ಗಂಡು ಭೂಮಿಯ ವೀರ ಯೋಧರ ಚರಿತೆಯ ನಾನು ಹಾಡುವೆ!
ಯುದ್ಧ ನಡೆದ ಭೂಮಿಯಲ್ಲಿ ಹೆಜ್ಜೆ ಹಾಕುವ ರೋಮಾಂಚನ - ಹಿಮಚ್ಛಾದಿತ ಗಿರಿಶಿಖರಗಳಲ್ಲಿ ಚಾರಣದ ಅವಕಾಶ - ಪ್ರವಾಸೋದ್ಯಮದ ಜತೆಗೇ ಸೈನಿಕರ ಕೆಚ್ಚೆದೆಯ ವೀರಕಥೆ ತಿಳಿಯುವ ವಿಶೇಷ ಸಮರ ಪ್ರವಾಸೋದ್ಯಮ ಇದು.
ನಮ್ಮ ಭವಿಷ್ಯದ ನಾಳೆಗಾಗಿ ಅವರು ತಮ್ಮ ಭವಿಷ್ಯವನ್ನೇ ತ್ಯಾಗ ಮಾಡಿದರು!
ಇಂಥದ್ದೊಂದು ಸಂದೇಶ ಕಂಡು ಬರುವುದು ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ. ಇದು ಭಾರತೀಯ ಸೈನಿಕನ ನಿಜ ಜೀವನಕ್ಕೊಂದು ಅರ್ಥ ಪೂರ್ಣ ಸಂದೇಶ. ಸೈನಿಕನ ತ್ಯಾಗ, ಬಲಿದಾನಕ್ಕೆ ಪರಿಪೂರ್ಣವಾಗಿ ಹೊಂದುವ ಅಕ್ಷರ ನಮನ.
ಹೌದಲ್ಲ, 26 ವರ್ಷಗಳ ಹಿಂದೆ ಕಾರ್ಗಿಲ್ ಎಂಬ ಸಮರಭೂಮಿಯಲ್ಲಿ ನಮ್ಮ ಭಾರತೀಯ ಸೈನಿಕರು ತಮ್ಮ ಸಂಸಾರ, ಸುಖವನ್ನೆಲ್ಲಾ ಬದಿಗಿಟ್ಟು ಮೈಕೊರೆಯುವ ಚಳಿ, ಗಾಳಿ ಲೆಕ್ಕಿಸದೇ ಕಾಲಿಟ್ಟರೆ ಕುಸಿಯುವಂಥ ಮಂಜಿನ ಮೇಲೆ ನಡೆಯುತ್ತಾ ಪಾಕಿಗಳಿಂದ ಅತಿಕ್ರಮಿತವಾಗಿದ್ದ ಕಾರ್ಗಿಲ್ಲನ್ನು ಸಂರಕ್ಷಿಸದೇ ಹೋಗಿದ್ದರೆ, ನಮ್ಮ ಭವಿಷ್ಯಕ್ಕೆ ಈಗಿನಂತೆ ನೆಮ್ಮದಿ ಇರುತ್ತಿತ್ತೇ?

ಅಂದು ಕಾರ್ಗಿಲ್ ಎಂಬ ಹಿಮಚ್ಚಾಧಿತ ಪ್ರದೇಶವನ್ನು ಮತ್ತೆ ಭರತ ಭೂಮಿಗೆ ಒಪ್ಪಿಸುವಲ್ಲಿ ನಮ್ಮ ಹೆಮ್ಮೆಯ ಸೈನಿಕರು ಅದೆಂಥ ಕಠಿಣ ಪರಿಸ್ಥಿತಿ ಎದುರಿಸಿರಬಹುದು? ಅದುವರೆಗೂ ಕಂಡುಕೇಳರಿಯದ ಯುದ್ದವನ್ನು ಜಯಿಸಬೇಕಾದರೆ ನಮ್ಮ ಭಾರತೀಯ ಸೈನಿಕರು ಅದೆಷ್ಟು ರಕ್ತ ಬಸಿದಿರಬಹುದು? ಒಂದು ದಿನದ ಮಹಾ ಮಳೆ, ಗಾಳಿಗೇ ತತ್ತರಿಸಿಹೋಗುವ ನಾವುಗಳು ಹಿಮದಿಂದ ಕೂಡಿರುವ ಸೂರ್ಯನ ಕಿರಣವೇ ಪ್ರವೇಶಿಸಿರದ ಕಾರ್ಗಿಲ್ ಎಂಬ ಬೆಟ್ಟದಲ್ಲಿ ಶೀತಮಯ ವಿಷಮ ಪರಿಸ್ಥಿತಿಯಲ್ಲಿ ಅನ್ನ ಆಹಾರವೂ ಇಲ್ಲದ ದುಸ್ಥಿತಿಯಲ್ಲಿ ನಡೆದ ಹೋರಾಟದಲ್ಲಿ ಕೆಚ್ಚೆದೆಯಿಂದ ಕಾದಾಡಿದ ಪರಾಕ್ರಮಿಗಳ ತ್ಯಾಗಬಲಿದಾನಕ್ಕೆ ಮೌಲ್ಯ ಕಟ್ಟಲಾದೀತೇ?
