Monday, October 27, 2025
Monday, October 27, 2025

ಸಮುದ್ರ ಯಾನ ... ... ರೋಮಾಂಚನ..!

ಅಮೆರಿಕದ ಫ್ಲೋರಿಡಾ ದಿಂದ 'ಜುವೆಲ್ ಆಫ್ ದಿ ಸೀಸ್' ಹೆಸರಿನ ಈ ಹಡಗು 'ಬಹಾಮಾಸ್' ದ್ವೀಪಕ್ಕೆ ಹೊರಟಿತ್ತು. ಅಳಿಯ ಮಗಳು ಮೂರುದಿನದ 'ಕ್ರೂಸ್' ಪಯಣಕ್ಕೆ ನಮ್ಮನ್ನು ಅಣಿಗೊಳಿಸಿದ್ದರು. ಮಗ ಸೊಸೆ ಬೀಗರು ಮೂವರು ಪುಟ್ಟ ಮೊಮ್ಮಕ್ಕಳೊಂದಿಗೆ ಒಂಬತ್ತು ಮಂದಿ ಪಯಣಿಸಲು ಯೋಜಿಸಲಾಗಿತ್ತು. ಎಲ್ಲರಿಗೂ ಹಡಗು ಪಯಣದ ಮೊದಲ ಅನುಭವ.

  • ಆಶಾ ಹೆಗಡೆ, ಬೆಂಗಳೂರು.


ಬೆಳಿಗ್ಗೆ ಎಚ್ಚರವಾಗುತ್ತಿದ್ದಂತೆ ಕೈ ಚಿವುಟಿಕೊಂಡೆ. 'ನಾನು ಎಲ್ಲಿದ್ದೇನೆ?' ಕಣ್ಣರಳಿಸಿ ಸುತ್ತಮುತ್ತ ನೋಡಿ ಮತ್ತೆ ಮತ್ತೆ ಚಿವುಟಿಕೊಂಡೆ. ರಾತ್ರಿ ಅದೆಂಥ ಗಾಢ ನಿದ್ರೆ ಆವರಿಸಿತ್ತು. ನಿಜವಾಗಿಯೂ ನಾನು ಹಡಗಿನೊಳಗೇ ಇದ್ದೇನಾ? ಹಾಗಾದರೆ ನಾನು ರಾತ್ರಿ ಅಂದುಕೊಂಡಿದ್ದು?
ನಿಧಾನವಾಗಿ ವಾಸ್ತವಕ್ಕೆ ಮರಳಿದೆ. ಹೌದು. ರಾತ್ರಿ ಮಲಗುತ್ತಿದ್ದಂತೆ ಇವತ್ತು ಖಂಡಿತ ನಿದ್ದೆ ಇಲ್ಲ ಎಂದು ನಿರ್ಧರಿಸಿದ್ದೆ. ಏಕೆಂದರೆ ಭೋರ್ಗರೆತದ ಸಮುದ್ರದ ನೀರಿನಲ್ಲಿ ಹಡಗು ತೇಲಿ ಹೋಗುತ್ತಿತ್ತು. ನೀರಿನ ಏರಿಳಿತದಲ್ಲಿ ಹಡಗು ಚಲಿಸುವಾಗ ಅದಕ್ಕನುಗುಣವಾಗಿಯೇ ನಾವೂ ಓಲಾಡಬಹುದು. ಅದೂ ಮಂಚದ ಮೇಲೆ ಮಲಗಿದಾಗ ಮತ್ತಷ್ಟು ಏರುಪೇರಾಗಬಹುದು ಎಂದೆಲ್ಲಾ ಯೋಚಿಸುತ್ತಾ ಆತಂಕದಿಂದಲೇ ಮಲಗಿದ್ದವಳಿಗೆ ಬೆಳಿಗ್ಗೆ ಎಚ್ಚರವಾದಾಗ ಆಶ್ಚರ್ಯವಾಗಿತ್ತು.

ನಾವು ಹಡಗಿನಲ್ಲಿ ಚಲಿಸುತ್ತಿದ್ದರೂ ನಮ್ಮ ತಿಳಿವಳಿಕೆಗೇ ಬಾರದಷ್ಟು ನಾಜೂಕಾಗಿ ಹಡಗು ಸಾಗುತ್ತಿತ್ತು. ಕೋಣೆಯೊಳಗೂ ನೀರಿನ ಅಲೆಗಳ ಕಲರವವೂ ಕೇಳದೇ ಇರುವಷ್ಟು ನಿಶ್ಶಬ್ದ ಸ್ಥಿತಿ ನಿರ್ಮಾಣವಾಗಿತ್ತು. ನಿಜಕ್ಕೂ ಹಡಗು ನಿರ್ಮಾಣದ ತಾಂತ್ರಿಕ ವ್ಯವಸ್ಥೆಯ ಬಗ್ಗೆ ಹೆಮ್ಮೆ ಎನಿಸಿತು.

