವಾಗ, ಹೊರಗಿನ ಗಾಳಿಯು ಎಂಜಿನ್‌ನ ಫ್ಯಾನ್ ಬ್ಲೇಡ್‌ಗಳನ್ನು ತಿರುಗುವಂತೆ ಮಾಡುತ್ತದೆ.ಇದಕ್ಕೆ ‘ವಿಂಡ್‌ಮಿಲ್ಲಿಂಗ್’ ಎನ್ನುತ್ತಾರೆ.

flight fall 1

ಇದು ಸಣ್ಣ ಪ್ರಮಾಣದ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಶಕ್ತಿಯು ವಿಮಾನದ ಅತ್ಯಾವಶ್ಯಕ ವ್ಯವಸ್ಥೆಗಳನ್ನು (critical systems) ಚಾಲನೆಯಲ್ಲಿಡಲು ಸಾಕಾಗುತ್ತದೆ. ಉದಾಹರಣೆಗೆ, ವಿಮಾನದ ನಿಯಂತ್ರಣಕ್ಕೆ ಬೇಕಾದ ಹೈಡ್ರಾಲಿಕ್ ವ್ಯವಸ್ಥೆಗಳು, ಪೈಲಟ್ ಗಳಿಗೆ ಬೇಕಾದ ಕೆಲವು ಪ್ರಮುಖ ಉಪಕರಣಗಳು ಮತ್ತು ನ್ಯಾವಿಗೇಷನ್ ಪರದೆಗಳು, ಏರ್ ಟ್ರಾಫಿಕ್ ಕಂಟ್ರೋಲ್ (ATC) ಜತೆ ಸಂವಹನ ನಡೆಸಲು ಬೇಕಾದ ರೇಡಿಯೋ. ಪೈಲಟ್‌ಗಳಿಗೆ ಇಂಥ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಅತ್ಯಂತ ಕಠಿಣವಾದ ತರಬೇತಿಯನ್ನು ನೀಡಲಾಗುತ್ತದೆ. ಪೈಲಟ್ ಗಳು ಅತ್ಯಂತ ನೈಜವಾದ ಸಿಮ್ಯುಲೇಟರ್‌ಗಳಲ್ಲಿ ಎಂಜಿನ್ ವೈಫಲ್ಯದ ಸನ್ನಿವೇಶಗಳನ್ನು ನೂರಾರು ಬಾರಿ ಅಭ್ಯಾಸ ಮಾಡಿರುತ್ತಾರೆ.

ಎಂಜಿನ್ ವಿಫಲವಾದಾಗ, ಪೈಲಟ್‌ಗಳು ವಿಮಾನದ ಮುಂಭಾಗದ ಕೋನವನ್ನು ( nose angle) ಸರಿಹೊಂದಿಸಿ, ವಿಮಾನ ಇಳಿಯುವ ವೇಗವನ್ನು ನಿಯಂತ್ರಿಸುತ್ತಾರೆ. ಇದು ನಾವು ಕಾರಿನಲ್ಲಿ ಬೆಟ್ಟದಿಂದ ಇಳಿಜಾರಿನಲ್ಲಿ ಇಳಿಯುವಾಗ ಗೇರ್ ಬದಲಾಯಿಸಿ ವೇಗ ನಿಯಂತ್ರಿಸಿದಂತೆ. ಇತಿಹಾಸದಲ್ಲಿ ಇಂಥ ಹಲವು ಘಟನೆಗಳು ನಡೆದಿವೆ, ಅಲ್ಲಿ ಪೈಲಟ್‌ಗಳ ಕೌಶಲದಿಂದ ದೊಡ್ಡ ಅನಾಹುತಗಳು ತಪ್ಪಿವೆ.

ಏರ್ ಕೆನಡ ವಿಮಾನವು ಹಾರಾಟದ ಮಧ್ಯದಲ್ಲಿ ಇಂಧನ ಖಾಲಿಯಾದ ಕಾರಣ ಎರಡೂ ಎಂಜಿನ್‌ಗಳನ್ನು ಕಳೆದುಕೊಂಡಿತು. ಆದರೆ ಪೈಲಟ್‌ಗಳು ಅದನ್ನು120 ಕಿ.ಮೀ.ಗಿಂತ ಹೆಚ್ಚು ದೂರ ಗ್ಲೈಡ್ ಮಾಡಿ, ಬಳಕೆಯಲ್ಲಿಲ್ಲದ ಹಳೆಯ ಏರ್‌ಸ್ಟ್ರಿಪ್‌ನಲ್ಲಿ ಸುರಕ್ಷಿತವಾಗಿ ಇಳಿಸಿದರು. ಯುಎಸ್ ಏರ್‌ ವೇಸ್ ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪಕ್ಷಿಗಳ ಹಿಂಡಿಗೆ ಡಿಕ್ಕಿ ಹೊಡೆದು ಎರಡೂ ಎಂಜಿನ್‌ಗಳನ್ನು ಕಳೆದುಕೊಂಡಿತು.

ಕ್ಯಾಪ್ಟನ್ ‘ಸಲ್ಲಿ’ ಸಲೆನ್ಬರ್ಗರ್ ಅವರು ವಿಮಾನವನ್ನು ನ್ಯೂಯಾರ್ಕ್‌ನ ಹಡ್ಸನ್ ನದಿಯ ಮೇಲೆ ಸುರಕ್ಷಿತವಾಗಿ ಇಳಿಸಿ ಎಲ್ಲ 155 ಪ್ರಯಾಣಿಕರ ಪ್ರಾಣ ಉಳಿಸಿದರು. ಆದ್ದರಿಂದ, ವಿಮಾನ ಯಾನವು ಇಂದು ಅತ್ಯಂತ ಸುರಕ್ಷಿತ ಸಾರಿಗೆ ಮಾಧ್ಯಮಗಳಲ್ಲಿ ಒಂದಾಗಿದೆ. ಇದಕ್ಕೆ ಕಾರಣ ಕೇವಲ ಅತ್ಯಾ‌ಧುನಿಕ ತಂತ್ರಜ್ಞಾನವಲ್ಲ, ಬದಲಿಗೆ ಆ ತಂತ್ರಜ್ಞಾನವನ್ನು ಯಾವುದೇ ಸಂದರ್ಭದಲ್ಲಿ ನಿಭಾಯಿಸಬಲ್ಲ ಉನ್ನತ ಮಟ್ಟದ ತರಬೇತಿ ಪಡೆದ ಪೈಲಟ್‌ಗಳೂ ಕಾರಣ ಎಂಬುದನ್ನು ಮರೆಯುವಂತಿಲ್ಲ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?