ಇಂಡೋ- ಚೀನಾ, ಇಂಡೋ-ಪಾಕ್, ಬಾಂಗ್ಲಾ ಹೋರಾಟಗಳೂ ಸೇರಿದಂತೆ ಭಾರತದ ಪ್ರಮುಖ ಯುದ್ದಗಳಲ್ಲಿ ಈವರೆಗೂ ಅಗ್ರಗಣ್ಯವಾಗಿ ನಿಲ್ಲುವಂಥದ್ದು ಕಾರ್ಗಿಲ್ ಕದನ. ಯಾಕೆಂದರೆ ಇದು ಸೈನಿಕರು ಮಾತ್ರವಲ್ಲ, ಭಾರತೀಯರೆಲ್ಲರೂ ಕಣ್ಣಾರೆ ಕಂಡ, ಯುದ್ದಭೂಮಿಯ ರೋಚಕತೆ. ಸೈನಿಕರ ತ್ಯಾಗ, ಬಲಿದಾನ, ಶೌರ್ಯಗಳನ್ನೆಲ್ಲಾ ಕಿರುತೆರೆ ಮೂಲಕ ಪತ್ರಿಕೆಗಳ, ಫೊಟೋಗಳ ಮೂಲಕ ಕಂಡುಕೊಂಡಿದ್ದ ಯುದ್ದವಾಗಿತ್ತು. ಹೀಗಾಗಿಯೇ ಕಾರ್ಗಿಲ್ ಕದನಕ್ಕೆ ಇಂದಿಗೂ ಮಹತ್ವವಿದೆ. ಸೈನಿಕರ ಬಲಿದಾನವೂ ಪ್ರತೀ ಭಾರತೀಯರ ಗೌರವ ನಮನಕ್ಕೆ ಸಾಕ್ಷಿಯಾಗಿದೆ
1999 ರಲ್ಲಿ ಅಂದರೆ 26 ವರ್ಷಗಳ ಹಿಂದೆ ವಿಶ್ವಮಟ್ಟದಲ್ಲಿ ಭಾರತದ ಗೌರವ ಕಾಪಾಡಿದ, ಸೈನಿಕರ ಜಯಭೇರಿಗೆ ಕಾರಣವಾಗಿದ್ದ ಕಾರ್ಗಿಲ್ ಸಮರ ಸಂಭವಿಸಿದ್ದು ಸೈನಿಕ ಸಮುದಾಯದ ಮನದಲ್ಲಿ ಹಚ್ಚಹಸಿರಾಗಿದೆ. ಯುದ್ಧ ಎಂದರೆ ಕಾರ್ಗಿಲ್ ಎಂದೇ ಭಾರತೀಯರು ನೆನಪಿಸಿಕೊಳ್ಳುವಂತಾಗಿದೆ.
ಇಂಥ ಸ್ಮರಣೀಯ ಗೆಲುವಿಗೆ ಕಾರಣವಾದ ಭಾರತೀಯ ಯೋಧರ ಹೆಮ್ಮೆಯ ಸಮರ ಭೂಮಿ ಕಾರ್ಗಿಲ್ ಈಗ ಪ್ರವಾಸಿಗರ ವೀಕ್ಷಣೆಗೂ ಮುಕ್ತವಾಗಿದೆ. 25 ವರ್ಷಗಳ ಹಿಂದೆ ಭಾರತೀಯ ಸೈನಿಕರು ಕೆಚ್ಚೆದೆಯಿಂದ ಕಾದಾಡಿದ ಭೂಮಿಯ ಮೇಲೆ ಈಗ ಪ್ರವಾಸಿಗರೂ ಹೆಜ್ಜೆ ಹಾಕಿ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ಈ ಮೂಲಕ ಇತರ ದೇಶಗಳಂತೆ ಭಾರತದಲ್ಲಿಯೂ ಯುದ್ದ ಭೂಮಿಯೊಂದು ಪ್ರವಾಸಿ ಆಕರ್ಷಣೆ ಗಳಿಸುವಂತಾಗಿದೆ.
