Wednesday, December 10, 2025
Wednesday, December 10, 2025

ಜೆಎಲ್‌ಆರ್‌ನವರ ಕಬಿನಿ ರಿವರ್‌ ಲಾಡ್ಜ್‌ ಬಗ್ಗೆ ಎಷ್ಟು ಗೊತ್ತು?

ಕಾಡಲ್ಲಿ ಸ್ವಲ್ಪ ಸಮಯ ಕಳಿಬೇಕು. ನಗರದ ಜೀವನ ಹೆವಿ ಬೋರ್ ಆಗಿದೆ. ಒಂದ್ ಸಣ್ಣ ಟ್ರಿಪ್ ಹಾಕ್ಕೊಂಡ್ ಬರಬೇಕು. ನಗರಕ್ಕೆ ಹತ್ತಿರವೇ ಇರುವ ಯಾವುದಾದರೂ ರೆಸಾರ್ಟ್ ಗೆ ಹೋಗಿ ಸಮಯ ಕಳಿಬೇಕು. ಅಂತ ಆಗಾಗ ಅನಿಸುತ್ತಿದ್ದರೆ, ಇದನ್ನು ಖಂಡಿತ ಓದಿ.

ಎಷ್ಟೊಂದೆಲ್ಲ ಲಾಂಗ್‌ ವೀಕೆಂಡ್‌ ಬರುತ್ತೆ, ಆಗೆಲ್ಲ ಮನೆಯಲ್ಲಿ ಮಲಗಿಯೋ, ಯಾವುದೋ ಸೀರೀಸ್‌ನ್ನು ಬಿಂಜ್‌ ವಾಚ್‌ ಮಾಡಿ ಟೈಮ್‌ಪಾಸ್‌ ಮಾಡುವುದರಲ್ಲೇ ದಿನ ಕಳೆಯುತ್ತೇವೆ. ಇನ್ನೂ ಕೆಲವರು ಸೈಕ್ಲಿಂಗ್‌ ಅಂತ, ಲಾಂಗ್‌ ರೈಡ್‌ ಅಂತ ಊರುಸುತ್ತುವುದರಲ್ಲಿ ಬ್ಯುಸಿ ಆಗುತ್ತಾರೆ. ಕೆಲವರಿಗಂತೂ ರಜೆ ಸಿಗೋದೇ ನಶೆ ಮಾಡೋಕೆ ಅಂತ, ಪಾರ್ಟಿ ಪಬ್ಬು ಕ್ಲಬ್ಬು, ಶಾಪಿಂಗ್‌ ಅಂತ ಸುತ್ತುವುದರಲ್ಲಿ ದಿನಗಳನ್ನು ಮುಗಿಸುತ್ತಾರೆ. ಇಂತ ವೆರೈಟಿ ಜನರಲ್ಲಿ ಕೆಲವರು ಮಾತ್ರ, ಯಾವುದಾದರೂ ರೆಸಾರ್ಟ್‌ಗೆ ಅಥವಾ ಕಾಡಿಗೆ ಹೋಗಬೇಕು. ಪರಿಸರದ ಜತೆ ಸಮಯ ಕಳೀಬೇಕು ಅನ್ನುವ ಹಂಬಲದಲ್ಲಿರುತ್ತಾರೆ. ಈ ಅಂಕಣ ಅಂಥವರಿಗೆ!