Jewel of the Seas cruise ೩

ಜುವೆಲ್ ಆಫ್ ದಿ ಸೀಸ್ ಹಡಗು ಹೀಗಿದೆ!

ಅಮೆರಿಕದ ಫ್ಲೋರಿಡಾ ದಿಂದ 'ಜುವೆಲ್ ಆಫ್ ದಿ ಸೀಸ್' ಹೆಸರಿನ ಈ ಹಡಗು 'ಬಹಾಮಾಸ್' ದ್ವೀಪಕ್ಕೆ ಹೊರಟಿತ್ತು. ಅಳಿಯ ಮಗಳು ಮೂರುದಿನದ 'ಕ್ರೂಸ್' ಪಯಣಕ್ಕೆ ನಮ್ಮನ್ನು ಅಣಿಗೊಳಿಸಿದ್ದರು. ಮಗ ಸೊಸೆ ಬೀಗರು ಮೂವರು ಪುಟ್ಟ ಮೊಮ್ಮಕ್ಕಳೊಂದಿಗೆ ಒಂಬತ್ತು ಮಂದಿ ಪಯಣಿಸಲು ಯೋಜಿಸಲಾಗಿತ್ತು. ಎಲ್ಲರಿಗೂ ಹಡಗು ಪಯಣದ ಮೊದಲ ಅನುಭವ.
ಬಸ್ಸು ಕಾರು ರೈಲು ವಿಮಾನಗಳಲ್ಲಿ ಪಯಣಿಸುವಾಗಲೇ ಹಲವರಿಗೆ ತಲೆಸುತ್ತು ವಾಂತಿ ಮುಂತಾದ ಅನುಭವಗಳಾಗುವದರಿಂದ ನೀರಿನಲ್ಲಂತೂ ಖಂಡಿತ ಇಂಥ ಅನುಭವಗಳಾಗುತ್ತದೆ ಎಂದುಕೊಂಡು ಮುನ್ನೆಚ್ಚರಿಕೆಯಾಗಿ ಮಾತ್ರೆಗಳನ್ನೂ ನುಂಗಿದ್ದೆವು. ಹೊಟ್ಟೆ ತೊಳೆಸುವಿಕೆ ತಡೆಯಬಲ್ಲ ಬ್ಯಾಂಡ್-ಗಳನ್ನೂ ಕೈಗಳಿಗೆ ಧರಿಸಿದ್ದೆವು. ಆದರೆ ಸ್ವಲ್ಪ ಸಮಯ ಮಾತ್ರ ಅದು ನಮ್ಮ ಕೈಗಳಲ್ಲಿತ್ತು. ನಂತರ ಅದರ ಯೋಚನೆಯೂ ಯಾರಿಗೂ ಬರಲಿಲ್ಲ. ಹಾಗೆಂದು ದೈಹಿಕವಾಗಿ ಅವಿಶ್ರಾಂತ ಸ್ಥಿತಿ ಇರಲೇ ಇಲ್ಲವೆಂದೇನಿಲ್ಲ. ಬಹಳ ಕಡಿಮೆ ಪ್ರಮಾಣದಲ್ಲಿ ಅದರ ಅನುಭವವಾಗಿತ್ತು.

ಒಂದು ದಿನ ಮುಂಚಿತವಾಗಿಯೇ ಹೊಟೇಲ್ ನಲ್ಲಿ ಉಳಿದು ಬೆಳಗ್ಗೆ 'ಹಡಗು ಬಂದರು' ತಲುಪಿದೆವು. ನಾವು ಸಾಗಲಿರುವ ಹಡಗು ದೂರದಿಂದಲೇ ಕಣ್ಣಿಗೆ ಬಿತ್ತು. ಪುಟ್ಟ ವಸತಿ ಸಮುಚ್ಛಯವನ್ನು ಕಂಡಂತಾಗಿ ಒಳಂಗಿಂದೊಳಗೆ ಸ್ವಲ್ಪ ಗಾಬರಿಯಾಯಿತು. ಕಟ್ಟಡದಂತೆ ಕಾಣುತ್ತಿರುವ ಈ ಹಡಗು ನೀರಿನಲ್ಲಿ ತೇಲುವುದೆಂದರೆ?

ಹನ್ನೆರಡು ಸಾವಿರ ಆನೆತೂಕ!