ಭಾರತ ಮತ್ತು ಪಾಕಿಸ್ತಾನ ಸೈನ್ಯದ ನಡುವೆ ಘನಘೋರ ಕಾಳದ ನಡೆದ ಕಾರ್ಗಿಲ್ ಬಳಿಯ ಮುಶ್ಕೋ ಕಣಿವೆಯು ಇದೀಗ ಪ್ರವಾಸೀ ತಾಣವಾಗಿ ಪರಿವರ್ತನೆಯಾಗಿದೆ. ದಟ್ಟ ಕಾಡು, ಪ್ರಪಾತಗಳಿಂದ ಕೂಡಿರುವ ಮುಶ್ಕೋ ಕಣಿವೆಯು ಮನಮೋಹಕ ನಿಸರ್ಗ ಸೌಂದರ್ಯವನ್ನು ತನ್ನಲ್ಲಿ ಹೊಂದಿದೆ.
ಅಂತೆಯೇ ಕಸ್ಕಾರ್, ಚುಲಿಚಾನ್, ಗರ್ಗಾರ್ಡೊ ವ್ಯಾಪ್ತಿಯ ಕಣಿವೆಗಳನ್ನು ಕೂಡ ಪ್ರವಾಸೀ ತಾಣಗಳನ್ನಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಸುಸ್ಥಿರ ಮತ್ತು ಪರಿಸರ ಸ್ನೇಹಿಯಾದ ಪ್ರವಾಸೋದ್ಯಮಕ್ಕೆ ಈ ಕಣಿವೆಗಳಲ್ಲಿ ಆದ್ಯತೆ ನೀಡಲು ಲಡಾಕ್ ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸಿದೆ.
ದೇಶದ ಗಡಿಭಾಗದ ಭದ್ರತೆಯನ್ನು ಪ್ರಮುಖವಾಗಿ ಕೇಂದ್ರೀಕರಿಸಿಕೊಂಡು ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಪ್ರವಾಸಿಗರು ಆಸ್ವಾದಿಸುವಂತಾಗಬೇಕು. ಇದರೊಂದಿಗೆ ಭಾರತೀಯ ಸೈನ್ಯದ ಶೌರ್ಯದ ಕಥೆ ಹೇಳುವ ಕಾರ್ಗಿಲ್ ಪ್ರ್ಯಾಂತ್ಯದ ದರ್ಶನದ ಮೂಲಕ ದೇಶಭಕ್ತಿಯ ರೋಮಾಂಚನವನ್ನೂ ದೇಶವಿದೇಶದ ಪ್ರವಾಸಿಗರು ಅನುಭವಿಸುವಂತಾಗಬೇಕು. ಜತೆಗೆ ಇಲ್ಲಿನ ಪರ್ವತಗಳಲ್ಲಿ ಹೆಜ್ಜೆ ಹಾಕುವ ಸವಾಲಿನ ಅನುಭವ ಕೂಡ ಪ್ರವಾಸಿಗರಿಗೆ ದೊರಕಬೇಕು ಎಂಬುದೇ ಕಾರ್ಗಿಲ್ ಸಮರ ಭೂಮಿಯನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿ ಪಡಿಸುವುದರ ಮುಖ್ಯ ಉದ್ದೇಶವಾಗಿದೆ.
ಕಾರ್ಗಿಲ್ ಯುದ್ಧ ನಡೆದ ಬಳಿಕ ಈ ಪ್ರಾಂತ್ಯ ಭಾರತೀಯ ಸೈನ್ಯದ ಬಿಗಿ ಭದ್ರತೆಯಲ್ಲಿದೆ, ಲೇಹ್ ಲಡಾಖ್ ಮತ್ತು ಶ್ರೀನಗರದ ಮೂಲಕ ಕಾರ್ಗಿಲ್ ಗೆ ತೆರಳುವವರು ಇಲ್ಲಿನ ಸೇನಾ ಭದ್ರತೆಯ ಸರ್ಪಗಾವಲಿನ ಕಣ್ಣೋಟದ ನಡುವೆಯೇ ಸಾಗುವಂತಾಗಿದೆ. ಇದೀಗ ಸೈನಿಕರ ಹದ್ದಿನಗಣ್ಣಿನ ನಡುವೆಯೇ ಕೆಲವೊಂದು ನಿಯಮಕ್ಕೊಳಪಟ್ಟು ಕಾರ್ಗಿಲ್ ನಲ್ಲಿ ಯುದ್ಧ ನಡೆದ ಕೆಲವು ಆಯಕಟ್ಟಿನ ಸ್ಥಳಗಳನ್ನು ಕಾರ್ಗಿಲ್ ಸಮರಕ್ಕೆ 26 ವರ್ಷ ತುಂಬಿದ ಬಳಿಕ ಪ್ರವಾಸಿಗರ ನೋಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ಮೊದಲ ಹೆಜ್ಜೆಯಾಗಿ ಹಂಬ್ಟೋಂಗ್ ಲಾ ಎಂಬಲ್ಲಿ ಪ್ರವಾಸಿಗರಿಗಾಗಿ ಸೆಲ್ಫಿ ಪಾಯಿಂಟ್ ರೂಪಿಸಲಾಗಿದೆ. ಉದ್ಘಾಟನೆಯಾದ 15 ತಿಂಗಳಿನಲ್ಲಿಯೇ ಲಕ್ಷಾಂತರ ಪ್ರವಾಸಿಗರು ಸೆಲ್ಫಿ ಪಾಯಿಂಟ್ ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಕಾರ್ಗಿಲ್ ನ ಪರ್ವತಶ್ರೇಣಿಗಳು ಈ ಪಾಯಿಂಟ್ ಹಿನ್ನೆಲೆಯಲ್ಲಿ ಕಾಣುವುದೇ ಇದರ ವಿಶೇಷ.
