ಅಪೂರ್ವ ಸಾಧಕನ ಪ್ರತಿಬಿಂಬ ಡಾ. ಕಲಾಮ್ ರಾಷ್ಟ್ರೀಯ ಸ್ಮಾರಕ
ಭಾರತ ರತ್ನ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರಿಗೆ ಗೌರವ ಸಲ್ಲಿಸಲು ಅವರ ಸಮಾಧಿ ಸ್ಥಳದಲ್ಲಿ ರಾಷ್ಟ್ರೀಯ ಸ್ಮಾರಕವೊಂದನ್ನು ನಿರ್ಮಿಸಲು ನಿರ್ಧರಿಸಲಾಯಿತು. ತ್ವರಿತ ಗತಿಯಲ್ಲಿ ನಿರ್ಮಾಣಗೊಂಡ ಈ ಸ್ಮಾರಕ ಸಂಗ್ರಹಾಲಯವನ್ನು 2017ರ ಜುಲೈ 27ರಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದರು.
- ಮಂಜುನಾಥ ಡಿ. ಎಸ್.
ನೀವು ನಿದ್ದೆಯಲ್ಲಿ ಕಾಣುವುದು ಕನಸಲ್ಲ, ನಿಮ್ಮನ್ನು ನಿದ್ದೆ ಮಾಡಲು ಬಿಡದಿರುವುದು ಕನಸು. ಇದು ದೇಶ ಕಂಡ ಜನಪ್ರಿಯ ರಾಷ್ಟ್ರಪತಿ, ಭಾರತ ರತ್ನ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರ ಪ್ರಚಲಿತ ಹೇಳಿಕೆ.
ತಮಿಳು ನಾಡಿನ ರಾಮೇಶ್ವರಂನಲ್ಲಿ 1931ರ ಅಕ್ಟೋಬರ್ 15ರಂದು ಜನಿಸಿದ ಡಾ. ಕಲಾಮ್ ಸ್ವತಃ ಇಂತಹ ಕನಸು ಕಂಡು ಅದನ್ನು ನನಸಾಗಿಸಿದ ಬಹುಮುಖ ಪ್ರತಿಭೆ. ವಿಜ್ಞಾನಿಯಾಗಿ, ತಂತ್ರಜ್ಞಾನಿಯಾಗಿ, ಶಿಕ್ಷಕರಾಗಿ, ಲೇಖಕರಾಗಿ, ದಾರ್ಶನಿಕರಾಗಿ, ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿ, ಜನಮಾನಸದಲ್ಲಿ ನೆಲೆಯಾದ ಅಪರೂಪದ ವ್ಯಕ್ತಿ ಡಾ.ಕಲಾಂ. ಭಾರತದ ಮಿಸೈಲ್ ಮ್ಯಾನ್ ಎಂದೇ ಪ್ರಖ್ಯಾತರಾದ ಅವರು ಭಾರತದ ರಕ್ಷಣಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ.

ಇಷ್ಟೆಲ್ಲ ಇದ್ದರೂ ಬೋಧಕ ವೃತ್ತಿ ಅವರಿಗೆ ಅತ್ಯಂತ ಆಪ್ತವಾಗಿತ್ತು; ಅದು ಅವರ ಆದ್ಯತೆಯಾಗಿತ್ತು. ವಿದ್ಯಾರ್ಥಿಗಳೆಂದರೆ ಅವರಿಗೆ ಅಗಾಧ ಪ್ರೇಮ. ಅವರೊಡನೆ ಬೆರೆತು, ಚರ್ಚಿಸಿ, ಮಾರ್ಗದರ್ಶನ ಮಾಡಿ, ಅವರನ್ನು ಪ್ರೇರೇಪಿಸುವುದೆಂದರೆ ಅವರಿಗೆ ಎಲ್ಲಿಲ್ಲದ ಉತ್ಸಾಹ. ಈ ಕಾರಣದಿಂದಲೇ ಅವರ ಜನ್ಮದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನ ಎಂದು ಆಚರಿಸಲಾಗುತ್ತದೆ. ಅವರ ಜೀವನದ ಅಂತಿಮ ಕ್ಷಣದಲ್ಲೂ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು ಎಂಬುದು ಗಮನಾರ್ಹ.
