ಭಾರತದ ಹುಲಿ ಮನುಷ್ಯ - ಕೈಲಾಶ್ ಸಂಖಲಾರ ಜೀವನ ಗಾಥೆ
1971ರಲ್ಲಿ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಕೈಲಾಶರು ರಾಷ್ಟ್ರೀಯ ಮಟ್ಟದ ಹುಲಿ ಗಣತಿಗೆ ಚಾಲನೆ ನೀಡಿದರು. ಫಲಿತಾಂಶ ಆಘಾತಕಾರಿಯಾಗಿತ್ತು. ಕೇವಲ 1400 ಹುಲಿಗಳು ಮಾತ್ರ ಉಳಿದಿದ್ದವು. ಇವರ ಈ ಮಹತ್ತರ ಕಾರ್ಯ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಗಮನಸೆಳೆಯಿತು; ಮಾತ್ರವಲ್ಲದೆ ಅವರಿಂದಲೇ 1973ರಲ್ಲಿ ಹುಲಿಗಳನ್ನು ರಕ್ಷಿಸುವ ಮಹತ್ವಾಕಾಂಕ್ಷಿ 'ಪ್ರಾಜೆಕ್ಟ್ ಟೈಗರ್' ಯೋಜನೆಗೆ ಚಾಲನೆ ಸಿಕ್ಕಿತು.
- ಡಾ.ಕಾರ್ತಿಕ ಜೆ.ಎಸ್
ಅದು 1950 ರ ದಶಕದ ಆರಂಭದ ದಿನಗಳು. ನಮ್ಮ ದೇಶದಲ್ಲಿ ರಾಜರಿಗೆ, ಶ್ರೀಮಂತರಿಗೆ ಬೇಟೆಯಾಡಲು ಪರವಾನಿಗೆ ಸಿಗುತ್ತಿದ್ದ ಕಾಲವದು. ಆ ದಿನಗಳಲ್ಲಿ ಬೇಟೆ ಒಂದು ವಿಶಿಷ್ಟ ಹಬ್ಬವೇ ಆಗಿತ್ತು! ಹೀಗಿರುವಾಗ, ಒಂದು ದಿನ ರಾಜಸ್ಥಾನದ ದಟ್ಟಾರಣ್ಯ ಪ್ರದೇಶವೊಂದರಲ್ಲಿ ಅರಣ್ಯಾಧಿಕಾರಿಯೊಬ್ಬರು ಹುಲಿಯೊಂದಕ್ಕೆ ಗುಂಡು ಹೊಡೆಯುತ್ತಾರೆ. ಸಾವಿನಂಚಿನಲ್ಲಿದ್ದ ಹುಲಿಯ ಸನಿಹಕ್ಕೆ ಬಂದ ಅವರು ಅದರ ಭವ್ಯ ರೂಪ ಮತ್ತು ಕೊನೆ ಕ್ಷಣದ ಆರ್ತನಾದ ನೋಡಿ ಆಘಾತಕ್ಕೊಳಗಾಗುತ್ತಾರೆ. 'ನಾನು ನಿಜವಾಗಿಯೂ ಪ್ರಾಣಿಗಳ ರಕ್ಷಕನೇ? ಅಥವಾ ಬೇಟೆಗಾರನೇ?' ಎಂಬ ಪ್ರಶ್ನೆ ಅವರ ಮನದಲ್ಲಿ ಮೂಡುತ್ತದೆ. ಈ ಘಟನೆ ಆ ವ್ಯಕ್ತಿಯ ಜೀವನದ ದಿಕ್ಕನ್ನೇ ಬದಲಿಸುತ್ತದೆ.

ಅದರ ನಂತರ, ಅವರು ತಮ್ಮ ಸಂಪೂರ್ಣ ಜೀವನವನ್ನು ಹುಲಿಗಳ ಸಂರಕ್ಷಣೆಗೆ ಮೀಸಲಿಡುವ ಶಪಥ ಮಾಡುತ್ತಾರೆ. ಆ ಅಪರೂಪದ ಅರಣ್ಯಾಧಿಕಾರಿಯೇ 'ಭಾರತದ ಹುಲಿ ಮನುಷ್ಯ' ಎಂದೇ ಹೆಸರಾದ 'ಕೈಲಾಶ್ ಸಂಖಲಾ'. ಭಾರತದಲ್ಲಿ ಹುಲಿ ಸಂರಕ್ಷಣಾ ಕಾರ್ಯಕ್ಕೆ ನಾಂದಿ ಹಾಡಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.