ಕಾರ್ಗಿಲ್ ನಂಥ ಸಮರ ಭೂಮಿಯನ್ನು ಪ್ರವಾಸಿಗರಿಗೆ ಮತ್ತಷ್ಟು ಹೆಚ್ಚಿನ ತಾಣಗಳ ಮೂಲಕ ತೆರೆಯುವುದರೊಂದಿಗೆ ಕಾರ್ಗಿಲ್ ಜತೆಜತೆಗೇ ಭಾರತೀಯ ವೀರ ಯೋಧರ ಕಾರ್ಗಿಲ್ ಗೆಲುವಿನ ಇತಿಹಾಸ ಕೂಡ ಜನರಲ್ಲಿ ಸ್ಮರಣೀಯವಾಗುತ್ತದೆ. ಕಾರ್ಗಿಲ್ ಎಂಬುದು ಸಮರಕ್ಕೆ ಹೆಸರಾದಂತೆ ಪ್ರಾಕೃತಿಕ ಸೌಂದರ್ಯಕ್ಕೂ ಪ್ರವಾಸಿಗರಲ್ಲಿ ಜನಜನಿತವಾಗುತ್ತದೆ ಎಂಬ ಉದ್ದೇಶ ಕೂಡ ಯೋಜನೆಯ ಜಾರಿಯ ಹಿಂದಿದೆ.
ಪ್ರತೀ ವರ್ಷ ಲೇಹ್ ಮತ್ತು ಕಾರ್ಗಿಲ್ ಗೆ ಅಂದಾಜು 5.5 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದು ಇದೀಗ ಮತ್ತಷ್ಟು ರೋಮಾಂಚನಕಾರಿ ತಾಣಗಳ ಸೇರ್ಪಡೆಯೊಂದಿಗೆ ಈ ಸಂಖ್ಯೆ ಸಾಕಷ್ಟು ಹೆಚ್ಚಾಗಬಹುದು ಎಂಬ ಲೆಕ್ಕಾಚಾರವಿದೆ. ಕಾರ್ಗಿ; ಶ್ರೇಣಿಯ ದ್ರಾಸ್ ನಲ್ಲಿ ಈಗಾಗಲೇ ಇರುವ ಕಾರ್ಗಿಲ್ ಹುತಾತ್ಮ ಸೈನಿಕರ ಯುದ್ಧ ಸ್ಮಾರಕವು ಪ್ರವಾಸಿಗರಿಗೆ ಭಾವನಾತ್ನಕ ಅನುಭವ ನೀಡುವಂತಿದೆ. ಭಾರತಕ್ಕಾಗಿ ಪ್ರಾಣತೆತ್ತ 527 ವೀರಸೈನಿಕರ ನೆನಪಿನಲ್ಲಿ ಇಲ್ಲಿ ಶಿಲಾಸ್ಮಾರಕಗಳನ್ನು ನಿರ್ಮಿಸಲಾಗಿದೆ. ಎಂಥವರು ಕೂಡ ಕಾರ್ಗಿಲ್ ಯೋಧರ ತ್ಯಾಗಬಲಿದಾನ ನೆನೆದು ಇಲ್ಲಿ ಕಣ್ಣೀರಾಗುತ್ತಾರೆ. ಅಂತೆಯೇ ಕಾರ್ಗಿಲ್ ಸಮರದ ಮಾಹಿತಿ ನೀಡುವ ಫಲಕಗಳು, ದ್ವಾರಗಳು, ಪಟಪಟನೆ ಹಾರಾಡುತ್ತಾ ಭಾರತೀಯ ಸೇನೆಯ ಹಿರಿಮೆ ಸಾರುವ ತ್ರಿವರ್ಣ ಧ್ವಜ, ಸೇನಾ ಧ್ವಜಗಳು ಕೂಡ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವವರ ಪಾಲಿಗೆ ಆಕರ್ಷಣೆ.