ಬೆಂಗಳೂರು ಮೈಸೂರು ಸುತ್ತಮುತ್ತ ಎಷ್ಟೊಂದೆಲ್ಲ ಕಾಡುಗಳಿವೆ. ಆರಾಮವಾಗಿ ಸುತ್ತಾಡಬೇಕು, ವೈಲ್ಡ್ ಲೈಫ್ ಸಫಾರಿ ಮಾಡಬೇಕು, ಹುಲಿ – ಜಿಂಕೆ- ಆನೆ ಹೀಗೆ ಕಾಡುಪ್ರಾಣಿಗಳ ಫೊಟೋ ತೆಗಿಬೇಕು. ಪ್ರಕೃತಿಯ ಜತೆಗೆ ಕನೆಕ್ಟ್ ಆಗಬೇಕು. ಇದಕ್ಕೆಲ್ಲ ತುಂಬಾದಿನ ರಜೆಗಳನ್ನೂ ಕೊಡೋದಿಲ್ಲ. ಒಂದೆರಡು ದಿನದ ಮಟ್ಟಿಗೆ ಮರೆಯೋಕಾಗದ ಟ್ರಿಪ್ ಮಾಡಬೇಕು. ಒಳ್ಳೆಯ ಊಟ, ಒಳ್ಳೆಯ ನೋಟ, ಒಳ್ಳೆಯ ಪರಿಸರ, ಚೆನ್ನಾಗಿ ಸುತ್ತಾಡಬೇಕು, ಚಿಲ್ ಮಾಡಬೇಕು! ಅಂತ ಅನಿಸಿದಾಗ ಇಲ್ಲೇ ಕಬಿನಿ ಇದೆ ಅನ್ನೋದೇ ಮರೆತುಬಿಟ್ರಾ?

ಇದನ್ನು ಓದಿ: ಸಕ್ರೆಬೈಲ್‌ಲ್ಲಿ ಆನೆಯ ಹಿಂಡು!

ಬೆಳಿಗ್ಗೆ ಆರಾಮವಾಗಿ ಎದ್ದು, ಬೆಂಗಳೂರಿಂದ ಬಿಟ್ರೆ 12-12.30ಗೆಲ್ಲ ರೆಸಾರ್ಟ್ ಚೆಕ್ ಇನ್. ಚೆಕ್ ಇನ್ ಆದಮೇಲೆ ಗೋಲ್ ಘರ್ ನಲ್ಲಿ ಒಳ್ಳೆಯ ಊಟ, ಆಮೇಲೆ ಟೀ ಅಥವಾ ಕಾಫೀ ಕುಡಿಯುತ್ತಾ ಪಾರ್ಕ್ ಅಲ್ಲಿ ಒಂದು ಸಣ್ಣ ವಾಕಿಂಗ್. ಮಧ್ಯಾನ 3.30ರಿಂದ ಸಂಜೆ 6 ಘಂಟೆಯವರೆಗೆ ಪರಿಸರ ತಜ್ಞರ ಜತೆಗೆ ಒಂದು ಸಫಾರಿ. ಅದು ಕಾಡಲ್ಲೂ ಮಾಡಬಹುದು ಅಥವಾ ನೀರಲ್ಲೂ ಮಾಡಬಹುದು. ಈ ಸಫಾರಿಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವನ್ನು ಒಂದು ಸುತ್ತು ಪೂರ್ತಿಯಾಗಿ ನೋಡಿಕೊಂಡು, ಅಲ್ಲಲ್ಲಿ ಕಾಣುವ ಜಿಂಕೆ, ಹುಲಿ, ಚಿರತೆ, ಹೇಗೆ ಹಲವಾರು ಕಾಡುಪ್ರಾಣಿ ಓಡಾಡುವ ದಾರಿಯಲ್ಲೇ ನಾವು ಹೋಗಬಹುದು. ಅದಾದ ಮೇಲೆ ಮತ್ತೆ ಟೀ, ಕಾಫೀ ಸ್ನಾಕ್ಸ್ ಗಳು. ನಿಮ್ಮ ಸ್ನೇಹಿತರೆಲ್ಲ ಮಾತಾಡುತ್ತಾ ಕಾಲಹರಣ ಮಾಡಬಹುದು. ಅದಾದಮೇಲೆ ಒಂದು ವೈಲ್ಡ್ ಲೈಫ್ ಮೂವೀ ನೋಡಿಕೊಂಡು. ಕ್ಯಾಂಪ್ ಫೈರ್ ನಲ್ಲಿ ಹರಟೆ, ಊಟ, ಮೋಜು ಮಸ್ತಿ. ಇಡೀ ರಾತ್ರಿಯೆಲ್ಲ ಕಾಡಿನ ವಿಸ್ಮಯದ ಬಗ್ಗೆ, ಕಾಡಿನ ಪಿಸುಮಾತನ್ನು ಕೇಳುತ್ತಾ ಮಲಗಿ. ಮತ್ತೆ ಬೆಳಿಗ್ಗೆ ಅದೇ ಕಾಡು ಮತ್ತೊಂದು ದಿನ, ಮತ್ತೆ ಹಲವು ವಿಸ್ಮಯಗಳು.