ಕೈಲಾಶ್ ಅವರು 1925ರಲ್ಲಿ ರಾಜಸ್ಥಾನದ ಜೋಧಪುರದಲ್ಲಿ ಜನಿಸಿದರು. ಬಾಲ್ಯದಿಂದಲೇ ಅವರಿಗೆ ಪರಿಸರ, ವನ್ಯಜೀವಿಗಳ ಕುರಿತು ಅತೀವ ಆಸಕ್ತಿ ಇತ್ತು. ಈ ಆಸಕ್ತಿಯೇ ಅವರಿಗೆ ರಾಜಸ್ಥಾನ ವಿಶ್ವವಿದ್ಯಾನಿಲಯದಿಂದ ಜೀವಶಾಸ್ತ್ರ ವಿಷಯದಲ್ಲಿ ಪದವಿ ಪಡೆಯಲು ಪ್ರೇರಣೆ ನೀಡಿತು. ಮುಂದೆ ಅವರು ಅಮೇರಿಕಾದ ಮಿಚಿಗನ್ ವಿಶ್ವವಿದ್ಯಾನಿಲಯದಿಂದ 'ವನ್ಯಜೀವಿ ಜೀವಶಾಸ್ತ್ರ ಮತ್ತು ಸಂರಕ್ಷಣೆ' ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1953ರಲ್ಲಿ ಅವರು ಭಾರತದ ಅರಣ್ಯ ಸೇವೆಗೆ ಸೇರಿದರು. ಮುಂದೆ ಎರಡು ದಶಕಗಳ ಕಾಲ ಭಾರತದ ವಿವಿಧ ಅಭಯಾರಣ್ಯಗಳಲ್ಲಿ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಆ ಸಮಯದಲ್ಲಿ ನಮ್ಮ ದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಬೇಟೆ ಮತ್ತು ಆವಾಸಸ್ಥಾನದ ನಾಶದಿಂದಾಗಿ ಹುಲಿಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿತ್ತು. ಕಾನೂನನ್ನು ಬದಲಾಯಿಸದೆ ಹುಲಿಗಳನ್ನು ಉಳಿಸಲು ಸಾಧ್ಯವಿಲ್ಲ ಎಂಬುದು ಕೈಲಾಶರ ಚಿಂತನೆಯಾಗಿತ್ತು. 1971ರಲ್ಲಿ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಕೈಲಾಶರು ರಾಷ್ಟ್ರೀಯ ಮಟ್ಟದ ಹುಲಿ ಗಣತಿಗೆ ಚಾಲನೆ ನೀಡಿದರು. ಫಲಿತಾಂಶ ಆಘಾತಕಾರಿಯಾಗಿತ್ತು. ಕೇವಲ 1400 ಹುಲಿಗಳು ಮಾತ್ರ ಉಳಿದಿದ್ದವು. ಇವರ ಈ ಮಹತ್ತರ ಕಾರ್ಯ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಗಮನಸೆಳೆಯಿತು; ಮಾತ್ರವಲ್ಲದೆ ಅವರಿಂದಲೇ 1973ರಲ್ಲಿ ಹುಲಿಗಳನ್ನು ರಕ್ಷಿಸುವ ಮಹತ್ವಾಕಾಂಕ್ಷಿ 'ಪ್ರಾಜೆಕ್ಟ್ ಟೈಗರ್' ಯೋಜನೆಗೆ ಚಾಲನೆ ಸಿಕ್ಕಿತು. ಕೈಲಾಶ್ ಅವರು ಇದರ ಮೊದಲ ನಿರ್ದೇಶಕರಾಗಿ ನೇಮಕಗೊಂಡರು.