ವಿದೇಶಗಳಲ್ಲಿ ಯುದ್ದ ಭೂಮಿಯನ್ನು ಈಗಾಗಲೇ ಪ್ರವಾಸಿ ತಾಣಗಳನ್ನಾಗಿ ಪರಿವರ್ತಿಸಿ ಯುದ್ಧದ ರೋಚಕ ಕಥೆಗಳನ್ನು ಹೇಳುತ್ತಾ ಸಂದರ್ಶಕರನ್ನು ಸೆಳೆಯಲಾಗುತ್ತಿದೆ. ಅಂತೆಯೇ 26 ವಷ೯ಗಳ ಹಿಂದಿನ ಯುದ್ಧ ತಾಣ ಕಾರ್ಗಿಲ್ ಕೂಡ ಇದೀಗ ಭಾರತೀಯ ಸೈನಿಕರ ವೀರಪರಾಕ್ರಮದ ಕಥೆ ಹೇಳಲು ಸಜ್ಜಾಗುತ್ತಿದೆ.
ಪಾಕಿಗಳಿಗೆ ತಕ್ಕ ಪಾಠ ಕಲಿಸಿದ್ದ ಭಾರತೀಯ ಸೈನಿಕರ ಅಪ್ರತಿಮ ಶೌರ್ಯದ ಭೂಮಿಯಲ್ಲಿ ಇನ್ನು ಮುಂದೆ ಪ್ರವಾಸಿ ದಂಡಿನ ಸಂಭ್ರಮದ ಕೇಕೆಯ ಸದ್ದು ಕೇಳಿಬರಲಿದೆ. ಅಂತೆಯೇ, ಹುತಾತ್ಮ ಯೋಧರನ್ನು ಸ್ಮರಿಸುತ್ತಾ ಪ್ರವಾಸಿಗರು ಹರಿಸುವ ಕಣ್ಣೀರ ಹನಿಗಳೂ ಕಾರ್ಗಿಲ್ ತಾಣದಲ್ಲಿ ಹೆಚ್ಚಲಿದೆ. ಕಾರ್ಗಿಲ್ ರಣಭೂಮಿಯ ಹಿನ್ನೆಲೆಯಲ್ಲಿನ ಹಿಮಶಿಖರಗಳಲ್ಲಿ ಪ್ರವಾಸಿಗರಿಂದ ಈಗ ಕೇಳಿಬರುತ್ತಿರುವ ಉದ್ಗೋಷವೆಂದರೆ.. ಜೈ ಹಿಂದ್ ! ವಂದೇಮಾತರಂ!
ಸಿಮ್ಲಾ ಒಪ್ಪಂದ ಉಲ್ಲಂಘನೆ
ಭಾರತದ ಭೂಶಿಖರದಲ್ಲಿನ ಕಾರ್ಗಿಲ್ ಜಿಲ್ಲೆಯ ಕೇಂದ್ರ ಸ್ಥಾನವಾಗಿರುವ ಕಾರ್ಗಿಲ್ ನಗರ ಲೇಹ್ ಮತ್ತು ಲಡಾಖ್ ಬಿಟ್ಟರೆ ಆ ಪ್ರಾಂತ್ಯದಲ್ಲಿನ ಅತಿ ದೊಡ್ಡ ನಗರವಾಗಿದೆ.
ಕಾಶ್ಮೀರದಿಂದ 204 ಕಿಮೀ ದೂರದಲ್ಲಿರುವ ಕಾರ್ಗಿಲ್ ಪ್ರದೇಶವನ್ನು, ಲೇಹ್ ಮತ್ತು ಲಡಾಖ್ ಗೆ ತೆರಳಿದವರು ಸಂದರ್ಶಿಸುವುದು ಸಾಮಾನ್ಯವಾಗಿದೆ. ಜಮ್ಮುಕಾಶ್ಮೀರ ಒಂದೆಡೆಯಾದರೆ ಲೇಹ್ ಮತ್ತು ಲಡಾಖ್ ಮತ್ತೊಂದೆಡೆಯಿದ್ದು ಕಾರ್ಗಿಲ್ ಪ್ರದೇಶವು ಕಾಶ್ಮೀರ ಮತ್ತು ಲೇಹ್ ಲಡಾಖ್ ನಡುವೆ ಇರುವ ನಗರವಾಗಿದೆ.