ನಂತರ ತಿಳಿದಂತೆ ಈ ಹಡಗು ಸುಮಾರು ಒಂದು ದೊಡ್ಡ ಎಕ್ಸ್-ಪ್ರೆಸ್ ರೈಲಿನಷ್ಟು ಉದ್ದ, ಹದಿನಾಲ್ಕು ಬಸ್ಸುಗಳು ಒಂದರ ಹತ್ತಿರ ಮತ್ತೊಂದು ನಿಲ್ಲಿಸಿದಷ್ಟು ಅಗಲ ಹಾಗೂ ಸುಮಾರು 12,000 ಆನೆಗಳ ತೂಕದಷ್ಟು ಭಾರವಿರುತ್ತದೆ.

ವಿಮಾನಗಳಂತೆಯೇ ಬಂದರಿನೊಳಗಿನ ಕೋಣೆಯಿಂದಲೇ ಹಡಗಿನೊಳಗೆ ಹೋಗಲು ವ್ಯವಸ್ಥೆ ಇತ್ತು. ಸೀದಾ ಹೋಗಿದ್ದು ಐದನೇ ಅಂತಸ್ತಿಗೆ. ನಾವು ದೊಡ್ಡ ಸಭಾಂಗಣ ತಲುಪಿದ್ದೆವು. ಅಲ್ಲಿ ಮಂದ ಬೆಳಕಿನ ರಂಗು ರಂಗಿನ ದೀಪಗಳು ಪಸರಿಸಿದ್ದವು. ಸುತ್ತಲೂ ಸುಖಾಸೀನಗಳು. ಯಾಕೋ ಸಂಶಯವಾಯ್ತು. ನಾವು ಹಡಗು ಬಿಟ್ಟು ಹಾದಿ ತಪ್ಪಿ ಬಂದು ಬಿಟ್ಟಿದ್ದೇವಾ? ನಾವು ಹಡಗಿನೊಳಗೆ ಇದ್ದೇವೆ ಎಂಬುದನ್ನು ಅಳಿಯನಲ್ಲಿ ಖಚಿತಪಡಿಕೊಂಡೆ. ಬೆರಗಾಗಿತ್ತು.

Jewel of the Seas cruise ೪

ಅರಮನೆಯಲ್ಲ ಇದು ಸಾಮ್ರಾಜ್ಯ!

ಸುಮಾರು 850ರಿಂದ 900 ಮಂದಿ ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆ ಸಭಾಂಗಣದಲ್ಲಿತ್ತು. ಹಡಗಿನ ಸಿಬ್ಬಂದಿಯೇ ಅಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆಂದು ತಿಳಿದು ಬಂತು. ಸುತ್ತಲೂ ಒಮ್ಮೆ ಕಣ್ಣು ಹಾಯಿಸಿ ಮುಂದೆ ಹೋಗುತ್ತಿದ್ದಂತೆ ಲಿಫ್ಟ್ ಕಾಣಿಸಿತು. ಒಟ್ಟು ಒಂಬತ್ತು ಲಿಫ್ಟ್ ಗಳಿದ್ದು ಒಮ್ಮೆಗೆ ಹತ್ತರಿಂದ ಹನ್ನೆರಡು ಮಂದಿ ಬಳಸಬಹುದು. ಹನ್ನೊಂದನೇ ಮಹಡಿಗೆ ಹೋದೆವು. ಅಲ್ಲಿ ದೊಡ್ಡ ರೆಸ್ಟೋರೆಂಟ್ ಕಾಣಿಸಿತು. ಒಳಹೋಗುತ್ತಿದ್ದಂತೆ ಆತ್ಮೀಯವಾಗಿ ಸ್ವಾಗತಿಸಿ ಕೈಗೆ ಸ್ಯಾನಿಟೈಜರ್ ಹಾಕಿದರು. ಅಲ್ಲಿ ಬಫೆ ಊಟದ ವ್ಯವಸ್ಥೆಯಿತ್ತು. ದೊಡ್ಡ ಸಮಾರಂಭಗಳಲ್ಲಿರುವಂತೆಯೇ ಒಂದೊಂದು ಬಗೆಯ ಆಹಾರಕ್ಕೂ ಒಂದೊಂದು ವಿಭಾಗಗಳಿದ್ದವು. ಸುತ್ತಲೂ ಆಹಾರ ಮಳಿಗೆಗಳಿದ್ದವು. ಹಲವು ದೇಶಗಳ ಆಹಾರ ವ್ಯವಸ್ಥೆ ಇತ್ತು. ನಮ್ಮ ದೇಶದ ಆಹಾರಗಳೂ ಲಭ್ಯವಿದ್ದುದು ಈ ಹಡಗಿನ ವಿಶೇಷ!