ಈ ಯೋಜನೆಯ ಮುಖಾಂತರ ಅವರು ನಮ್ಮ ದೇಶದಲ್ಲಿ 9 ಹುಲಿ ಸಂರಕ್ಷಿತ ಪ್ರದೇಶಗಳನ್ನು ಸ್ಥಾಪಿಸಿದರು. ಸ್ವತಃ ಕಾಡಿಗೆ ಭೇಟಿ ನೀಡಿ ಅರಣ್ಯ ಸಿಬ್ಬಂದಿಗಳಿಗೆ ತರಬೇತಿ ನೀಡಿದರು. ಕಠಿಣ ಬೇಟೆ ವಿರೋಧಿ ಕಾನೂನುಗಳ ಅನುಷ್ಠಾನಕ್ಕೆ ಶ್ರಮಿಸಿದರು. ಕೈಲಾಶರ ಅಚಲ ಬದ್ಧತೆ ಮತ್ತು ಅರಣ್ಯ ಸಿಬ್ಬಂದಿಗಳ ನಿಸ್ವಾರ್ಥ ಸೇವೆಯಿಂದಾಗಿ ಯೋಜನೆ ಯಶಸ್ವಿಯಾಯಿತು. 2022ರ ಹುಲಿ ಗಣತಿ ವರದಿ ಪ್ರಕಾರ ನಮ್ಮ ದೇಶದಲ್ಲಿರುವ ಹುಲಿಗಳ ಸಂಖ್ಯೆ 3682.
ಹುಲಿ ಸಂರಕ್ಷಣೆ ಕಾರ್ಯದಲ್ಲಿ ಸರ್ಕಾರದ ಜೊತೆಗೆ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯೂ ಅತ್ಯಗತ್ಯ ಎಂಬುದು ಅವರ ನಂಬಿಕೆಯಾಗಿತ್ತು. ಕೈಲಾಶರು ವಿಜ್ಞಾನಿ ಯಾಗಿ ಮಾತ್ರವಲ್ಲ, ಅತ್ಯುತ್ತಮ ಲೇಖಕರಾಗಿಯೂ ಗುರುತಿಸಿಕೊಂಡಿದ್ದರು.ಅವರು ಬರೆದ 'ಟೈಗರ್! ದಿ ಸ್ಟೋರಿ ಆಫ್ ದಿ ಇಂಡಿಯನ್ ಟೈಗರ್', 'ರಿಟರ್ನ್ ಆಫ್ ದಿ ಟೈಗರ್' ಪುಸ್ತಕಗಳು ಹುಲಿಗಳ ಕುರಿತು ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.

ಹುಲಿಗಳ ಸಂರಕ್ಷಣೆಗೆ ಕೈಲಾಶರು ನೀಡಿದ ಕೊಡುಗೆಗಳು ಅವರಿಗೆ ವ್ಯಾಪಕ ಪುರಸ್ಕಾರಗಳನ್ನು ಗಳಿಸಿಕೊಟ್ಟವು. ಅವುಗಳಲ್ಲಿ 1992ರಲ್ಲಿ ಅವರು ಪಡೆದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪ್ರಮುಖವಾದುದು.
'ಹುಲಿಗಳು ಉಳಿದರೆ ಕಾಡು ಉಳಿಯುತ್ತದೆ. ಕಾಡು ಇದ್ದರೆ ಮಾತ್ರ ನಾವು ಉಳಿದೇವು' ಎಂಬ ದೂರದೃಷ್ಟಿಯ ಸಂದೇಶ ಸಾರಿದ ಕೈಲಾಶರು 1994ರಲ್ಲಿ ದೈವಾಧೀನರಾದರು. ಅವರು ಸ್ಥಾಪಿಸಿದ 'ಟೈಗರ್ ಟ್ರಸ್ಟ್' ಇಂದಿಗೂ ವನ್ಯಜೀವಿ ಸಂರಕ್ಷಣೆ ಬೇಕಾದ ಕಾನೂನು ಸಹಾಯ, ಶಿಕ್ಷಣ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.
ಪ್ರತಿ ವರ್ಷ ಜುಲೈ 29 ಅನ್ನು ವಿಶ್ವ ಹುಲಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಹುಲಿಗಳು ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸುವ ತುರ್ತು ಅವಶ್ಯಕತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. ಈ ಸಂದರ್ಭ, ಭಾರತದಲ್ಲಿ ಹುಲಿ ಸಂರಕ್ಷಣೆಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟ ಕೈಲಾಶ್ ಸಂಖಲಾರನ್ನು ಸ್ಮರಿಸುವುದು ಅವರಿಗೆ ನಾವು ನೀಡಬಹುದಾದ ಬಹುದೊಡ್ಡ ಗೌರವ.