ಕಾರ್ಗಿಲ್ ಎಂದರೆ ಪ್ರಕಾಶಮಾನ ಎಂದು ಅರ್ಥವಿದೆ. ಆದರೆ ಸ್ಥಳೀಯರು ಕಾರ್ ಗಿಲ್ ಪದವನ್ನು ಕಾರ್ ಅಂದರೆ ಕೋಟೆ ಎಂದೂ ಗಿಲ್ ಎಂದರೆ ಕೇಂದ್ರ ಎಂದು ಅರ್ಥೈಸಿಕೊಂಡು ಕೋಟೆಯ ಮಧ್ಯಭಾಗ ಎಂದು ಹೇಳಿಕೊಳ್ಳುತ್ತಾರೆ.
ಇದೇ ಕಾರ್ಗಿಲ್ ಬಳಿಯಲ್ಲಿ ಅಂದರೆ 11 ಕಿ ಮೀ ದೂರದಲ್ಲಿಯೇ ಭಾರತ ಮತ್ತು ಪಾಕಿಸ್ತಾನದ ಗಡಿರೇಖೆ ಅಥವಾ ಲೈನ್ ಆಫ್ ಕಂಟ್ರೋಲ್ ಇದೆ. 1971 ರಲ್ಲಿ ನಡೆದ ಇಂಡೋ ಪಾಕ್ ಸಮರದ ಸಂದರ್ಭ ಕಾರ್ಗಿಲ್ ನ ಸಂರಕ್ಷಣೆಗೆ ಆದ್ಯತೆ ನೀಡಿದ್ದರು. ಹೀಗಾಗಿಯೇ ಎರಡೂ ದೇಶಗಳ ಮಧ್ಯೆ ಸಿಮ್ಲಾ ಒಪ್ಪಂದವಾಗಿತ್ತು. ಇದರ ಅನುಗುಣವಾಗಿಯೇ ಲೈನ್ ಆಫ್ ಕಂಟ್ರೋಲ್ ಗುರುತಿಸಲ್ಪಟ್ಟಿತ್ತು. ನಿಗದಿತ ಗಡಿ ಪ್ರದೇಶವನ್ನು ಎರಡೂ ದೇಶಗಳೂ ಕಾಪಾಡಿಕೊಳ್ಳಬೇಕು. ಗಡಿಯನ್ನು ಉಲ್ಲಂಘಿಸಿ ಇಬ್ಬರೂ ಮತ್ತೊಂದು ದೇಶದ ಗಡಿ ಪ್ರವೇಶಿವಂತಿಲ್ಲ ಎಂದೂ ಒಪ್ಪಂದದಲ್ಲಿ ಸ್ಪಷ್ಟಪಡಿಸಲಾಗಿತ್ತು.
ಆದರೆ 1999 ರಲ್ಲಿ ಈ ಕರಾರನ್ನೇ ಗಾಳಿಗೆ ತೂರಿ ಪಾಕಿಸ್ತಾನ ಸೈನ್ಯವು ಕಾರ್ಗಿಲ್ ಪ್ರದೇಶವನ್ನು ಅತಿಕ್ರಮಿಸಿಕೊಂಡಿತು. ಪಾಕಿಗಳನ್ನು ಭಾರತದ ನೆಲದಿಂದ ಓಡಿಸಿ ಅತಿಕ್ರಮಿತ ಪ್ರದೇಶವನ್ನು ಮರಳಿ ವಶಪಡಿಸಿಕೊಳ್ಳಲು ಭಾರತವು ಕಾರ್ಗಿಲ್ ವ್ಯಾಪ್ತಿಯಲ್ಲಿನ 160 ಕಿ ಮೀ ಜಾಗವನ್ನೇ ತನ್ನ ಯುದ್ದಭೂಮಿಯಾಗಿಸಿಕೊಂಡಿತ್ತು. 4 ತಿಂಗಳ ಸತತ ಹೋರಾಟದ ಫಲವಾಗಿಯೇ ಜುಲೈ 26 ರಂದು ಕೊನೆಗೂ ಕಾರ್ಗಿಲ್ ಮರಳಿ ಭಾರತದ ವಶವಾಯಿತು.