Untitled design (36)

ಬೆಳಗ್ಗೆ ಸೂರ್ಯ ಹುಟ್ಟುವ ಸಮಯಕ್ಕೆ ಎದ್ದು, ಮತ್ತೊಮ್ಮೆ ಟೀ ಕಾಫೀ ಮಾಡಿ, ಪ್ರಕೃತಿಯ ಮಡಿಲಲ್ಲಿ, ಹಕ್ಕಿಗಳ ಶಬ್ದದ ನಡುವೆ, ಆಗಿನ್ನೂ ದಿನ ಶುರುಮಾಡಿದ್ದ ಪರಿಸರದ ಜತೆ, ಇನ್ನೂ ನಿದ್ದೆಗಣ್ಣಲ್ಲಿರುವ ಮೊಸಳೆಗಳು, ಸ್ನಾನಕ್ಕೆ ಬರುವ ಆನೆಗಳನ್ನೆಲ್ಲ ನೋಡಿ ನೀವು ಮತ್ತೊಮ್ಮೆ ಜಂಗಲ್ ಸಫಾರಿ ಅಥವಾ ಬೋಟ್ ರೈಡ್ ಮಾಡಬಹುದು.

ಇಷ್ಟೊಂದೆಲ್ಲ ಮಾಡಿಮುಗಿಸಿದ ಮೇಲೆ ನೆನಪಿನ ಬುತ್ತಿ ಹೊತ್ತು ಮನೆಗೆ ಬರೋದಂತೂ ಗ್ಯಾರಂಟಿ. ಹಾಂ. ಇದಕ್ಕೆಲ್ಲ ಎಲ್ಲಿ ಹೋಗ್ಬೇಕು ಅಂತ ಹೇಳಿರಲೇ ಇಲ್ಲ ಅಲ್ವಾ? ಇದು ಕಬಿನಿಯ ಜಂಗಲ್ ಲಾಡ್ಜ್ ರೆಸಾರ್ಟ್ ಅಥವಾ ಕಬಿನಿ ರಿವರ್ ಲಾಡ್ಜ್.

ಬೆಂಗಳೂರು ಮತ್ತು ಮೈಸೂರು ಎರಡಕ್ಕೂ ಸಮೀಪವಿರುವ ಈ ರೆಸಾರ್ಟ್ ಗೆ ಬರೀ ಇಲ್ಲಿಯವರಷ್ಟೇ ಅಲ್ಲ ಕಣ್ರೀ, ದೇಶ ವಿದೇಶದಿಂದ ಎಷ್ಟೋ ಜನ ಬರುತ್ತಿರುತ್ತಾರೆ. ನಿಸರ್ಗದ ಮಧ್ಯೆ ಹಲವರು ದಿನಗಳ ಕಾಲಕಳೆಯುವವರೂ ಇರುತ್ತಾರೆ. ಪ್ರಾಣಿ ಪಕ್ಷಿಗಳ ಅಧ್ಯಯನವನ್ನೂ ನಡೆಸುವವರೂ ಇರುತ್ತಾರೆ. ವೈಲ್ಡ್ ಲೈಫ್ ಫೊಟೋಗ್ರಾಫಿ ಮಾಡುವವರೂ ಇರುತ್ತಾರೆ. ಅಂದಹಾಗೆ ನಮ್ಮ ನಿಮ್ಮ ಥರ ಪ್ರವಾಸಕ್ಕಷ್ಟೇ ಹೋದ ಜನರ ಸಂಖ್ಯೆಯೇನೂ ಕಮ್ಮಿ ಇರಲ್ಲ ಬಿಡಿ.