ಒಂದೆಡೆ ತರಕಾರಿ, ಹಣ್ಣುಗಳು, ಸಲಾಡ್ ಗಳು, ಮಾಂಸಾಹಾರ, ಸಸ್ಯಾಹಾರ, ಸಿಹಿ ತಿನಿಸುಗಳು, ಕೇಕ್, ಐಸ್ ಕ್ರೀಮ್ ಗಳು, ಪಾನೀಯಗಳು - ಹೀಗೆ ಬಗೆ ಬಗೆಯ ಆಹಾರಗಳು ಹೇರಳವಾಗಿದ್ದವು. ಬೇಸಗೆಯ ಹಣ್ಣುಗಳಾದ ಕಲ್ಲಂಗಡಿ ಮಿಣಿಕೆ ಅನಾನಸ್ ಎಲ್ಲವೂ ಹೇರಳವಾಗಿತ್ತು. ಗಿಜಿಗುಡುವ ಜನರನ್ನು ನೋಡಿ ಪುಟ್ಟ ಮೊಮ್ಮಗ ಕೇಳಿದ 'ನಾವು ಬರ್ತ್ ಡೇ ಗೆ ಬಂದಿದ್ದೇವಾ?'
ಬೇಕಾಗಿದ್ದನ್ನು ತಟ್ಟೆಯಲ್ಲಿ ಬಡಿಸಿಕೊಂಡು ಹಾಲ್ ನಲ್ಲಿ ಜೋಡಿಸಿಟ್ಟಿರುವ ಕುರ್ಚಿಯಲ್ಲಿ ಕುಳಿತುಕೊಳ್ಳಬಹುದು. ಅಥವಾ ಹಾಲ್ ನ ಹೊರಗೆ ಸಮುದ್ರ ಕಾಣುವಂತಿರುವ ಸ್ಥಳಗಳಲ್ಲಿ ಕುಳಿತುಕೊಳ್ಳಬಹುದು. ಆದರೆ ಮೇಲ್ಛಾವಣಿಯಂತೂ ಇದ್ದೇ ಇರುತ್ತದೆ. ಇಲ್ಲಿ ಒಮ್ಮೆಗೆ 700 ಮಂದಿ ಕುಳಿತುಕೊಳ್ಳಬಹುದಾಗಿದೆ. ಸಮುದ್ರ ಯಾನಕ್ಕೆ ಕಾಯ್ದಿರಿಸುವ ಟಿಕೆಟ್ ದರದಲ್ಲೇ ಊಟ ಕೋಣೆಯ ಖರ್ಚುಗಳೂ ಸೇರಿರುತ್ತವೆ.

ಸಿಕ್ಕನೊಬ್ಬ ಕನ್ನಡಿಗ!

ನಾವು ಕನ್ನಡದಲ್ಲಿ ಮಾತನಾಡಿಕೊಳ್ಳುತ್ತಾ 'ಸಸ್ಯಾಹಾರಿ' ಪದಾರ್ಥಗಳನ್ನು ಹುಡುಕುತ್ತಿದ್ದೆವು. 'ನಮಸ್ಕಾರ ಹೇಗಿದ್ದೀರಾ?' ಎನ್ನುವ ದನಿ ಕೇಳಿ ಹಿಂತಿರುಗಿದರೆ ಅಪರಿಚಿತ ಕನ್ನಡಿಗ! ಅವರು ಆಹಾರ ಮಳಿಗೆಯ ಮೇಲ್ವಿಚಾರಕರಾಗಿ ಕಳೆದ 23 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಮಂಗಳೂರಿನವರು. ಆತ್ಮೀಯವಾಗಿ ಉಪಚರಿಸಿದರು.
ಊಟ ಮುಗಿಸಿ ನಿಗದಿಯಾಗಿದ್ದ ಕೋಣೆಗಳಿಗೆ ತೆರಳಿದೆವು. ಪುಟ್ಟ ಕೋಣೆ. ಅಲ್ಲಿ ಮೂರುಜನ ಮಲಗಬಹುದಾದ ಮಂಚ. ಸೋಫಾ ಮೇಜು ಟಿವಿ ಕಪಾಟು! ಪುಟ್ಟ ಬಾಲ್ಕನಿ. ಅಲ್ಲಿ ಎರಡು ಕುರ್ಚಿಗಳು. ಒಬ್ಬರು ಒಳ ಹೋಗಲು ಸಾಧ್ಯವಾಗುವ ಬಾತ್ ರೂಮ್ ಕಮೋಡು. ಹೀಗೆ ಎಲ್ಲಾ ಹೊಟೇಲ್ ಗಳಲ್ಲಿರುವಂತೆಯೇ ಇಲ್ಲೂ ಇತ್ತು.