ಇಂದಿಗೂ ಹಿಮಚ್ಚಾಧಿತ ಕಾರ್ಗಿಲ್ ನಲ್ಲಿ ಕಡಿಮೆ ಜನರು ವಾಸವಾಗಿದ್ದಾರೆ. 1961 ರಲ್ಲಿ 1,681 ಜನರಿದ್ದ ಕಾರ್ಗಿಲ್ ನಲ್ಲಿ ಪ್ರಸ್ತುತ 26 ಸಾವಿರ ಜನಸಂಖ್ಯೆಯಿದೆ. ಮುಸ್ಲಿಮರನ್ನು ಹೊರತುಪಡಿಸಿದಂತೆ ಬೌದ್ಧ ಬಿಕ್ಕುಗಳು ಕಾರ್ಗಿಲ್ ನಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ.

ಮೇರಾ ಶೇರೋ ಬೊಲೋ ಭಾರತ್ ಮಾತಾಕೀ ಜೈ !
ಭಾರತ ಮತ್ತು ಪಾಕಿಸ್ತಾನ ದೇಶಗಳೆರಡಕ್ಕೂ ಅತ್ಯಂತ ಅಗತ್ಯವಾದ ಸ್ಥಳವಾಗಿರುವುದೇ ಕಾರ್ಗಿಲ್ ಇಷ್ಟೊಂದು ಮಹತ್ವ ಪಡೆಯಲು ಕಾರಣ. ಪಾಕಿಸ್ತಾನದ ಪಾಲಿಗೆ ಭಾರತದ ನೆಲದ ಮೇಲೆ ಹೆಜ್ಜೆಯೂರಲು ಅತ್ಯಂತ ಸನಿಹದ ಮತ್ತು ಸಲೀಸಾದ ಸ್ಥಳವಾಗಿ ಕಾರ್ಗಿಲ್ ಪರಿಣಮಿಸಿದ್ದರೆ, ಗಡಿರಕ್ಷಣೆಯ ದೖಷ್ಟಿಯಿಂದ ಮತ್ತು ಪಾಕಿಸ್ತಾನವನ್ನು ಸದೆಬಡಿಯಲು ತನ್ನದೇ ನೆಲದಲ್ಲಿ ಕಾರ್ಗಿಲ್ ಇರಲೇಬೇಕಾದ ಅನಿವಾರ್ಯತೆ ಭಾರತಕ್ಕಿದೆ. ಇಂಥ ಪರಿಸ್ಥಿತಿಯಲ್ಲಿ 1999 ರಲ್ಲಿ ಪಾಕಿಸ್ತಾನಿ ಸೈನ್ಯ ಕುತಂತ್ರದಿಂದ ಕಾರ್ಗಿಲ್ ಶಿಖರದ ಮೇಲೆ ನಿಂತು ಅಟ್ಟಹಾಸ ತೋರಿದರೆ ಭಾರತ ಸಹಿಸಿಕೊಳ್ಳುವುದಾದರೂ ಹೇಗೆ?
ಕಾರ್ಗಿಲ್ ಶತ್ರುದೇಶವಾದ ಪಾಕಿಸ್ತಾನದ ಕೈವಶವಾಗಿದ್ದರೆ ಭಾರತಕ್ಕೆ ಅತೀ ದೊಡ್ಡ ರಕ್ಷಣಾ ಕವಚವೇ ಕಳಚಿದಂತಾಗುತ್ತಿತ್ತು. ಕಾರ್ಗಿಲ್ ವಶಪಡಿಸಿಕೊಂಡ ಸಂದರ್ಭ ಪಾಕಿಸ್ತಾನಿ ಸೈನ್ಯ ಭಾರತವನ್ನೇ ಗೆದ್ದಂತೆ ಬೀಗಿದ್ದು ಕೂಡ ಇದೇ ಕಾರಣಕ್ಕೆ. ಆದರೆ ಇವರ ಸಂಭ್ರಮ ತಾತ್ಕಾಲಿಕ ಎಂಬಂತೆ ಭಾರತದ ಸಮರ ಸೈನಿಕರು ಶೌರ್ಯದಿಂದ ಮತ್ತೆ ಕಾರ್ಗಿಲ್ ವಶಪಡಿಸಿಕೊಂಡು ಪಾಕಿಸ್ತಾನಕ್ಕೆ ಎಂದೂ ಮರೆಯಲಾಗದ ಪಾಠ ಕಲಿಸಿದ್ದರು.