2015ರ ಜುಲೈ 27ರಂದು ಐಐಎಂ ಶಿಲ್ಲಾಂಗ್-ನಲ್ಲಿ ಅವರು, ಜೀವಿಸಲು ಅರ್ಹವಾದ ವಿಶ್ವವನ್ನು ಸೃಷ್ಟಿಸುವ ಕುರಿತು ಉಪನ್ಯಾಸ ಪ್ರಾರಂಭಿಸಿದ್ದರು. ಉಪನ್ಯಾಸ ನೀಡುತ್ತಿರುವಾಗಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದರು. ಬರಸಿಡಿಲಿನಂತೆ ಬಂದೆರಗಿದ ಅವರ ನಿಧನದ ವಾರ್ತೆ ದೇಶವಾಸಿಗಳನ್ನು ದುಃಖಸಾಗರದಲ್ಲಿ ಮುಳುಗಿಸಿತು. ದಿನಾಂಕ 30ರಂದು ಹುಟ್ಟೂರು ರಾಮೇಶ್ವರಂನಲ್ಲಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

ಈ ಮಹಾಚೇತನಕ್ಕೆ ಗೌರವ ಸಲ್ಲಿಸಲು ಅವರ ಸಮಾಧಿ ಸ್ಥಳದಲ್ಲಿ ರಾಷ್ಟ್ರೀಯ ಸ್ಮಾರಕವೊಂದನ್ನು ನಿರ್ಮಿಸಲು ನಿರ್ಧರಿಸಲಾಯಿತು. ತ್ವರಿತ ಗತಿಯಲ್ಲಿ ನಿರ್ಮಾಣಗೊಂಡ ಈ ಸ್ಮಾರಕ ಸಂಗ್ರಹಾಲಯವನ್ನು 2017ರ ಜುಲೈ 27ರಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದರು.
ಡಾ. ಕಲಾಂ ಅವರ ಆಸಕ್ತಿ ಮತ್ತು ಆಶಯಗಳನ್ನು ಬಿಂಬಿಸುವ ದೃಷ್ಟಿಯಿಂದ ನಿರ್ಮಿಸಲಾಗಿರುವ ಈ ಸಂಗ್ರಹಾಲಯದಲ್ಲಿ ನಾಲ್ಕು ಪ್ರದರ್ಶನ ಹಜಾರಗಳಿವೆ. ಸಮಾಧಿಯ ನಾಲ್ಕೂ ದಿಕ್ಕುಗಳಲ್ಲಿನ ಕೋಣೆಗಳಲ್ಲಿರುವ ದರ್ಶಿಕೆಗಳು ಡಾ.ಕಲಾಂ ಅವರ ಜೀವನದ ಪ್ರಮುಖ ಘಟನೆಗಳನ್ನು ಪರಿಚಯಿಸುತ್ತವೆ. ಇವುಗಳಲ್ಲಿ ಮುಖ್ಯವಾಗಿ ಪೋಕರ್ಣ್ ಅಣ್ವಸ್ತ್ರ ಪರೀಕ್ಷೆ, ರಾಕೆಟ್ ಕ್ಷಿಪಣಿ ಹಾಗು ಸಂಬಂಧಿತ ಚಿತ್ರಗಳ ಪ್ರತಿಕೃತಿಗಳು, ಮಕ್ಕಳ ಮೇಲಿನ ಪ್ರೀತಿಯ ಪ್ರತೀಕಗಳು, ಇತ್ಯಾದಿಗಳ ಪ್ರತಿಕೃತಿಗಳು ಸೇರಿವೆ. ಇವಲ್ಲದೆ ಇಲ್ಲಿರುವ ಕುರಾನ್, ಬೈಬಲ್, (ಅಕ್ಷರಬ್ರಹ್ಮಯೋಗದ ಪುಟ ತೆರೆದಿಟ್ಟಿರುವ) ಭಗವದ್ಗೀತೆ, ಪ್ರಮಾಣ ಪತ್ರಗಳು, ಪ್ರಶಸ್ತಿಗಳು, ಪದಕಗಳು, ವೀಣೆ, ಹಾಗು ಇತರ ದರ್ಶಿಕೆಗಳು ಡಾ. ಕಲಾಂ ಅವರ ಬಹುಮುಖ ವ್ಯಕ್ತಿತ್ವ ಮತ್ತು ಪ್ರತಿಭೆಯ ಪುರಾವೆಗಳಂತಿವೆ.