ಇಲ್ಲಿ ಕೂದಲು ನೆಟ್ಟಗಾಗುತ್ತದೆ!

ಆಗ ಸಂಜೆ ಐದರ ಸಮಯ. ಹಡಗು ಮೆಲ್ಲಗೆ ಚಲಿಸಲಾರಂಭಿಸಿತು. ಎಲ್ಲರಿಗೂ ಒಂದು ರೀತಿಯ ಪುಳಕ. ಕೋಣೆಯ ಬಾಲ್ಕನಿಯಿಂದ ಸ್ವಲ್ಪ ಹೊತ್ತು ವೀಕ್ಷಿಸಿದೆವು. ನಂತರ ಟೆರೇಸ್ ಗೆ ಹೋದರೆ ಮತ್ತಷ್ಟು ಪರಿಣಾಮಕಾರಿಯಾಗಿರಬಹುದೆಂದು ಕೊಂಡು ಅಲ್ಲಿಗೆ ಸಾಗಿದೆವು. ಸುತ್ತಲೂ ನೀಲಿ ಕಡಲು. ಮೇಲೆ ನೀಲ ವರ್ಣದ ಆಗಸ. ಮನದ ಗತಿಯಲ್ಲಿ ಸಾಗುವ ಹಡಗು. ಸುಂದರ ವಾತಾವರಣವನ್ನು ಮನಸ್ಸಿಗೆ ತುಂಬಿಕೊಳ್ಳುತ್ತಿದ್ದಂತೆ ಆಕಾಶದಲ್ಲಿ ದಟ್ಟ ಮೋಡ ಆವರಿಸಿತು. ಗುಡುಗು ಮಿಂಚಿನ ಆರ್ಭಟ ಬಲವಾದ ಗಾಳಿ ಬೀಸಿ ತುಂತುರು ಮಳೆ ಆರಂಭವಾಯಿತು. ಕೆಲವರ ತಲೆಕೂದಲು ನೆಟ್ಟಗಾಗುವದನ್ನು ಮಗ ಗಮನಿಸಿದ್ದ. ಅದು ಸಿಡಿಲು ಬಡಿಯುವ ಸೂಚನೆ ಎಂಬುದು ವೈಜ್ಞಾನಿಕ ಸತ್ಯ. ಎಲ್ಲರೂ ಓಡಿ ಟೆರೇಸ್ ನ ಬಾಗಿಲಿನಿಂದ ಒಳ ಹೊಕ್ಕೆವು. ಸ್ವಲ್ಪ ಸುಧಾರಿಸಿಕೊಳ್ಳುವಷ್ಟರಲ್ಲಿ ಸಣ್ಣದಾಗಿ ಮಳೆ ಬಂದು ನಿಂತಿತ್ತು. ಗಾಳಿಯಿಂದಾಗಿ ಸಿಡಿಲು ದೂರದಲ್ಲಿ ಬಡಿಯಿತು. ಸೂರ್ಯ ಮುಳುಗುವ ಹೊತ್ತು. ಹೊಂಬಣ್ಣ ಆಗಸದಲ್ಲಿ ಪಸರಿಸಿತ್ತು. ಅದರ ಪ್ರತಿಬಿಂಬ ಹಡಗು ಸಾಗಿ ಬಂದ ಪಥದಲ್ಲಿ ಹರಡಿ ಪ್ರಕೃತಿ ಸೌಂದರ್ಯ ಇಮ್ಮಡಿಸಿತ್ತು. ಆ ಕ್ಷಣದಲ್ಲಿ ಮನಸ್ಸಿಗಾದ ಆನಂದ ಅನಿರ್ವಚನೀಯ! ಆ ರಮಣೀಯತೆಯನ್ನು ಸವಿಯಬಹುದು ಎನ್ನುವ ಕಾರಣಕ್ಕಾಗಿಯೇ ಹಡಗು ಸಂಜೆ ಹೊರಡುತ್ತದೆ ಎಂದ ಭಾವಿಸಿದೆವು.