ಕಬಿನಿ ತೀರದಲ್ಲಿ ಪ್ರಕೃತಿ ಪ್ರೀತಿಯ ಪಯಣ

ಬೆಳಗಿನ ಜಾವ ಕಣ್ಣು ತೆರೆಯುವಾಗಲೇ ತೀರಾ ಹೊಸದಾದ ಅನುಭವಕ್ಕೆ ಸಿದ್ಧರಾಗಿ. ಕಾಡು ತನ್ನ ನಿದ್ರೆಯಿಂದ ಎದ್ದು ಜಗತ್ತಿಗೆ ಬಾಗಿಲು ತೆರೆದಾಗ, ನೀವೂ ಅದರದ್ದೇ ಒಂದು ಭಾಗ ಅನ್ನಿಸುತ್ತದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ (ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ)ದ ಈ ಕಾಡು ಆನೆ, ಸಂಬಾರ್ ಜಿಂಕೆ, ಚಿರತೆ, ಹಂದಿ, ಕರಡಿ, ಗೌರ್, ಹುಲಿಗಳಂಥ ಹಲವಾರು ಆಕರ್ಷಕ ವನ್ಯಜೀವಿಗಳ ವಾಸಸ್ಥಳವಾಗಿದೆ. ಈ ರಿಸಾರ್ಟ್ ಒಂದುಕಾಲದಲ್ಲಿ ಮಹಾರಾಜರ ಬೇಟೆಯ ನೆಲೆಯೂ ಅಗಿತ್ತೆಂದರೆ, ಯೋಚಿಸಿ ಒಮ್ಮೆ, ನಿಮ್ಮನ್ನ ನೀವೂ ರಾಜ ಮಹಾರಾಜ ಅಂತ ಅಂದುಕೊಂಡು ಬಿಲ್ಡಪ್ ತಗೋಬಹುದು, ಬೇಟೆಯಾಡೋಕೆ ಬಿಡೋದಿಲ್ಲ ಅಷ್ಟೇ!

54 ಎಕರೆಯ ರೆಸಾರ್ಟ್

ಕಬಿನಿ ನದಿಯ ತೀರದಲ್ಲಿ ಹರಡಿರುವ 54 ಎಕರೆಗಳ ಪ್ರಕೃತಿಯ ಘಮವನ್ನು ಈ ರೆಸಾರ್ಟ್ ಇಟ್ಟುಕೊಂಡಿದೆ. ಮೊದಲಿದ್ದ ಬೇಟೆ ಮನೆ ಈಗ ಲಕ್ಸುರಿಯಸ್ ರೆಸಾರ್ಟ್ ಆಗಿ ಪರಿವರ್ತನೆಗೊಂಡಿದ್ದು, ಮನಮೋಹಕ ವಾಸಸ್ಥಳ, ಬಾರ್, ಜತೆಗೆ ಬ್ಯುಸಿನೆಸ್ ಮೀಟಿಂಗ್‌ಗಳಿಗೆ ಸ್ಪೆಷಲ್ ಕಾನ್ಫರೆನ್ಸ್ ರೂಮ್ ಇವೆಲ್ಲದರ ಮೂಲಕ ದೇಹ ಮತ್ತು ಮನಸ್ಸನ್ನು ಪುನಶ್ಚೇತನಗೊಳಿಸುತ್ತೆ.

Untitled design (35)

ಇಲ್ಲಿ ನೀವು ಟೂರಿಸ್ಟ್ ಅಲ್ಲ, ಬದಲಿಗೆ ಎಕ್ಸ್‘ಪ್ಲೋರರ್

ಕಬಿನಿಯ ವನ್ಯಜೀವಿ ಸಂಸ್ಕೃತಿಯಲ್ಲಿ ಪ್ರವಾಸಿಗ ಎಂಬ ಪದ ಇಲ್ಲವೇ ಇಲ್ಲ. ಇಲ್ಲಿ ನೀವು ಸಾಹಸಿ. ಇಲ್ಲಿನ ತಿಂಡಿಯು ಸಹ 'ಅನುಭವ'ದ ಭಾಗ. ಎಲ್ಲರೂ ಒಟ್ಟಾಗಿ ಊಟ ಮಾಡುತ್ತಾರೆ – ಗೋಲ್ ಘರ್ ಎಂಬ ನದಿತೀರದಲ್ಲಿರುವ ಸ್ಥಳದಲ್ಲಿ ಬಫೇ ಊಟ– ಅದರಲ್ಲೂ ಭಾರತೀಯ, ಕಾಂಟಿನೆಂಟಲ್, ಚೈನೀಸ್ ಎಲ್ಲವೂ ಸಿಗುತ್ತದೆ.