ಡಾ.ಕಲಾಂ ಅವರು ಜೆ ಎಸ್ ಎಸ್ ಸಂಸ್ಥೆಗೆ ಭೇಟಿ ನೀಡಿದ್ದಾಗಿನ ಚಿತ್ರವೂ ಇಲ್ಲಿದೆ. ಇದು ಶಿಕ್ಷಣಪ್ರೇಮಿ ಕಲಾಂ ಅವರ ಕರ್ನಾಟಕದ ನಂಟಿನ ನಿದರ್ಶನವಾಗಿ ಕಂಡಿತು.

ವೀಣಾ ವಾದನದಲ್ಲಿ ತಲ್ಲೀನರಾಗಿರುವ ಡಾ. ಕಲಾಂರ ಪ್ರತಿಮೆ ಅವರ ಕಲಾಪ್ರೇಮದ ಪ್ರತೀಕದಂತೆ ಕಂಗೊಳಿಸುತ್ತದೆ. ರಾಷ್ಟ್ರಪತಿ ಭವನದಲ್ಲಿ ಆಸೀನರಾಗಿರುವ ಡಾ. ಕಲಾಂ ಅವರ ಮೂರ್ತಿ ವೀಕ್ಷಕರನ್ನು ಆಕರ್ಷಿಸುವಂತಿದೆ. ಡಾ. ಕಲಾಂ ಶಿಲ್ಲಾಂಗಿನ ಐಐಎಂನಲ್ಲಿ ಉಪನ್ಯಾಸ ನೀಡುತ್ತಿರುವ ಮತ್ತು ಅಲ್ಲಿಯೇ ಕುಸಿದು ಬಿದ್ದು ಅಸ್ತಂಗತರಾದ ಘಟನೆಯ ಚಿತ್ರಣ ಮನಮುಟ್ಟುವಂತಿದೆ. ಇಲ್ಲಿರುವ ಎರಡೂ ಪ್ರತಿಮೆಗಳಲ್ಲಿ ಒಂದೇ ರೀತಿಯ ದಿರಿಸು ಇದ್ದಿದ್ದರೆ ಇದು ಇನ್ನೂ ನೈಜವೆನಿಸುತ್ತಿತ್ತೆಂಬುದು ನನ್ನ ವೈಯುಕ್ತಿಕ ಅಭಿಮತ.
ಡಾ. ಕಲಾಂ ಅವರು ಶಿಲ್ಲಾಂಗಿಗೆ ಕೊಂಡೊಯ್ದಿದ್ದ ಎಲ್ಲ ವಸ್ತುಗಳನ್ನು ಈ ಸ್ಮಾರಕದಲ್ಲಿ ಸಂಗ್ರಹಿಸಿಡಲಾಗಿದೆ. ಇವುಗಳನ್ನು ಕಂಡಾಗ, ಸರಳ ಜೀವನ ಉನ್ನತ ಚಿಂತನೆಯ ಚೇತನದ ಸಾಕಾರವಾದಂತಾಯಿತು.
ಈ ಸ್ಮಾರಕವನ್ನು ವೀಕ್ಷಿಸಿದಾಗ, ದೇಶದ ಪ್ರಗತಿಗೆ ಕಟಿಬದ್ಧರಾಗಿದ್ದ ಡಾ. ಕಲಾಂ ಅವರ ದೃಢ ಸಂಕಲ್ಪ, ಸಂಪೂರ್ಣ ಸಮರ್ಪಣೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಅಪಾರ ಆಸಕ್ತಿ, ಯುವಜನತೆಯನ್ನು ಪ್ರೇರೇಪಿಸುವ ಅವರ ಮಾಂತ್ರಿಕ ಶಕ್ತಿ, ಇತ್ಯಾದಿ ಆಯಾಮಗಳು ಗೋಚರವಾಗುತ್ತವೆ.
ದೇಶದ ಪ್ರಗತಿಗೆ ಶ್ರಮಿಸಿದ ಮಹಾಚೇತನ ಮರೆಯಾಗಿ ಇದೇ ಜುಲೈ 27ಕ್ಕೆ ಹತ್ತು ವರ್ಷಗಳು. ಈ ಸಂದರ್ಭದಲ್ಲಿ ಅವರನ್ನು ಸ್ಮರಿಸಿ, ಅವರಿಗೆ ನಮಿಸುವೆ.