ಸೇರಿತು ದಡ ಸೇರಿತು

ನಾವು ಯಾನ ಕೈಗೊಂಡ ಕಡಲು ಅಟ್ಲಾಂಟಿಕ್ ಮಹಾ ಸಾಗರ. ನಮ್ಮನ್ನು ಹೊತ್ತ ಹಡಗು ಬೆಳಗಾಗುವಷ್ಟರಲ್ಲಿ 'ಕೋಕೋಕೆ' ಎಂಬ ಬಹಾಮಾಸ್ ನ ಒಂದು ದ್ವೀಪದ ದಡವನ್ನು ಸೇರಿತ್ತು. ಬಹಾಮಾಸ್ ಒಂದು ಪ್ರತ್ಯೇಕ ದೇಶ. ಆದರೆ ಅಮೆರಿಕ ವೀಸಾ ಇದ್ದರೆ ಅಲ್ಲಿಗೆ ಪ್ರವೇಶ ಸಾಧ್ಯ. ರಾಯಲ್ ಕೆರಿಬಿಯನ್ ಸಂಸ್ಥೆ ಈ ಹಡಗಿನೊಂದಿಗೆ ದ್ವೀಪವನ್ನೂ ಕೊಂಡುಕೊಂಡು ಅಭಿವೃದ್ಧಿ ಪಡಿಸಿದೆ.

ಮೂರು ದಿನದ ಸಮುದ್ರ ಯಾನದಲ್ಲಿ ಒಂದು ಹಗಲು ಈ ದ್ವೀಪದಲ್ಲಿ ಕಳೆಯಲು ಅವಕಾಶವಿತ್ತು. ಸಮುದ್ರ ದಡದಲ್ಲೇ ರಸ್ತೆ ನಿರ್ಮಿಸಿ ಆ ದ್ವೀಪಕ್ಕೆ ನಡೆದುಕೊಂಡು ಹೋಗಲು ವ್ಯವಸ್ಥೆ ಕಲ್ಪಿಸಿದ್ದರು. ಅಲ್ಲಿ ಸಾಕಷ್ಟು ಮನರಂಜನೆಗೆ ಅವಕಾಶವಿದೆ. ವಿಶೇಷವಾಗಿ ವಾಟರ್ ಪಾರ್ಕ್ ಗಳು, ಪುಟ್ಟ ಬೀಚ್ ಗಳು, ಮಕ್ಕಳ ದೊಡ್ಡವರ ಈಜುಕೊಳಗಳು ಗಮನ ಸೆಳೆಯುತ್ತವೆ. ಬೇಸಿಗೆಯ ಧಗೆ ಸುಡುತ್ತಿತ್ತು. ಅದು ತಣಿಯಲು ಸರಿಹೋಗುವಂಥ ಕಲ್ಲಂಗಡಿ ಮಿಣಿಕೆ ಅನಾನಸ್ ಹಣ್ಣುಗಳು ಸೇಬು ನಿಂಬೆ ದ್ರಾಕ್ಷಿ ಹಣ್ಣಿನ ಪಾನೀಯಗಳು ಹೇರಳವಾಗಿ ಲಭ್ಯವಿದ್ದವು. ಎಲ್ಲವೂ ಉಚಿತ. ಕೆಲವೊಂದು ಆಹಾರ ಪದಾರ್ಥಗಳನ್ನು ಹಣ ಕೊಟ್ಟು ಪಡೆದುಕೊಳ್ಳಬಹುದಾಗಿತ್ತು.

ಸಂಜೆ ಐದರೊಳಗೆ ಮತ್ತೆ ಹಿಂತಿರುಗಿ ಬರುವಂತೆ ಮೊದಲೇ ಸೂಚಿಸಿದ್ದರು. ಆ ವರೆಗೂ ಮನದಣಿಯೆ ಓಡಾಡಿ ಆಟವಾಡಿ ತಿಂದು ತೇಗಿದ್ದೆವು. ಮತ್ತೆ ಹಡಗು ಹಿಂತಿರುಗಿ ಹೊರಟಿತು. ಆ ರಾತ್ರಿ ಕಳೆದು ಮರುದಿನ ಹಗಲು ಮತ್ತೂ ಒಂದು ರಾತ್ರಿ ಹಡಗಿನೊಳಗೇ ಕಳೆಯಬೇಕೆಂಬ ಮಾಹಿತಿ ದೊರಕಿತು. ಇಡೀ ದಿನ ಒಳಗೇ ಕುಳಿತು ಹೊತ್ತು ಕಳೆಯುವುದಾದರೂ ಹೇಗೆ ಎಂದು ಆಲೋಚಿಸುತ್ತಾ ನಿದ್ದೆಗೆ ಜಾರಿದೆವು.

Jewel of the Seas cruise ೫

ಕೆಪಾಸಿಟಿ- 2500..!