ಜೀಪ್ ಸಫಾರಿ, ನದಿ ಬೋಟಿಂಗ್, ಹಾಗೂ ಕ್ಯಾಂಪ್‌ಫೈರ್

ಬೆಳಿಗ್ಗೆ ಮತ್ತು ಸಂಜೆ ಸಫಾರಿ ಅಥವಾ ನದಿಯಲ್ಲಿ ಬೋಟಿಂಗ್ – ಎರಡು ಭಿನ್ನವಾದ ಅನುಭವ. ಆನೆಗಳ ಗುಂಪುಗಳು, ಮೊಸಳೆಗಳು, ನೂರಾರು ಬಣ್ಣದ ಹಕ್ಕಿಗಳು – ಈ ನಿಸರ್ಗದ ಈ ವಿಸ್ಮಯ ನಿಮ್ಮ ಕಣ್ಣನ್ನು ಮನಸೂರೆಮಾಡುತ್ತದೆ. ಇನ್ನೂ ಒಂದು ಹೊಸ ಅನುಭವವಕ್ಕೆ – ಬಿದಿರು ಹಾಗೂ ಎಮ್ಮೆ ಚರ್ಮದಿಂದ ಮಾಡಿದ ಕೋರಕಲ್ ಬೋಟಿನಲ್ಲಿ ಸವಾರಿ ಮಾಡಿ. ಅಥವಾ ಮೋಟಾರ್ ಬೋಟಿನಲ್ಲೂ ಹೋದರೂ ಪರವಾಗಿಲ್ಲ. ಸಂಜೆಯಾದ್ಮೇಲೆ ಒಮ್ಮೆಯಾದರೂ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ನೋಡಿ, ನಂತರ ಕ್ಯಾಂಪ್‌ಫೈರ್ ಹೊತ್ತಿಸಿ ಹರಟೆ ಹೊಡೆಯುತ್ತಾ ಊಟ ಮಾಡಿ ಸಾಕು. ಇಡೀ ದಿನವೇ ನಿಮಗೊಂದು ಹಬ್ಬ.

ಯಾವುದೇ ಋತು ಇರಲಿ, ನಿಮಗಾಗಿ ಸಿದ್ಧ

ಕಬಿನಿ ಲಾಡ್ಜ್ ಯಾವ ಸಮಯದಲ್ಲಾದರೂ ಆಹ್ಲಾದಕರ. ಆದರೆ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಕಾಡಿನ ನೀರು ಕಡಿಮೆಯಾಗಿರುತ್ತದೆ. – ಈ ಸಮಯದಲ್ಲಿ ನದಿತೀರದಲ್ಲಿ ಪ್ರಾಣಿಗಳ ಮೆರವಣಿಗೆ ಕಾಣಬಹುದಾದ ಅತಿದೊಡ್ಡ ಮೇಳ – ಏಷ್ಯಾದ ಆನೆಗಳ ಭಾರೀ ಗುಂಪು! ಜುಲೈ, ಆಗಸ್ಟ್, ಸೆಪ್ಟೆಂಬರ್ ಮಾಸಗಳಲ್ಲಿ ಮಳೆಗಾಲದಿಂದ ಕಾಡು ಹಸಿರಿನಿಂದ ತುಂಬಿಬಿಡುತ್ತೆ. ಪ್ರಾಣಿಗಳ ದರ್ಶನ ಕಡಿಮೆ ಆದರೆ ಪ್ರಕೃತಿಯ ನೋಟ ಪ್ರೀತಿ ಮಾಡೋವರಿಗೆ ಪರ್ಫೆಕ್ಟ್. ಉಳಿದ ತಿಂಗಳುಗಳಲ್ಲಿ ಸಮಾನ ಶ್ರೇಣಿಯ ಪ್ರಾಣಿ-ಪಕ್ಷಿಗಳ ವೀಕ್ಷಣೆ ಸಾಧ್ಯ.