160 ಕಿಮೀ ವ್ಯಾಪ್ತಿಯಲ್ಲಿ ಪರ್ವತಗಳನ್ನೇ ಹೊಂದಿರುವ ಕಾರ್ಗಿಲ್ ಮೇಲೆ ನಿಂತು ನೋಡಿದಾಗ ದೂರದಲ್ಲಿ ಶ್ರೀನಗರ ಮತ್ತು ಲೇಹ್ ಸಂಪರ್ಕ ರಸ್ತೆ, ಹಾವಿನಂತೆ ಹರಿಯುತ್ತಾ ಸಾಗಿರುವುದು ಕಂಡು ಬರುತ್ತದೆ. ಕೊರೆಯುವ ಚಳಿಯಲ್ಲಿಯೂ ಭಾರತೀಯ ಸೈನಿಕರು ಹೆಜ್ಜೆ ಹೆಜ್ಜೆಗೂ ನಿಂತುಕೊಂಡು ಗಡಿಭಾಗವನ್ನು ಹದ್ದಿನಗಣ್ಣಿನಿಂದ ಗಮನಿಸುತ್ತಿರುವ ದೃಶ್ಯ ಇಲ್ಲಿ ಸಾಮಾನ್ಯ.
ಗಮನಾರ್ಹ ಎಂದರೆ ಕಾರ್ಗಿಲ್ ಕಾದಾಟ ನಡೆದ ವ್ಯಾಪ್ತಿಯಿಂದ ಕೇವಲ 163 ಕಿ, ಮೀ ಸಾಗಿದರೆ ಪಾಕಿಸ್ತಾನದ ಸ್ಕಾರ್ಡು ಪೇಟೆ ಕಂಡುಬರುತ್ತದೆ. ಭಾರತೀಯ ಸೈನಿಕರಿಗೆ ತಮ್ಮ ನೆಲದ ದ್ರಾಸ್ ಪ್ರಾಂತ್ಯದಿಂದ ಕಾರ್ಗಿಲ್ ಕೇವಲ 68 ಕಿಮೀ ದೂರದಲ್ಲಿದ್ದರೂ ಬೆಟ್ಟದ ಹಾದಿಯಲ್ಲಿ ಇಲ್ಲಿಗೆ ತಲುಪುವುದೇ ದುಸ್ತರವಾಗಿತ್ತು. ಅಂದರೆ, ಪಾಕಿಸ್ತಾನಿ ಸೈನಿಕರು ಅತೀ ಸುಲಭವಾಗಿ ತಲುಪಬಹುದಾದ ಭಾರತದ ಕಾರ್ಗಿಲ್ ಗೆ ಭಾರತೀಯ ಸೈನಿಕರು ತಲುಪಲು ಸಾಕಷ್ಟು ಶ್ರಮ ಪಡಬೇಕಾಗಿತ್ತು. ಕಾರ್ಗಿಲ್ ಸಮರದ ಬಳಿಕ ನಡೆದ ಮಹತ್ವದ ಅಭಿವೃದ್ಧಿ ಯೋಜನೆಗಳ ಪರಿಣಾಮವಾಗಿ ಈಗ ಕಾರ್ಗಿಲ್ ಕೂಡ ಎಲ್ಲಾ ಸೌಲಭ್ಯಗಳಿಂದ ಕೂಡಿ, ಕಡಿಮೆ ಸಮಯದಲ್ಲಿಯೇ ಪಾಕಿಸ್ತಾನದ ಗಡಿ ತಲುಪಬಹುದಾಗಿದೆ.
ಕಾರ್ಗಿಲ್ ವಿಜಯಕ್ಕೆ 26 ವರ್ಷಗಳ ಸಂದರ್ಭ ನಮ್ಮ ವೀರಸೈನಿಕರ ಬಲಿದಾನವನ್ನು ಸ್ಮರಿಸುತ್ತಲೇ, ಹುತಾತ್ಮ ಸೈನಿಕರ ಕುಟುಂಬದವರಿಗೆ ಧೈರ್ಯ ತುಂಬುತ್ತಲೇ, ಅಂದು ಕಾರ್ಗಿಲ್ ವಿಜಯಕ್ಕಾಗಿ ಹೋರಾಡಿದ ಎಲ್ಲಾ ಭಾರತೀಯ ಸೈನಿಕರಿಗೆ ಅಭಿನಂದನೆ ಸಲ್ಲಿಸೋಣ.
26 ವರ್ಷಗಳ ಹಿಂದೆ ಇದೇ ದಿನ ಕಾರ್ಗಿಲ್ ಶಿಖರದಲ್ಲಿ ಮೊಳಗಿದ ಭಾರತೀಯರ ಹೆಮ್ಮೆಯ, ಗರ್ವದ, ಶೌರ್ಯದ ಈ ಧ್ವನಿಗಳನ್ನು ಸದಾ ನೆನಪಿಸಿಕೊಳ್ಳೋಣ.
ದೇಖೋ ತಿರಂಗ ಊಂಛಾ ರಹಾ.
ದೇಖೋ.. ಮೇರಾ ಶೇರೋ
ಬೋಲೋ ಭಾರತ್ ಮಾತಾಕೀ ಜೈ