ಇಡೀ ಹಡಗಿನ ಒಳಗನ್ನೊಮ್ಮೆ ಅವಲೋಕಿಸುವದೆಂದು ನಿರ್ಧರಿಸಿ ಹೊರಟೆವು. ಇದರಲ್ಲಿ 13 ಅಂತಸ್ತುಗಳಿವೆ. 13ನೇ ಅಂತಸ್ತಿನಲ್ಲಿ 'ಗಾಲ್ಫ್ ಹಾಗೂ ರಾಕ್ ಕ್ಲೈಂಬಿಂಗ್' ಗೆ ಅವಕಾಶವಿದೆ.12 ನೇ ಮಹಡಿ ಆಟಗಳಿಗೆ ಮೀಸಲು. ಹಿರಿಯರಿಗೆ ಮಕ್ಕಳಿಗೆ ಪ್ರತ್ಯೇಕ ಈಜು ಕೊಳಗಳು ನೀರಿನ ಜಾರುಬಂಡಿ ವಾಕಿಂಗ್ ಪಥ ಫಿಟ್ ನೆಸ್ ಸೆಂಟರ್ (ಜಿಮ್) ಇದ್ದರೆ 11ನೇ ಫ್ಲೋರ್ ನಲ್ಲಿ ಬಫೆ ಊಟದ ಜತೆಗೆ ಆರ್ಟ್ ಗ್ಯಾಲರಿ ಹಾಗೂ ಸ್ಪಾ ಗಳಿವೆ. 8,9,10 ಮತ್ತು 7 ಅತಿಥಿಗಳಿಗಾಗಿ ಕೋಣೆಗಳು. ಒಂದು ಕೋಣೆಯಲ್ಲಿ ಮೂರು ಮಂದಿ ತಂಗಬಹುದು. ಈ ಹಡಗು ಒಟ್ಟು 2500 ಮಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

6ನೇ ಅಂತಸ್ತಿನಲ್ಲಿ ಜೂಜು ಅಡ್ಡೆ (ಕೆಸಿನೋ) ಸಿನಿಮಾ ಮಂದಿರ ಹಾಗೂ ಬಾರ್ ಇದೆ. 5ರಲ್ಲಿ ಸಭಾಂಗಣ ಜತೆಗೆ ಒಂದೆರಡು ಅಂಗಡಿ ಮಳಿಗೆಗಳು ಫೋಟೋ ಗ್ಯಾಲರಿಗಳೂ ಇವೆ, ಕಣ್ಣು ಕೋರೈಸುವ ದೀಪಗಳಿಂದ ಅಲಂಕೃತಗೊಂಡ ಪಾರ್ಟಿ ಹಾಲ್ ಇದೆ. ಹಡಗಿನ ಸಿಬ್ಬಂದಿ ಅಬ್ಬರದ ಸಂಗೀತ ಹಿಮ್ಮೇಳಕ್ಕೆ ಹಾಡುತ್ತಿರುತ್ತಾರೆ. ಕೂರಲು ಸುತ್ತಲೂ ಆಸನ ವ್ಯವಸ್ಥೆಯಿರುತ್ತದೆ. ಮಧ್ಯದಲ್ಲಿ ನಿಂತು ಯಾರು ಬೇಕಾದರೂ ನರ್ತಿಸಬಹುದು. ಕುಳಿತವರು ಕೆಲವರು ಮದ್ಯಪಾನ ಮಾಡುತ್ತಾ ಕಾರ್ಡ್ಸ್ ಆಡುತ್ತಾ ವೀಕ್ಷಿಸುತ್ತಿರುತ್ತಾರೆ. ಬೇರೊಂದು ಅಂತಸ್ತಿನ ಬಾಲ್ಕನಿಯಿಂದ ಕೆಲವರು ಇಣುಕುತ್ತಾರೆ. ಅತ್ತ ಕಣ್ಣು ಹಾಯಿಸಿ ಸರಿದಾಡುವವರೂ ಕಂಡುಬರುತ್ತಾರೆ. ಮಕ್ಕಳೂ ಪುಟ್ಟ ಮೊಮ್ಮಕ್ಕಳೂ ಡ್ರಮ್ ಬೀಟ್ಸ್ ಗೆ ಹೆಜ್ಜೆ ಹಾಕಿ ನರ್ತಿಸಿ ಸಂಭ್ರಮಿಸಿದರು. 4 ನೇ ಅಂತಸ್ತಿನಲ್ಲೂ ರೆಸ್ಟೋರೆಂಟ್ ಇದ್ದು ಅಲ್ಲಿ ಮೇಜಿಗೇ ಸೇವೆ ಒದಗಿಸಲಾಗುತ್ತದೆ. ಒಂದು ಬಾರಿಗೆ 1200 ಜನ ಕೂರಬಹುದಾಗಿದೆ. ಜತೆಗೆ ಇಲ್ಲಿ ವೈದ್ಯಕೀಯ ಸೌಲಭ್ಯಗಳೂ ದೊರೆಯುತ್ತವೆ.