ಪ್ರತಿಯೊಬ್ಬನೂ ಜೀವನದಲ್ಲಿ ಒಮ್ಮೆ ಈ ಕಬಿನಿಯ ಸಫಾರಿಗೆ ಹೋಗಲೇಬೇಕು. ಇದು ಕೇವಲ ಪ್ರವಾಸವಲ್ಲ, ಇದು ನಿನ್ನೊಳಗಿನ ಶಾಂತಿಯನ್ನು ಹುಡುಕೋ ಪಯಣ. ಬನ್ನಿ, ಪ್ರಕೃತಿಯ ತಂಗಾಳಿಗೆ ಮುಡುಪಾಗಿರಿ – ನಿನಗೆ ಬೇಕಾಗಿರೋ ಆ ಅಂತಃಕರಣದ ಆರಾಮ ಇಲ್ಲಿ ಸಿಗುತ್ತೆ.

ಹೋಗುವುದು ಹೇಗೆ?

ಮೈಸೂರಿನಿಂದ ಕಬಿನಿಗೆ:

ನೀವು ರೈಲಿನಲ್ಲಿ ಆಗಮಿಸುತ್ತಿದ್ದರೆ, ಮೈಸೂರು ರೈಲ್ವೇ ನಿಲ್ದಾಣದಿಂದ ಕಬಿನಿಯ ಪ್ರಯಾಣಕ್ಕಾಗಿ ಟ್ಯಾಕ್ಸಿ ಬುಕ್ ಮಾಡಿಕೊಳ್ಳಿ.

ಊಟಿಯಿಂದ ಹೊರಡುವವರು ಬಂಡೀಪುರ, ಗುಂಡ್ಲುಪೇಟೆ, ಬೇಗೂರು, ನೂಗು ಅಣೆಕಟ್ಟು ಮತ್ತು ಹ್ಯಾಂಡ್ ಪೋಸ್ಟ್ ಸರ್ಕಲ್ ಮೂಲಕ ಬರಬಹುದು. ಅಥವಾ ಉತ್ತಮ ರಸ್ತೆಯಾಗಿರುವ ಮೈಸೂರು ಮಾರ್ಗದಿಂದ ಸಹ ಬರಬಹುದು.

ಮುಂಬೈ, ದೆಹಲಿ, ಕೊಲ್ಕತ್ತಾ, ಹೈದರಾಬಾದ್, ಚೆನ್ನೈ ಮುಂತಾದ ನಗರಗಳಿಂದ ಬರುತ್ತಿರುವ ಅತಿಥಿಗಳು ಬೆಂಗಳೂರಿನ ಮೂಲಕ ಬರಬಹುದು.

ತಿರುವನಂತಪುರ, ಕೊಚ್ಚಿ ಹಾಗೂ ಕ್ಯಾಲಿಕಟ್‌ನಿಂದ ಬರುವವರು ಮೈಸೂರಿಗೆ ಮಣಂತವಾಡಿ ಮಾರ್ಗವಾಗಿ ಬಂದು ಸೇರಬಹುದು.

Untitled design (33)

ಮಂಗಳೂರು ಹಾಗೂ ಮಡಿಕೇರಿ ಭಾಗದಿಂದ ಬರುವವರು ಹುಣಸೂರು, ಎಚ್.ಡಿ. ಕೋಟೆ ಮತ್ತು ಹ್ಯಾಂಡ್ ಪೋಸ್ಟ್ ಸರ್ಕಲ್ ಮಾರ್ಗವಾಗಿ ಬರಬಹುದು.

ರಸ್ತೆಮಾರ್ಗದಿಂದ (By Road)

ಬೆಂಗಳೂರಿನಿಂದ ರೆಸಾರ್ಟ್ ಸುಮಾರು 223 ಕಿಮೀ ದೂರದಲ್ಲಿದೆ ಮತ್ತು ಮೈಸೂರಿನಿಂದ 73 ಕಿಮೀ ದೂರದಲ್ಲಿದೆ. ಈ ಎರಡೂ ನಗರಗಳು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಮೂಲಕ ಚೆನ್ನಾಗಿ ಸಂಪರ್ಕಗೊಂಡಿವೆ.

ರೈಲು ಮಾರ್ಗ

ರೆಸಾರ್ಟ್ ಮೈಸೂರು ಜಂಕ್ಷನ್ ರೈಲ್ವೇ ನಿಲ್ದಾಣದಿಂದ ಸುಮಾರು 80 ಕಿಮೀ ದೂರದಲ್ಲಿದೆ. ಮೈಸೂರಿನಿಂದ ಭಾರತದ ಪ್ರಮುಖ ನಗರಗಳಿಗೆ ರೈಲು ಸೇವೆಗಳು ಲಭ್ಯವಿವೆ.

ವಿಮಾನಮಾರ್ಗದಿಂದ (By Air)

ಹತ್ತಿರದ ವಿಮಾನ ನಿಲ್ದಾಣ ಮೈಸೂರು ವಿಮಾನ ನಿಲ್ದಾಣವಾಗಿದೆ, ಇದು ಬೆಂಗಳೂರು ಮತ್ತು ಮಂಗಳೂರು ನಗರಗಳಿಗೆ ಹಾರಾಟ ಸೇವೆ ಹೊಂದಿದೆ. ಬೆಂಗಳೂರಿನಿಂದ ಕಬಿನಿಗೆ ಸುಮಾರು 265 ಕಿಮೀ ದೂರವಿದೆ.

ಪ್ಯಾಕೇಜ್ ಗಳು

ಮಹಾರಾಜ ಪ್ಯಾಕೇಜ್

ಈ ಪ್ಯಾಕೇಜ್ ಪ್ರೀಮಿಯಂ ಅನುಭವವನ್ನು ನೀಡುತ್ತದೆ. ನಿಮ್ಮ ವಾಸ್ತವ್ಯವನ್ನು ಅತ್ಯಂತ ಆರಾಮದಾಯಕವಾಗಿ ಕಾಟೇಜ್‌ಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ (ಒಟ್ಟು 14 ಕಾಟೇಜ್‌ಗಳು).
ಪ್ಯಾಕೇಜ್ ಒಳಗೊಂಡಿರುವುದು:

  • ವಾಸ್ತವ್ಯ
  • ಊಟ: ಮಧ್ಯಾಹ್ನ ಭೋಜನ, ರಾತ್ರಿಯ ಭೋಜನ ಮತ್ತು ಬೆಳಗಿನ ಉಪಾಹಾರ
  • ಎರಡು ಜಂಗಲ್ ಸಫಾರಿ (ರೋಡ್ ಮೂಲಕ ಜೀಪ್ ಸಫಾರಿ)
  • ಕೋರಕಲ್ ರೈಡ್ (ಪ್ರಾಚೀನ ದೋಣಿ ಸವಾರಿ)

ವೈಸ್ರಾಯ್ ಪ್ಯಾಕೇಜ್

ಈ ಪ್ಯಾಕೇಜ್ ಉತ್ತರ ಅಥವಾ ಪೂರ್ವ ಬಂಗ್ಲೆಗಳಲ್ಲಿ ವಾಸ್ತವ್ಯ ನೀಡುತ್ತದೆ (ಒಟ್ಟು 15 ಕೊಠಡಿಗಳು).
ಪ್ಯಾಕೇಜ್ ಒಳಗೊಂಡಿರುವುದು:

  • ವಾಸ್ತವ್ಯ
  • ಊಟ: ಮಧ್ಯಾಹ್ನ ಭೋಜನ, ರಾತ್ರಿಯ ಭೋಜನ ಮತ್ತು ಉಪಾಹಾರ
  • ಎರಡು ಜಂಗಲ್ ಸಫಾರಿ
    • ಮೊದಲ ಸಫಾರಿ: ಬೋಟು ಅಥವಾ ಬಸ್ ಮೂಲಕ (ಲಭ್ಯತೆಗೆ ಅನುಗುಣವಾಗಿ)
    • ಎರಡನೇ ಸಫಾರಿ: ಜೀಪ್ ಮೂಲಕ ನಾಗರಹೊಳೆ ಅರಣ್ಯ ಪ್ರವೇಶ
  • ಕೋರಕಲ್ ರೈಡ್

ಕಬಿನಿ ಟೆಂಟ್ ಪ್ಯಾಕೇಜ್

ಟೆಂಟೆಡ್ ಕಾಟೇಜ್‌ಗಳಲ್ಲಿ ವಾಸ್ತವ್ಯ (ಒಟ್ಟು 6 ಟೆಂಟ್‌ಗಳು)
ಪ್ಯಾಕೇಜ್ ಒಳಗೊಂಡಿರುವುದು:

  • ವಾಸ್ತವ್ಯ
  • ಊಟ: ಮಧ್ಯಾಹ್ನ ಭೋಜನ, ರಾತ್ರಿಯ ಭೋಜನ ಮತ್ತು ಉಪಾಹಾರ
  • ಎರಡು ಜಂಗಲ್ ಸಫಾರಿ
    • ಒಂದು ಬೋಟು ಅಥವಾ ಬಸ್ ಮೂಲಕ (ಲಭ್ಯತೆಗೆ ಅನುಗುಣವಾಗಿ)
    • ಇನ್ನೊಂದು ಜೀಪ್ ಮೂಲಕ ನಾಗರಹೊಳೆ ಪ್ರವೇಶ

ಡಾರ್ಮಿಟರಿ ಪ್ಯಾಕೇಜ್

ಈ ಪ್ಯಾಕೇಜ್ ಸಾಮೂಹಿಕ ವಾಸ್ತವ್ಯಕ್ಕಾಗಿ. ಒಟ್ಟು 10 ಹಂಚಿಕೊಳ್ಳುವ ಹಾಸಿಗೆ ವ್ಯವಸ್ಥೆ ಇದೆ.
ಪ್ಯಾಕೇಜ್ ಒಳಗೊಂಡಿರುವುದು:

  • ವಾಸ್ತವ್ಯ
  • ಊಟ: ಮಧ್ಯಾಹ್ನ ಭೋಜನ, ರಾತ್ರಿಯ ಭೋಜನ ಮತ್ತು ಉಪಾಹಾರ
  • ಎರಡು ಜಂಗಲ್ ಸಫಾರಿ
    • ಒಂದು ಬೋಟು ಮೂಲಕ
    • ಇನ್ನೊಂದು ವ್ಯಾನ್ ಮೂಲಕ

ಸಂಪರ್ಕ

ರೆಸಾರ್ಟ್ ಸಂಪರ್ಕ ಮಾಹಿತಿ

ಕಬಿನಿ ರಿವರ್ ಲಾಡ್ಜ್
ನಿಸ್ಸಣ ಬೆಲ್ಟೂರು ಪೋಸ್ಟ್,
ಎಚ್.ಡಿ. ಕೋಟೆ ತಾಲ್ಲೂಕು,
ಕರಾಪುರ, ಮೈಸೂರು ಸಮೀಪ,
ಕರ್ನಾಟಕ – 571 114, ಭಾರತ

ವ್ಯವಸ್ಥಾಪಕರು: ಕಾರ್ತಿಕ್ ಎಂ. ವಿ.

ಬುಕಿಂಗ್‌ಗಾಗಿ ಕರೆಮಾಡಿ: 080-40554055
ಸಂಪರ್ಕ ಸಂಖ್ಯೆ: 9449597895, 9449597896
ಇಮೇಲ್ ಐಡಿ: info@junglelodges.com

Vinay Khan

Vinay Khan

Travel blogger and adventurer passionate about exploring new cultures and sharing travel experiences.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