ಹಡಗಿನಲ್ಲಿ ಒಟ್ಟು 6 ರೆಸ್ಟೋರೆಂಟ್ ಗಳಿವೆ. ಪ್ರತ್ಯೇಕವಾಗಿ ಆಯಾ ದೇಶಗಳ ಆಹಾರವನ್ನೇ ಬಯಸುವವರು ಅಂಥ ಆಹಾರಗಳನ್ನು ಬೆಲೆ ತೆತ್ತು ಕೊಂಡುಕೊಳ್ಳಬೇಕಾಗುತ್ತದೆ. 3ನೇ ಮತ್ತು 2ನೇ ಅಂತಸ್ತು ಸಿಬ್ಬಂದಿಗಳಿಗೆ ಮೀಸಲು. ಇಲ್ಲಿ ಸತತವಾಗಿ 850 ಮಂದಿ ಸೇವೆ ಸಲ್ಲಿಸುತ್ತಾರೆ. ಅಡುಗೆ ತಯಾರಿಯೂ ಅಲ್ಲೇ ನಡೆಯುತ್ತದೆ. ಬೇರೆಯವರಿಗೆ ಅಲ್ಲಿ ಪ್ರವೇಶವಿಲ್ಲ. ಹಡಗು ಚಾಲನೆಯ ಕ್ಯಾಬಿನ್ ನೋಡುವ ಆಸೆಯೂ ನಮಗಿತ್ತು. ಆದರೆ ಅಲ್ಲಿಯೂ ಪ್ರವೇಶ ಅಸಾಧ್ಯವಿತ್ತು.

ಇದು ಹಡಗಲ್ಲ.. ಬೃಹತ್ ಮಾಲ್!

ನಮ್ಮಲ್ಲಿ ಹುರುಪು ತುಂಬುವ ಸಲುವಾಗಿ ಕೆಲವೊಂದು ಡ್ರೆಸ್ ಕೋಡ್ ಗಳನ್ನೂ ವಿಧಿಸಿದ್ದರು. ನಾವು ಹಡಗಿನೊಳಗೆ ನೀರಿನಲ್ಲಿ ಚಲಿಸುತ್ತಿದ್ದೇವೆ ಎನ್ನುವುದನ್ನು ನೆನೆಪಿಸಿಕೊಂಡರಷ್ಟೇ ಅರಿವಾಗುತ್ತಿತ್ತು. ಒಟ್ಟಿನಲ್ಲಿ ಒಂದು ದೊಡ್ಡ ಮಾಲ್ ನೊಳಗೆ ಸುತ್ತುತ್ತಿದ್ದೇವೆ ಎಂದು ಭಾಸವಾಗುತ್ತಿತ್ತು. ವ್ಯತ್ಯಾಸ ಇಷ್ಟೇ. ಇದು ಅಮ್ಯೂಸ್ ಮೆಂಟ್ ಪಾರ್ಕ್ ನಂತೆ; ಅದು ಅಂಗಡಿಮಳಿಗೆಗಳ ಸಾಲಿನಂತೆ.!
ಹಡಗಿನೊಳಗೇ ಸಾಕಷ್ಟು ಮನರಂಜನೆ ದೊರಕಿತು. ಪ್ರತಿಯೊಂದನ್ನೂ ಬೆರಗಾಗಿ ವೀಕ್ಷಿಸಿದೆವು. ಹಡಗಿನೊಳಗೇ ಈ ಎಲ್ಲವನ್ನೂ ನಿರ್ಮಿಸಿದ ಮಾನವನ ಅದ್ಭುತ ಚಮತ್ಕಾರಗಳನ್ನು ಕಂಡು ಮೂಕವಿಸ್ಮಿತರಾಗಿದ್ದಂತೂ ಸತ್ಯ!

ಮೂರು ದಿನಗಳಲ್ಲಿ ಹಡಗು ಸುಮಾರು 700 ಕಿಮೀ. ದೂರವನ್ನು ಕ್ರಮಿಸಿ ಸ್ವಸ್ಥಾನ ಸೇರಿತ್ತು. ಭೌತಿಕ ಹಾಗೂ ಮಾನಸಿಕ ಎರಡೂ ಅನನ್ಯ ಅನುಭವಗಳನ್ನು ಪಡೆದು ಸಂತಸದೊಂದಿಗೆ ಮರಳಿ ಊರಿಗೆ ತೆರಳಿದೆವು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!